ಆಧ್ಯಾತ್ಮಿಕ ಪ್ರಬುದ್ಧತೆ : ಹಾಗೆಂದರೇನು!?

ಬಹುತೇಕ ನಾವು ಯಾವುದರ ಆಲೋಚನೆಯಿಂದ, ಚರ್ಚೆಯಿಂದ ಒಳಿತಾಗದೆ ಇರುವ ಮಾತಿರಲಿ, ಕೆಡುಕೇ ಉಂಟಾಗುತ್ತದೆಯೋ – ಅಂತಹ ಕ್ಷುಲ್ಲಕ ಸಂಗತಿಗಳಿಗೆ ಪ್ರಾಮುಖ್ಯ ನೀಡುತ್ತ ಬದುಕನ್ನು ಕುಂಠಿತಗೊಳಿಸಿಕೊಳ್ಳುತ್ತೇವೆ. ಪ್ರಬುದ್ಧ ಮನಸ್ಸುಗಳು ಇಂಥ ಕ್ಷುಲ್ಲಕ ಸಂಗತಿಗಳಿಗೆ ಆಸ್ಪದ ನೀಡಲಾರವು ಗಾಯತ್ರಿ

ಆಧ್ಯಾತ್ಮಿಕತೆಗೆ ಇಂದಿನ ಪರಿಭಾಷೆಯಲ್ಲಿ ಹಲವರ್ಥ. ಅದರ ಪರಮಾರ್ಥ ಮಾತಿಗೆ ನಿಲುಕದ್ದು ಆದ್ದರಿಂದ ಲೌಕಿಕದ ಅರ್ಥಗಳನ್ನಿಟ್ಟುಕೊಂಡು ಮಾತನಾಡಬೇಕಾಗುತ್ತದೆ. ಅಧ್ಯಾತ್ಮವನ್ನು ಸ್ವಯಮರಿವಿನ ಪ್ರಕ್ರಿಯೆ ಎಂದು ವ್ಯಾಖ್ಯಾನಿಸಬಹುದು. ಅದು ಆತ್ಮವನ್ನು ಅರಿಯುವ ಮಾರ್ಗವೆಂದು ನಿರ್ವಚಿಸಬಹುದು. ಸಾಮಾಜಿಕ ಮುಖದಲ್ಲಿ ಅಧ್ಯಾತ್ಮ ಮಾನವೀಯತೆಯ ಬಹು ಮುಖ್ಯ ಲಕ್ಷಣ ಎಂದೂ ಹೇಳಬಹುದು. ಆಧ್ಯಾತ್ಮಿಕ ಮನೋವೃತ್ತಿಯ ವ್ಯಕ್ತಿ ಹೆಚ್ಚು ಮಾನವೀಯವಾಗಿರುತ್ತಾನೆ ಅನ್ನುವ ನಂಬಿಕೆ ಹುಟ್ಟಿಕೊಂಡಿರುವುದು ಈ ಹೇಳಿಕೆಯಿಂದಲೇ.
ಆಧ್ಯಾತ್ಮಿಕ ಪ್ರವೃತ್ತಿ ಮನುಷ್ಯನನ್ನು ಹೆಚ್ಚು ಮಾನವೀಯವಾಗಿಸುತ್ತದೆ ಎನ್ನುವ ಮಾತು ನಿಜವೂ ಹೌದು. ಏಕೆಂದರೆ ಆಧ್ಯಾತ್ಮಿಕತೆಯ ಅನುಭವಕ್ಕೆ ನಿಲುಕುವ ಲಾಭಗಳಲ್ಲಿ ಸನ್ನಡತೆಯೂ ಒಂದು.

ಹಾಗಾದರೆ, ಸನ್ನಡತೆ ಇದ್ದ ಮಾತ್ರಕ್ಕೆ ಮನುಷ್ಯ ಪರಿಪೂರ್ಣನಾಗುತ್ತಾನೆಯೇ? ಆಧ್ಯಾತ್ಮಿಕ ಪ್ರವೃತ್ತಿಯ ಫಲಗಳಲ್ಲಿ ಪರಿಪೂರ್ಣತೆಯೂ ಒಂದು. ಸಜ್ಜನಿಕೆಯೊಂದರಿಂದ ಅದನ್ನು ಸಾಧಿಸಲಾಗುವುದೆ?

ಖಂಡಿತ ಇಲ್ಲ. ಸಜ್ಜನಿಕೆ ಅಥವಾ ಸನ್ನಡತೆ, ಆಧ್ಯಾತ್ಮಿಕ ನಿರ್ಲಿಪ್ತಿಯಿಂದ ಉಂಟಾದುದಾದರೆ ಅದಕ್ಕೆ ಅಂಥ ಮಹತ್ವ ಇಲ್ಲ. ಅದರ ಜೊತೆಗೆ ಪ್ರಬುದ್ಧತೆಯೂ ಉಂಟಾಗಿರಬೇಕು. ಆಧ್ಯಾತ್ಮಿಕತೆ ಕಟ್ಟಿಕೊಡುವ ಜ್ಞಾನ ಅಂಥ ಪ್ರಬುದ್ಧತೆಯನ್ನು ಉಂಟು ಮಾಡುತ್ತದೆ. ಈ ಪ್ರಬುದ್ಧತೆ ಅನ್ನುವ ಪದವೇ ಅತ್ಯಂತ ಉನ್ನತ ಭಾವಸ್ಫುರಣೆ ಮಾಡುವಂಥದ್ದು. ಅದು ಗಂಭೀರವೂ ಜ್ಞಾನಪೂರ್ಣವೂ ಆಗಿರುವಂಥದ್ದು. ಎಲ್ಲವೂ ಒಂದೇ, ಎಲ್ಲರೂ ಒಂದೇ ಅನ್ನುವ ಆಧ್ಯಾತ್ಮಿಕ ಅರಿವಿನಿಂದ ಹುಟ್ಟಿಕೊಳ್ಳುವ ಗಾಂಭೀರ್ಯವಿದು. ಈ ಪ್ರಬುದ್ಧತೆಯು ಅಧ್ಯಾತ್ಮ ಜೀವಿಯನ್ನು ಕ್ಷುಲ್ಲಕ ಲೌಕಿಕ ಸಂಗತಿಗಳಿಂದ ಆಚೆಗಿಡುತ್ತದೆ. ಮಾನವನ ಅಲೌಕಿಕ ಪ್ರಗತಿಗೆ ಈ ಪ್ರಕ್ರಿಯೆ ಬಹಳ ಮುಖ್ಯ.

ನಾವು ಬಹುತೇಕವಾಗಿ ಕ್ಷುಲ್ಲಕ ಸಂಗತಿಗಳಲ್ಲೆ ಮುಳುಗಿ ಹೋಗುತ್ತೇವೆ. ಅನಗತ್ಯವಾದ, ನಮ್ಮ ಬದುಕಿಗಾಗಲೀ ಪ್ರಗತಿಗಾಗಲೀ ಕಿಂಚಿತ್ತೂ ಸಹಾಯಕವಲ್ಲದ, ಪೂರಕವೂ ಅಲ್ಲದ ಸಂಗತಿಗಳ ವಿಶ್ಲೇಷಣೆಯಲ್ಲಿ. ನಿಷ್ಕರ್ಷೆಯಲ್ಲಿ, ಅವುಗಳಿಗೆ ಪ್ರತಿಕ್ರಿಯಿಸುವುದರಲ್ಲಿ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳುತ್ತೇವೆ. ಅದು ಸಮಯವನ್ನಷ್ಟೆ ಅಲ್ಲ, ನಮ್ಮನ್ನು ಆವರಿಸಿರುವ ಸಕಾರಾತ್ಮಕ ಪ್ರಭೆಗೂ ಧಕ್ಕೆ ತರುತ್ತದೆ. ನಕಾರಾತ್ಮಕ ಚಿಂತನೆಗಳನ್ನು ಉದ್ದೀಪಿಸಿ ಮನಸ್ಸನ್ನು ಹಾಳುಗೆಡವುತ್ತವೆ. ಯಾವುದರ ಆಲೋಚನೆಯಿಂದ, ಚರ್ಚೆಯಿಂದ ಒಳಿತಾಗದೆ ಇರುವ ಮಾತಿರಲಿ, ಕೆಡುಕೇ ಉಂಟಾಗುತ್ತದೆಯೋ – ಅಂತಹ ಕ್ಷುಲ್ಲಕ ಸಂಗತಿಗಳಿಗೆ ಪ್ರಾಮುಖ್ಯ ನೀಡುತ್ತ ಬದುಕನ್ನು ಕುಂಠಿತಗೊಳಿಸಿಕೊಳ್ಳುತ್ತೇವೆ. ಪ್ರಬುದ್ಧ ಮನಸ್ಸುಗಳು ಇಂಥ ಕ್ಷುಲ್ಲಕ ಸಂಗತಿಗಳಿಗೆ ಆಸ್ಪದ ನೀಡಲಾರವು.

ಪ್ರಬುದ್ಧತೆಯು ಯಾವ ಸಂಗತಿಯಲ್ಲೂ ತಾರತಮ್ಯ ಮಾಡುವುದಿಲ್ಲ ಎನ್ನುತ್ತಾರಲ್ಲವೆ? ಹಾಗಾದರೆ ಅದು ಕ್ಷುಲ್ಲಕವಾದುದನ್ನು ಹೇಗೆ ದೂರವಿಡುತ್ತದೆ? ಅದು ಹೇಗೆ ‘ಇದು ಕ್ಷುಲ್ಲಕ’ ಎಂದು ತೀರ್ಮಾನಿಸುತ್ತದೆ? – ಎಂಬ ಪ್ರಶ್ನೆಗಳು ಉಂಟಾಗಬಹುದು.

ನಿಜ. ಪ್ರಬುದ್ಧತೆಯ ಸ್ಥಿತಿಯಲ್ಲಿ ತರತಮಗಳು ಇರುವುದಿಲ್ಲ. ಆದರೆ ಜ್ಞಾನಪೂರ್ಣವಾದ ಮನಸ್ಸಿಗೆ ತಾನು ವಾಸ ಮಾಡಿರುವ ದೇಹ ಅಥವಾ ತಾನು ವ್ಯಕ್ತಗೊಂಡಿರುವ ವ್ಯಕ್ತಿ ಏನನ್ನು ಮಾಡಿದರೆ ಪ್ರಗತಿಶೀಲನಾಗುತ್ತಾನೆ, ಯಾವುದರಿಂದ ಪತನ ಹೊಂದುತ್ತಾನೆ ಅನ್ನುವ ಅರಿವು ಇರುತ್ತದೆ. ಈ ಅರಿವು ಆಧ್ಯಾತ್ಮಿಕತೆಯಿಂದ ಉಂಟಾಗಿರುವಂಥದ್ದು. ಪ್ರಬುದ್ಧ ಮನಸ್ಥಿತಿ ಹೊಂದಿರುವ ಮನುಷ್ಯ ಒಳಿತು ಕೆಡುಕಗಳೆಂದು ನಿರ್ದೇಶನ ನೀಡುತ್ತ ತಾರತಮ್ಯ ತೋರದೆ ಹೋದರೂ ಅನುಸರಣೆಯಲ್ಲಿ ಪ್ರಜ್ಞಾಪೂರ್ಣನಾಗಿರುತ್ತಾನೆ. ಆದ್ದರಿಂದಲೇ ಆತ ಕ್ಷುಲ್ಲಕ ಸಂಗತಿಗಳನ್ನು ಕೈಬಿಟ್ಟು ಹೆಚ್ಚು ಘನತೆಯಿಂದ ವರ್ತಿಸುವುದು ಸಾಧ್ಯವಾಗುತ್ತದೆ.

ಹಾಗಾದರೆ ಸರಳಾರ್ಥದಲ್ಲಿ, ಲೌಕಿಕ ನಡವಳಿಕೆಯಲ್ಲಿ ಈ ಪ್ರಬುದ್ಧತೆ ಹೇಗೆ ವ್ಯಕ್ತವಾಗುತ್ತದೆ?

ಬಹಳ ಸುಲಭ. ಭೇದಭಾವ ತೋರದ, ಯಾರೊಂದಿಗೂ ಜಗಳ ಆಡದ, ಪ್ರತಿಕ್ರಿಯೆ ನೀಡುವ ಬದಲು ಸಹಾನುಭೂತಿಯಿಂದ ಸ್ಪಂದಿಸುವ ವ್ಯಕ್ತಿಯೇ ಪ್ರಬುದ್ಧ ವ್ಯಕ್ತಿ. ಆತ ಸೋಲು – ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತಾನೆ. ಹೊಗಳಿಕೆ ತೆಗಳಿಕೆಗಳಿಗೂ ಸಮಾನವಾಗಿ ಸ್ಪಂದಿಸುತ್ತಾನೆ. ಯಾರ ಕುರಿತಾಗಿಯೂ ಯಾವ ಸಂದರ್ಭದಲ್ಲಿಯೂ ಹಗುರಾಗಿ ಮಾತನಾಡುವುದಿಲ್ಲ. ತಾನು ಎಲ್ಲವನ್ನೂ ಬಲ್ಲವನೆಂಬ ಅಹಂಕಾರ ಪ್ರದರ್ಶನ ಮಾಡುವುದಿಲ್ಲ. ಪ್ರಬುದ್ಧ ಮನಸ್ಸುಗಳು ಯಾವತ್ತೂ ತನಗೆ ಸಂಬಂಧವಿಲ್ಲದ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ.

ತನ್ನನ್ನು ತಾನು ಆಧ್ಯಾತ್ಮಿಕ ಪ್ರವೃತ್ತಿಯವರೆಂದು ಹೇಳಿಕೊಳ್ಳುವವರು ನಿಜವಾಗಿಯೂ ಆಧ್ಯಾತ್ಮಿಕರೇ ಅಥವಾ ಸೋಗುಗಾರರೇ ಎಂದು ತಿಳಿಯಲಿಕ್ಕೆ ಇಷ್ಟು ಸಾಕು. ಅಂತಹ ವ್ಯಕ್ತಿ ಪ್ರಬುದ್ಧನಾಗಿ ವರ್ತಿಸುತ್ತಿದ್ದಾನೆಯೇ ಇಲ್ಲವೇ ಎಂದು ಗಮನಿಸಿದರೆ ಆತನ/ಆಕೆಯ ನಿಜ ಬಣ್ಣ ಬಯಲಾಗಿಹೋಗುತ್ತದೆ. ಕೆಲವರು ಆಧ್ಯಾತ್ಮಿಕತೆಯನ್ನು ತಮ್ಮ ವೇಷ ಭೂಷಣ ಅಲಂಕಾರಗಳಲ್ಲಿ ತೋರಿಸಿಕೊಳ್ಳುತ್ತಾರೆ. ಉರು ಹೊಡೆದ ಪಾಠಗಳನ್ನು ಜನತೆಯ ಮುಂದೆ ಒಪ್ಪಿಸಿಯೋ ಅಥವಾ ಇನ್ಯಾವುದೋ ತಂತ್ರಗಾರಿಕೆಯಿಂದಲೋ ಅಧ್ಯಾತ್ಮ ಗುರುಗಳೆಂದೂ ಕರೆಸಿಕೊಂಡುಬಿಡುತ್ತಾರೆ. ಆದರೆ ನೈಜ ಆಧ್ಯಾತ್ಮಿಕತೆಯಿಂದ ಉಂಟಾಗುವ ಪ್ರಬುದ್ಧತೆ ಈ ಎಲ್ಲ ಢಾಂಬಿಕತೆಯಿಂದ ದೂರ. ಅಲ್ಲಿ ತೋರುಗಾಣಿಕೆ ಇರುವುದಿಲ್ಲ. ನಡವಳಿಕೆಯಲ್ಲಿ, ಸ್ವತಃ ಇರುವಿಕೆಯಲ್ಲಿಯೇ ಸುತ್ತಮುತ್ತಲಿನ ವ್ಯಕ್ತಿಗೆ ಗೌರವ ಉಕ್ಕುವಂತೆ, ಅಪ್ಯಾಯಮಾನವಾಗುವಂತೆ ಅದು ಕಾಣಿಸಿಕೊಳ್ಳುತ್ತದೆ.

ಹಾಗೆಂದ ಮಾತ್ರಕ್ಕೆ ಪ್ರಬುದ್ಧತೆ ಎಂದರೆ ಗಂಭೀರವಾಗಿರುವುದು ಎಂದರ್ಥವಲ್ಲ. ಅಲ್ಲಿ ಮುಗ್ಧತೆಯೂ ಹಾಸ್ಯವೂ ಲವಲವಿಕೆಯೂ ಇರುತ್ತದೆ. ಆದರೆ ಆ ಎಲ್ಲದರಲ್ಲೂ ಒಂದು ಪ್ರಜ್ಞಾವಂತಿಕೆ, ಒಂದು ಎಚ್ಚರ ಜೀವಂತ ಇರುತ್ತದೆ. ಇಂಥ ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಸಾಧಿಸುವುದು ಪ್ರಬುದ್ಧತೆಯನ್ನು ಹೊಂದುವುದು ಸುಲಭದ ಮಾತೇನಲ್ಲ.

Leave a Reply