ಹೆರಾಕ್ಲಿಟಸ್ ಹೇಳಿಕೆ ಕುರಿತು ಓಶೋ ವ್ಯಾಖ್ಯಾನ

ಬದುಕು ಕೂಡ ಹಾಗೆಯೇ. ಪ್ರತಿಯೊಂದೂ ಪ್ರತಿಕ್ಷಣವೂ ತನ್ನನ್ನು ತಾನು ನವೀಕರಿಸಿಕೊಳ್ಳುತ್ತಿರುತ್ತದೆ ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ

ನನಗೆ ಹೆರಾಕ್ಲಿಟಸ್ ನ ನೆನಪಾಗುತ್ತಿದೆ. ಅವನ ಪ್ರಸಿದ್ಧ ಹೇಳಿಕೆಯನ್ನ ಗ್ರೀಕ್ ಆಧ್ಯಾತ್ಮಿಕ ಸಂಪ್ರದಾಯದಲ್ಲಿ ತುಂಬ ಗಂಭೀರವಾಗಿ ಪರಿಗಣಿಸಲಾಗುತ್ತದೆ ಏಕೆಂದರೆ ಮೊದಲಬಾರಿಗೆ ಒಬ್ಬ ಒಟ್ಟಾರೆ ಜನರ ಧೋರಣೆಯ ವಿರುದ್ಧವಾಗಿ ಮಾತನಾಡುತ್ತಿದ್ದಾನೆ. ಹಾಗಾಗಿ ಹೆರಾಕ್ಲಿಟಸ್ ಅನನ್ಯ.

ಹೆರಾಕ್ಲಿಟಸ್ ಹೇಳುತ್ತಾನೆ,

“ ನೀನು ಒಂದೇ ನದಿಯಲ್ಲಿ ಎರಡು ಬಾರಿ ಕಾಲಿಡಲಾರೆ “ ಏಕೆಂದರೆ ನದಿ ಸದಾ ಹರಿಯುತ್ತಿರುತ್ತದೆ.

ನಾನು ಯಾವತ್ತಾದರೂ ಈ ಹೆರಾಕ್ಲಿಟಸ್ ನ ಭೇಟಿಯಾದರೆ, ನನಗನಿಸುವ ಹಾಗೆ ಒಮ್ಮಿಲ್ಲ ಒಮ್ಮೆ ನಮ್ಮ ಭೇಟಿಯಾಗುವುದು ನಿಶ್ಚಿತ, ಏಕೆಂದರೆ ಈ ಶಾಶ್ವತ ಬದುಕಿನಲ್ಲಿ ಜನ ಒಂದಲ್ಲ ಒಂದು ರೀತಿಯಲ್ಲಿ ಹಳೆಯ ಜ್ಞಾನಕ್ಕೆ, ವ್ಯಕ್ತಿತ್ವಗಳಿಗೆ ಮುಖಾಮುಖಿಯಾಗುತ್ತಾರೆ. ಆಗ ನಾನು ಅವನಿಗೆ ಹೇಳುತ್ತೇನೆ, “ ನಿನ್ನ ಹೇಳಿಕೆಯನ್ನ ಬದಲಾಯಿಸು. ನೀನು ಆ ಹೇಳಿಕೆಯನ್ನು ಹೇಳಿದ ಕಾಲದಲ್ಲಿ ಅದು ಒಳ್ಳೆಯ ಹೇಳಿಕೆಯಾಗಿತ್ತು ನಿಜ ಆದರೆ ಆ ಹೇಳಿಕೆಯಲ್ಲಿ ಸಮಸ್ಯೆ ಇದೆ. ನಿನ್ನ ಪ್ರಕಾರ, ‘ ನೀನು ಒಂದೇ ನದಿಯಲ್ಲಿ ಎರಡು ಬಾರಿ ಕಾಲಿಡಲಾರೆ’. ಆದರೆ ನಾನು ಹೇಳುತ್ತೇನೆ, ‘ ನೀನು ಒಂದೇ ನದಿಯಲ್ಲಿ ಒಮ್ಮೆಯೂ ಕಾಲಿಡಲಾರೆ’ – ಏಕೆಂದರೆ ನೀನು ನದಿಯಲ್ಲಿ ಕಾಲಿಡುತ್ತಿರುವಾಗಲೂ ನದಿ ಹರಿಯುತ್ತಿರುತ್ತದೆ. “

ನಿನ್ನ ಪಾದ ನದಿಯ ಮೇಲ್ಪದರವನ್ನು ತಾಕುತ್ತಿರುವಾಗಲೇ, ಕೆಳಗಿನ ನೀರು ಹರಿಯುತ್ತಿರುತ್ತದೆ ; ನಿನ್ನ ಕಾಲು ನಡುವೆಯಿರುವಾಗ, ಮೇಲೆ ಮತ್ತು ಕೆಳಗೆ ನದಿ ಹರಿಯುತ್ತಿರುತ್ತದೆ ; ನಿನ್ನ ಪಾದ ನದಿಯ ತಳವನ್ನು ಸ್ಪರ್ಶ ಮಾಡಿದಾಗ, ಕಾಲ ಮೇಲಿನ ಎಲ್ಲ ನೀರು ಹರಿಯುತ್ತಲೇ ಇರುತ್ತದೆ…… ಹಾಗಾಗಿ ಒಂದೇ ನದಿಯಲ್ಲಿ ಒಮ್ಮೆ ಕಾಲಿಡಲು ಕೂಡ ಸಾಧ್ಯವಿಲ್ಲ. ಏಕೆಂದರೆ ನದಿ ಎಂದರೆ ನಿನ್ನ ಕಾಲನ್ನು ಸ್ಪರ್ಶಿಸುತ್ತಿರುವ ನೀರು ಮಾತ್ರ ಅಲ್ಲ, ನದಿ ಎಂದರೆ ಒಂದು ಅಖಂಡ ಚಲನೆ, ಧಾರೆ.

ಬದುಕು ಕೂಡ ಹಾಗೆಯೇ. ಪ್ರತಿಯೊಂದೂ ಪ್ರತಿಕ್ಷಣವೂ ತನ್ನನ್ನು ತಾನು ನವೀಕರಿಸಿಕೊಳ್ಳುತ್ತಿರುತ್ತದೆ ; ಕೇವಲ ಬುದ್ಧಿ ಮಾತ್ರ ನಿಂತ ನೀರು. ಹಾಗಾಗಿಯೇ ಬುದ್ಧಿ ಮತ್ತು ಬದುಕಿನ ನಡುವೆ ಅನುರಣನವಿಲ್ಲ. ಬುದ್ಧಿ ಹಿಂದೂ, ಕ್ರಿಶ್ಚಿಯನ್, ಮುಸ್ಲೀಂ ಆಗಿದ್ದರೆ ಅದು ನಿಂತ ನೀರು. ಅದು ಪ್ರತೀ ಕ್ಷಣದಲ್ಲಿ ಬದುಕಲಾರದು. ಅದು ಸತ್ತ ಜೀವಗಳ ಬೂದಿಯಲ್ಲಿ ತನ್ನ ಉತ್ತರಗಳಿಗಾಗಿ ತಡಕಾಡುತ್ತಿರುತ್ತದೆ.

ಗೋಲ್ಡನ್ ಗೇಟ್ ಯಾವಾಗಲೂ ಹೊಸತಿನಲ್ಲಿ ಬದುಕುತ್ತಿರುವವರಿಗಾಗಿ, ಹಳೆಯ ಹೊರೆಯನ್ನು ಇಳಿಸಿ ನಿರ್ಭಾರವಾಗಿರುವವರಿಗೆ ಮುಕ್ತವಾಗಿದೆ.

Osho, The great zen master Ta Hui, Ch 37 (excerpt)

Leave a Reply