ನಾವು ಪ್ರತಿಯೊಬ್ಬರೂ ಗುಪ್ತವಾಗಿ ಪ್ರೇಮಿಸುವುದು ಯಾರನ್ನು ಗೊತ್ತೇ!? : ಓಶೋ ವಿಚಾರಧಾರೆ

oshoನಾವು ಪ್ರತಿಯೊಬ್ಬರೂ ಒಂದು ಗುಪ್ತ ಪ್ರೇಮಕ್ಕಾಗಿ ಹಾತೊರೆಯುತ್ತೇವೆ. ಪ್ರೇಮಿಸುವುದು ಬೇರೆ, ಅದರಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವುದು ಬೇರೆ. ಪ್ರೇಮದಲ್ಲಿ ಗೌಪ್ಯತೆ ಇಲ್ಲದಾಗ ಅದರಲ್ಲಿ ಸ್ವಾರಸ್ಯವೂ ಇರುವುದಿಲ್ಲ, ಆಸಕ್ತಿಯೂ ಉಳಿದುಕೊಳ್ಳುವುದಿಲ್ಲ. ಆದ್ದರಿಂದಲೇ ಬಹುತೇಕ ಪ್ರೇಮಿಗಳು ಹತಾಶೆಯಲ್ಲೇ ಕೊನೆತನಕ ಬದುಕುತ್ತಾರೆ  ~ ಓಶೋ ರಜನೀಶ್ | ಭಾವಾನುವಾದ : ಅಲಾವಿಕಾ

ಜ್ಞಾನೋದಯ ಹೊಂದಿದ ಕೂಡಲೇ
ಝೆನ್ ಸನ್ಯಾಸಿಯೊಬ್ಬ ಉದ್ಗರಿಸಿದ :

ನೀನು, ನನ್ನೆದುರು ನಿಂತಿರುವ
ನನ್ನ ಅನಂತ ಆತ್ಮವೇ!
ಮೊದಲ ನೋಟದಿಂದಲೇ
ನಾನು ನಿನ್ನ ಗುಪ್ತ ಪ್ರೇಮಿಯಾಗಿರುವೆ!!

ಸಾವು ಇನ್ನೇನು ಎದುರು ಬಂದು ನಿಂತಿದೆ ಅನ್ನುವಾಗ, ಯಾರೂ ಕೂಡ ಯಾವ ಟಾಕೀಸಿನಲ್ಲಿ ಯಾವ ಸಿನೆಮಾ ಓಡುತ್ತಿದೆ ಎಂದು ಯೋಚಿಸುವ ಗೋಜಿಗೆ ಹೋಗುವುದಿಲ್ಲ. ಅಥವಾ, ಅಂತಹ ಇನ್ಯಾವ ಆಲೋಚನೆಯನ್ನೂ ಮಾಡುವುದಿಲ್ಲ.
ಆಗ ತಾನೆ ಜ್ಞಾನೋದಯ ಪಡೆದ ಝೆನ್ ಸನ್ಯಾಸಿ ಇಲ್ಲಿ ಹೇಳುತ್ತಿದ್ದಾನೆ, “ನನ್ನೆದುರು ನಿಂತಿರುವ ನನ್ನ ಅನಂತ ಆತ್ಮವೇ!”
ಸಾವಿನ ಕನ್ನಡಿಯೆದುರು ತನ್ನ ನೈಜ ರೂಪ ಕಾಣುತ್ತಿರುವ ಅವನಿಗೆ ಬೇರೇನೂ ತೋಚುತ್ತಿಲ್ಲ. ತನ್ನ ಅಂತರಾತ್ಮಕ್ಕೆ ತಾನೇ ನಿವೇದನೆ ಮಾಡಿಕೊಳ್ಳುತ್ತಿದ್ದಾನೆ, “ಮೊದಲ ಸಲ ನೋಡಿದಾಗಲೇ ನಿನ್ನನ್ನು ಗುಪ್ತವಾಗಿ ಪ್ರೀತಿಸತೊಡಗಿದೆ” ಎಂದು!

ನಾವು ಪ್ರತಿಯೊಬ್ಬರೂ ಒಂದು ಗುಪ್ತ ಪ್ರೇಮಕ್ಕಾಗಿ ಹಾತೊರೆಯುತ್ತೇವೆ. ಪ್ರೇಮಿಸುವುದು ಬೇರೆ, ಅದರಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವುದು ಬೇರೆ. ಪ್ರೇಮದಲ್ಲಿ ಗೌಪ್ಯತೆ ಇಲ್ಲದಾಗ ಅದರಲ್ಲಿ ಸ್ವಾರಸ್ಯವೂ ಇರುವುದಿಲ್ಲ, ಆಸಕ್ತಿಯೂ ಉಳಿದುಕೊಳ್ಳುವುದಿಲ್ಲ. ಆದ್ದರಿಂದಲೇ ಬಹುತೇಕ ಪ್ರೇಮಿಗಳು ಹತಾಶೆಯಲ್ಲೇ ಕೊನೆತನಕ ಬದುಕುತ್ತಾರೆ.

ಮನತನ, ಸಮಾಜ ಮೊದಲಾದ ಕಾರಣಕ್ಕೆ ಮಿಲನ ಸಾಧ್ಯವಾಗದೆ, ವಿರಹದಲ್ಲೇ ಕೊನೆಯಾದ ಲೈಲಾ ಮಜ್ನು, ಶಿರೀನ್ ಫರ್ಹಾದ್, ಮೊದಲಾದವರನ್ನು ನಾವು ಆದರ್ಶ ಪ್ರೇಮಿಗಳನ್ನಾಗಿ ಚಿತ್ರಿಸುವುದು ವಿಚಿತ್ರವಲ್ಲವೆ? ಮತ್ತೂ ವಿಚಿತ್ರವೆಂದರೆ, ಪ್ರೇಮಿಸಿ ಜೊತೆಯಾಗಿ ಬಾಳಿದ ಯಾವ ಜೋಡಿಯೂ ನಮಗೆ ಆದರ್ಶ ಪ್ರೇಮಿಗಳಲ್ಲ!

ಬಹುತೇಕ ಪ್ರತಿಯೊಂದು ಪ್ರೇಮ ಸಂಬಂಧವೂ ವೈಫಲ್ಯದಲ್ಲಿ ಕೊನೆಯಾಗುತ್ತದೆ. ಇದನ್ನು ಒಪ್ಪಿ, ಅಥವಾ ಬಿಡಿ. ಒಪ್ಪಿಗೆಯಾದರೂ ಹಾಗೇನಿಲ್ಲ ಎಂದು ವೈಫಲ್ಯ ಮರೆಮಾಚಿಕೊಳ್ಳಿ. ನಾವು ಎಷ್ಟು ಮುಚ್ಚಿಟ್ಟರೂ ಸತ್ಯ ಲೋಕಕ್ಕೆ ತಿಳಿಯುತ್ತದೆ. ಈ ವೈಫಲ್ಯಕ್ಕೆ ಕಾರಣವಿದೆ. ಅದು, ನಮ್ಮ ನೈಜ ಪ್ರೇಮಿ ಮತ್ಯಾರೋ ಆಗಿರುವುದು. ನಮ್ಮ ನಿರಂತರವಾದ, ಅನಂತ ಪ್ರೇಮಿ ಮತ್ಯಾರೋ ಆಗಿರುವುದು. ಆ ‘ಮತ್ಯಾರೋ’ ಯಾರು ಗೊತ್ತೇ? ಸ್ವತಃ ನಮ್ಮದೇ ಅಂತರಾತ್ಮ! ನಾವು ನಮ್ಮ ಅನಂತ ಆತ್ಮವನ್ನು ಗುಪ್ತವಾಗಿ ಪ್ರೀತಿಸುತ್ತಲೇ ಇರುತ್ತೇವೆ. ಅದನ್ನು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ನಮ್ಮ ಆತ್ಮವನ್ನು ಅದೆಷ್ಟು ಗುಪ್ತವಾಗಿ ಪ್ರೇಮಿಸುತ್ತೇವೆ ಎಂದರೆ, ಅದು ಖುದ್ದು ನಮಗೆ ಕೂಡಾ ಗೊತ್ತಾಗದೇ ಇರುವಷ್ಟು !!

ನಮ್ಮ ಹುಡುಕಾಟವೆಲ್ಲ ಈ ನಮ್ಮ ಅನಂತ ಪ್ರೇಮಿಗಾಗಿಯೇ ಇರುತ್ತದೆ. ಆದ್ದರಿಂದಲೇ ನಮ್ಮ ಐಹಿಕ ಪ್ರೇಮಿಗಳು ಫಲಿಸದೆ ಹೋಗುತ್ತವೆ. ಈ ಅನಂತ ಪ್ರೇಮ ನಮಗೆ ಮತ್ತೊಬ್ಬರಲ್ಲಿ ಸಿಗುವುದಿಲ್ಲ. ಅದು ನಮ್ಮೊಳಗೇ ಇರುತ್ತದೆ, ಮೊದಲು ಈ ಪ್ರೇಮವನ್ನು ಗೊತ್ತುಮಾಡಿಕೊಳ್ಳಬೇಕು. ಅನಂತರ ಅದನ್ನು ಹುಡುಕಿ ಪಡೆದುಕೊಳ್ಳಬೇಕು. ಅದು ಹೊರಗೆಲ್ಲೂ ಸಿಗಲಾರದು.

ಕಡಲ ಕಿನಾರೆಯಲ್ಲಿ, ಅಲೆಗಳ ಹಿನ್ನೆಯಲ್ಲಿ ಕಾಣಸಿಗುವ ಗಂಡು ಅಥವಾ ಹೆಣ್ಣು ನಿಮ್ಮನ್ನು ಆಕರ್ಷಿಸಬಹುದು. “ಇವರು ನನಗೆ ಹೇಳಿ ಮಾಡಿಸಿದ ಜೋಡಿ” ಅನ್ನಿಸಬಹುದು.

ಆದರೆ, ನೆನಪಿಡಿ! ಲೋಕದಲ್ಲಿ ಯಾರೂ ಯಾರಿಗಾಗಿಯೂ ಹೇಳಿ ಮಾಡಿಸಿದ ಜೋಡಿಯಾಗಲಾರರು. ಯಾರೊಬ್ಬರೂ ಮತ್ತೊಬ್ಬರಿಗಾಗಿ ಜನಿಸಿರಲಾರರು. ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನ ನಡೆಸಲೆಂದೇ ಜನಿಸಿರುತ್ತಾರೆ. ಮತ್ತೊಬ್ಬರಿಗೆ ಹೊಂದಿಕೆಯಾಗುವಂತೆ ಬದುಕಲು ಹೋದರೆ, ಸ್ವತಃ ಅವರ ಬದುಕು ಬಿರುಕು ಬೀಳುತ್ತದೆ. ಪ್ರೇಮಿ ಅಂದುಕೊಂಡವರ ಜೊತೆ, ಅವರಿಗೆ ಬೇಕಾದಂತೆ ಹೊಂದಾಣಿಕೆ ಮಾಡಿಕೊಳ್ಳಲು ಆರಂಭಿಸಿದ ಕ್ಷಣದಲ್ಲೇ ನಮ್ಮ ವ್ಯಕ್ತಿತ್ವ, ನಮ್ಮ ಅಂತರಂಗ ದುರ್ಬಲವಾಗುತ್ತಾ, ನಮ್ಮೊಳಗು ಮುರಿದುಬೀಳತೊಡಗುತ್ತದೆ. ಪ್ರೇಮಿಗಳು ಮದುವೆಯಾಗಿಬಿಟ್ಟರಂತೂ ಕೇಳುವುದೇ ಬೇಡ! ಹೊಂದಾಣಿಕೆಯ ಒತ್ತಾಯಕ್ಕೆ ಕಟ್ಟುಬಿದ್ದ ಗಂಡ ಹೆಂಡತಿ ತಮಗೇ ಅರಿವಿಲ್ಲದಂತೆ ಪರಸ್ಪರ ಅಸಹನೆ ಬೆಳೆಸಿಕೊಳ್ಳತೊಡಗುತ್ತಾರೆ. ಕೊನೆಗೆ ಗಂಡ ಹೆಂಡತಿಯ ಕಣ್ತಪ್ಪಿಸಲು ಅದದೇ ದಿನಪತ್ರಿಕೆಯ ಹಾಳೆ ತಿರುವುತ್ತ ಕುಳಿತುಕೊಳ್ಳುತ್ತಾನೆ. ಹೆಂಡತಿ, ತನ್ನ ಕೆಲಸಗಳಲ್ಲಿ ಮುಳುಗಿಹೋದಂತೆ ನಟಿಸತೊಡಗುತ್ತಾಳೆ.

ಏಕೆ ಹೀಗಾಗುತ್ತದೆ? ಪ್ರೇಮಿಸಿ ಜೊತೆಯಾಗಿದ್ದರೂ ಈಗೇಕೆ ಆ ತೀವ್ರತೆಯ ಅನುಭವವಾಗುತ್ತಿಲ್ಲ? ಪ್ರೇಮ ಕೇವಲ ದೈಹಿಕ ಸಂಪರ್ಕಕ್ಕೆ ಯಾಕೆ ಸೀಮಿತವಾಗಿದೆ? ಅಥವಾ ಈಗೀಗ ಅದು ಕೂಡಾ ಸಾಧ್ಯವಾಗುತ್ತಿಲ್ಲ. ಏಕೆ ಹೀಗಾಗುತ್ತದೆ?

ಇದು ನಾವು ತಪ್ಪು ಹಾದಿಗಳಲ್ಲಿ ಹುಡುಕಾಟ ನಡೆಸಿದ್ದರ ಪ್ರತಿಫಲ. ಇದಕ್ಕೆ ಹೊರಗಿನ ಯಾರೂ ಕಾರಣವಲ್ಲ. ಇದಕ್ಕೆ ನಮ್ಮ ನಿಜವಾದ, ನಿರಂತರವಾದ, ಅನಂತ ಪ್ರೇಮವನ್ನು ನಾವು ಅರ್ಥ ಮಾಡಿಕೊಳ್ಳದೆಹೋದ್ದು, ಕಂಡುಕೊಳ್ಳದೆ ಹೋದದ್ದು ಕಾರಣ. ನಿಜವಾದ ಪ್ರೇಮ ನಮ್ಮ ಆತ್ಮದಲ್ಲಿ ಆಸಕ್ತವಾಗಿದೆ. ಅದನ್ನು ಒಮ್ಮೆ ಕಂಡುಕೊಂಡರೆ, ಸಂತೃಪ್ತಿ – ಸಾಫಲ್ಯಗಳೆರಡೂ ನಮ್ಮದಾಗುವವು. ನಮ್ಮ ಪ್ರೇಮದ ಹುಡುಕಾಟವೂ ಕೊನೆಗೊಳ್ಳುವುದು.

Leave a Reply