ಲಾಭ ಬಯಸುವ ಠೇವಣಿಯೂ ಆಗಿರಬಾರದು! ಆದರೆ ಇರುವೆಯನ್ನು ರಕ್ಷಿಸಿದ ಪಾರಿವಾಳವನ್ನು ಇರುವೆ ರಕ್ಷಿಸಿದ ಕಥೆ ಹೇಳುವಾಗ ನಾವು ನೀತಿಯ ಹೆಸರಲ್ಲಿ ಸ್ವಾರ್ಥ ಬಿತ್ತಿಬಿಡುತ್ತೇವೆ. ಇದು ಮೊದಲನೇ ತಪ್ಪು. ಇನ್ನು ಎರಡನೆಯದು, ಕಾಯಕನಿರತ ಬೇಟೆಗಾರನನ್ನು ವಿಲನ್ ಮಾಡುವುದು! । ಅಲಾವಿಕಾ
ಒಂದೂರಲ್ಲಿ ಒಂದು ಸುಂದರವಾದ ಕೊಳ ಇತ್ತು. ಅದರ ಬದಿಯಲ್ಲೆ ಒಂದು ಮರ ಇತ್ತು. ಒಂದು ದಿನ ಆ ಕೊಳದಲ್ಲಿ ಒಂದು ಇರುವೆ ಕೊಚ್ಚಿಕೊಂಡು ಹೋಗ್ತಾ ಇತ್ತು. ಅದನ್ನು ಮರದ ಮೇಲಿದ್ದ ಪಾರಿವಾಳ ನೋಡಿತು. ಕೂಡಲೇ ಮರದ ಎಲೆ ಕೊಕ್ಕಿನಲ್ಲಿ ಕತ್ತರಿಸಿಕೊಂಡು ಇರುವೆಯ ಬಳಿ ಹಾರಿ ಹಿಡಿಯಿತು. ಇರುವೆ ಎಲೆ ಹತ್ತಿಕೊಂಡು ದಡ ಸೇರಿತು.
ಮತ್ತೊಂದು ದಿನ ಒಬ್ಬ ಬೇಟೆಗಾರ ಬಂದ. ಮರದ ಮೇಲೆ ಕುಳಿತಿದ್ದ ಪಾರಿವಾಳದತ್ತ ಗುರಿ ನೆಟ್ಟ. ಅದನ್ನು ನೋಡಿದ ಇರುವೆ ಬೇಟೆಗಾರನ ಕಾಲಿಗೆ ಕಚ್ಚಿತು. ಬೇಟೆಗಾರ ಗುರಿ ತಪ್ಪಿದ. ಪಾರಿವಾಳ ಹಾರಿಹೋಯ್ತು. ಬೇಟೆಗಾರ ಹೊರಟುಹೋದ.
ಪಾರಿವಾಳದ ಉಪಕಾರಕ್ಕೆ ಇರುವೆ ಪ್ರತ್ಯುಪಕಾರ ಮಾಡಿ ಅದನ್ನು ಕಾಪಾಡಿತ್ತು.
ಉಪಕಾರ ಸ್ಮರಣೆಯ ನೀತಿಯನ್ನ ಎತ್ತಿ ಹಿಡಿಯುವ ಈ ಕಥೆ ಬಹಳ ಸರಳವಾಗಿದೆ ಮತ್ತು ನೇರವಾಗಿದೆ. ಈ ಕಥೆಯನ್ನು ಮಕ್ಕಳಿಗೆ ಹೇಳುವಾಗೆಲ್ಲ ಹೇಗೆ ಪಾರಿವಾಳ ಮತ್ತು ಇರುವೆ ಪರಸ್ಪರ ಉಪಕಾರ ಬುದ್ಧಿ ತೋರಿದವು ಅನ್ನುವುದನ್ನು ಹೇಳಲಾಗುತ್ತದೆ. ನಾವೂ ಹಾಗೇ ಇರಬೇಕೆಂದು ಹೇಳಲಾಗುತ್ತದೆ.
ಈ ನೀತಿಕಥೆಯ ಮೂಲಕ ಮಕ್ಕಳು ಕಲಿಯುವ ಎರಡು ತಪ್ಪು ಸಂಗತಿಗಳ ಬಗ್ಗೆ ನಾವು ಯಾವತ್ತಾದರೂ ಯೋಚಿಸಿದ್ದೀವಾ? ನಾವು ಮಕ್ಕಳಾಗಿದ್ದಾಗ ಕಲಿತಿದ್ದ ಈ ತಪ್ಪು ಸಂಗತಿಗಳನ್ನೇ ಇಂದಿಗೂ ರೂಢಿಸಿಕೊಂಡಿದ್ದೇವೆಂದು ಗಮನಿಸಿದ್ದೀವಾ? ಇಲ್ಲ! ಯಾವುದು ಆ ಎರಡು ತಪ್ಪು ಸಂಗತಿಗಳು? ಮೊದಲನೆಯದು ಪಾರಿವಾಳ ಪ್ರತ್ಯುಪಕಾರ ಬಯಸಿ ಉಪಕಾರ ಮಾಡಿಲ್ಲದಿದ್ದರೂ ನಾವು ನೀತಿ ಸಹಿತ ಹೇಳುವುದರಿಂದ, ಮಕ್ಕಳು ಪ್ರತ್ಯುಪಕಾರದ ಬಯಕೆಯಿಂದಲೇ ಉಪಕಾರ ಮಾಡಬೇಕು ಅನ್ನುವ ಚಿಂತನೆ ಬೆಳೆಸಿಕೊಳ್ಳೋದು. ಈ ಚಿಂತನೆಯ ಕಾರಣದಿಂದಲೇ ಮುಂದೆ ಬೆಳೆದು “ನಾನು ಅಷ್ಟು ಮಾಡಿದ್ದೆ, ಅವರು ನನಗೇನೂ ಮಾಡಲೇ ಇಲ್ಲ” ಅನ್ನುವ ಕೊರಗು ಹುಟ್ಟಿಕೊಳ್ಳೋದು.
ಇದನ್ನು ನಾವೂ ಮಾಡ್ತೇವೆ ಅಲ್ಲವೆ? ನಾನು ಏನೆಲ್ಲ ಉಪಕಾರ ಮಾಡಿದ್ದೆ ಅವರು ನನ್ನನ್ನು ತಿರುಗಿಯೂ ನೋಡಲಿಲ್ಲ ಅನ್ನುವ ಪಟ್ಟಿ ಕೈಯಲ್ಲಿಟ್ಟುಕೊಂಡೇ ತಿರುಗುತ್ತೇವೆ ಅಲ್ಲವೆ? ಕೊನೆಪಕ್ಷ, ನಮಗೆ ನಾವೇ ಆದರೂ ಗೊಣಗಿಕೊಳ್ತಾ ಇರ್ತೇವೆ. ಯಾಕೆಂದರೆ ನಾವು ನಮ್ಮ ಮಕ್ಕಳಿಗೆ ಕಲಿಸ್ತಿರುವ ಹಾಗೇ ನಮಗೂ ಕಲಿಸಲಾಗಿತ್ತು. “ಉಪಕಾರ ಮಾಡಿದರೆ ನಮಗೂ ಉಪಕಾರ ದೊರೆಯುತ್ತದೆ” ಎಂದು. ‘ಮಾ ಫಲೇಷು ಕದಾಚನ’ – ಉಪಕಾರ ಮಾಡು. ಅದು ನಿನ್ನ ಕರ್ಮ! ಫಲ ಬಯಸಬೇಡ, ಅಷ್ಟೇ. ಆದರೆ ಇದನ್ನು ನಾವೆಂದೂ ಕಲಿಯಲೇ ಇಲ್ಲ, ಹೇಳಿಕೊಡುವುದೂ ಇಲ್ಲ.
ಉಪಕಾರ ಮಾಡುವುದು ನಮ್ಮ ಮನುಷ್ಯತ್ವದ ಸಹಜ ಕ್ರಿಯೆ ಆಗಿರಬೇಕೇ ಹೊರತು ಅದೊಂದು ಹೆಚ್ಚುಗಾರಿಕೆ ಆಗಬಾರದು. ಮುಂದೆಂದೋ ಲಾಭ ಬಯಸುವ ಠೇವಣಿಯೂ ಆಗಿರಬಾರದು! ಆದರೆ ಇರುವೆಯನ್ನು ರಕ್ಷಿಸಿದ ಪಾರಿವಾಳವನ್ನು ಇರುವೆ ರಕ್ಷಿಸಿದ ಕಥೆ ಹೇಳುವಾಗ ನಾವು ನೀತಿಯ ಹೆಸರಲ್ಲಿ ಸ್ವಾರ್ಥ ಬಿತ್ತಿಬಿಡುತ್ತೇವೆ. ಇದು ಮೊದಲನೇ ತಪ್ಪು.
ಎರಡನೆಯದು; ಬೇಟೆಗಾರನನ್ನು ವಿಲನ್ ಮಾಡುವುದು! ಈ ಕಥೆ ಕೇಳಿ ಬೆಳೆದ ನಮ್ಮ ತಲೆಮಾರು, ನಮಗೆ ಈ ಕಥೆ ಹೇಳಿದ ಹಿರಿಯ ತಲೆಮಾರು, ಈ ಕಥೆ ಕೇಳುವ ಮುಂದಿನ ತಲೆಮಾರು – ಖಂಡಿತಾ ಬೇಟೆಗಾರನನ್ನು ಪಾರಿವಾಳ ಕೊಲ್ಲಲು ಬಂದ ಕೇಡಿ ಎಂದೇ ಭಾವಿಸೋದು ಅಲ್ಲವೆ? ಇರುವೆ ಕಚ್ಚಿ ಅವನ ಗುರಿ ತಪ್ಪಿದಾಗ ‘ಹಂಗೇ ಆಗ್ಬೇಕು!’ ಅನ್ನುವ ಉದ್ಗಾರ ನಮ್ಮ ಒಳಮನಸ್ಸಿನಲ್ಲಾದರೂ ಮೂಡೋದಿಲ್ಲವೆ?
ಬೇಟೆಗಾರನ ಕಸುಬೇ ಬೇಟೆಯಾಡೋದು. ಆ ಪಾರಿವಾಳ ಒಳ್ಳೆಯ ಪಾರಿವಾಳ. ಅದು ಪರೋಪಕಾರಿ ಪಾರಿವಾಳ. ಅದನ್ನು ನಾನು ಕೊಲ್ಲಬಾರದು – ಇತ್ಯಾದಿ ನಿಯಮಗಳು ಬೇಟೆಗಾರನಿಗೆ ಇರುವುದೇ? ಹಾಗೆ ಬೇಟೆಗಾರ ತನ್ನ ಕಸುಬು ಮಾಡದೇ ಹೋದರೆ ಮೊದಲಿಗೆ ಜೀವಸಂಕುಲದ ಸಮತೋಲನ ತಪ್ಪುವುದು, ಎರಡನೆಯದಾಗಿ ಅವನ ಕುಟುಂಬ ಹಸಿದು ಮಲಗುವುದು. ಹೊರಗೆ ನಿಂತು ನೋಡುವ ನಮ್ಮ ಪಾಲಿಗೆ ಪಾರಿವಾಳ ಪಾಪದ್ದಾಗಿಯೂ ಬಿಲ್ಲು ಹಿಡಿದ ಬೇಟೆಗಾರ ಕ್ರೂರಿಯಾಗಿಯೂ ಕಾಣುವರು. ಬೇಟೆಗಾರರಿಲ್ಲದ (ಇದು ಈ ಕಥೆ ಹುಟ್ಟಿಕೊಂಡ ಕಾಲಕ್ಕೆ. ಈಗಿನ ಕಾಲಕ್ಕೆ ಮಾಂಸದಂಗಡಿಗಳಿಲ್ಲದ ಅಂತ ಓದಿಕೊಳ್ಳಬಹುದು) ಈ ಜಗತ್ತು ಹದ ತಪ್ಪಿ ಉಂಟಾಗುವ ಪರಿಣಾಮವನ್ನಾದರೂ ನಾವು ಊಹಿಸಬಲ್ಲೆವೆ? ಆದರೂ ನಮಗೆ ಬೇಟೆಗಾರ ಕೇಡಿಯಾಗಿಯೇ ಕಾಣುವನು. ಯಾಕೆಂದರೆ ಈ ಕಥೆಯಲ್ಲಿ ಬೇಟೆಗಾರನನ್ನು ತನ್ನ ಕಸುಬು ಮಾಡುತ್ತಿರುವ ಶ್ರಮಿಕನಾಗಿ ನಾವು ತೋರಿಸುತ್ತಿಲ್ಲ. ಅವನನ್ನು ಕೊಲ್ಲಲು ಬಂದ ಖದೀಮನಾಗಿ ತೋರಿಸುತ್ತಿದ್ದೇವೆ. ಪಾರಿವಾಳಕ್ಕೆ ಎಷ್ಟೋ, ಇರುವೆಗೆ ಎಷ್ಟೋ, ಅಷ್ಟೇ ಬೇಟೆಗಾರನಿಗೂ ಬದುಕುವ ಹಕ್ಕಿದೆ ಅನ್ನುವುದನ್ನು ನಾವು ಯೋಚಿಸೋದೇ ಇಲ್ಲ! ಮನುಷ್ಯೇತರ ಜಗತ್ತಿನಲ್ಲಿ ಸಹಜವಾಗಿ ನಡೆದುಹೋಗುವ ಕೊಲ್ಲುವ – ಕೊಲ್ಲಿಸಿಕೊಳ್ಳುವ ವಿದ್ಯಮಾನ ಮನುಷ್ಯನ ವಿಚಿತ್ರ ಕರುಣೆ(!?)ಯ ಕಾರಣಕ್ಕೆ, ಜಗತ್ತಿನ ಸಹಜವಿದ್ಯಮಾನಗಳಲ್ಲಿ ಮೂಗು ತೂರಿಸುವ ಕಾರಣಕ್ಕೆ ಪಾಪ ಪುಣ್ಯಗಳ ಮುದ್ರೆ ಒತ್ತಿಸಿಕೊಂಡುಬಿಡುತ್ತದೆ. ಸರಿ ತಪ್ಪುಗಳ ತೀರ್ಪಿಗೆ ಒಳಗಾಗಿಬಿಡುತ್ತವೆ. ಮರಮುಟ್ಟುಗಳಿಗಾಗಿ, ಮನೆ ಕಟ್ಟಲಿಕ್ಕಾಗಿ, ಬಟ್ಟೆ, ಕಾಗದ, ಔಷಧಿಗಳಿಗಾಗಿ ಪ್ರತಿದಿನ ಸಾವಿರಾರು ಜೀವಗಳನ್ನು ಕೊಲ್ಲುವ ಮನುಷ್ಯರು ಮಾಂಸಾಹಾರವನ್ನು ಪಾಪ, ಹಿಂಸೆ ಎಂದೆಲ್ಲ ಅನ್ನುವುದು; ಬೇಟೆಯಾಡುವ ಮೃಗಗಳನ್ನು ಹಿಂಸ್ರಪ್ರಾಣಿ, ಕ್ರೂರ ಮೃಗ ಎಂದು ಬೆಟ್ಟು ಮಾಡಿ ತೋರುವುದು ಈ ಸ್ವಘೋಷಿತ ಪಾಳೇಗಾರಿಕೆಯ ಕಾರಣಕ್ಕೇ.
ಬೇಟೆಯಾಡುತ್ತಿರುವ ಹುಲಿಯನ್ನು ಕೊಂದು ಹುಲ್ಲೆಯನ್ನು ಬದುಕಿಸುವ ಮನುಷ್ಯ ಕುಲಕ್ಕೆ ತಾನು ಹುಲಿಯ ಹಸಿವಿಗೆ, ಆ ಮೂಲಕ ಅದರ ದೌರ್ಬಲ್ಯ ಅಥವಾ ಸಾವಿಗೆ ಕಾರಣವಾಗುತ್ತಿದ್ದೇವೆ ಅನ್ನುವ ಅರಿವೇ ಇರುವುದಿಲ್ಲ. ಆದ್ದರಿಂದಲೇ ನಮಗೆ ಬೇಟೆಗಾರನೂ ಕೇಡಿಗನಾಗೇ ಕಾಣುತ್ತಾನೆ. ಹಾಗಾದರೆ ಬೇಟೆಗಾರರು ಲೋಭಿಗಳಲ್ಲವೆ? ದಂತಕ್ಕಾಗಿ ಆನೆ ಕೊಲ್ತಾರೆ, ಚರ್ಮಕ್ಕಾಗಿ ಜಿಂಕೆ ಕೊಲ್ತಾರೆ, ಉಗುರಿಗಾಗಿ ಹುಲಿ ಕೊಲ್ತಾರೆ… ನೀವು ಕೇಳುತ್ತೀರಿ. ನನ್ನ ಪ್ರಕಾರ ಬೇಟೆಗಾರ ಲೋಭಿಯಲ್ಲ. ಆದರೆ ಬೇಟೆಗಾರನಾಗಿ ಕಸುಬಿನಲ್ಲಿ ತೊಡಗಿಕೊಂಡಿರುವ ಮನುಷ್ಯ ಲೋಭಿಯಾಗಿರಬಹುದು. ಮತ್ತು ಆ ಮನುಷ್ಯ, ಆ ಲೋಭಿ ಮನುಷ್ಯ ಶಿಕ್ಷಕನಾಗಿದ್ದರೂ ಲೋಭಿಯಾಗಿರುತ್ತಿದ್ದ, ವೈದ್ಯನಾಗಿದ್ದರೂ, ಕಂಡಕ್ಟರ್ ಆಗಿದ್ದರೂ, ಪೊಲೀಸ್ – ಲಾಯರ್ – ಟೆಕಿ – ಪತ್ರಕರ್ತ – ಸಾಹಿತಿ, ಕೊನೆಗೆ ಮಠವೊಂದರ ಗುರುವಾಗಿದ್ದರೂ ಲೋಭಿಯೇ ಆಗಿರುತ್ತಿದ್ದ. ಅವನು ಬೇಟೆಗಾರ ಆಗಿರೋದ್ರಿಂದ ಬೇಟೆಯ ಮೂಲಕ ತನ್ನ ಲೋಭ ತಣಿಸಿಕೊಳ್ಳುತ್ತಿದ್ದಾನೆ. ಬೇಟೆಯಾಡುವುದು ಲೋಭವಲ್ಲ. ಬೇಟೆಯಾಡುವ ಮನುಷ್ಯ ಲೋಭಿಯಾಗಿರುವ ಸಾಧ್ಯತೆ ಇದೆ. ಲೋಭಿ ಪತ್ರಕರ್ತರು ಲೋಭದಿಂದ ಸುದ್ದಿ ಸಮಯ ಮಾರಿಕೊಳ್ಳುವಂತೆ ಅಥವಾ ಸುಳ್ಳು ಸುದ್ದಿ ಹುಟ್ಟಿಸುವಂತೆ; ಲೋಭಿ ಸಾಹಿತಿಗಳು ಲೋಭದಿಂದ ಜನರ ಮನಸ್ಸುಗಳನ್ನು ಒಡೆಯುವ ಸಾಹಿತ್ಯ ಬರೆಯುವಂತೆ, ಲೋಭಿ ಶಿಕ್ಷಕರು ಲೋಭದಿಂದ ಪ್ರಶ್ನೆಪತ್ರಿಕೆ ಲೀಕ್ ಮಾಡುವಂತೆ, ಲೋಭಿ ವೈದ್ಯರು ಲೋಭದಿಂದ ಕಿಡ್ನಿ ಕದಿಯುವಂತೆ – ಅಂದರೆ; ಆಯಾ ವೃತ್ತಿಯಲ್ಲಿರುವ ಮನುಷ್ಯರು ತಮ್ಮ ತಮ್ಮ ಲೋಭಕ್ಕೆ ತಮ್ಮ ವೃತ್ತಿಯನ್ನು ಬಳಸಿಕೊಳ್ಳುವಂತೆ, ಲೋಭಿ ಬೇಟೆಗಾರ ಆನೆಯನ್ನು ಕೊಂದು ದಂತ ಕೀಳುತ್ತಾನೆ. ಹೊರತು, ಕಸುಬಿಗೆ ನಿಯತ್ತಾಗಿರುವ ಬೇಟೆಗಾರರು ಹಾಗೆ ಮಾಡುವುದಿಲ್ಲ. ಹಾಲು ಕುಡಿಸುತ್ತಿರುವ ತಾಯಿ ಜೀವಿಯನ್ನು, ಸಂಭೋಗದಲ್ಲಿರುವ ಜೋಡಿಯನ್ನು, ಹೆರುತ್ತಿರುವ ಪಶುವನ್ನು – ಹೀಗೆ ಯಾವುದನ್ನೆಲ್ಲ ಕೊಲ್ಲಬಾರದು ಅನ್ನುವ ನಿಯಮ ತಮಗೆ ತಾವೇ ಹಾಕಿಕೊಂಡಿದ್ದಾರೆ.
ರಾಮಾಯಣದ ಹುಟ್ಟಿಗೆ ಕಾರಣನಾದ ಬೇಟೆಗಾರ ಈ ನಿಯಮ ಮೀರಿದ್ದರಿಂದಲೇ, ಖುದ್ದು ಬೇಟೆಗಾರರಾಗಿದ್ದು ಋಷಿಯಾದ ವಾಲ್ಮೀಕಿ ಅವನಿಗೆ ಶಾಪ ಕೊಟ್ಟಿದ್ದು. ಆ ಬೇಟೆಗಾರ ಸಂಭೋಗ ನಡೆಸ್ತಿದ್ದ ಕ್ರೌಂಚ ಜೋಡಿಯಲ್ಲಿ ಒಂದನ್ನು ಕೊಂದಿದ್ದ. ಈ ಬೇಟೆಗಾರ ಲೋಭಿ ಬೇಟೆಗಾರ. ಆದರೆ, ಪಾರಿವಾಳಕ್ಕೆ ಬಾಣ ಗುರಿಯಿಟ್ಟ ಬೇಟೆಗಾರ ಯಾವ ನಿಟ್ಟಿನಿಂದ ಲೋಭಿಯಾದಾನು!?
‘ಲೋಕದ ಡೊಂಕ ನೀವೇಕೆ ತಿದ್ದುವಿರಿ?’ ಅನ್ನುತ್ತಾರೆ ಬಸವಣ್ಣ. ಮೊದಲು ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ… ಬೇಟೆಗಾರನಿಗಿಂತ ಕ್ರೂರಿ ನೀವಾಗಿರಬಹುದು. ಮರಗಳನ್ನು ಕಡಿಕಡಿದು ಗೂಡು ಕಟ್ಟಲು ತಾವಿಲ್ಲದಂತೆ ಮಾಡಿ ಅದೆಷ್ಟೋ ಪಾರಿವಾಳಗಳ ಸಾವಿಗೆ ಕಾರಣವಾಗಿರಬಹುದು! ಬೇಟೆಗಾರನಿಗಾದರೂ ಅದು ಕಸುಬು. ನಿಮ್ಮ ಪಾಲಿಗೆ ಅದು ನಿಮ್ಮ ಲೋಭವಷ್ಟೇ. ಆದ್ದರಿಂದ, ತೀರ್ಪುಗಾರರಾಗಬೇಡಿ. ಮತ್ತೊಬ್ಬರನ್ನು ಕ್ರೂರಿ ಅನ್ನುವ ಮೊದಲು, ಮತ್ತೊಂದನ್ನು ಹಿಂಸೆ ಅನ್ನುವ ಮೊದಲು, ಯಾರುಯಾರನ್ನೋ ಪಾಪಿಗಳು ಅನ್ನುವ ಮೊದಲು, ನಿಮ್ಮ ತಪ್ಪುಗಳ ಪಟ್ಟಿ ಮುಟ್ಟಿನೋಡಿಕೊಳ್ಳಿ.
ಧರ್ಮವ್ಯಾಧನ ಕಥೆ ನಿಮಗೆ ಗೊತ್ತಿಲ್ಲದೆಯೂ ಇರಬಹುದು. ಅವನು ನಿರ್ಲಿಪ್ತವಾಗಿ ಕಚಕಚನೆ ಮಾಂಸ ಕತ್ತರಿಸುತ್ತಲೇ ಕೌಶಿಕನಿಗೆ ಜ್ಞಾನ ಬೋಧನೆ ಮಾಡಿದ್ದನವ. ಮಾಂಸ ಕತ್ತರಿಸುವವನು ಅಜ್ಞಾನಿಯಲ್ಲ, ಹುಂಬನಲ್ಲ, ಪಾಪಿಯಲ್ಲ. ಅವನು ಕುವೆಂಪು ಹೇಳುವಂತೆ ‘ಯಾವುದೂ ಅಮುಖ್ಯವಲ್ಲದ’ ಜಗತ್ತಿನ ಒಂದು ಭಾಗ. ಅವನ ಕರ್ಮ ಅವನು ನಡೆಸ್ತಿದ್ದಾನೆ. ಹಾಗೇ ಇರುವೆ – ಪಾರಿವಾಳದ ಕಥೆಯ ಬೇಡ ತನ್ನ ಕೆಲಸ ಮಾಡುತ್ತಿದ್ದಿರಬಹುದು.
ಆದ್ದರಿಂದ, ಇನ್ನಾದರೂ ಪಾರಿವಾಳ ಮತ್ತು ಇರುವೆಯ ಪರಸ್ಪರ ಉಪಕಾರದ ಕಥೆ ಹೇಳುವಾಗ ಇಷ್ಟು ದಿನ, ಇಷ್ಟು ತಲೆಮಾರು ಮಾಡಿಕೊಂಡು ಬಂದ ತಪ್ಪನ್ನೆ ಪುನರಾವರ್ತಿಸಬೇಡಿ. ಉಪಕಾರ ಮಾಡೋದು ಸಹಜ ಗುಣ, ಅಕಸ್ಮಾತ್ ಪ್ರತ್ಯುಪಕಾರ ದೊರೆತರೆ ಅದು ಹೆಚ್ಚುವರಿ ಎಂದು ಮನದಟ್ಟು ಮಾಡಿಸಿ. ನಮ್ಮ ಮಕ್ಕಳು ನಮ್ಮಂತಾಗೋದು ಬೇಡ. ಬೇಟೆಗಾರ ಇರುವೆ ಕಚ್ಚಿಸಿಕೊಂಡು ಕೈಚೆಲ್ಲಿ ಹೋದಮೇಲೆ ಅವನ ಮನೆ ಪರಿಸ್ಥಿತಿ ಎಂಥದ್ದಿರಬಹುದು ಅನ್ನುವ ಚಿತ್ರಣವನ್ನೂ ಮಕ್ಕಳ ಮುಂದೆ ಬಿಚ್ಚಿಡಿ. ಈ ಕಥೆಗಳಲ್ಲಿ ಇವೆಲ್ಲ ಉಪಮೆಗಳಷ್ಟೇ, ಬೇಟೆಗಾರರು ಕೇಡಿಗರಲ್ಲ, ಜೀವಸಂಕುಲ ಸಮತೋಲನಕ್ಕೆ ಮುಖ್ಯಾಧಾರವಾಗಿದ್ದವರು ಎಂದು ಮನದಟ್ಟುಮಾಡಿಸಿ.
ಇಷ್ಟಕ್ಕೂ ‘ಜೀವೋ ಜೀವಸ್ಯ ಜೀವನಮ್”. ಒಂದು ಜೀವ ಬದುಕುಳಿಯಲು ಮತ್ತೊಂದನ್ನು ತಿನ್ನಲೇಬೇಕು. ಪಾರಿವಾಳದ ಕಥೆ ಹೇಳುವಾಗ ಮಕ್ಕಳಿಗೆ ತಪ್ಪದೇ ಇದನ್ನೂ ಹೇಳಿ.
ತುಂಬಾ ಸೊಗಸಾಗಿ ವ್ಯಾಖ್ಯಾನಿಸಿದ್ದೀರಿ, ಲೇಖಕರು ಯಾರೆಂದು ತಿಳಿಯಬಹುದೇ?
ಅಲಾವಿಕಾ