ಆಲೋಚನೆಯಲ್ಲಿ, ಕರ್ಮಗಳಲ್ಲಿ ಶುದ್ಧಿ ಇಲ್ಲದೆ ಈ ಯಾವುದರಿಂದಲೂ ಪ್ರಯೋಜನವಿಲ್ಲ. ನಿಮ್ಮ ಈ ಕೃತ್ಯಗಳಿಂದ ಭಗವಂತ ಖಂಡಿತವಾಗಿಯೂ ಒಲಿಯುವುದಿಲ್ಲ.
ಮನಶುದ್ಧಿ ಇಲ್ಲದವಗೆ ಮಂತ್ರದ ಫಲವೇನು?
ತನುಶುದ್ಧಿ ಇಲ್ಲದವಗೆ ತೀರ್ಥದ ಫಲವೇನು?
ಮಿಂದಲ್ಲಿ ಫಲವೇನು, ಮೀನು ಮೊಸಳೆಯಂತೆ?
ನಿಂದಲ್ಲಿ ಫಲವೇನು, ಶ್ರೀಶೈಲದ ಕಾಗೆಯಂತೆ!!
ಹೊರಗೆ ಮಿಂದು ಒಳಗೆ ಮೀಯದವರ ಕಂಡು
ಬೆರಗಾಗಿ ನಗುತ್ತಿದ್ದ ಪುರಂದರ ವಿಠಲ
ಅಂತರಂಗ ಶುದ್ಧಿ ಇಲ್ಲದೆ ಬಹಿರಂಗದಲ್ಲಿ ಎಷ್ಟು ಶುಚಿಯಾಗಿದ್ದರೂ ಪ್ರಯೋಜನವಿಲ್ಲ ಎನ್ನುವುದು ಅನುಭಾವಿಗಳ ಮಾತು. ಮನಸ್ಸೇ ಶುದ್ಧವಿಲ್ಲದೆ ಮಂತ್ರಗಳನ್ನು ಪಠಿಸಿ ಪ್ರಯೋಜನವಿದೆಯೇ? ಖಂಡಿತಾ ಇಲ್ಲ. ಹಾಗೆಯೇ ತನುಶುದ್ಧಿ… ಅಂದರೆ ದೇಹವನ್ನು ಸತ್ಕರ್ಮಗಳಿಗೆ ವಿನಿಯೋಗಿಸದೆ ತೀರ್ಥದ ಫಲವಿದೆಯೆ? ಅದೂ ಇಲ್ಲ… ಮೀನುಮೊಸಳೆಗಳೂ ಮೀಯುತ್ತವೆ. ಹಾಗೆಯೇ ಕಂಡಕಂಡ ತೀರ್ಥಕ್ಷೇತ್ರಗಳಲ್ಲಿ ಒಟ್ಟಾರೆಯಾಗಿ ಮೀಯುವುದರಿಂದಲೂ ಪ್ರಯೋಜನವಿಲ್ಲ. ಶ್ರೀಶೈಲದಲ್ಲಿ ಕಾಗೆ ಒಂಟಿ ಕಾಲಲ್ಲಿ ನಿಂತಿರುವಂತೆ ಸುಮ್ಮನೆ ನಿಲ್ಲುವುದರಿಂದಲಾದರೂ ಪ್ರಯೋಜನವಿದೆಯೇ? ಅದೂ ಇಲ್ಲ…
ಒಳಗಿನಲ್ಲಿ… ಅಂದರೆ ಆಲೋಚನೆಯಲ್ಲಿ, ಕರ್ಮಗಳಲ್ಲಿ ಶುದ್ಧಿ ಇಲ್ಲದೆ ಈ ಯಾವುದರಿಂದಲೂ ಪ್ರಯೋಜನವಿಲ್ಲ. ನಿಮ್ಮ ಈ ಕೃತ್ಯಗಳಿಂದ ಭಗವಂತ ಖಂಡಿತವಾಗಿಯೂ ಒಲಿಯುವುದಿಲ್ಲ.