ವ್ಯವಹಾರಸ್ಥ ನಸ್ರುದ್ದೀನ್! : Tea time story

ಯಾವ ಕೆಲಸ ಮಾಡಿದರೂ ವ್ಯಾಪಾರದ ರೀತಿಯಲ್ಲೇ ಮಾಡುವವನೆಂದೂ, ಲಾಭವಿಲ್ಲದ ಕೆಲಸ ತಾನು ಮಾಡೋದೇ ಇಲ್ಲವೆಂದೂ ಹೇಳುತ್ತಿದ್ದ ನಸ್ರುದ್ದೀನನನ್ನು ಅವನ ನೆರೆಮನೆಯಾತ ಪರೀಕ್ಷಿಸಲು ಹೊರಟ. ಆಮೇಲೇನಾಯ್ತು? ಈ ಕಥೆ ಓದಿ!

ಇದ್ದಕ್ಕಿದ್ದಂತೆ ಒಂದು ಗೂಡಂಗಡಿ ಇಟ್ಟುಕೊಂಡು ವ್ಯಾಪಾರ ಮಾಡತೊದಗಿದ ನಸ್ರುದ್ದೀನ್ ವರ್ಷ ಕಳೆಯುವುದರ ಒಳಗೆ ದೊಡ್ಡ ವ್ಯವಹಾರಸ್ಥನಾಗಿ ಬೆಳೆದುಬಿಟ್ಟ. ಯಾರಾದರೂ ಅವನ ಯಶಸ್ಸಿನ ಗುಟ್ಟೇನೆಂದು ಕೇಳಿದರೆ ತಾನು ಯಾವ ಕೆಲಸ ಮಾಡಿದರೂ ವ್ಯಾಪಾರದ ರೀತಿಯಲ್ಲೇ ಮಾಡುವವನೆಂದೂ, ಲಾಭವಿಲ್ಲದ ಕೆಲಸ ತಾನು ಮಾಡೋದೇ ಇಲ್ಲವೆಂದೂ ಹೇಳುತ್ತಿದ್ದ.

ನಸ್ರುದ್ದೀನನ ಯಶಸ್ಸಿಗೆ ಕರುಬುತ್ತಿದ್ದ ಅವನ ನೆರೆಮನೆಯಾತ, ತಾನು ಏನಾದರೂ ಉಪಾಯ ಹೂಡಿ ಅವನಿಂದ ಅವನಿಗೆ ಲಾಭವಾಗದ ಕೆಲಸ ಮಾಡಿಸಬೇಕೆಂದು ಯೋಚಿಸಿದ.  ಅದರಂತೆ ಅವನು ನಸ್ರುದ್ದೀನನ ಬಳಿ ಹೋಗಿ, “ಸ್ವಲ್ಪ ಸೂಜಿ ಇದ್ದರೆ ಕೊಡು ನಸ್ರುದ್ದೀನ್” ಎಂದು ಕೇಳಿದ. ನಸ್ರುದ್ದೀನ್ ಮರುಮಾತಾಡದೆ ಕೊಟ್ಟ. ನೆರೆಮನೆಯಾತ ಅದರಿಂದ ತನ್ನ ಟೊಪ್ಪಿಯ ಅಂಚು ಹೊಲಿದುಕೊಂಡು ನಸ್ರುದ್ದೀನನಿಗೆ ವಾಪಸ್ ಕೊಟ್ಟ. ಆಗಲೂ ನಸ್ರುದ್ದೀನ್ ಏನೂ ಹೇಳಲಿಲ್ಲ

ಇತ್ತ ನೆರೆಮನೆಯಾತ ತಾನು ನಸ್ರುದ್ದೀನನಿಂದ ಅವನಿಗೆ ಲಾಭವಾಗದ ಕೆಲಸ ಮಾಡಿಸಿದೆನೆಂದುಒಳಗೊಳಗೇ ಖುಷಿಪಟ್ಟ. ಮತ್ತೊಂದು ದಿನ ನೆರೆಮನೆಯಾತ ನಸ್ರುದ್ದೀನನ ಬಳಿ ಸುತ್ತಿಗೆ ಬೇಕೆಂದು ಕೇಳಿ ತಂದುಕೊಂಡು, ಎರಡು ದಿನಗಳ ಮೇಲೆ ಆದನ್ನು ವಾಪಾಸು ಕೊಟ್ಟ. ಈಗಲೂ ನಸ್ರುದ್ದೀನ್ ಏನೂ ಹೇಳಲಿಲ್ಲ.

ನೆರೆಮನೆಯಾತನಿಗೆ ಇನ್ನು ಸುಮ್ಮನಿರಲಾಗಲಿಲ್ಲ. ನಸ್ರುದ್ದೀನನಿಗೆ ಹೇಳೇಬಿಟ್ಟ, “ನಿನ್ನಿಂದ ಲಾಭವಿಲ್ಲದ ಎರಡು ಕೆಲಸಗಳನ್ನು ನಾನು ಮಾಡಿಸಿಕೊಂಡಿದ್ದೇನೆ ಆದರೂ ನಿನಗೆ ಗೊತ್ತೇ ಆಗಲಿಲ್ಲ! ”

ಪೊಟ್ಟಣಕ್ಕೆ ಖರ್ಜೂರ ಸುರಿಯುತ್ತಿದ್ದ ನಸ್ರುದ್ದೀನ್, “ನಾನು ಲಾಭವಿಲ್ಲದ ಕೆಲಸ ಕನೆಸಿನಲ್ಲಿಯೂ ಮಾಡವವನಲ್ಲ” ಅಂದ.

ನೆರೆಮನೆಯಾತನ ಮುಖದ ಮೇಲಿದ್ದ ಹೆಮ್ಮೆ ಮಂಕಾಯಿತು. ಅವನು ಅಚ್ಚರಿಯಿಂದ ನೋಡಿದ.

ನಸ್ರುದ್ದೀನ್ ನಗುತ್ತಾ, “ನಾನು ನಿನಗೆ ಬರೀ ಸೂಜಿ ಕೊಟ್ಟಿದ್ದೆ. ಆದರೆ ಸೂಜಿ ವಾಪಸ್ ಕೊಡುವಾಗ ನೀನು ಅದಕ್ಕೆ ಪೋಣಿಸಿದ್ದ ದಾರ ತೆಗೆದಿರಲಿಲ್ಲ. ಆ ದಾರದಿಂದ ನನ್ನ ಪೈಜಾಮದ ಅಂಚು ಹೊಲಿದುಕೊಂಡೆ. ನನ್ನ ಸುತ್ತಿಗೆಯ ಹಿಡಿ ಸಡಿಲವಾಗಿಬಿಟ್ಟಿತ್ತು. ನಾನು ಅದನ್ನು ಸರಿಮಾಡಲು ಸಮಯವಿಲ್ಲದೆ ಸುಮ್ಮನಿದ್ದೆ. ನೀನು ಅದನ್ನು ಬಳಸುವಾಗ ಸರಿ ಮಾಡಿಯೇ ಮಾಡುತ್ತೀಯೆಂದು ನನಗೆ ಗೊತ್ತಿತ್ತು, ನೀನು ವಾಪಸ್ ಕೊಡುವಾಗ ನನ್ನ ಸುತ್ತಿಗೆ ಸರಿಯಾಗಿತ್ತು!!”

Leave a Reply