ಏಸುಕ್ರಿಸ್ತ : ಬೆಟ್ಟದ ಮೇಲಿನ ಬೋಧನೆಗಳು

ಏಸು ಕ್ರಿಸ್ತ ಗೆಲಿಲಿಯೋ ಪ್ರಾಂತ್ಯದಲ್ಲಿ ಸಂಚರಿಸುತ್ತಿದ್ದಾಗ ಸಾವಿರಾರು ಜನ ನೆರೆದು, ತಮಗೆ ಉಪದೇಶ ನೀಡಬೇಕೆಂದು ಕೇಳಿಕೊಂಡರು. ಆಗ ಏಸುಕ್ರಿಸ್ತನು ಊರಿನ ಅಂಚಿನಲ್ಲಿದ್ದ ಬೆಟ್ಟವೊಂದರ ಮೇಲೆ ಕುಳಿತು ಮಾತನಾಡತೊಡಗಿದನು. ಈ ಸಂದರ್ಭದಲ್ಲಿ ನೀಡಿದ ಉಪದೇಶಗಳು ‘ಬೆಟ್ಟದ ಮೇಲಿನ ಬೋಧನೆಗಳು’ ಎಂದು ಖ್ಯಾತವಾಗಿವೆ. ಈ ಪ್ರಸಂಗ ಬೈಬಲ್ಲಿನ ‘ಹೊಸ ಒಡಂಬಡಿಕೆ’ಯಲ್ಲಿ ಕಾಣಸಿಗುತ್ತದೆ.

ಏಸು ಕ್ರಿಸ್ತನು ಅಪಾರ ಜನಸಮೂಹವನ್ನು ಉದ್ದೇಶಿಸಿ ಮಾತಾಡತೊಡಗಿದನು :

“ಅಹಂಕಾರವಿಲ್ಲದವರೇ ಧನ್ಯರು. ಪರಲೋಕ ರಾಜ್ಯ (ಭಗವಂತನ ಸಾಮ್ರಾಜ್ಯ) ಅವರದಾಗುತ್ತದೆ. ಒಳ್ಳೆಯದನ್ನು ಮಾಡಬೇಕೆಂಬ ಇಚ್ಛೆಯುಳ್ಳವರೇ ಧನ್ಯರು. ದೇವರು ಅವರಿಗೆ ಸಂಪೂರ್ಣ ಸಂತೃಪ್ತಿಯನ್ನು ದಯಪಾಲಿಸುವನು. ಇತರರಿಗೆ ಕರುಣೆ ತೋರಿಸುವ ಜನರೇ ಧನ್ಯರು. ಅವರು ದೇವರೊಡನೆ ಇರುವರು. ಪರಶುದ್ಧ ಭಾವವುಳ್ಳ ಜನರೇ ಧನ್ಯರು. ಅವರು ದೇವರ ಮಕ್ಕಳು ಎನಿಸಿಕೊಳ್ಳುವರು.”

“ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಜನರು ದೀಪವನ್ನು ಎತ್ತರದ ಜಾಗದಲ್ಲಿ ಇರಿಸಿದಾಗ ಅದು ಮನೆಯಲ್ಲಿ ಇರುವ ಎಲ್ಲರಿಗೂ ಬೆಳಕು ನೀಡುವುದು. ಹಾಗೆಯೇ ನೀವೂ ಎತ್ತರಕ್ಕೇರಿ ಬೇರೆಯವರ ಪಾಲಿಗೆ ಬೆಳಕಾಗಬೇಕು.”

“ನಿಮ್ಮ ಸ್ನೇಹಿತರನ್ನು ಪ್ರೀತಿಸಿ, ಶತ್ರುಗಳನ್ನು ದ್ವೇಷಿಸಿ” ಎನ್ನುವುದನ್ನು ನೀವು ಕೇಳಿದ್ದೀರಿ. ನಾನು ಹೇಳುವುದೇನೆಂದರೆ, “ನಿಮ್ಮ ಶತ್ರುಗಳನ್ನೂ ಪ್ರೀತಿಸಿ. ನಿಮಗೆ ಕೆಡುಕು ಮಾಡಿದವರಿಗಾಗಿ ಪ್ರಾರ್ಥಿಸಿ. ಆಗ ನೀವು ನಿಜವಾಗಿಯೂ ದೇವರ ಮಕ್ಕಳಾಗುವಿರಿ”.

“ಎಚ್ಚರವಿರಲಿ! ಒಳ್ಳೆಯ ಕೆಲಸಗ ಮಾಡುವಾಗ ಎಲ್ಲರ ಮುಂದೆ ಪ್ರದರ್ಶಿಸಬೇಡಿ. ಜನರು ನೋಡಲೆಂದು ನೀವು ಅವನ್ನು ಮಾಡಿದರೆ, ನಿಮಗೆ ಪ್ರತಿಫಲ ದೊರೆಯುವುದಿಲ್ಲ. ದಾನ ನೀಡುವಾಗ ಗುಟ್ಟಾಗಿ ನೀಡಿ. ನೀವು ಮತ್ತೊಬ್ಬರಿಗೆ ಸಹಾಯ ಮಾಡುವುದು ಯಾರಿಗೂ ತಿಳಿಯದಿರಲಿ”.

“ಪ್ರಾರ್ಥನೆಯಲ್ಲಿ ಕಪಟ ಬೇಡ. ನಿಮಗೇನು ಬೇಕೆಂದು ನೀವು ಕೇಳುವುದಕ್ಕೆ ಮೊದಲೇ ಪರಮ ಪಿತನಾದ ದೇವರಿಗೆ ತಿಳಿದಿದೆ”.

“ಮತ್ತೊಬ್ಬರ ತಪ್ಪುಗಳನ್ನು ಕ್ಷಮಿಸಿ. ಆಗ ನೀವೂ ಮತ್ತೊಬ್ಬರಿಂದ ಕ್ಷಮಿಸಲ್ಪಡುತ್ತೀರಿ.”

“ಸಂಪತ್ತನ್ನು ಸಂಗ್ರಹಿಸಿ ಇಡಬೇಡಿ. ಭೂಮಿಯ ಮೇಲಿನ ಸಂಪತ್ತೆಲ್ಲ ಕಿಲುಬು ಹಿಡಿದು ಹಾಳಾಗಿಹೋಗುತ್ತವೆ. ಅಥವಾ ಯಾರದೂ ಅವನ್ನು ಕದಿಯಲೂಬಹುದು! ಆದ್ದರಿಂದ, ಪರಲೋಕದಲ್ಲಿ ನಿಮ್ಮ ಕೈಹಿಡಿದು ನಡೆಸಬಲ್ಲ ಗುಣಸಂಪತ್ತನ್ನು ಅಧಿಕವಾಗಿ ಸಂಗ್ರಹಿಸಿ. ಅದು ಹಾಳಾಗುವುದಿಲ್ಲ. ಅದನ್ನು ಯಾರೂ ಕದಿಯಲಾರರು ಕೂಡಾ.

“ನಾಳೆಗಳಿಗಾಗಿ ಚಿಂತಿಸಬೇಡಿ. ಪ್ರತಿ ದಿನವೂ ತನ್ನದೇ ಆದ ಕಷ್ಟಗಳನ್ನು ಹೊಂದಿರುತ್ತವೆ. ನಾಳೆಗೂ ಅದರದೇ ಕಷ್ಟಗಳು ಕಾದಿರುತ್ತವೆ. ಆದ್ದರಿಂದ ಇಂದಿನ ದಿನವನ್ನು ಜೀವಿಸಿ”.

“ಬೇಡಿಕೊಳ್ಳಿ, ಅದು ದಕ್ಕುತ್ತದೆ. ಹುಡುಕಿ, ಅದನ್ನು ಕಂಡುಕೊಳ್ಳುತ್ತೀರಿ. ಬಾಗಿಲು ತಟ್ಟಿರಿ, ಅದು ನಿಮಗಾಗಿ ತೆರೆದುಕೊಳ್ಳುತ್ತದೆ.”

“ನಿಮಗೆ ಬೇರೆಯವರು ಏನು ಮಾಡಬೇಕೆಂದು ಆಶಿಸುತ್ತೀರೋ ಅದನ್ನೇ ಮತ್ತೊಬ್ಬರಿಗಾಗಿ ನೀವು ಮಾಡಿ. ಇದೇ ಮೋಸೆಸನ ಧರ್ಮ. ಇದೇ ಎಲ್ಲ ಶಾಸ್ತ್ರಗಳ, ಪ್ರವಾದಿಗಳ ಬೋಧನೆಯ ಸಾರಾಂಶ.”

  

Leave a Reply