ನಿಂದಕರಿಗೊಂದು ಕುಟಿಯನು ಕಟ್ಟಿ, ಮನೆ ಮುಂದಿರಗೊಡಿರಿ… : ಅಧ್ಯಾತ್ಮ ಡೈರಿ

ನಿಮ್ಮನ್ನು ನಿಂದಿಸುವವರು, ತಾವು ಕೆಸರಾಗುತ್ತ ನಿಮ್ಮನ್ನು ಶುಚಿಗೊಳಿಸುತ್ತಿದ್ದಾರೆ. ನಿಮ್ಮ ತಪ್ಪು ನಿಮಗೆ ತೋರಿಸಿಕೊಡಲಿಕ್ಕಾಗಿ ಖುದ್ದು ತಾವೇ  ಹೊಲಸಾಗುತ್ತಿದ್ದಾರೆ. ನೀವು ಅವರಿಗೆ ಕೃತಜ್ಞರಾಗಿರಬೇಕು. ಹಂದಿ ಎಷ್ಟಾದರೂ ಮಲ ತಿನ್ನಲಿ, ಶುಚಿಯಾಗುವುದು ನಿಮ್ಮ ಮನೆಯ ಹಿತ್ತಿಲು. ಅವರು ಎಷ್ಟಾದರೂ ಅಶ್ಲೀಲ – ಅಸಭ್ಯವಾಗಿ ನಿಂದಿಸಲಿ, ಆರೋಪಿಸಲಿ, ಶುಚಿಯಾಗುವುದು ನಿಮ್ಮ ಅಂತರಂಗ! ~ ಅಲಾವಿಕಾ

ನಿಂದಕರಿಗೊಂದು ಗುಡಿಯನು ಕಟ್ಟಿ ಮನೆಮುಂದಿರಗೊಡಿರಿ…
ನೀರು ಸಾಬೂನುಗಳಿಲ್ಲದೆಯೆ ನಿರ್ಮಲಗೊಳಿಸುವರು | ಕಬೀರಾ
ನಿರ್ಮಲಗೊಳಿಸುವರು….

‘ಕಬೀರ ಬೀರಿದ ಬೆಳಕು’ ಕ್ಯಾಸೆಟ್ಟಿನಲ್ಲಿ ಪುರುಷೋತ್ತಮಾನಂದ ಜಿ ಕಂಠ. ಸೀದಾ ಎದೆಯಾಳಕ್ಕಿಳಿದು ತಂಪೂಡುತ್ತಿದೆ. ಇಂಥ ಹೊಳಹುಗಳು ಸ್ಫಟಿಕದ ಹಾಗೆ. ರಾಡಿ ಬಕೀಟಿನಲ್ಲಿ ಹಾಕಿಟ್ಟರೆ ಮುಗಿಯಿತು. ತಿಳಿ ನೀರು ಮೇಲೆ ನಿಲ್ಲುತ್ತದೆ.

ಪುರಂದರ ದಾಸರೂ ಹಾಡಿದ್ದಾರೆ, ‘ನಿಂದಕರಿರಬೇಕು ಹಂದಿಯ ಹಾಗೆ’ ಎಂದು.

ಅದೂ ಸರಿಯೇ. ಕೆಲವರು ತಮ್ಮನ್ನು ತಾವು ಭಾಷೆ ಮತ್ತು ಅಶ್ಲೀಲ ಚಿಂತನೆಯ ಮೂಲಕ ಕೊಚ್ಚೆ ಮಾಡಿಕೊಂಡು ನಿಂದನೆಯಲ್ಲಿ ತೊಡಗುತ್ತಾರೆ. ಅಂಥವರಿಗೂ ಒಂದು ಗೌರವಪೂರ್ಣ ನಮಸ್ಕಾರವಿರಲಿ. ಅವರು ಕೂಡಾ ಶುಚಿಗೊಳಿಸುವ ಕೆಲಸವನ್ನೇ ಮಾಡುತ್ತಿದ್ದಾರೆ!

ಬಹಳ ಬಾರಿ ಅನಿಸುತ್ತೆ ಅಲ್ಲವೆ, ನಿಂದಕರನ್ನು ನಿಂದಿಸಿಯೇ ಬಾಯಿ ಮುಚ್ಚಿಸಬೇಕು ಎಂದು? ಹಾಗೆ ಮಾಡಲು ಹೋಗಬೇಡಿ ಯಾವತ್ತೂ. ಮುಳ್ಳನ್ನ ಮುಳ್ಳಿಂದಲೇ ತೆಗಿಯಬೇಕು ನಿಜ. ಹಾವು ಕಚ್ಚಿದ ವಿಷ ಏರದ ಹಾಗೆ ಹಾವನ್ನೇ ಹಿಡಿದು ತಂದು ಅದೇ ಜಾಗದಲ್ಲಿ ಕಚ್ಚಿಸೋದನ್ನು ಸಿನೆಮಾಗಳಲ್ಲಿ ನೋಡಿದ್ದೀವಿ. ಆದರೆ; ಆ ಇನ್ನೊಂದು ಮುಳ್ಳು, ಆ ಇನ್ನೊಂದು ಬಾರಿ ಕಚ್ಚಿಸಿಕೊಳ್ಳುವ ವಿಷ ನಮ್ಮಲ್ಲಿ ಉಳಿದುಹೋಗದಂತೆ ನಿಭಾಯಿಸಲು ನಮಗೆ ಸಾಧ್ಯವೇ?

ರಾಮಕೃಷ್ಣ ಪರಮಹಂಸರು ಹೇಳ್ತಾರೆ, “ಅಜ್ಞಾನದ ಮುಳ್ಳನ್ನು ಜ್ಞಾನದ ಮುಳ್ಳಿಂದ ತೆಗೆಯಿರಿ. ಆಮೇಲೆ ಎರಡೂ ಮುಳ್ಳುಗಳನ್ನೂ ಬಿಸಾಡಿಬಿಡಿ” ಎಂದು. ಆದರೆ ನಾವು ಜ್ಞಾನದ ಮುಳ್ಳನ್ನು ಅಷ್ಟು ಸುಲಭಕ್ಕೆ ಎಸೆಯೋದಿಲ್ಲ. ಅದಕ್ಕೆ ಅಂಟಿಕೊಂಡುಬಿಡ್ತೇವೆ. ಬೆನ್ನಲ್ಲಿ ಹೊತ್ತು ತಿರುಗುತ್ತೇವೆ. ಹಾಗೇ, ನಿಂದನೆಗೆ ಪ್ರತಿನಿಂದನೆ ಬಳಸುತ್ತಾ ಹೋದರೆ ಕೊನೆಗೆ ನಮ್ಮ ಪಾಲಿನ ನಿಂದನೆ ನಮಗೇ ಅಂಟಿಕೊಂಡು ಬಿಡುತ್ತದೆ. ನಮಗೆ ಅದರಲ್ಲಿ ರುಚಿ ಉಂಟಾಗುತ್ತದೆ. ಮೊದಮೊದಲು ಪ್ರತಿಕ್ರಿಯೆಯಾಗಿದ್ದ ಸಂಗತಿ ಈಗ ಖುದ್ದು ಕ್ರಿಯೆಯಾಗಲೂಬಹುದು.

“ಕೆಡುಕಿನೊಡನೆ ಹೋರಾಡಲು ಕೆಡುಕರ ಮಾರ್ಗವನ್ನೆ ಅನುಸರಿಸಿದರೆ, ಕೊನೆಗೊಮ್ಮೆ ನೀವೂ ಕೆಡುಕರಾಗಿಬಿಡುವ ಅಪಾಯವಿದೆ” ಅನ್ನುತ್ತಾನೆ ಫ್ರೆಡ್ರಿಕ್ ನೀಷೆ. ಆದ್ದರಿಂದ, ನಿಂದೆಗೆ ನಿಂದೆ, ಬೈಗುಳಕ್ಕೆ ಬೈಗುಳ, ಸುಳ್ಳಿಗೆ ಸುಳ್ಳು ಯಾವತ್ತೂ ಪ್ರತ್ಯುತ್ತರವಾಗಬಾರದು.

ಸಮಾಜದಲ್ಲಿ ಹಲವು ಬಗೆಯ ಜನರಿದ್ದಾರೆ. ಒಂದು ಚರ್ಚೆ, ಒಂದು ಕಾವ್ಯ, ಒಂದು ಪ್ರತಿಕ್ರಿಯೆ, ಒಂದು ಸಿದ್ಧಾಂತ – ಇವನ್ನು ಅರ್ಥ ಮಾಡಿಕೊಳ್ಳಲಾರದ ಒಂದು ವರ್ಗವೂ ಇರುತ್ತದೆ. ತಮಗೆ ಸಮ್ಮತವಲ್ಲದ ಎಲ್ಲವನ್ನೂ ತಾವು ನಂಬಿಕೊಂಡ ಚಿಂತನೆಗೆ ವಿರುದ್ಧ ಅಥವಾ ಅಪಾಯ ಎಂದು ಅವರು ಬಲವಾಗಿ ನಂಬಿಕೊಂಡಿರುತ್ತಾರೆ. ಮತ್ತು ಅಭಿವ್ಯಕ್ತಿಯ ಪ್ರಕಾರಗಳನ್ನು ವಿಂಗಡಿಸಿ ನೋಡುವಷ್ಟು ವ್ಯವಧಾನವಾಗಲೀ ತಿಳುವಳಿಕೆಯಾಗಲೀ ಅವರಲ್ಲಿ ಇರುವುದಿಲ್ಲ. ಆದ್ದರಿಂದ ಪ್ರತಿಯೊಂದಕ್ಕೂ ಲೈಂಗಿಕ, ದೈಹಿಕ, ಅಶ್ಲೀಲ – ಭಾಷೆ, ಸಂಕೇತ, ಆರೋಪಗಳನ್ನು ಹೊರಿಸಿ ನಿಂದನೆಗೆ ಇಳಿಯುತ್ತಾರೆ. ಸಾಮಾಜಿಕ ಜಾಲತಾಣ ಸುಲಭ ಲಭ್ಯವಾಗಿರುವ ಈ ದಿನಗಳಲ್ಲಿ ಇದರ ಹಾವಳಿ ಹೆಚ್ಚು. ಇಲ್ಲಿ ಪ್ರತಿಯೊಬ್ಬರೂ ನ್ಯಾಯಾಧೀಶರೇ.

ಉದಾಹರಣೆಗೆ; ಯಾರಾದರೂ ತಮಗೆ ಸಮ್ಮತವಲ್ಲದ ಅಭಿಪ್ರಾಯ ಹೇಳುತ್ತಾರೆ ಎಂದಿಟ್ಟುಕೊಳ್ಳಿ. ಅದರ ಸಂದರ್ಭ – ಸನ್ನಿವೇಶಗಳನ್ನು ಅರಿಯುವ  ಪ್ರಯತ್ನ ಮಾಡದ  ಈ ಸಾಮಾಜಿಕ ಜಾಲತಾಣದ ನ್ಯಾಯಾಧೀಶರು ಸೀದಾ ಮರಣ ದಂಡನೆ ಘೋಷಿಸುತ್ತಾರೆ. ಕುಹಕವಾಡುತ್ತಾ ಅಶ್ಲೀಲ ನಿಂದನೆಗೆ ಇಳಿಯುತ್ತಾರೆ. ಆಕೆ ಮಹಿಳೆಯಾಗಿದ್ದರೆ ವೇಶ್ಯೆಯರನ್ನು ಅವಮಾನಿಸುವಂತೆ ಅಕ್ಷರಗಳನ್ನು ನಗ್ನಗೊಳಿಸುತ್ತಾರೆ. ಹಾಗೆಂದು ತನ್ನ ಚಿಂತನೆಯನ್ನು ಅಭಿವ್ಯಕ್ತಪಡಿಸಿದ ವ್ಯಕ್ತಿಯೂ ಅದೇ ಭಾಷೆಯಲ್ಲಿ ಉತ್ತರಿಸಲಾದೀತೇ? ಅವರ ಅಭಿವ್ಯಕ್ತಿ ಮಹತ್ವ ಪಡೆಯುವುದು ಅವರ ವಿದ್ಯೆ, ಶಿಕ್ಷಣ, ಅರಿವು, ಅನುಭವ ಎಲ್ಲಕ್ಕಿಂತ ಮುಖ್ಯವಾಗಿ ಪ್ರಜ್ಞಾವಂತಿಕೆ ಮತ್ತು ಪ್ರಬುದ್ಥತೆಗಳ ಕಾರಣದಿಂದ. ಆದ್ದರಿಂದಲೇ ಸಮಾಜದಲ್ಲಿ ಅವರ ಮಾತು ಸ್ವೀಕರತವಾಗುತ್ತದೆ ಅಥವಾ ಹೀಗೆ ನಿಂದನೆಗೊಳಗಾಗುತ್ತದೆ. ಅವರಿಗೆ ಮಹತ್ವ ಸಿಗುವುದೇ ಅವರು ಅರ್ಹರು ಅನ್ನುವ ಕಾರಣಕ್ಕೆ. ಹೀಗಿರುವಾಗ, ಅವರು ಕೂಡಾ ಕ್ಷುಲ್ಲಕ ಭಾಷೆ ಅಥವಾ ವಿಧಾನವನ್ನು ಬಳಸಿ ಪ್ರತಿಕ್ರಿಯಿಸಿದರೆ ವ್ಯತ್ಯಾಸ ಉಳಿಯುತ್ತದೆಯೆ? ಖಂಡಿತಾ ಇಲ್ಲ!

ಇಂಥಾ ಸಂದರ್ಭಗಳಲ್ಲಿ ಅಸ್ತಿತ್ವದ ಘನತೆಯನ್ನು ಉಳಿಸಿಕೊಂಡು ತಲೆ ಕೊಡವಿ ಮುನ್ನಡೆಯುವುದು ಧೀರತನ. ಘನತೆ ಪ್ರತಿ ನಿಂದೆಯಲ್ಲಿ ಇರುವುದಿಲ್ಲ. ಪ್ರತಿಕ್ರಿಯೆ ಕೂಡಾ ಅಗತ್ಯವಲ್ಲ. ನಿಂದಕರು ನಿಮಗಾಗಿ ಸಮಯ ವ್ಯರ್ಥ ಮಾಡಿಕೊಳ್ಳುತ್ತಿರುವಾಗ ನೀವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ, ಅವರಿಗೆ ಸ್ಪಂದಿಸುವುದು. ನಿಮ್ಮ ಯಾವ ಕ್ರಿಯೆ ಅವರೊಳಗಿನ ಹೊಲಸನ್ನು ಹೊರ ಹಾಕುವಂತೆ ಮಾಡಿದೆ ಎಂದು ಪರೀಕ್ಷಿಸಿಕೊಳ್ಳುವುದು. ನಿಜಕ್ಕೂ ಅದು ಮತ್ತೊಂದು ವ್ಯಕ್ತಿ ಅಥವಾ ಸಮುದಾಯವನ್ನು ಕೆರಳಿಸುವಂತಿದ್ದರೆ, ಅದನ್ನು ತಿದ್ದಿಕೊಳ್ಳುವುದು.

ಹಾಗಂತ ನಿಮ್ಮ ವಿಚಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿಲ್ಲ. ಅದನ್ನು ಪ್ರಸ್ತುತಪಡಿಸುವ ಧಾಟಿ ಬದಲಿಸಿಕೊಳ್ಳುವ ಅವಕಾಶವಿದ್ದರೆ ಪ್ರಯತ್ನಿಸಬಹುದಷ್ಟೆ. ಸ್ಪಂದನೆ ಎಂದರೆ ಸೋಲುವುದಲ್ಲ. ನಿಮ್ಮನ್ನು ಸೋಲಿಸುವುದು ಪ್ರತಿಕ್ರಿಯೆ. ನಿಮ್ಮನ್ನು ಬಡಿದೆಬ್ಬಿಸುವುದೇ ಅವರ ನಿಂದನೆಯ ಹಿಂದಿನ ಉದ್ದೇಶವಾಗಿರುತ್ತದೆಯಾದ್ದರಿಂದ, ಪ್ರತಿಕ್ರಿಯಿಸಿದರೆ ನೀವು ಸೋತುಹೋಗುತ್ತೀರಿ. ಆದ್ದರಿಂದ, ಸ್ಪಂದಿಸಿ.

ಪುರಂದರ ದಾಸರನ್ನು ನೆನೆಯಿರಿ. ನಿಮ್ಮನ್ನು ನಿಂದಿಸುವವರು, ತಾವು ಕೆಸರಾಗುತ್ತ ನಿಮ್ಮನ್ನು ಶುಚಿಗೊಳಿಸುತ್ತಿದ್ದಾರೆ. ನಿಮ್ಮ ತಪ್ಪು ನಿಮಗೆ ತೋರಿಸಿಕೊಡಲಿಕ್ಕಾಗಿ ಖುದ್ದು ತಾವೇ  ಹೊಲಸಾಗುತ್ತಿದ್ದಾರೆ. ನೀವು ಅವರಿಗೆ ಕೃತಜ್ಞರಾಗಿರಬೇಕು. ಹಂದಿ ಎಷ್ಟಾದರೂ ಮಲ ತಿನ್ನಲಿ, ಶುಚಿಯಾಗುವುದು ನಿಮ್ಮ ಮನೆಯ ಹಿತ್ತಿಲು. ಅವರು ಎಷ್ಟಾದರೂ ಅಶ್ಲೀಲ – ಅಸಭ್ಯವಾಗಿ ನಿಂದಿಸಲಿ, ಆರೋಪಿಸಲಿ, ಶುಚಿಯಾಗುವುದು ನಿಮ್ಮ ಅಂತರಂಗ! ಕಬೀರ ಹೇಳಿದಂತೆ ನೀರಿನ ಖರ್ಚಿಲ್ಲದೆ, ಸಾಬೂನಿನ ಖರ್ಚಿಲ್ಲದೆ ಅವರು ನಿಮಗೆ ಉಪಕಾರ ಮಾಡುತ್ತಿದ್ದಾರೆ! ಅವರ ಶ್ರಮವನ್ನು ಗೌರವಿಸಿ. ಇಂತಹಾ ಪ್ರಹಸನಗಳಿಂದ ಹೊರಬರಲು ಇದಕ್ಕಿಂತ ಉತ್ತಮ ಮಾರ್ಗವಿಲ್ಲ.

ಬುದ್ಧ ಮತ್ತೆ ನೆನಪಾಗುತ್ತಾನೆ.
ಬುದ್ಧನ ಕ್ರಾಂತಿಕಾರಿ ಚಿಂತನೆಗಳು ಸಿದ್ಧಮಾದರಿ ಸಂಪ್ರದಾಯವಾದಿಗಳ ಎದೆಯಲ್ಲಿ ನಡುಕ ಹುಟ್ಟಿಸಿರುತ್ತದೆ. ಅವನು ತನ್ನ ಶಿಷ್ಯರೊಂದಿಗೆ ಹಳ್ಳಿಯೊಂದರ ಅಂಚಿನಲ್ಲಿ ವೀಶ್ರಮಿಸುತ್ತಾ ಇರುವಾಗ ಒಬ್ಬ ವ್ಯಕ್ತಿ ಬರುತ್ತಾನೆ. ಬುದ್ಧನನ್ನು ಸಮಾ ಬೈಯುತ್ತಾನೆ. ನಿಂದಿಸುತ್ತಾನೆ. ಬುದ್ಧ ಸುಮ್ಮನೆ, ಶಾಂತವಾಗಿ ಕುಳಿತಿರುತ್ತಾನೆ. ಬೈದು ಸುಸ್ತಾದ ವ್ಯಕ್ತಿ ಹೊರಟುಹೋಗುತ್ತಾನೆ.
ಶಿಷ್ಯರು ಗುರುವಿನ ಮೌನಕ್ಕೆ ಕಾರಣ ಕೇಳಿದಾಗ, “ನಾನು ಅವನ ಬೈಗುಳಗಳನ್ನು ಸ್ವೀಕರಿಸಲಿಲ್ಲ. ಆದ್ದರಿಂದ ಅವು ಅವನಲ್ಲೇ ಉಳಿದವು. ಅವುಗಳ ಭಾರ ಹೊತ್ತೂ ಹೊತ್ತೂ ಅವನು ಸುಸ್ತಾದ. ಇನ್ನು ನಿಲ್ಲಲಾಗದೆ ಹೊರಟುಹೋದ” ಅನ್ನುತ್ತಾನೆ ಬುದ್ಧ.

ಬುದ್ಧರಾಗಲು ಸಾದ್ಯವಿಲ್ಲದೆ ಇರಬಹುದು… ನಮಗೆ ಬದ್ಧರಾಗದೆ ಇರಲಂತೂ ಸಾಧ್ಯ. ಹೊಗಳಿಕೆ – ತೆಗಳಿಕೆಗೆ ಗಂಟುಬೀಳದೆ ಸಹಜವಾಗಿದ್ದರೆ, ನಿಂದಕರು ಭಾರ ಹೊತ್ತು ಬಸವಳಿಯುವ ಕಾಲ ತಾನಾಗಿ ಒದಗುತ್ತದೆ. ಅದಕ್ಕಾಗಿ ಸಹನೆಯಿಂದ ಕಾಯಬೇಕಷ್ಟೆ. 

  

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.