ಎನ್ನ ನಾನು ಮರೆದು, ನಿಮ್ಮನರಿದಡೆ… : ಅಲ್ಲಮ ಪ್ರಭು ವಚನ

‘ನಾನು’ ಇಲ್ಲವಾದಾಗ ಘಟಿಸುವುದೇ ಸತ್ಯದ ಸಾಕ್ಷಾತ್ಕಾರ. ‘ನಾನು’ ಅರಿಯುತ್ತೇನೆ ಎಂಬ ಅಹಂಭಾವ ಸ್ವಲ್ಪವೂ ಕೂಡ ಅಲ್ಲಿರಬಾರದು – ಇದು ಅಲ್ಲಮ ಪ್ರಭುವಿನ ತಾತ್ಪರ್ಯ

ಎನ್ನಲ್ಲಿ ನಾನು ನಿಜವಾಗಿ ನಿಮ್ಮನರಿದೆಹೆನೆಂದಡೆ
ಅದು ನಿಮ್ಮ ಮತಕ್ಕೆ ಬಪ್ಪುದೆ?
ಎನ್ನ ನಾನು ಮರೆದು, ನಿಮ್ಮನರಿದಡೆ,
ಅದು ನಿಮ್ಮ ರೂಪೆಂಬೆ ಗುಹೇಶ್ವರಾ | ಅಲ್ಲಮ ಪ್ರಭು

ನಾನು ನಿಮ್ಮನ್ನು ಅರಿಯುವುದೆಂದರೆ, ನನ್ನನ್ನು ನಾನು ಅರಿಯುವುದು. ನಾನು ಇಲ್ಲವಾದರಷ್ಟೆ ನನ್ನನ್ನು ನಾನು ಅರಿಯಲು ಸಾಧ್ಯವಾಗುವುದು. ಆದ್ದರಿಂದ, “ನಾನು ನಿಮ್ಮನ್ನು ಅರಿಯುತ್ತೇನೆ” ಎಂದು ಹೇಳಲು ಹೇಗೆ ಸಾಧ್ಯ!?
ಇದು ಅಲ್ಲಮ ಪ್ರಭುವಿನ ಪ್ರಶ್ನೆ.

‘ನಾನು’ ಇಲ್ಲವಾದಾಗ ಘಟಿಸುವುದೇ ಸತ್ಯದ ಸಾಕ್ಷಾತ್ಕಾರ. ‘ನಾನು’ ಅರಿಯುತ್ತೇನೆ ಎಂಬ ಅಹಂಭಾವ ಸ್ವಲ್ಪವೂ ಕೂಡ ಅಲ್ಲಿರಬಾರದು. ನಾನು ಎಂಬುದು ಕರಗಿ ಬಿಡಬೇಕು. ನನಗೆ ಸಾಕ್ಷಾತ್ಕಾರವಾಗಿದೆ, ದೈವಜ್ಞಾನ ಪ್ರಾಪ್ತವಾಗಿದೆ ಎಂದು ಯಾರಾದರೂ ಹೇಳಿದರೆ ಅದು ಶುದ್ಧ ಸುಳ್ಳು, ಅನುಭಾವಿಗಳು ಹಾಗೆ ಎಂದಿಗೂ ಹೇಳಿಕೊಳ್ಳಲಾರರು.

ಎಲ್ಲಿಯ ತನಕ ನಾನು, ನನ್ನದು ಎಂಬುದು ಇರುತ್ತದೋ ಅಲ್ಲಿಯ ತನಕ ಬಯಕೆಗಳು, ಆಸೆಗಳು ಜೀವವನ್ನು ಆಳುತ್ತವೆ. ಎಲ್ಲ ನೋವು, ದುಃಖಗಳಿಗೆ ಕಾರಣ ಇದೇ. ನಿರ್ದಿಷ್ಟ ಗಾತ್ರದ ಪಾತ್ರೆಯಲ್ಲಿ ಅನಂತತೆಯನ್ನು ತುಂಬಲಾದೀತೇ? “ನಾನು ಇಂಥವನು/ಳು” ಅನ್ನುವ ಗುರುತೇ ನಮ್ಮ ಸೀಮೆಗಳನ್ನು ನಿರ್ಧರಿಸಿ ನಮ್ಮನ್ನು ನಿರ್ದಿಷ್ಟ ಗಾತ್ರಕ್ಕೆ ಕೂರಿಸಿಬಿಡುತ್ತದೆ. ಅದರ ಬದಲು. ನಾನು ಏನೂ ಅಲ್ಲ, ಏನೇನೂ ಅಲ್ಲ ಎಂಬ ಭಾವ ಗಟ್ಟಿ ಮಾಡಿಕೊಂಡು, ಸೀಮೆಗಳನ್ನು ಒಡೆದು ಹಾಕಬೇಕು. ಆಗ ಮಾತ್ರ ಪೂರ್ಣತೆಯನ್ನು ತುಂಬಿಕೊಳ್ಳಲಾದೀತು.

Leave a Reply