ಆಧುನಿಕ ಬೌದ್ಧ ಬೋಧಕ Thích nhất hạnh ಹೊಳಹುಗಳು

ಇಂದು ಆಧುನಿಕ ಬೌದ್ಧ ಗುರುವೆಂದೇ ಮನ್ನಣೆ ಪಡೆದಿದ್ದ ಟಿ ನಾ ಹಾನ್ ಇಹಲೋಕದ ಪ್ರಯಾಣ ಮುಗಿಸಿದ್ದಾರೆ. ಈ ಸಂದರ್ಭದಲ್ಲಿ ಅರಳಿಬಳಗ ಹಾನ್ ಅವರ ಹೊಳಹುಗಳ ಕನ್ನಡಾನುವಾದದ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತದೆ… । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಧ್ಯಾನ
ಯಾರನ್ನೋ, ಯಾವುದನ್ನೋ
ಒಲಿಸಿಕೊಳ್ಳುವ ಪ್ರಯತ್ನವಲ್ಲ.

ಧ್ಯಾನ 
ನಿಮ್ಮ ನಿಜದ ಹಾಜರಾತಿಯನ್ನು
ನಿಮಗೆ ಅರ್ಪಿಸಿಕೊಳ್ಳುವ ವಿಧಾನ
ಪ್ರತೀ ಕ್ಷಣ.
--
ಉಸಿರು,
ಬದುಕು ಮತ್ತು ಪ್ರಜ್ಞೆಗಳ
ನಡುವಿನ ಸೇತುವೆ,
ದೇಹ ಮತ್ತು ಮನಸ್ಸುಗಳ
ನಡುವಿನ ಕೊಂಡಿ.

ಮನಸ್ಸು ಚೆಲ್ಲಾಪಿಲ್ಲಿಯಾದಾಗಲೆಲ್ಲ
ಉಸಿರಿನ ಬೆನ್ನೇರಿ
ಮನಸ್ಸನ್ನು ಇಡಿಯಾಗಿಸಿಕೊಳ್ಳಿ.
ಮನಸ್ಸು ಸುಮ್ಮನಾದ
ಖಾಲಿಯಲ್ಲಿ ಮಾತ್ರ
ತುಂಬಿಕೊಳುತ್ತದೆ ಬದುಕು.
--
ನೀವು 
ಹೇಗೆ ಪ್ರೀತಿಸಬೇಕೆಂದರೆ,
ನೀವು ಪ್ರೀತಿಸುತ್ತಿರುವ ವ್ಯಕ್ತಿ
ಹಕ್ಕಿಯಂತೆ ಹಾರುವಂತಿರಬೇಕು.
ಎಲ್ಲ ಬಂಧನಗಳಿಂದ ಬಿಡಿಸಿಕೊಂಡು
ನಿಮ್ಮನ್ನು ಮರೆಯದಂತೆ,
ನೆನಪಿಸಿಕೊಳ್ಳದಂತೆ.

ಹೀಗಲ್ಲದೇ ಬೇರೆ ಹೇಗೆ 
ಜೀವಂತವಾಗಿರಬಲ್ಲದು 
ಪ್ರೇಮ?
--
ಮೌನದ ಜಾಗ 
ಹೂರಗಿಲ್ಲ ಒಳಗೆ.

ಮೌನ
ಮಾತನಾಡದಿರುವುದಲ್ಲ
ಏನೂ ಮಾಡದೇ ಸುಮ್ಮನಿರುವುದಲ್ಲ
ಶಾಂತವಾಗಿರುವುದಲ್ಲ,
ಅಶಾಂತವಾಗಿಲ್ಲದಿರುವುದು.
--
ಅರಳುವುದೆಂದರೆ ಮರಳುವುದು 
ನಿಮ್ಮ  ಆರೈಕೆಗಾಗಿ, ನಿಮ್ಮ ಸಾಂತ್ವನಕ್ಕಾಗಿ.

ನಿಮ್ಮ ಅವಶ್ಯಕತೆ ಇದೆ ನಿಮ್ಮ ದೇಹಕ್ಕೆ,
ನೀವು ಬೇಕಾಗಿದ್ದೀರಿ ನಿಮ್ಮ ಭಾವನೆಗಳಿಗೆ,
ನಿಮಗಾಗಿ ಕಾಯುತ್ತಿವೆ ನಿಮ್ಮ ಗ್ರಹಿಕೆಗಳು,
ನಿಮ್ಮ ಅಂಗೀಕಾರಕ್ಕಾಗಿ ಉತ್ಸುಕವಾಗಿವೆ
ನಿಮ್ಮ ಸಂಕಟಗಳು ,

ಮರಳಿ ನಿಮ್ಮತನಕ್ಕೆ, ನಿಮ್ಮ ಮನೆಗೆ
ಕಾಯುತ್ತಿದ್ದಾರೆ ನಿಮ್ಮವರು
ನಿಮಗಾಗಿ. 
--
ನೀನು ನಾನು, ಬೇರೆ ಬೇರೆ ಅಲ್ಲ
ನೀನೇ ನಾನು, ನಾನೇ ನೀನು.

ನೀನು ನಿನ್ನೊಳಗೆ 
ಹೂವೊಂದನ್ನ ಅತ್ಯಂತ ಜೋಪಾನದಿಂದ 
ಪೋಷಿಸುತ್ತಿದ್ದೀ,
ನಾನು ಸುಂದರವಾಗಿ ಕಾಣಲೆಂದು.

ನಾನು ನನ್ನೊಳಗಿನ  ಕಸ 
ಗುಡಿಸಿ ಸ್ವಚ್ಛ ಮಾಡುತ್ತಿದ್ದೆನೆ,
ನಿನಗೆ ಉಸಿರುಗಟ್ಟದಿರಲೆಂದು.

ನಾನು ನಿನ್ನ ಸಮಾಧಾನ
ನೀನು ನನ್ನ ಖುಶಿ.

Leave a Reply