ಶಿಷ್ಯನು ಸಿದ್ಧನಾದಾಗ ಗುರುವು ಕಾಣಿಸಿಕೊಳ್ಳುತ್ತಾನೆ… : ಬೆಳಗಿನ ಹೊಳಹು

ವಾಸ್ತವದಲ್ಲಿ ದತ್ತ ಅವಧೂತನೊಳಗೆ ಗುರುತನವಿದ್ದಿತು. ಅರಿವೇ ಗುರು ಅಲ್ಲವೆ? ದತ್ತ ಅವಧೂತನ ಚಿಂತನೆಗಳನ್ನು ಯಾವೆಲ್ಲ ಜಡ / ಜೀವಗಳು ಪ್ರತಿಫಲಿಸಿದವೋ ಅವೆಲ್ಲವೂ ಅವನಿಗೆ ಗುರುವಾದವು… ~ ಸಾ.ಮೈತ್ರೇಯಿ

ಮ್ಮ ಬದುಕಿನಲ್ಲಿ ಈವರೆಗೆ ಒಬ್ಬ ಸದ್ಗುರುವೂ ದೊರೆತಿಲ್ಲವೆಂದರೆ, ಅದು ನಮ್ಮ ಸಿದ್ಧತೆಯ ಕೊರತೆ ಎಂದು ಅರ್ಥೈಸಿಕೊಳ್ಳಬೇಕೇ ಹೊರತು, ಲೋಕದಲ್ಲಿ ಗುರುವಿನ ಕೊರತೆ ಇದೆ ಎಂದು ಭಾವಿಸಬಾರದು. ಏಕೆಂದರೆ, ನಾವು ಶಿಷ್ಯರಾಗಲು ಸಿದ್ಧರಾದ ನಂತರವಷ್ಟೆ ಗುರುವು ಕಾಣಿಸಿಕೊಳ್ಳೋದು.

ದತ್ತ ಅವಧೂತನು ಇಪ್ಪತ್ನಾಲ್ಕು ಗುರುಗಳಿಂದ ಬೋಧೆ ಪಡೆದನೆಂದು ಹೇಳಲಾಗುತ್ತದೆ. ದತ್ತನು ತನಗೆ ಎದುರಾದ ಭೂಮಿ, ಆಕಾಶ, ಸಮುದ್ರ, ಪಾರಿವಾಳ, ಸರ್ಪ, ಆನೆ, ಮೀನು, ನರ್ತಕಿ….. ಇತ್ಯಾದಿ 24 ಜೀವ / ಜಡಗಳಿಂದ ತಿಳಿವನ್ನು ಪಡೆಯುತ್ತಾನೆ. ವಿಶೇಷವೆಂದರೆ ಈ ತಿಳಿವು ಲೌಕಿಕದ ಬದುಕನ್ನು ಹಸನುಗೊಳಿಸುತ್ತಲೇ ಪಾರಮಾರ್ಥಿಕ ದಾರಿಯಲ್ಲೂ ನಡೆಸುವಂಥವು.

ದತ್ತ ಅವಧೂತನು ಹುಟ್ಟಿದಾಗಿನಿಂದ ಅಷ್ಟೂ ಕಾಲ ಅವೆಲ್ಲ ಜಡ / ಜೀವಗಳನ್ನೂ ನೋಡುತ್ತಿದ್ದನು. ಅಥವಾ ಅವುಗಳಲ್ಲಿ ಕೆಲವನ್ನಾದರೂ ಕಂಡಿದ್ದನು. ಅದೊಂದು ನಿರ್ದಿಷ್ಟ ದಿನ ಮಾತ್ರ ಅವನಿಗೆ ಅವೆಲ್ಲವೂ ಗುರುವಾಗಿ ಕಂಡಿದ್ದು ಹೇಗೆ?

ಉತ್ತರವಿಷ್ಟೇ… ಜಗದ ತುಂಬೆಲ್ಲ ಬೋಧೆ ನೀಡಬಲ್ಲ ಗುರುಗಳಿದ್ದರೂ, ದತ್ತನೊಳಗೆ ಇನ್ನೂ ಶಿಷ್ಯನೊಬ್ಬ ಉದಿಸಿರಲಿಲ್ಲ. ಅವನು ತಿಳಿವನ್ನು ಗ್ರಹಿಸಲು ಸಿದ್ಧನಾಗಿರಲಿಲ್ಲ. ದತ್ತನು ಸಿದ್ಧನಾದ ಘಳಿಗೆಯಲ್ಲೇ ಕಂಡದ್ದೆಲ್ಲವೂ ಗುರುವಾದವು.

ಅದು ಹೇಗೆ?
ವಾಸ್ತವದಲ್ಲಿ ದತ್ತ ಅವಧೂತನೊಳಗೆ ಗುರುತನವಿದ್ದಿತು. ಅರಿವೇ ಗುರು ಅಲ್ಲವೆ? ದತ್ತ ಅವಧೂತನ ಚಿಂತನೆಗಳನ್ನು ಯಾವೆಲ್ಲ ಜಡ / ಜೀವಗಳು ಪ್ರತಿಫಲಿಸಿದವೋ ಅವೆಲ್ಲವೂ ಅವನಿಗೆ ಗುರುವಾದವು. ತನ್ನೊಳಗಿನ ಅರಿವನ್ನು, ತನ್ನೊಳಗಿನ ಗುರುವನ್ನು ಅವನಿಗೆ ಪರಿಚಯಿಸಿದವು.

ಭೂಮಿಯನ್ನು ನೋಡಿದಾಗ ದತ್ತನಿಗೆ ಅದರ ಸಹನೆ ಪಾಠವಾಯಿತು. ಸಹನೆಯ ಬೀಜಗಳು ಅವನಲ್ಲಿ ಮೊಳೆಯತೊಡಗಿದ್ದರಿಂದ ಭೂಮಿಯಲ್ಲಿ ಅದನ್ನು ಗುರುತಿಸಲು ಸಾಧ್ಯವಾಯಿತು. ದತ್ತನಲ್ಲಿ ಸಹನೆ ಮೊಳೆತ ನಂತರವಷ್ಟೆ ಅವನು ಭೂಮಿಯಿಂದ ಬೋಧೆ ಪಡೆಯುವ ಶಿಷ್ಯನಾಗಲು ಸಾಧ್ಯವಾದದ್ದು. ಅವನು ತನ್ನ ಚೈತನ್ಯ ದರ್ಪಣದ ದೂಳೊರೆಸಿಕೊಂಡು ಜಗತ್ತನ್ನು ಪ್ರತಿಬಿಂಬಿಸಲು ಸಿದ್ಧವಾದ ನಂತರವಷ್ಟೆ, ಅರಿವು ಪಡೆಯಲು ಸಾಧ್ಯವಾದದ್ದು.

Leave a Reply