‘ಏಳನೇ ಕೊಪ್ಪರಿಗೆ’ ಯಾವತ್ತೂ ತುಂಬೋದಿಲ್ಲ, ಯಾಕೆಂದರೆ ಅದರಲ್ಲಿ ಕೊರೆಯೇ ಇಲ್ಲ! : ಅಧ್ಯಾತ್ಮ ಡೈರಿ

“ಕಪ್ ಅರ್ಧ ತುಂಬಿದೆಯೋ ಅರ್ಧ ಖಾಲಿ ಇದೆಯೋ” ಅನ್ನುವ ಜಿಜ್ಞಾಸೆ ಬೇಡ. ಕಪ್`ನಲ್ಲಿ ಇರುವಷ್ಟು ನಮಗೆ ಸಾಕು ಅನ್ನುವ ತೃಪ್ತಿ ಇರಲಿ. ಅದರಲ್ಲಿ ಇರುವುದನ್ನು ಸವಿಯುವ ಆನಂದ ಸಿಗಲಿ. ಯಾರಾದರೂ ಕಪ್ ಅರ್ಧ ತುಂಬಿದೆಯೋ ಖಾಲಿ ಇದೆಯೋ ಅಂತ ಕೇಳಿದರೆ ನೀವು ಮರುಮಾತಿಲ್ಲದೆ ಅದನ್ನೆತ್ತಿ ಗಟಗಟ ಕುಡಿದುಬಿಡಿ! । ಅಲಾವಿಕಾ

ಒಂದೂರಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ. ಅವನೊಂದು ದಿನ ಕಟ್ಟಿಗೆ ತರಲಿಕ್ಕೆ ಕಾಡಿಗೆ ಹೋಗ್ತಾನೆ. ಕಾಡಲ್ಲಿ ಅವನು ಒಂದು ಮರದ ಹರೆ ಕಡಿಯಲು ಕೊಡಲಿ ಎತ್ತುತ್ತಾನೆ. ಆಗ ಇದ್ದಕ್ಕಿದ್ದಂತೆ ಮರ ಝಗ್ಗನೆ ಬೆಳಕಾಗುತ್ತದೆ. ಮನುಷ್ಯ ಗಾಬರಿಯಿಂದ ಕೊಡಲಿ ಬಿಸಾಡಿ ಓಡಲು ಮುಂದಾಗ್ತಾನೆ. ಆಗ ಮರದಿಂದ ಒಬ್ಬ ಯಕ್ಷ ಪ್ರಕಟಗೊಂಡು ಮನುಷ್ಯಾ ಹೆದರಬೇಡ, ನಾನೊಬ್ಬ ಯಕ್ಷ. ಈ ಭೂಮಿ ಬಿಟ್ಟು ನನ್ನ ಲೋಕಕ್ಕೆ ಮರಳಿಹೊರಟಿದ್ದೆ. ಆದರೆ ನನ್ನ ಬಳಿ ಏಳು ಕೊಪ್ಪರಿಗೆಗಳಿವೆ, ಅವುಗಳಲ್ಲಿ ಚಿನ್ನದ ನಾಣ್ಯಗಳಿವೆ. ಅವನ್ನು ಯಾರಿಗಾದರೂ ಒಟ್ಟು ಹೋಗೋಣವೆಂದು ಕಾಯ್ತಿದ್ದೆ” ಅನ್ನುತ್ತಾನೆ. ಮೆಲ್ಲ ಹಿಂದೆ ತಿರುಗಿದ ಮನುಷ್ಯ ಯಕ್ಷನ ಅಕ್ಕಪಕ್ಕ ಪ್ರಕಟಗೊಂಡು ಹೊಳೆಯುತ್ತಿದ್ದ ಕೊಪ್ಪರಿಗೆಗಳನ್ನು ಕಂಡು ಎಚ್ಚರ ತಪ್ಪೋದು ಬಾಕಿ!

ಹೇಗೋ ಸಾವರಿಸಿಕೊಂಡು ಯಕ್ಷನನ್ನು ಹಾಡಿಹೊಗಳಿ, ಅವನನ್ನು ಹತ್ತು ನಿಮಿಷ ಅಲ್ಲೇ ಕಾವಲು ನಿಲ್ಲಿಸಿ ಗಾಡಿ ಕೊಂಡೊಯ್ದು ಕೊಪ್ಪರಿಗೆಗಳನ್ನು ಯಾರಿಗೂ ತಿಳಿಯದಂತೆ ಮನೆಗೆ ತಂದಿಟ್ಟುಕೊಳ್ತಾನೆ.

ಸಾವಕಾಶವಾಗಿ ಒಂದೊಂದೇ ಕೊಪ್ಪ್ಪರಿಗೆಗೆ ಕಟ್ಟಿದ್ದ ಬಟ್ಟೆ ಬಿಚ್ಚುತ್ತಾ ಹೋದರೆ, ಹೆಪ್ಪುಗಟ್ಟಿ ಉಕ್ಕುವ ಮೊಸರು ಗಡಿಗೆಯಂತೆ ಪ್ರತಿಯೊಂದೂ ಚಿನ್ನದ ನಾಣ್ಯಗಳಿಂದ ತುಂಬಿಹೋಗಿವೆ!! ಆದರೆ ಏಳನೆ ಕೊಪ್ಪರಿಗೆ ಮಾತ್ರ ಮುಕ್ಕಾಲಷ್ಟೇ ತುಂಬಿಕೊಂಡಿದೆ.

ಆದರೆ ಆ ಮನುಷ್ಯನಿಗೆ ಏಳನೇ ಕೊಪ್ಪರಿಗೆ ಮುಕ್ಕಾಲು ತುಂಬಿಕೊಂಡಿದೆ ಅನಿಸಲಿಲ್ಲ. ಅದು ಕಾಲು ಭಾಗ ಖಾಲಿಯಿದೆ ಅಂತಲೇ ಅನ್ನಿಸಿತು. ಉಳಿದವನ್ನೆಲ್ಲ ಕಟ್ಟಿ ಮುಚ್ಚಿಟ್ಟ ಮನುಷ್ಯ, ಏನಾದರೂ ಮಾಡಿ ಆ ಏಳನೇ ಕೊಪ್ಪರಿಗೆಯನ್ನೂ ಕಂಠಮಟ್ಟ ತುಂಬಿಸಬೇಕೆಂದು ಯೋಚಿಸಿದ. ಅವನಿಗೆ ಉಳಿದ ಆರು ಕೊಪ್ಪರಿಗೆಗಳ ಸಂಪತ್ತಿನ ಖುಷಿಗಿಂತ, ಏಳನೇ ಕೊಪ್ಪರಿಗೆಯ ಅರ್ಧಖಾಲಿಯ ಅತೃಪ್ತಿಯೇ ಹೆಚ್ಚು ಕಾಡತೊಡಗಿತು.

ಆ ಮನುಷ್ಯ ಆ ಕ್ಷಣದಿಂದಲೇ ಟೊಂಕ ಕಟ್ಟಿದ. ಹಗಲಿರುಳು ದುಡಿದ. ಎಷ್ಟು ತಂದು ಸುರಿದರೂ ಏಳನೆ ಕೊಪ್ಪರಿಗೆ ಒಂದಿಂಚೂ ಮೇಲೇರದು! ಧಗಾ, ಮೋಸ ಮಾಡತೊಡಗಿದ. ಊಹೂಂ! ಏಳನೇ ಕೊಪ್ಪರಿಗೆ ಜಪ್ಪಯ್ಯ ಅನ್ನಲಿಲ್ಲ. ಕಳ್ಳತನಕ್ಕಿಳಿದ. ಚಿನ್ನದ ನಾಣ್ಯಗಳನ್ನೇ ಕದ್ದು ತಂದು ಸುರಿದ. ಏನು ಮಾಡಿದರೂ ಆ ಕೊಪ್ಪರಿಗೆ ತುಂಬುತ್ತಲೇ ಇಲ್ಲ. ಕಳ್ಳತನಕ್ಕೆ ಶಿಕ್ಷೆಯಾಗಿ ಜೈಲಿಗೆ ಹೋಗಿ ಬಂದರೂ ಮತ್ತೆ ಕಳ್ಳತನಕ್ಕೆ ಇಳಿಯುತ್ತಿದ್ದ. ಮತ್ತೆ ಜೈಲಿಗೆ ಹೋಗುತ್ತಿದ್ದ. ಜನರೆಲ್ಲ ಛೀ ಥೂ ಅಂದರು. ಅವನ ಲೋಭ, ಹಣದ ಹುಚ್ಚಿಗೆ ಹೇವರಿಕೆ ಬಂದು ಮನೆಯವರೆಲ್ಲ ದೂರವಾದರು. ಆದರೂ ಅವನು ಏಳನೇ ಕೊಪ್ಪರಿಗೆ ತುಂಬಿಸುವ ಪ್ರಯತ್ನ ಮಾಡುತ್ತಲೇ ಇದ್ದ, ಸೋಲುತ್ತಲೇ ಇದ್ದ. ಹಾಗೇ ಮಿಸುಕದೆ ಕುಳಿತಿದ್ದ ಉಳಿದ ಆರು ಕೊಪ್ಪರಿಗೆ ಸಂಪತ್ತು ಹಾಗೇ ಉಳಿದುಹೋಯಿತು, ಕೊನೆಗೊಂದು ದಿನ ಇವನು ಸತ್ತುಹೋದ.

ನಾವು ಮಾಡೋದೂ ಇದನ್ನೇ. ಏಳನೇ ಕೊಪ್ಪರಿಗೆ ತುಂಬುವುದು. ನಮ್ಮ ಬಳಿ ಇರುವುದನ್ನು ಅನುಭವಿಸುವ, ಅದರಲ್ಲೆ ಸುಖ ಶಾಂತಿ ಕಂಡುಕೊಳ್ಳುವ ಬದಲು ಕೊರತೆಯನ್ನು ಹುಡುಕಿಕೊಂಡು ಅದನ್ನು ತುಂಬಲು ಹೊರಡುತ್ತೇವೆ. ವಾಸ್ತವದಲ್ಲಿ ಅದು ಕೊರತೆಯಾಗಿರುವುದಿಲ್ಲ. ಏಳನೇ ಕೊಪ್ಪರಿಗೆ ಕಾಲು ಭಾಗ ಖಾಲಿಯಾಗಿರಲಿಲ್ಲ. ಅದು ಮುಕ್ಕಾಲು ಭಾಗ ತುಂಬಿತ್ತು. ಹಾಗೇ ನಮ್ಮ ಜೀವನದಲ್ಲೂ ಯಾವುದೋ ಒಂದು ಸಂಗತಿಯ ನಿರ್ದಿಷ್ಟ ಪಾಲು ಒದಗಿರುತ್ತದೆ. ಆದರೆ ನಾವು ಆ ಪಾಲು ಮೀರಿ, ನಮ್ಮ ಪಾತ್ರ ಮೀರಿ ಅದನ್ನು ಬಯಸುತ್ತೇವೆ ಮತ್ತು ಅದರ ಗೈರನ್ನು ಕೊರತೆ ಅಂದುಕೊಳ್ಳುತ್ತೇವೆ. ಆ ಕೊರತೆ ಕೇವಲ ನಮ್ಮ ಭಾವನೆ ಆಗಿರುವುದರಿಂದ, ಮತ್ತು ವಾಸ್ತವದಲ್ಲಿ ಅದು ಇಲ್ಲದೇ ಇರುವುದರಿಂದ, ಆ ‘ಇಲ್ಲದ್ದು’ ಯಾವತ್ತೂ ತುಂಬಿಕೊಳ್ಳೋದೇ ಇಲ್ಲ! ಕೊರತೆ ಇದ್ದರೆ ತುಂಬಬಹುದು, ಇಲ್ಲದ್ದನ್ನು ತುಂಬೋದು ಹೇಗೆ? ಈ ಜಂಜಡದಲ್ಲಿ ಇರುವುದನ್ನೂ ಅನುಭವಿಸದ ಮೂರ್ಖತನ ಮಾಡಿಬಿಡುತ್ತೇವೆ.

ಆದ್ದರಿಂದ, “ಕಪ್ ಅರ್ಧ ತುಂಬಿದೆಯೋ ಅರ್ಧ ಖಾಲಿ ಇದೆಯೋ” ಅನ್ನುವ ಜಿಜ್ಞಾಸೆ ಬೇಡ. ಕಪ್`ನಲ್ಲಿ ಇರುವಷ್ಟು ನಮಗೆ ಸಾಕು ಅನ್ನುವ ತೃಪ್ತಿ ಇರಲಿ. ಅದರಲ್ಲಿ ಇರುವುದನ್ನು ಸವಿಯುವ ಆನಂದ ಸಿಗಲಿ. ಯಾರಾದರೂ ಕಪ್ ಅರ್ಧ ತುಂಬಿದೆಯೋ ಖಾಲಿ ಇದೆಯೋ ಅಂತ ಕೇಳಿದರೆ ನೀವು ಮರುಮಾತಿಲ್ಲದೆ ಅದನ್ನೆತ್ತಿ ಗಟಗಟ ಕುಡಿದುಬಿಡಿ. ಇರುವುದನ್ನು ಅನುಭವಿಸಿ. ಇರುವುದನ್ನು ದಕ್ಕಿಸಿಕೊಳ್ಳಿ.  ಜಿಜ್ಞಾಸೆ ಮಾಡುತ್ತಾ ಕೂರುವ ಬದಲು, ತರ್ಕಿಸುತ್ತಾ ಕೂರುವ ಬದಲು ಅದನ್ನೆತ್ತಿ ಕುಡಿಯುವುದೇ ಸರಿಯಾದ ಆಯ್ಕೆ. ಅದು ಆ ಕ್ಷಣದ ನಡೆ. ಅದೇ ನಮ್ಮನ್ನು ವರ್ತಮಾನದಲ್ಲಿರಿಸುವ ಬಗೆಯೂ.

ಏಳನೆ ಕೊಪ್ಪರಿಗೆ ಯಾವತ್ತೂ ತುಂಬೋದಿಲ್ಲ. ಯಾಕಂದರೆ ಅದು ಯಾವತ್ತೂ ಕೊರೆ ಹೊಂದಿರಲೇ ಇಲ್ಲ! ಅದನ್ನು ತುಂಬಿಸಲು ಪ್ರಯತ್ನಿಸುತ್ತಾ ಆಯುಷ್ಯದ ದಿನಗಳನ್ನು ಖಾಲಿಮಾಡಿಕೊಳ್ಳೋದು ಮೂರ್ಖತನವಲ್ಲದೆ ಮತ್ತೇನೂ ಅಲ್ಲ. ಲೋಭ ಮೂರ್ಖತನವಲ್ಲದೆ ಮತ್ತೇನೂ ಅಲ್ಲ. ಅತೃಪ್ತಿಯೂ ‘ಇದ್ದುದರಲ್ಲಿ ಖುಷಿಪಡಬೇಕು’ ಅನ್ನುವ ಕಾಮನ್ ಸೆನ್ಸ್ ಇಲ್ಲದುದರ ಸಂಕೇತವೇ. ಆದ್ದರಿಂದ ಅದೂ ಮೂರ್ಖತನವೇ. ನೀವು ಮೂರ್ಖರಾಗಿರುತ್ತೀರೋ, ಇರುವುದನ್ನು ಅನುಭವಿಸುವ ಜಾಣರೋ? ಅರ್ಧ ಕಪ್ಪಿನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೀರೋ, ಏಳನೇ ಕೊಪ್ಪರಿಗೆ ತುಂಬಿಸುತ್ತಾ ಕೂರುತ್ತೀರೋ – ಅಥವಾ ಇರುವುದನ್ನು ಅನುಭವಿಸ್ತೀರೋ? ಆಯ್ಕೆ ನಿಮಗೆ ಬಿಟ್ಟಿದ್ದು.

ಇನ್ನು, “ಅತೃಪ್ತಿ ಉತ್ಕೃಷ್ಟವಾದುದನ್ನು ತಲುಪಲು ಇರುವ ಮೊದಲ ಮೆಟ್ಟಿಲು” ಅನ್ನುವ ಸುಳ್ಳಿನ ಬಗ್ಗೆ ಮತ್ತೊಮ್ಮೆ ಮಾತಾಡೋಣ!

Leave a Reply