ಮೊದಮೊದಲ ಬೌದ್ಧ ಬಿಕ್ಖುಣಿಯರ (ಥೇರಿಯರ) ಪದ್ಯ ಸಂಗ್ರಹವೇ ‘ಥೇರಿಗಾಥಾ’. ಇವುಗಳಲ್ಲಿ ಆಯ್ದ ಕೆಲವನ್ನು ಕನ್ನಡಕ್ಕೆ ತರುತ್ತಿದ್ದಾರೆ, ಕವಿ ಮತ್ತು ಅನುವಾದಕರಾದ ಚಿದಂಬರ ನರೇಂದ್ರ. ಇದು ನಾಲ್ಕನೇ ಕಂತು…
ವೀರಾ (ಸ್ವಗತ, ಬುದ್ಧ ತನಗೆ ಹೇಳಿದ್ದನ್ನೇ ವೀರಾ ಮತ್ತೆ ಹೇಳಿಕೊಳ್ಳುತ್ತ)
ವೀರಾ,
ಎಲ್ಲರ ನಾಯಿಕೆ ನೀನು, ಅದೇ ನಿನ್ನ ಹೆಸರು,
ಜೊತೆಗೆ ಎಲ್ಲರನ್ನೂ ಕರೆದೊಯ್ಯುವುದು
ನಿನಗೆ ಗೊತ್ತಿರುವುದರಿಂದಲೇ ನೀನು ವೀರಾ,
ಎಷ್ಟು ಚೆನ್ನಾಗಿ ತಿಳಿದುಕೊಳ್ಳಬಹುದು ಎನ್ನುವುದನ್ನ
ಅದ್ಭುತವಾಗಿ ತಿಳಿದುಕೊಂಡಿರುವ ಸಾಧಕಿ ನೀನು. *
ನಿನ್ನ ದೇಹದ ಕಾಳಜಿ ಮಾಡು
ಇದು ನಿನ್ನ ಕೊನೆಯದು,
ಇಷ್ಟು ಮಾತ್ರ ಜಾಗ್ರತೆಯಿರಲಿ ನಿನ್ನಲ್ಲಿ
ಈ ದೇಹ ಸಾವನ್ನು ಹೊತ್ತು ಬರುವ ವಾಹಕವಾಗದಿರಲಿ
ಇನ್ನು ಮೇಲೆ.
*ಭಾವಿತಿಂದ್ರಿಯ, ಇಂದ್ರಿಯಗಳು ಮತ್ತು ಅರಿವಿನ ಸಹಜಶಕ್ತಿಯನ್ನ ಪ್ರಬುದ್ಧವಾಗಿ ಬೆಳೆಸಿಕೊಂಡವಳು.
ಮಿತ್ತಾ (ಸ್ವಗತ, ಬುದ್ಧ ತನಗೆ ಹೇಳಿದ್ದನ್ನೇ ಮಿತ್ತಾ ಮತ್ತೆ ಹೇಳಿಕೊಳ್ಳುತ್ತ)
ಮಿತ್ತಾ,
ನಿನ್ನ ಹೆಸರನ್ನು ಸಾರ್ಥಕ ಮಾಡುವ ಗೆಳತಿ ನೀನು,
ನಂಬಿಕೆ ನಿನ್ನನ್ನು ಭಿಕ್ಖುಣಿಯನ್ನಾಗಿಸಿದೆ,
ಈಗ ಗೆಳೆತನದ ರುಚಿ ಕಾಣುವವರಲ್ಲಿ ಒಬ್ಬಳಾಗು,
ನೈತಿಕವಾಗಿ ಚತುರಳಾಗು
ನಿನ್ನ ಕಟ್ಟಿಹಾಕಿರುವ ಎಲ್ಲದರಿಂದ
ಇನ್ನಿಲ್ಲದಂತೆ ಸುರಕ್ಷಿತವಾಗಿರಲು.
ಭದ್ರಾ (ಸ್ವಗತ, ಬುದ್ಧ ತನಗೆ ಹೇಳಿದ್ದನ್ನೇ ಭದ್ರಾ ಮತ್ತೆ ಹೇಳಿಕೊಳ್ಳುತ್ತ)
ಭದ್ರಾ,
ಮಂಗಳಕರ ನೀನು, ನಿನ್ನ ಹೆಸರು,
ಸನ್ಯಾಸಿನಿಯಾದೆ ನೀನು ವಿಶ್ವಾಸ ಕಾರಣವಾಗಿ,
ಈಗ ಮಂಗಳಕರ ಸಂಗತಿಗಳನ್ನು
ಪ್ರೀತಿಸುವವರಲ್ಲಿ ಒಬ್ಬಳಾಗು,
ನೈತಿಕವಾಗಿ ಕುಶಲಳಾಗು
ನಿನ್ನ ಕಟ್ಟಿಹಾಕಿರುವ ಎಲ್ಲದರಿಂದ
ಸದಾ ಸುರಕ್ಷಿತವಾಗಿರಲು.