ನಾರದ ಕಣ್ಣೆತ್ತಿ ಅವಳ ಮುಖವನ್ನೆ ನೋಡಿದ. ಬಿಸಿಲ ಕಾವಿಗೆ ಕೆಂಪಾಗಿದ್ದ ಚೆಲುವಿಯ ಹಣೆ ಮೇಲೆ ಬೆವರ ಸಾಲು ಮುತ್ತಿನಂತೆ ಮಿನುಗುತ್ತಿತ್ತು. ನಾರದನ ಬೊಗಸೆಯಿಂದ ನೀರು ಚೆಲ್ಲಿ ಹೋಗುತ್ತಿತ್ತು. ಕೊಡ ಖಾಲಿಯಾಯಿತು. ಇಬ್ಬರ ಕಣ್ಣಲ್ಲೂ ಪರಸ್ಪರರ ಬಿಂಬಗಳು ತುಂಬಿಕೊಂಡಿದ್ದವು! ಆಮೇಲೆ… | ನಿರೂಪಣೆ: ಅಲಾವಿಕಾ
ಒಮ್ಮೆ ನಾರದ ತಪಸ್ಸಿಗೆ ಕುಳಿತಿದ್ದ. ಯಥಾಪ್ರಕಾರ ಇಂದ್ರ ತಪಸ್ಸು ಕೆಡಿಸಲು ಅಪ್ಸರೆಯನ್ನು ಕಳಿಸಿದ. ಅಪ್ಸರೆ ಕುಣಿದು ಕಾಲು ನೋಯಿಸ್ಕೊಂಡಳೇ ಹೊರತು, ನಾರದನನ್ನು ಜಪ್ಪಯ್ಯ ಅನಿಸಲಾಗಲಿಲ್ಲ. ಸದ್ಯಕ್ಕೆ ಈ ತಾಳ ತಂಬೂರಿಯವನಿಂದ ತನ್ನ ಸಿಂಹಾಸನಕ್ಕೇನೂ ಸಂಚಕಾರವಿಲ್ಲ ಅಂದುಕೊಂಡು ಇಂದ್ರನೂ ಸುಮ್ಮನಾದ.
ಆದರೆ ಈ ಘಟನೆಯಿಂದ ನಾರದನಿಗೆ ಜಂಭ ಬಂತು. ಮಹಾದೇವನೊಬ್ಬನೇ ಅಲ್ಲ, ನಾನೂ ಕಾಮನನ್ನ ಗೆದ್ದಿದೀನಿ, ನಾನೂ ಮಾಯೆಯನ್ನ ಗೆದ್ದಿದೀನಿ ಅಂತ ಬೀಗತೊಡಗಿದ. ತನಗೆ ತಾನೆ ಹೇಳಿಕೊಂಡಿದ್ದಲ್ಲದೆ ಖುದ್ದು ಶಿವನ ಬಳಿಗೂ ಹೋಗಿ ಹೇಳಿ ಬಂದ. ಶಿವ ಪಾರ್ವತಿ ಮುಖಮುಖ ನೋಡಿಕೊಂಡು ಮುಸಿಮುಸಿ ನಕ್ಕರಷ್ಟೇ.
ತನ್ನ ಭಕ್ತನ ಈ ವರಸೆ ಕಂಡು ವಿಷ್ಣುವಿಗೂ ನಗು ಬಂತು. ಗೆದ್ದಿದ್ದೇನೋ ಸರಿಯೇ, ಖುಷಿಯ ವಿಚಾರ. ಆದರೆ ಗೆಲುವನ್ನ ಸೊಕ್ಕಾಗಿಸಿಕೊಂಡು ಮೆರಿಯೋದು ತರವೇ? ಭಕ್ತನ ಭಗವಂತನಿಗೆ ಮತ್ತೇನು ಕೆಲಸ, ಪಾಠ ಕಲಿಸೋದು ಬಿಟ್ಟು!?
ನಾರದ ನಾರಾಯಣ ನಾರಾಯಣ ಅನ್ನುತ್ತ ವೈಕುಂಠಕ್ಕೆ ಕಾಲಿಟ್ಟಾಗ ವಿಷ್ಣು ಎಲ್ಲಿಗೋ ಹೊರಟಿದ್ದ. ನಾರದ ಬಂದವನೇ ತನ್ನ ಗೆಲುವಿನ ಪ್ರವರ ಒಪ್ಪಿಸತೊಡಗಿದ. ವಿಷ್ಣು ಭಕ್ತನ ಬೆನ್ನು ತಟ್ಟಿ, “ಸರಿ ಈಗೊಂದು ರೌಂಡು ಭೂಮಿಗೆ ಹೋಗಿ ಬರೋಣ ಬಾ” ಅಂದ. ನಾರದ ನಾನು ಮಾಯೆ ಗೆದ್ದ ಕಥೆ ಭೂಲೋಕದಲ್ಲೂ ಡಂಗೂರ ಸಾರಬಹುದು ಅಂದುಕೊಂಡು ಮರುಮಾತಾಡದೆ ವಿಷ್ಣುವಿನೊಟ್ಟಿಗೆ ಹೊರಟ.
ಭೂಮಿಕ್ಗೆ ಕಾಲಿಡ್ತಲೇ ದೇವತೆಗಳು ಮರ್ತ್ಯ ಲಕ್ಷಣಗಳನ್ನು ಅಲ್ಪಸ್ವಲ್ಪವಾದರೂ ಪಡೀತಾರಂತೆ. ಆದ್ದರಿಂದ ವಿಷ್ಣುವಿಗೆ ಸ್ವಲ್ಪ ದೂರ ನಡೀತಲೇ ಗಂಟಲೊಣಗಿ ಬಂತು. “ನಾರದಾ, ನೀರು ತಗೊಂಡು ಬಾ” ಅಂದ.
ನಾರದ ಹುಬ್ಬಿನ ಮೇಲೆ ಕೈ ಅಡ್ಡ ಇಟ್ಟು ದೂರದವರೆಗೂ ನಿಟ್ಟಿಸಿ ನೋಡಿದ. ಬಯಲ ನಡೂಮಧ್ಯ ಒಂದು ಬಾವಿ ಕಾಣಿಸಿತು. ನಾರದ ಅದರತ್ತ ಓಡತೊಡಗಿದ. ಹಾಗೂ ಹೀಗೂ ಬಾವಿ ಮುಟ್ಟುವ ಹೊತ್ತಿಗೆ ಸೂರ್ಯ ನೆತ್ತಿಗೇರಿದ್ದ. ಅಲ್ಲಿಯವರೆಗೇನೋ ಬಂದಾಯ್ತು, ನೀರು ಸೇದೋದು ಹೇಗೆ? ತನ್ನ ಕಮಂಡಲು ಬಾವಿ ಹಗ್ಗಕ್ಕೆ ಕಟ್ಟಿ ಇಳಿಸಲು ಬರುವಂಥದಲ್ಲ. ನಾರದ ಜುಟ್ಟು ತಿರುವಿಕೊಳ್ತಾ ನಿಂತ. ಅಷ್ಟೊತ್ತಿಗೆ ಒಬ್ಬಳು ಚೆಂದುಳ್ಳಿ ಹೆಣ್ಣು ಬಿಂದಿಗೆ ಹಿಡಿದು ಬಂದಳು. ನಾರದ ಅವಳನ್ನು ನೋಡಿದವನೇ ತನ್ನ ಕಮಂಡಲಕ್ಕೆ ನೀರು ಹಾಕೆಂದು ಕೇಳಿದ. ಅವಳು ಬಾವಿಯಿಂದ ಸೇದಿ ಸುರಿದಳು. ಬಿಸಿಲು ಸುಡುತ್ತಿತ್ತು. ತಾನೂ ಚೂರು ಕುಡಿದುಬಿಡೋಣವೆಂದು ಬೊಗಸೆಯೊಡ್ಡಿ ಬೆನ್ನು ಬಾಗಿಸಿದ. ಚೆಲುವೆ ಅವನ ಬೊಗಸೆಗೆ ನೀರು ಸುರಿಯತೊಡಗಿದಳು. ನಾರದ ಕಣ್ಣೆತ್ತಿ ಅವಳ ಮುಖವನ್ನೆ ನೋಡಿದ. ಬಿಸಿಲ ಕಾವಿಗೆ ಕೆಂಪಾಗಿದ್ದ ಚೆಲುವಿಯ ಹಣೆ ಮೇಲೆ ಬೆವರ ಸಾಲು ಮುತ್ತಿನಂತೆ ಮಿನುಗುತ್ತಿತ್ತು. ನಾರದನ ಬೊಗಸೆಯಿಂದ ನೀರು ಚೆಲ್ಲಿ ಹೋಗುತ್ತಿತ್ತು. ಕೊಡ ಖಾಲಿಯಾಯಿತು. ಇಬ್ಬರ ಕಣ್ಣಲ್ಲೂ ಪರಸ್ಪರರ ಬಿಂಬಗಳು ತುಂಬಿಕೊಂಡಿದ್ದವು!
ಚೆಲುವೆ ನಾಚಿ ಬಿಂದಿಗೆಯನ್ನೂ ಅಲ್ಲೇ ಬಿಟ್ಟು ಮನೆಯತ್ತ ಹೆಜ್ಜೆ ಹಾಕಿದಳು. ನಾರದ ಅವಳನ್ನೆ ಹಿಂಬಾಲಿಸಿದ. ಮನೆಯಂಗಳದಲ್ಲಿ ಅವಳಪ್ಪ ಕುಳಿತಿದ್ದ. ಕಟ್ಟುಮಸ್ತಾಗಿದ್ದ ನಾರುಡುಗೆಯ ಹುಡುಗನನ್ನು ಮನೆಯಳಿಯ ಮಾಡಿಕೊಂಡ. ದಿನಕಳೆದಂತೆ ನಾರದನಿಗೂ ಚೆಲುವೆಗೂ ಮಕ್ಕಳಾದವು. ಅತ್ತೆ ಮಾವ ಇಬ್ಬರೂ ತೀರಿಕೊಂಡರು. ನಾರದನೀಗ ಕೃಷಿಕ. ಮನೆಯ ಯಜಮಾನನೂ ಅವನೇ.
ಹೀಗಿರುತ್ತ, ಅಕಾಲದಲ್ಲಿ ಜೋರಾಗಿ ಮಳೆ ಸುರಿದು ನೆರೆ ಬಂತು. ನಾರದ – ಚೆಲುವೆಯರ ಊರಿಡೀ ಮುಳುಗುವಷ್ಟು ಹರ್ಮಾಗಾಲ ಮಳೆ! ನಾರದ ಉಕ್ಕಡವೊಂದರ ವ್ಯವಸ್ಥೆ ಮಾಡಿ ಅದರಲ್ಲಿ ಹೆಂಡತಿಯನ್ನೂ ಮೂರು ಮಕ್ಕಳನ್ನೂ ಕೂರಿಸಿದ. ಹಲಗೆ ಮುರಿದು ಹುಟ್ಟುಮಾಡಿಕೊಂಡು ನೀರಲ್ಲಿ ತೇಲಿಸತೊಡಗಿದ.
ಆದರೇನು? ಮಳೆ ಸುರಿದೇ ಸುರಿಯಿತು. ಸಿಡಿಲು ಅಪ್ಪಳಿಸಿ ಉಕ್ಕಡವೇ ಮಗುಚಿಬಿತ್ತು. ಚೆಲುವೆ ಹೆಂಡತಿ, ಮೂರು ಮಕ್ಕಳು ಎಲ್ಲಾ ನೀರುಪಾಲಾದರು. ನಾರದ ಆಕಾಶ ನೋಡುತ್ತ ಕಣ್ಣಿರು ಸುರಿಸುತ್ತಾ “ಚೆಲುವೀ…” ಎಂದು ಕೂಗುತ್ತ ಬಿಕ್ಕಿಬಿಕ್ಕಿ ಅತ್ತು ಸುಸ್ತಾಗಿ ಮಗುಚಿಬಿದ್ದ ಉಕ್ಕಡಕ್ಕೆ ಕಣ್ಣುಮುಚ್ಚಿ ಒರಗಿದ.
“ನಾರದಾ, ನೀರೆಲ್ಲಿ?” ಯಾರೋ ಕೂಗಿದಂತಾಯ್ತು. ಕಣ್ತೆರೆದ. ನೆರೆಯೂ ಇಲ್ಲ, ಉಕ್ಕಡವೂ ಇಲ್ಲ, ಊರೂ ಇಲ್ಲ, ಬಟಾಬಯಲು! ಹಿಂದಿನಿಂದ ದನಿಯೊಂದು ಕೇಳುತ್ತಲೇ ಇದೆ, “ನಾರದಾ, ನೀರೆಲ್ಲಿ!?”
ನಾರದ “ಚೆಲುವೆ… ಮಕ್ಕಳು…” ಅಂತ ಕನವರಿಸುತ್ತ ಹಿಂದೆ ತಿರುಗಿದ. ಅಲ್ಲಿ ವಿಷ್ಣು ಗಂಟಲು ನೀವಿಕೊಳ್ಳುತ್ತ ನಿಂತಿದ್ದ. ನಾರದನ ಕಮಂಡಲದತ್ತ ಕೈಚಾಚಿ “ನೀರು ಕೊಡು ನಾರದಾ” ಅಂದ.
ಭಗವಂತನ ತುಟಿಯಂಚಲ್ಲಿದ್ದ ತುಂಟ ನಗು ಕಂಡೇ ನಾರದನಿಗೆ ನಾಚಿಕೆಯಾಗಿಹೋಯ್ತು. ಇಷ್ಟೊತ್ತೂ ನಡೆದಿದ್ದೆಲ್ಲ ಮಾಯೆಯಾಟ ಎಂದು ಅರಿವಾಯ್ತು. ನಿಂತನಿಂತಲ್ಲೇ ಕಲಿತ ಪಾಠಕ್ಕೆ ನಮ್ರನಾಗಿ ಮಂಡಿಯೂರಿ ಕುಳಿತ. ಆ ಕ್ಷಣವೇ ತನ್ನೆಲ್ಲಾ ಸೊಕ್ಕಡರಿ ವಿಷ್ಣುವಿನ ಬಳಿಯೂ ಮಹಾದೇವನ ಬಳಿಯೂ ಮನಸಾರೆ ಕ್ಷಮೆ ಬೇಡಿದ.
ಧನ್ಯವಾದ…