ಸ್ವತಃ ಬುದ್ಧ ನಿನ್ನ ಬಳಿ ಬಂದು, ಬುದ್ಧ ಆಗುವುದು ಹೇಗೆ ಎಂದು ಪ್ರಶ್ನೆ ಮಾಡಿದರೆ ನಿನಗೆ ಸಿಟ್ಟು ಬರುತ್ತಿರಲಿಲ್ಲವೆ? : ಓಶೋ ರಜನೀಶ್ | ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಒಬ್ಬ ಮನುಷ್ಯ ಝೆನ್ ಮಾಸ್ಟರ್ ಹತ್ತಿರ ಬಂದು ಕೇಳಿಕೊಳ್ಳುತ್ತಾನೆ,
“ ಬುದ್ಧನಾಗಬೇಕಾದರೆ ನಾನು ಏನು ಮಾಡಬೇಕು?”
ಇಂತಹ ಮಾತೊಂದನ್ನ ಕೇಳುತ್ತಿದ್ದಂತೆಯೇ ಕೆಂಡಾಮಂಡಲನಾದ ಝೆನ್ ಮಾಸ್ಟರ್, ಆ ಮನುಷ್ಯನ ಕಪಾಳಕ್ಕೆ ಜೋರಾಗಿ ಬಾರಿಸುತ್ತಾನೆ.
ಮಾಸ್ಟರ್ ನ ಅನಿರೀಕ್ಷಿತ ವರ್ತನೆಯಿಂದ ಅಪ್ರತಿಭನಾದ ಆ ಮನುಷ್ಯ, ಮಾಸ್ಟರ್ ನ ಹಿರಿಯ ಶಿಷ್ಯನ ಬಳಿ ಹೋಗಿ ಪ್ರಶ್ನೆ ಮಾಡುತ್ತಾನೆ,
“ ಎಂತಹ ಮನುಷ್ಯ ಇವನು ? ನಾನೊಂದು ಸರಳ ಪ್ರಶ್ನೆ ಕೇಳಿದೆ. ಅವನು ಈ ಪರಿ ಸಿಟ್ಟಾಗುವ ಕಾರಣವೇನಿತ್ತು? ಅವನು ಹೊಡೆತಕ್ಕೆ ನನ್ನ ಕೆನ್ನೆ ಇನ್ನೂ ಉರಿಯುತ್ತಿದೆ. ಬುದ್ಧ ಆಗುವುದು ಹೇಗೆ ಎಂದು ಕೇಳುವುದು ತಪ್ಪಾ? ಇಂಥ ಕ್ರೂರಿ, ಹಿಂಸಾತ್ಮಕ ಮನುಷ್ಯ ಯಾವ ರೀತಿಯ ಝೆನ್ ಮಾಸ್ಟರ್ ?”
ಆ ಮನುಷ್ಯನ ಮಾತು ಕೇಳಿ ಮಾಸ್ಟರ್ ನ ಹಿರಿಯ ಶಿಷ್ಯನಿಗೆ ನಗು ಮತ್ತು ಸಿಟ್ಟು ಒಟ್ಟೊಟ್ಚಿಗೆ.
“ ಮಾಸ್ಟರ್ ನ ಸಹಾನುಭೂತಿ, ಅಂತಃಕರಣ ನಿನಗೆ ಅರ್ಥ ಆಗುತ್ತಿಲ್ಲ. ನಿನ್ನ ಮೇಲಿನ ಕರುಣೆಯಿಂದಲೇ ಮಾಸ್ಟರ್ ಅಷ್ಟು ಜೋರಾಗಿ ನಿನಗೆ ಹೊಡೆದದ್ದು. ಮಾಸ್ಟರ್ ಗೆ ತೊಂಭತ್ತು ವರ್ಷ ವಯಸ್ಸು, ನೀನಿನ್ನೂ ಯುವಕ, ಅವನು ನಿನ್ನ ಕಪಾಳಕ್ಕೆ ಹೊಡೆದಾಗ ನಿನ್ನ ಕೆನ್ನೆಗಿಂತ ಹೆಚ್ಚು ಅವನ ಕೈಗಳಿಗೆ ನೋವಾಗಿದೆ. ಮೂರ್ಖ, ಮಾಸ್ಟರ್ ನ ಅಂತಃಕರಣವನ್ನ ಅರ್ಥ ಮಾಡಿಕೋ, ಇಲ್ಲಿಂದ ವಾಪಸ್ಸಾಗು”
ಆ ಯುವಕ ಅಲ್ಲಿಂದ ಜಾಗ ಬಿಟ್ಟು ಕದಲಲಿಲ್ಲ. ಮಾಸ್ಟರ್ ನ ಹಿರಿಯ ಶಿಷ್ಯನನ್ನು ಮತ್ತೆ ಪ್ರಶ್ನೆ ಮಾಡಿದ.
“ ಆದರೆ ಮಾಸ್ಟರ್ ನ ಇಂಥ ಕ್ರೂರ ವರ್ತನೆಯಲ್ಲಿ ನನಗೆ ಯಾವ ಸಂದೇಶವಿದೆ?”
ಮಾಸ್ಟರ್ ನ ಹಿರಿಯ ಶಿಷ್ಯ ಮತ್ತೆ ತನ್ನ ಮಾತು ಮುಂದುವರೆಸಿದ, “ ಮಾಸ್ಟರ್ ನ ಸಂದೇಶ ತುಂಬ ಸರಳ. ಸ್ವತಃ ಬುದ್ಧ ನಿನ್ನ ಬಳಿ ಬಂದು, ಬುದ್ಧ ಆಗುವುದು ಹೇಗೆ ಎಂದು ಪ್ರಶ್ನೆ ಮಾಡಿದರೆ ನಿನಗೆ ಸಿಟ್ಟು ಬರುತ್ತಿರಲಿಲ್ಲವೆ? ನೀನು ಅವನ ಕಪಾಳಕ್ಕೆ ಹೊಡೆದು ‘ನೀನೇ ಬುದ್ಧ’ ಎಂದು ಅವನಿಗೆ ನೀನು ನೆನಪಿಸುತ್ತಿರಲಿಲ್ಲವೆ? ಮಾಸ್ಟರ್ ನಿನ್ನ ಜೊತೆ ಮಾಡಿದ್ದೂ ಇದನ್ನೇ. ಗುಲಾಬಿ ತಾನು ಗುಲಾಬಿಯಾಗುವ ಪ್ರಯತ್ನ ಮಾಡಿದರೆ, ಅದರಷ್ಟು ದುಃಖವನ್ನು ಬೇರೆ ಯಾವುದೂ ಅನುಭವಿಸುವುದಿಲ್ಲ. ಅದು ಈಗಾಗಲೇ ಗುಲಾಬಿ, ಅದು ತನ್ನ ಸಹಜ ಸ್ವಭಾವ ಮರೆತಿದೆಯಷ್ಟೇ. ನೆನಪು ಮಾಡಿಕೊಳ್ಳಬೇಕಾದ್ದಷ್ಟೇ ಈಗ ಬೇಕಾಗಿರುವುದು.”
ಝೆನ್ ಪ್ರಕಾರ ಮನುಷ್ಯ ವಿಸ್ಮೃತಿಯಲ್ಲಿದ್ದಾನೆ. ಅವನು ತಾನು ಯಾರು ಎನ್ನುವುದನ್ನ ಮರೆತುಬಿಟ್ಟಿದ್ದಾನೆ ಅಷ್ಟೇ. ನೆನಪು ಮಾಡಿಕೊಳ್ಳಬೇಕಾದ್ದಷ್ಟೇ ಈಗಿನ ಅವಶ್ಯಕತೆ. ಕೇವಲ ನೆನಪು ಮಾಡಿಕೊಳ್ಳಬೇಕಾದ್ದು. ನಾನಕರು ಇದನ್ನೇ ಸುರತಿ ಎಂದರು, ಕಬೀರ ಇದನ್ನೇ ಸುರತಿ ಎಂದ. ಆಗುವಂಥದು ಬೇರೆ ಏನೂ ಇಲ್ಲ, ನೀನು ಯಾರು ಎನ್ನುವುದನ್ನ ನೆನಪು ಮಾಡಿಕೊಳ್ಳುವುದಷ್ಟೇ ಅವಶ್ಯಕತೆ.
sir vayaktikate margadarshnavaguva vishaya