ಸುಳ್ಳು ಹೊಗಳಿಕೆಯಲ್ಲೇ ಆಸಕ್ತಿ! : ಇಂದಿನ ಸುಭಾಷಿತ

ಇಂದಿನ ಸುಭಾಷಿತ, ‘ಪಂಚರಾತ್ರ’ದಿಂದ…

ಮಿಥ್ಯಾಪ್ರಶಂಸಾ ಖಲು ನಾಮ ಕಷ್ಟಾ ।
ಯೇಷಾಂ ತು ಮಿಥ್ಯಾವಚನೇಷು ಭಕ್ತಿಃ ॥ ಪಂಚರಾತ್ರ, 2.60 ॥

ಸುಳ್ಳು ಹೊಗಳಿಕೆಯನ್ನು ಸಹಿಸುವುದು ಕಷ್ಟ. ಆದರೂ ಕೆಲವರಿಗೆ ಅದೇಕೋ ಸುಳ್ಳು ಮಾತಿನಲ್ಲೇ ಹೆಚ್ಚು ಆಸಕ್ತಿ!

ಇಂಥವರನ್ನು ನಾವು ನಿತ್ಯವೂ ನಮ್ಮ ಸುತ್ತಲಿನ ಜಗತ್ತಿನಲ್ಲಿ ನೋಡುತ್ತಲೇ ಇರುತ್ತೇವೆ. ಅದು ದೊಡ್ಡ ವಿಷಯವಲ್ಲ. ಅಂಥಾ ವ್ಯಕ್ತಿಯನ್ನು ಕನ್ನಡಿಯ ಮುಂದೆ ನಿಂತು ಗುರುತಿಸಿಕೊಳ್ಳಲು ಸಾಧ್ಯವಾದರೆ, ಅಕಸ್ಮಾತ್ ಕನ್ನಡಿಯಲ್ಲಿ ಅಂಥಾ ವ್ಯಕ್ತಿ ಕಂಡು, ತನ್ನ ಈ ಆಸಕ್ತಿಯನ್ನು ಅರಿತು, ಅದರಿಂದ ಹೊರಗೆ ಬರಲು ಸಾಧ್ಯವಾದರೆ, ನಮ್ಮ ಜೀವನ ಸಾರ್ಥಕಗೊಳ್ಳುವ ನಿಟ್ಟಿನಲ್ಲಿ ಹೆಜ್ಜೆಗಳನ್ನು ಇಡಬಹುದು. ಇಲ್ಲವಾದರೆ, ನಾವು ಈ ಅಥವಾ ಇಂಥ ಸುಭಾಷಿತಗಳನ್ನು ಓದಿ “ಓ ಅವರು ಹೀಗೇ ಇರೋದು”, “ಇವರು ಹೀಗೇ ಇರೋದು” ಅನ್ನುವ ಲೆಕ್ಕಾಚಾರದಲ್ಲಿ ಸಮಯ ಕಳೆದು, ನಮ್ಮೊಳಗೂ ಇರಬಹುದಾದಂಥ, ಇಂಥಾ ಹೊಗಳಿಕೆಯ ಹೊನ್ನ ಶೂಲಕ್ಕೇರ ಬಯಸುವ ಸುಪ್ತವಾಂಛೆಯನ್ನು ಗುರುತಿಸಿಕೊಳ್ಳದೆ ಉಳಿದರೆ ನಷ್ಟ ನಮಗೇ. ಅದೂ ಎಂಥಾ ನಷ್ಟ? ನಮ್ಮ ಆಂತರಿಕ ಬೆಳವಣಿಗೆ ಕುಂಠಿತಗೊಳ್ಳುವ ನಷ್ಟ. ಆತ್ಯಂತಿಕ ಲಾಭ ಕೊಡುವ ಅಂತರಂಗ ಸಾಧನೆಯ ನಷ್ಟ.

ಆದ್ದರಿಂದ, ನಮ್ಮಲ್ಲೂ ಇರಬಹುದಾದ ಇಂಥಾ ಆಸಕ್ತಿಯನ್ನು ಕಂಡುಕೊಳ್ಳೋಣ, ಅದರಿಂದ ಹೊರಗೆ ಬಂದು ಸಾಧನೆಯ ಹಾದಿಯಲ್ಲಿ ನಡೆಯುವ ಸಂಕಲ್ಪ ತೊಡೋಣ. ಆಗದೇ?

Leave a Reply