ಝೆನ್ ಒಳಗೆ ಪ್ರವೇಶ ಮಾಡುವುದೆಂದರೆ ಬೆಂಕಿಯನ್ನು ಹಾಯ್ದು ಬಂದಂತೆ ~ ಓಶೋ

ತನಗೆ ಬದುಕು ಕರುಣಿಸಿದ್ದನ್ನು ಯಾವ ಆರೋಪಗಳಿಲ್ಲದೆ, ಅದು ಇರುವ ಹಾಗೆಯೇ ಕೃತಜ್ಞತೆಯಿಂದ ತೆರೆದ ಮನಸ್ಸಿನಿಂದ ಒಪ್ಪಿಕೊಂಡ ಕ್ಷಣದಲ್ಲಿ ಮನುಷ್ಯ ಬುದ್ಧನಾಗುತ್ತಾನೆ, ತಾವೋದತ್ತ ಹೆಜ್ಜೆ ಹಾಕುತ್ತಾನೆ, ಧ್ಯಾನದಲ್ಲಿ ಒಂದಾಗುತ್ತಾನೆ ~ ಓಶೋ ರಜನೀಶ್ । ಕನ್ನದಕ್ಕೆ: ಚಿದಂಬರ ನರೇಂದ್ರ

ರೆಂಗೆತ್ಸು ಝೆನ್ ನ ಅತ್ಯಂತ ಪ್ರಸಿದ್ಧ ಹೆಣ್ಣು ಮಗಳು. ಝೆನ್ ನಲ್ಲಿ ಅವಳು ಏರಿದ ಎತ್ತರವನ್ನು ಏರಿದವರು ತುಂಬ ಅಪರೂಪ.

ಒಮ್ಮೆ ತೀರ್ಥ ಯಾತ್ರೆ ಮಾಡುತ್ತಿದ್ದಾಗ ರೆಂಗೆತ್ಸು ಒಂದು ಹಳ್ಳಿಗೆ ಬರುತ್ತಾಳೆ, ರಾತ್ರಿಯಾಗಿದ್ದರಿಂದ ಆ ಹಳ್ಳಿಯಲ್ಲಿ ತಂಗಲು ಅವಕಾಶ ಮಾಡಿಕೊಡಿ ಎಂದು ಹಳ್ಳಿಗರನ್ನು ಕೇಳಿಕೊಳ್ಳುತ್ತಾಳೆ. ಆದರೆ ಹಳ್ಳಿಗರು ಸಾರಾಸಗಟಾಗಿ ರೆಂಗೆತ್ಸುಳ ಮನವಿಯನ್ನು ತಿರಸ್ಕರಿಸುತ್ತಾರೆ. ಆ ಹಳ್ಳಿಯ ಎಲ್ಲರೂ ಝೆನ್ ಗೆ ವಿರುದ್ಧವಾಗಿದ್ದವರು. ಝೆನ್ ಎಷ್ಟು ಕ್ರಾಂತಿಕಾರಿ, ಎಷ್ಟು ಬಂಡಾಯಖೋರ ಎಂದರೆ, ಸಂಪ್ರದಾಯವಾದಿ ಮನಸ್ಸುಗಳಿಗೆ ಝೆನ್ ಒಪ್ಪಿಕೊಳ್ಳುವುದು ತುಂಬ ಕಷ್ಟ. ಝೆನ್ ಒಪ್ಪಿಕೊಳ್ಳುವುದರ ತೊಂದರೆ ಎಂದರೆ ನಂತರ ನೀವು ಮೊದಲಿನ ಹಾಗೆ ಇರಲು ಸಾಧ್ಯವಾಗುವುದಿಲ್ಲ. ಝೆನ್ ಒಳಗೆ ಪ್ರವೇಶ ಮಾಡುವುದೆಂದರೆ ಬೆಂಕಿಯನ್ನು ಹಾಯ್ದು ಬಂದಂತೆ.

ಈ ಭಯದ ಕಾರಣವಾಗಿಯೇ ಸಂಪ್ರದಾಯವಾದಿ ಜನ, ಧರ್ಮದ ಸತ್ಯಗಳಿಗೆ ಯಾವಾಗಲೂ ವಿರುದ್ಧ, ಅವರಿಗೆ ಸಂಪ್ರದಾಯಗಳನ್ನು ಪಾಲಿಸುವುದರಲ್ಲಿ ಮಾತ್ರ ಆಸಕ್ತಿ. ಆ ಹಳ್ಳಿಯ ಜನ ಬಹುಶಃ ಸಂಪ್ರದಾಯವಾದಿ ಬೌದ್ಧರಾಗಿರಬಹುದು, ಅವರು ರೆಂಗೆತ್ಸು ಳಿಗೆ ಹಳ್ಳಿಯಲ್ಲಿ ರಾತ್ರಿ ಕಳೆಯಲು ಅವಕಾಶ ನೀಡಲಿಲ್ಲ, ಅವಳನ್ನು ಹಳ್ಳಿಯಿಂದ ಹೊರಗೆ ಹಾಕಿಬಿಟ್ಟರು. ಅದು ದಟ್ಟ ಚಳಿಗಾಲದ ರಾತ್ರಿ. ಉಳಿದುಕೊಳ್ಳಲು ಜಾಗವಿಲ್ಲದೇ ಹಸಿವಿನಿಂದ ಬಳಲಿದ್ದ ರೆಂಗೆತ್ಸು ಹಳ್ಳಿಯ ಹೊರಗೆ ಚೆರ್ರಿ ಮರದ ಕೆಳಗೆ ನಿದ್ರೆ ಹೋಗುತ್ತಾಳೆ. ಅವತ್ತು ಎಂದಿಗಿಂತ ಹೆಚ್ಚಿನ ಚಳಿ, ಸುತ್ತ ಕಾಡು ಪ್ರಾಣಿಗಳ ಓಡಾಟ ರೆಂಗೆತ್ಸು ಗೆ ನಿದ್ದೆ ಬರುವುದಿಲ್ಲ.

ತುಂಬ ಚಳಿ ಇದ್ದ ಕಾರಣ ಮಧ್ಯರಾತ್ರಿ ರೆಂಗೆತ್ಸು ಗೆ ಎಚ್ಚರವಾಗುತ್ತದೆ. ಕಣ್ಣು ಬಿಟ್ಟಾದ ಆ ವಸಂತದ ಶಾಂತ ರಾತ್ರಿಯಲ್ಲಿ ಚೆರ್ರಿ ಹೂಗಳು ಇಷ್ಟು ಮುಖ ಅಗಲ ಮಾಡಿಕೊಂಡು ಮಂಜಿನ ಮುಸುಕಿನಲ್ಲಿದ್ದ ಚಂದ್ರನೊಡನೆ ನಗು ನಗುತ್ತ ಏನೋ ಮಾತನಾಡುತ್ತಿರುವುದು ಕಾಣಿಸುತ್ತದೆ. ರೆಂಗೆತ್ಸು ಲಗುಬಗೆಯಿಂದ ಎದ್ದವಳೇ ಹಳ್ಳಿಯತ್ಚ ಮುಖ ಮಾಡಿ ಕೂಗುತ್ತಾಳೆ “ ಹಳ್ಳಿಯ ಜನರೇ ಏಳಿ, ಇಲ್ಲಿ ನೋಡಿ ತಥಾಗತ, ನಿಮ್ಮ ನಿರಾಕರಣೆಯ ಕರುಣೆಯಲ್ಲೇ ನನಗೆ ತಥಾಗತನ ದರ್ಶನ ಭಾಗ್ಯ”

ರೆಂಗೆತ್ಸುಳ ಕಣ್ಣಲ್ಲಿ ಕೃತಜ್ಞತೆಯ ಕಣ್ಣೀರು. ತನಗೆ ಹಳ್ಳಿಯ ಪ್ರವೇಶ ನಿರಾಕರಿಸಿದ್ದಕ್ಕಾಗಿ ರೆಂಗೆತ್ಸು ತಂಬ ಭಾವಪರವಶಳಾಗಿ ಹಳ್ಳಿಯ ಜನರಿಗೆ ತನ್ನ ಕೃತಜ್ಞತೆ ಹೇಳುತ್ತಿದ್ದಳು. ಹಳ್ಳಿಯ ಜನರೇನಾದರೂ ಅವಳಿಗೆ ಹಳ್ಳಿಯಲ್ಲಿ ಆಶ್ರಯ ಕೊಟ್ಟಿದ್ದರೆ ಆಕೆ ಯಾವುದೋ ಮನೆಯ ಸಾಧಾರಣ ಚಪ್ಪರದ ಕೆಳಗೆ ರಾತ್ರಿ ಕಳೆಯಬೇಕಾಗಿತ್ತು. ಆಕೆ ಚೆರ್ರಿ ಹೂಗಳ ಸಂಭ್ರಮದಿಂದ, ನಿಶಾಂತ ರಾತ್ರಿಯ ಸಮಾಧಾನದಿಂದ, ಮಂಜಿನಲ್ಲಿ ಮುಸುಕಿದ ಚಂದ್ರನ ಚೆಲುವಿನಿಂದ, ಚಂದ್ರನೊಂದಿಗಿನ ಚೆರ್ರಿಹೂಗಳ ಸರಸವನ್ನ, ಇವೆಲ್ಲವೂ ಒಂದೇ ಎಂಬಂಥ ತಥಾಗತನ ಕರುಣೆಯಿಂದ ತಪ್ಪಿಸಿಕೊಳ್ಳಬೇಕಾಗಿತ್ತು. ಅವಳೊಂದಿಗಿನ ಹಳ್ಳಿಗರ ವರ್ತನೆಯ ಬಗ್ಗೆ ಈಗ ಆಕೆಯಲ್ಲಿ ಕೋಪವಿಲ್ಲ ಬದಲಾಗಿ ಆಕೆ ಹಳ್ಳಿಗರಿಗೆ ಇಂಥ ಅಪೂರ್ವ ಅವಕಾಶವನ್ನು ಒದಗಿಸಿದ್ದಕ್ಕಾಗಿ ತುಂಬ ಆಭಾರಿಯಾಗಿದ್ದಾಳೆ.

ತನಗೆ ಬದುಕು ಕರುಣಿಸಿದ್ದನ್ನು ಯಾವ ಆರೋಪಗಳಿಲ್ಲದೆ, ಅದು ಇರುವ ಹಾಗೆಯೇ ಕೃತಜ್ಞತೆಯಿಂದ ತೆರೆದ ಮನಸ್ಸಿನಿಂದ ಒಪ್ಪಿಕೊಂಡ ಕ್ಷಣದಲ್ಲಿ ಮನುಷ್ಯ ಬುದ್ಧನಾಗುತ್ತಾನೆ, ತಾವೋದತ್ತ ಹೆಜ್ಜೆ ಹಾಕುತ್ತಾನೆ, ಧ್ಯಾನದಲ್ಲಿ ಒಂದಾಗುತ್ತಾನೆ.

Leave a Reply