ಚೆರ್ರಿ ಮರವೇರಿದ ಬಸವನ ಹುಳು : ಓಶೋ ವ್ಯಾಖ್ಯಾನ

ಭಗವಂತ ಇಲ್ಲವೆಂದು ವಾದ ಮಾಡುತ್ತ ಕುಳಿತುಕೊಳ್ಳಬೇಡ, ವಾದ ಮಾಡುತ್ತ ನಿನ್ನ ಸಮಯ, ಸಾಮರ್ಥ್ಯ ವ್ಯರ್ಥ ಮಾಡುವುದರ ಬದಲಾಗಿ ಸಾಧನೆಯ ಹಾದಿಯಲ್ಲಿ ಮುಂದುವರೆಯುತ್ತ ಬದಲಾವಣೆಗೆ ನಿನ್ನನ್ನು ನೀನು ತೆರೆದುಕೋ, ಆಗ ನಿನ್ನನ್ನು ಈಗ ಇಲ್ಲದಿರುವ ಭಗವಂತ ಬೇರೆ ಯಾವುದೋ ಶಕ್ತಿಯ ರೂಪದಲ್ಲಿ ಬಂದು ಸ್ವಾಗತಿಸುತ್ತಾನೆ ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ

ವಸಂತ ಕೊನೆಯಾಗುತ್ತಿದ್ದ ಒಂದು ಚಳಿ ಗಾಳಿಯ ನಸುಕಿನಲ್ಲಿ ಬಸವನ ಹುಳುವೊಂದು ಚೆರ್ರಿ ಮರವನ್ನು ಏರತೊಡಗಿತು. ಪಕ್ಕದ ಓಕ್ ಮರದಲ್ಲಿದ್ದ ಗುಬ್ಬಿಗಳು ಬಸವನ ಹುಳದ ಈ ಹುಚ್ಚುತನವನ್ನ ಕಂಡು ನಗತೊಡಗಿದವು. ಏಕೆಂದರೆ ಅದು ಚೆರ್ರಿ ಹಣ್ಣಿನ ಸೀಸನ್ ಆಗಿರಲಿಲ್ಲ ಮತ್ತು ಮರದಲ್ಲಿ ಯಾವ ಚೆರ್ರಿ ಹಣ್ಣೂ ಇರಲಿಲ್ಲ. ಆದಾಗ್ಯೂ ಈ ಅಮಾಯಾಕ ಹುಳು ಮರವನ್ನು ಏರುವ ಸಾಹಸ ಮಾಡುತ್ತಿರುವುದನ್ನ ನೋಡಿ ಗುಬ್ಬಿಗಳಿಗೆ ನಗು ತಡೆದುಕೊಳ್ಳಲಾಗಲಿಲ್ಲ.

ಗುಬ್ಬಿಯೊಂದು ಹಾರಿಬಂದು ಬಸವನ ಹುಳುವನ್ನು ಪ್ರಶ್ನೆ ಮಾಡಿತು. “ ಡಾರ್ಲಿಂಗ್, ಇದು ಚೆರ್ರಿ ಹಣ್ಣಿನ ಸೀಸನ್ ಅಲ್ಲ, ಮರದ ಮೇಲೆ ಯಾವ ಹಣ್ಣೂ ಇಲ್ಲ ಆದರೂ ಯಾಕೆ ವ್ಯರ್ಥ ಪ್ರಯತ್ನದಲ್ಲಿ ತೊಡಗಿದ್ದೀಯ? “

ಗುಬ್ಬಿಯ ಮಾತಿಗೆ ತಲೆಕೆಡಿಸಿಕೊಳ್ಳದೇ ಬಸವನ ಹುಳು ಮರ ಏರುವುದನ್ನು ಮುಂದುವರೆಸುತ್ತಲೇ ಉತ್ತರಿಸಿತು, “ ಆದರೆ ನಾನು ಮರ ಏರಿದಾಗ ಚೆರ್ರಿ ಹಣ್ಣುಗಳ ಸೀಸನ್ ಶುರುವಾಗಿರುತ್ತದೆ ನನಗಾಗಿ ಚೆರ್ರಿ ಹಣ್ಣುಗಳು ಕಾಯುತ್ತಿರುತ್ತವೆ. ನನಗೆ ಮರ ಪೂರ್ತಿ ಏರಲು ಇನ್ನೂ ತುಂಬ ಸಮಯ ಆಗಬಹುದು ಆದರೆ ಅಷ್ಟರಲ್ಲಿ ಹಣ್ಣುಗಳು ನನಗಾಗಿ ಪೂರ್ಣ ಸಿದ್ಧವಾಗಿರುತ್ತವೆ. “

ಹೌದು ಭಗವಂತ ಇಲ್ಲ ಆದರೆ ನೀನು ಅಲ್ಲಿ ಮುಟ್ಟಿದಾಗ ಅವನು ನಿನಗಾಗಿ ಅಲ್ಲಿ ಕಾಯುತ್ತಿರುತ್ತಾನೆ. ಯಾವ ಫಲವೂ ಇಲ್ಲ, ನೀನು ಮುಂದುವರೆದು ಬೆಳವಣಿಗೆಯಾಗಿ ಗುರಿ ತಲುಪಿದಾಗ ಮಾತ್ರ ಫಲ ಕಾಣಿಸಿಕೊಳ್ಳುತ್ತದೆ. ನೀನು ಪೂರ್ಣ ಪ್ರಜ್ಞೆಯ ಹಂತವನ್ನು ತಲುಪಿದಾಗ ಭಗವಂತ ನಿನಗೆ ಕಾಣಿಸಿಕೊಳ್ಳುತ್ತಾನೆ ಅಲ್ಲಿಯವರೆಗೆ ನಿನಗೆ ಭಗವಂತ ಇಲ್ಲ ಅಷ್ಟೇ.

ಭಗವಂತ ಇಲ್ಲವೆಂದು ವಾದ ಮಾಡುತ್ತ ಕುಳಿತುಕೊಳ್ಳಬೇಡ, ವಾದ ಮಾಡುತ್ತ ನಿನ್ನ ಸಮಯ, ಸಾಮರ್ಥ್ಯ ವ್ಯರ್ಥ ಮಾಡುವುದರ ಬದಲಾಗಿ ಸಾಧನೆಯ ಹಾದಿಯಲ್ಲಿ ಮುಂದುವರೆಯುತ್ತ ಬದಲಾವಣೆಗೆ ನಿನ್ನನ್ನು ನೀನು ತೆರೆದುಕೋ, ಆಗ ನಿನ್ನನ್ನು ಈಗ ಇಲ್ಲದಿರುವ ಭಗವಂತ ಬೇರೆ ಯಾವುದೋ ಶಕ್ತಿಯ ರೂಪದಲ್ಲಿ ಬಂದು ಸ್ವಾಗತಿಸುತ್ತಾನೆ.

ನಿನ್ನ ಇಡೀ ಸಾಮರ್ಥ್ಯವನ್ನು ವಾದಗಳಲ್ಲಿ ತೊಡಗಿಸುವೆಯಾದರೆ ನೀನು ವಾದ ಮಾಡುವಲ್ಲಿ ಜೀನಿಯಸ್ ಆಗಬಹುದು, ದೊಡ್ಡ ತರ್ಕ ಶಾಸ್ತ್ರಜ್ಞನಾಗಬಹುದು, ತರ್ಕ ಬದ್ಧವಾಗಿ ವಾದಮಾಡಬಹುದು, ನಿನ್ನ ವಾದಕ್ಕೆ ಪೂರಕವಾಗುವಂಥ ಸಾಕ್ಷ್ಯಗಳು ಮಂಡಿಸಬಹುದು, ಬೇರೆಯವರ ವಾದಗಳನ್ನು ನಿನ್ನ ನಿಶಿತ ಮತಿಯಿಂದ ಕೊಚ್ಚಿ ಹಾಕಬಹುದು ಆದರೆ ಇನ್ನೂ ನೀನು ಆ ಹಳೆಯ ಮನುಷ್ಯನೇ, ನೀನು ಬದಲಾಗಿಲ್ಲ. ನಿನ್ನ ವಾದಗಳು ನಿನ್ನ ಬದಲಾವಣೆಗೆ ದಾರಿಯಲ್ಲ ಅವು ಅಹಂ ನ ಪೋಷಣೆಗೆ ಮಾತ್ರ ಉಪಯುಕ್ತ. ನೀನು ವಾದಮಾಡುವುದರಲ್ಲಿ ಕಳೆದುಕೊಂಡ ಶಕ್ತಿಯೇ ನಿನ್ನ ಧ್ಯಾನಕ್ಕೆ ಪೂರಕವಾಗಬಹುದಿತ್ತು, ಧ್ಯಾನ ಮಾತ್ರ ನಿನ್ನ ಅರಿವಿಗೆ, ಪೂರ್ಣ ಪ್ರಜ್ಞೆಗೆ ಸಹಾಯಕ.

ಈ ಒಂದು ಮಾತ್ರ ನಿಮ್ಮ ನೆನಪಿನಲ್ಲಿರಲಿ. ಯಾವುದು ನಿನ್ನ ಪರಿಪೂರ್ಣ ಬದಲಾವಣೆಗೆ ಕಾರಣವಾಗುತ್ತದೋ ಅದು ನಿನಗೆ ಒಳ್ಳೆಯದು. ಯಾವುದು ನಿನ್ನ ಬದಲಾವಣೆಗೆ, ಹಿಗ್ಗುವಿಕೆಗೆ, ಪ್ರಜ್ಞೆಯ ಸ್ಥಿತಿಗೆ ಕಾರಣವಾಗುತ್ತದೋ ಅದು ನಿನಗೆ ಒಳ್ಳೆಯದು. ಯಾವುದು ನಿನ್ನನ್ನು ನಿಂತ ನೀರಾಗಿಸುತ್ತದೆಯೋ, ಯಾವುದು ನಿನ್ನ ಸಧ್ಯದ ಸ್ಥಿತಿಯನ್ನ ಮುಂದುವರೆಸುತ್ತದೆಯೋ ಅದು ನಿನಗೆ ಒಳ್ಳೆಯದಲ್ಲ, ಆದು ನಿನಗೆ, ಅಪಾಯಕಾರಿ, ಆತ್ಮಹತ್ಯಾತ್ಮಕ.

Leave a Reply