ಸಹಜ ಸ್ಥಿತಿ, ನಿಮ್ಮ ಅಸ್ತಿತ್ವದ ಭೌತಿಕ ಸ್ಥಿತಿ ಮಾತ್ರ. ಅದು ಹಂತ ಹಂತವಾಗಿ ರೂಪಾಂತರ ಹೊಂದುವ ಮನೋವೈಜ್ಞಾನಿಕ ಪ್ರಕ್ರಿಯೆಯೂ ಅಲ್ಲ… | ಯೂಜಿ, ಕನ್ನಡಕ್ಕೆ : ಚಿದಂಬರ ನರೇಂದ್ರ
ನಾನು ಯಾವ ‘ಕಲಿಸುವ’ ಕ್ರಿಯೆಯಲ್ಲಿ ತೊಡಗಿಕೊಂಡಿಲ್ಲ ಮತ್ತು ನಾನು ಕಲಿಸುವಂಥದ್ದು ಏನೂ ಇಲ್ಲ. ನಾನು ಹೇಳುವ ಮಾತುಗಳಿಗೆ ‘ಕಲಿಕೆ’ ಯ ಹಣೆಪಟ್ಟಿ ಕಟ್ಟಬೇಡಿ. ಕಲಿಸುವುದು ಎಂದರೆ, ಅಲ್ಲೊಂದು ವಿಧಾನ ಇದೆ, ವ್ಯವಸ್ಥೆ ಇದೆ, ಹೊಸ ಹೊಸ ತಂತ್ರಗಳು, ನಿಮ್ಮೊಳಗೆ ಬದಲಾವಣೆ ತರುವ ಕಲಿಕಾ ಮಾದರಿಗಳು ಎಲ್ಲ ಇವೆ. ನಾನು ಹೇಳುವ ಮಾತುಗಳು ಕಲಿಕೆಯ ಈ ಎಲ್ಲ ಪರಿಕರಗಳ ಪರೀಧಿಯಿಂದ ಹೊರಗೆ. ನನ್ನ ಮಾತುಗಳು ನಾನು ಹೇಗೆ ಬದುಕುತ್ತಿದ್ದೆನೆ, ನನ್ನ ದೇಹ ಮನಸ್ಸು, ಬುದ್ಧಿ ಹೇಗೆ ಕಾರ್ಯನಿರ್ವಹಿಸುತ್ತಿವೆ ಎನ್ನುವುದರ ನೇರ ವಿವರಣೆ ಮಾತ್ರ.
‘ಸಹಜ ಸ್ಥಿತಿ’ ಎಂದರೆ ಜ್ಞಾನೋದಯದ, ಭಗವದ್ ಸಾಕ್ಷಾತ್ಕಾರದ ಸ್ಥಿತಿ ಅಲ್ಲ. ಇದು ಸಾಧಿಸಬೇಕಾದ, ಮುಟ್ಟಬೇಕಾದ ಸ್ಥಿತಿಯೂ ಅಲ್ಲ, ಇದನ್ನ ಬಯಸುವ ಹಾಗಿಲ್ಲ , ಇದು ಒಂದು ಜೀವಂತ ಸ್ಥಿತಿ. ಈ ಸ್ಥಿತಿ ಕೇವಲ ಬದುಕು ಕಾರ್ಯನಿರ್ವಹಿಸುತ್ತಿರುವ ರೀತಿಯ ಬಗ್ಗೆ. ಬದುಕು ಎಂದರೆ ಅಮೂರ್ತವಲ್ಲ, ಇಂದ್ರಿಯಗಳು ಜೀವಂತವಾಗಿ ಬುದ್ಧಿಯ ಹಸ್ತಕ್ಷೇಪವಿಲ್ಲದೆ ಸಹಜವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ. ಬುದ್ಧಿ ಉತ್ಪಾದಿಸುವ ವಿಚಾರಗಳದ್ದು ಅಧಿಕ ಪ್ರಸಂಗ, ಇಂದ್ರಿಯಗಳ ಸಹಜ ಕಾರ್ಯ ನಿರ್ವಹಣೆಯಲ್ಲಿ ಸದಾ ಹಸ್ತಕ್ಷೇಪ, ಇಂದ್ರಿಯಗಳನ್ನು ತನ್ನ ಲಾಭಕ್ಕಾಗಿ ಬಳಸುವ ಚಾಲಾಕಿತನ, ಹೀಗೆ ಇಂದ್ರಿಯಗಳನ್ನು ಬಳಸಿಕೊಳ್ಳುತ್ತಲೇ ತನ್ನ ನಿರಂತರತೆಯನ್ನು ಸ್ಥಾಪಿಸಿಕೊಳ್ಳುವ ಹುನ್ನಾರ.
ನಿಮ್ಮ ‘ಸಹಜ ಸ್ಥಿತಿ’ ಗೂ ಧರ್ಮಗಳು ಹೇಳುವ ಸ್ಥಿತಿಗಳಾದ, ಪೂರ್ಣ ಆನಂದ, ಗುರು ಕಾರುಣ್ಯ, ಭಾವೋತ್ಕರ್ಷ ಮುಂತಾದ ಯಾವುದಕ್ಕೂ ಒಂದಿನಿತೂ ಸಂಬಂಧವಿಲ್ಲ; ಅವೆಲ್ಲ ಅನುಭವದ ಪರಿಧಿಯಲ್ಲಿ ಬರುವಂಥವು. ಯಾರು ಧರ್ಮದ ಮಾರ್ಗದಲ್ಲಿ ಶತಮಾನಗಳಿಂದ ಮನುಷ್ಯನನ್ನು ಮುನ್ನಡೆಸಿದ್ದಾರೋ ಅವರು ಬಹುಶಃ ಇಂಥ ಧಾರ್ಮಿಕ ಸ್ಥಿತಿಗಳನ್ನ ಅನುಭವಿಸಿರಬಹುದು. ಅವರನ್ನು ನೀವು ಹಿಂಬಾಲಿಸುತ್ತಿದ್ದೀರಾದರೆ ನೀವೂ ಸಹ ಈ ಅನುಭವಗಳಿಗೆ ಈಡಾಗಬಹುದು. ಇವೆಲ್ಲ ಬುದ್ಧಿ ಪ್ರೇರಿತ (thought induced) ಸ್ಥಿತಿಗಳು ಬಂದ ಹಾಗೆ ಮಾಯವಾಗುತ್ತವೆ ಕೂಡ. ಕೃಷ್ಣ ಪ್ರಜ್ಞೆ, ಕ್ರಿಸ್ತ ಪ್ರಜ್ಞೆ, ಬುದ್ಧ ಪ್ರಜ್ಞೆ ಇವೆಲ್ಲ ತಪ್ಪು ದಾರಿಯಲ್ಲಿ ನೀವು ಕೈಗೊಳ್ಳುವ ವಿಹಾರಗಳು. ಈ ಎಲ್ಲ ಪ್ರಜ್ಞೆಗಳೂ ಕಾಲದ ಸೀಮಿತತೆಯಲ್ಲಿ ಸಂಭವಿಸುವಂಥವು. ಕಾಲಾತೀತವಾದದ್ದನ್ನ ಯಾವತ್ತೂ ಅನುಭವಿಸಲಾಗದು, ಅರ್ಥಮಾಡಿಕೊಳ್ಳಲಾಗದು, ಹಿಡಿದಿಟ್ಚುಕೊಳ್ಳಲಾಗದು, ಇನ್ನು ಅದ್ದಕ್ಕೊಂದು ಹೆಸರು ಕೊಟ್ಟು ವಿವರಿಸುವುದಂತೂ ಮನುಷ್ಯನಿಗೆ ಸಾಧ್ಯವೇ ಇಲ್ಲ. ಆ ಬಸವಳಿದ ಹಾದಿ ನಿಮ್ಮನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ. ಈ ಹಾದಿಯಲ್ಲಿ ಯಾವ ಓಯಾಸಿಸ್ ಕೂಡ ಇಲ್ಲ, ಮರಿಚಿಕೆಯ ಜೊತೆಗಿನ ಕಣ್ಣುಮುಚ್ಚಾಲೆಯಾಟದಲ್ಲಿ ನೀವು ಬಂಧಿ.
ಸಹಜ ಸ್ಥಿತಿ, ನಿಮ್ಮ ಅಸ್ತಿತ್ವದ ಭೌತಿಕ ಸ್ಥಿತಿ ಮಾತ್ರ. ಅದು ಹಂತ ಹಂತವಾಗಿ ರೂಪಾಂತರ ಹೊಂದುವ ಮನೋವೈಜ್ಞಾನಿಕ ಪ್ರಕ್ರಿಯೆಯೂ ಅಲ್ಲ. ಇದು ಒಂದು ದಿನ ಪ್ರವೇಶಿಸಿ ಇನ್ನೊಂದು ದಿನ ಹೊರಬರುವ ಸ್ಥಿತಿಯೂ ಅಲ್ಲ. ನಿಮ್ಮ ಪ್ರತೀ ಜೀವಕೋಶವನ್ನ ಹೇಗೆ ಬುದ್ಧಿ ಮತ್ತು ಮನಸ್ಸು ತಮ್ಮ ಹತೋಟಿಗೆ ತೆಗೆದುಕೊಂಡು ಈ ಅರಾಜಕತೆಯನ್ನ ಸೃಷ್ಟಿಸಿವೆ ಎನ್ನುವುದನ್ನ ನೀವು ಊಹೆ ಕೂಡ ಮಾಡಲಾರಿರಿ. ಸಹಜ ಸ್ಥಿತಿ ಎಂದರೆ ನಿಮ್ಮ ಪ್ರತೀ ಜೀವಕೋಶದ, ಪ್ರತೀ ಗ್ರಂಥಿಯ, ಪ್ರತೀ ನರ ನರಗಳ ಸ್ಫೋಟ. ಇದು ಒಂದು ಸಂಪೂರ್ಣ ರಾಸಾಯನಿಕ ರೂಪಾಂತರ. ಒಂದು ಬಗೆಯ ರಸಸಿದ್ಧಾಂತದ ಪ್ರಕ್ರಿಯೆ. ಆದರೆ ಈ ಸ್ಥಿತಿಗೂ ಮಾದಕ ವಸ್ತುಗಳಿಂದಾಗುವ ಅನುಭವಗಳಿಗೂ ಯಾವ ಸಂಬಂಧವಿಲ್ಲ. ಇದು ಅನುಭವದ ಪರಿಧಿಯಿಂದ ಆಚೆ.
ಹಾಗಾದರೆ, ಜ್ಞಾನೋದಯ, ನಿರ್ವಾಣ ದಂಥ ಒಂದು ಸ್ಥಿತಿ ಇದೆಯಾ? ನನಗಂತೂ ಇದು ಒಂದು ಶುದ್ಧ ಭೌತ-ರಾಸಾಯನಿಕ ಪ್ರಕ್ರಿಯೆ; ಯಾವ ಅನುಭಾವವೂ ಅಲ್ಲ, ಯಾವ ಅಧ್ಯಾತ್ಮವೂ ಅಲ್ಲ. ನಾನು ಕಣ್ಣು ಮುಚ್ಚಿಕೊಂಡರೆ, ಒಂದು ಬೆಳಕು ನನ್ನ ರೆಪ್ಪೆಗಳನ್ನು ಭೇದಿಸುತ್ತದೆ. ನನ್ನ ಭ್ರೂ ಮಧ್ಯದಲ್ಲಿ ಒಂದು ತರಹದ ರಂಧ್ರವಿದೆ, ಅದು ಕಾಣುವುದಿಲ್ಲವಾದರೂ ಏನೋ ಒಂದು ಬೆಳಕು ಒಳಗೆ ಪ್ರವೇಶಿಸುತ್ತಿದೆ. ಭಾರತದಲ್ಲಿ ಇದಕ್ಕೆ ಬಂಗಾರದ ಬಣ್ಣ, ಯುರೋಪಿನಲ್ಲಿ ನೀಲಿ. ಒಂದು ತರಹದ ಬೆಳಕು ಕತ್ತಿನ ಹಿಂಭಾಗದಿಂದಲೂ ಪ್ರವೇಶಿಸುತ್ತದೆ. ಈ ಕೇಂದ್ರಗಳನ್ನು ಒಂದನ್ನೊಂದು ಜೋಡಿಸುವಂಥ ರಂಧ್ರವೊಂದು ತಲೆ ಬುರುಡೆಯ ಹಿಂದೆ ಮುಂದೆ ನಿರ್ಮಾಣವಾಗುತ್ತದೆ. ಒಳಗೆ ಏನೂ ಇಲ್ಲ ಬರೀ ಬೆಳಕು. ಈ ಕೇಂದ್ರಗಳನ್ನು ಮುಚ್ಚಿದಾಗ ಪೂರ್ಣ ಕತ್ತಲು. ಈ ಬೆಳಕು, ಕತ್ತಲಿನಿಂದ ಏನೂ ಪ್ರಯೋಜನವೂ ಇಲ್ಲ, ದೇಹ ಭಿನ್ನವಾಗಿ ಕಾರ್ಯನಿರ್ವಹಿಸಲು ಇವುಗಳಿಂದ ಯಾವ ಉಪಯೋಗವೂ ಇಲ್ಲ. ಇವು ಇವೆ ಅಷ್ಟೇ.
ಸಹಜ ಸ್ಥಿತಿ ಎಂದರೆ ಬುದ್ಧಿ-ಮನಸ್ಸುಗಳ ಯಾವ ಹಸ್ತಕ್ಷೇಪವೂ ಇಲ್ಲದ ಸ್ಥಿತಿ. ನೀವು ಏನನ್ನ ನೋಡುತ್ತಿದ್ದೀರಿ ಎನ್ನುವುದು ನಿಮಗೆ ತಿಳಿಯದ ಸ್ಥಿತಿ. ಗೋಡೆಯ ಮೇಲಿನ ಗಡಿಯಾರವನ್ನ ಅರ್ಧ ಗಂಟೆ ನೋಡಿದರೂ, ನನಗೆ ಸಮಯ ಎಷ್ಟೆಂದು ಗೊತ್ತಿಲ್ಲ. ಅದು ಗಡಿಯಾರವೆಂದು ಕೂಡ ನನಗೆ ಗೊತ್ತಿಲ್ಲ. ಈ ನೋಡುವಿಕೆಯಲ್ಲಿ ಒಂದು ಬೆರಗು ಮಾತ್ರ ಉಂಟು. ಇಷ್ಟು ದಿನ ನಾನು ಕಲಿತಿದ್ದೆಲ್ಲವನ್ನ ಹಿನ್ನೆಲೆಯಲ್ಲಿ ಹಿಡಿದಿಡಲಾಗಿದೆ. ಈ ಮಾಹಿತಿಗಾಗೆ ಬೇಡಿಕೆ ಬರುವ ತನಕ ಆ ತಿಳುವಳಿಕೆ ಹಿನ್ನೆಲೆಯಲ್ಲೇ ಇರುತ್ತದೆ. “ ಈಗ ಎಷ್ಟು ಸಮಯ?” ಎಂದು ನೀವು ಕೇಳಿದರೆ ಮಾತ್ರ “ ಒಂಭತ್ತು ಗಂಟೆ” ಎಂದು ಸರಿಯಾದ ಸಮಯ ಹೇಳಿ ಮತ್ತೆ ನಾನು ಅದೇ ಹಿಂದಿನ ಬೆರಗಿನ ಸ್ಥಿತಿಗೆ ಮರಳುತ್ತೇನೆ.
(ಮುಂದುವರೆಯುತ್ತದೆ.....)
ಆಕರ : The Mystique of Enlightenment- U G Krishnamurthy