ಅರಳಿಮರ ನಾಲ್ಕು ವರ್ಷಗಳನ್ನು ಪೂರೈಸಿ ಐದನೇ ವರ್ಷಕ್ಕೆ ಕಾಲಿಡುತ್ತಿದೆ…
ಅಧ್ಯಾತ್ಮ, ವಿಕಸನ ಮತ್ತು ಜೀವನಶೈಲಿಗೆ ಸಂಬಂಧಿಸಿದ ಲೇಖನಗಳಿಗೆಂದೇ ರೂಪಿಸಲಾದ ಪತ್ರಿಕೆ ‘ಅರಳಿಮರ’. 2018ರ ಫೆಬ್ರವರಿ 13ರ ನಡುರಾತ್ರಿ (ಆ ವರ್ಷ, ಆ ದಿನ ಶಿವರಾತ್ರಿ ಜಾಗರಣೆ) ಆರಂಭಗೊಂಡ ಅರಳಿಮರ ಜಾಲತಾಣ ಇಂದು 5ನೇ ವರ್ಷಕ್ಕೆ ಕಾಲಿಡುತ್ತಿದೆ.
ಜಾಲತಾಣಕ್ಕೆ ಹೆಸರಿಡುವಾಗ ಭಾರತದ ಜನಜೀವನ ಮತ್ತು ಸಂಸ್ಕೃತಿಯೊಡನೆ ಹಾಸುಹೊಕ್ಕಾಗಿರುವ, ಅಧ್ಯಾತ್ಮದ ಸಂಕೇತವಾಗಿರುವ ‘ಅರಳಿಮರ’ವನ್ನೇ ಆಯ್ದುಕೊಂಡೆವು. ಅದರ ಜೊತೆಗೆ ‘ಹೃದಯದ ಮಾತು’ ಟ್ಯಾಗ್ ಲೈನ್ ಬಹಳ ಎಚ್ಚರದಿಂದ ಆಯ್ದು ಇರಿಸಿದ್ದು.
ಹೃದಯ – ಪದಕ್ಕೆ ಎರಡು ಅರ್ಥಗಳಿವೆ. ಮೊದಲನೆಯದು ನಮಗೆಲ್ಲ ತಿಳಿದಿರುವ ಹಾಗೆ ಎದೆಗೂಡು. ನಮ್ಮ ಜೀವ ಕಾಯ್ದಿಡುವ ನಮ್ಮ ದೇಹದ ಬಹುಮುಖ್ಯ ಅಂಗ. ಹಾಗೆಯೇ, ಹೃದಯ ಅಂದರೆ ಮನಸ್ಸು ಕೂಡಾ. ಮತ್ತು ಆಧ್ಯಾತ್ಮಿಕವಾಗಿ ಈ ಹೃದಯ ಇರುವುದು ಎದೆಭಾಗದಲ್ಲಿ ಅಲ್ಲ, ಇದು ಇರುವುದು ಸಹಸ್ರಾರದಲ್ಲಿ! ಆದ್ದರಿಂದ ನಮ್ಮ ಮಾತು ಮನಸ್ಸಿನ ಮಾತು. ಮನಸ್ಸೆಂದರೆ ಲೌಕಿಕ ಭಾವನೆಗಳಿಗೆ ಸ್ಪಂದಿಸುವ ಮನಸ್ಸಲ್ಲ. ಇದು ಸತ್ ಚಿತ್ ಆನಂದವನ್ನು ಬಯಸುವ ಮನಸ್ಸು. ಅದಕ್ಕೆ ಸ್ಪಂದಿಸುವ ಮನಸ್ಸು. ಈ ಹೃದಯದ ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆಂಬುದೇ ನಮ್ಮ ಉದ್ದೇಶವಾಗಿತ್ತು.
ಹೇಗಿರುತ್ತವೆ ಈ ಹೃದಯದ ಮಾತುಗಳು? ಅಧ್ಯಾತ್ಮ, ಸಹಸ್ರಾರ ಅಂತೆಲ್ಲ ಅಂದಕೂಡಲೇ ವಿಚಾರಗಳ ವಜ್ಜೆಯಲ್ಲಿ ಕುಸಿದುಹೋಗಬೇಕೆಂದಿಲ್ಲ! ಅಧ್ಯಾತ್ಮ ನಮ್ಮ ಮೇಲೆ ಭಾರ ಹೊರಿಸುವುದೂ ಇಲ್ಲ. ಅಧ್ಯಾತ್ಮ ನಮ್ಮನ್ನು ಹಗುರಗೊಳಿಸುವುದು. ಹೆಸರು ಗುರುತುಗಳ, ಸ್ವಾರ್ಥ ಲೋಭಗಳ ಎಲ್ಲ ಹೊರಗಳನ್ನೂ ಇಳಿಸಿ ಹಗುರಗೊಳಿಸುವುದು. ಭವಬಂಧನದ ಸಂಕೋಲೆಗಳಿಂದ ಮುಕ್ತಗೊಳಿಸಿ ಹಗುರಾಗಿ ಹಾರಿಸುವುದು.
ಆದರೆ, ದೈನಂದಿನ ಬದುಕಿಗೆ ಇದು ಸಲ್ಲುವುದೇ? ಹೀಗೆ ಹಗುರಾಗಿ, ಆನಂದದಲ್ಲಿ ಮುಳುಗಿಹೋದರೆ ನಮ್ಮ ಹೊಟ್ಟೆ ಬಟ್ಟೆಗೇನು ಮಾಡೋದು? ಕಾಯಕವೇ ಕೈಲಾಸ – ಶರಣರು ಹೇಳಿದ್ದಾರೆ. ಕರ್ಮಣ್ಯೇ ವಾಧಿಕಾರಸ್ತೇ – ಭಗವದ್ಗೀತೆ ಹೇಳಿದೆ. ಜಗತ್ತಿನ ಯಾವ ಧರ್ಮವೂ ನಮಗೆ ಸೋಮಾರಿಯಾಗಿರಿ, ಆನಂದವಾಗಿದ್ದರೆ ಸಾಕು ಅಂತ ಹೇಳೋದಿಲ್ಲ. ಚಾರ್ವಾಕರು ‘ಸಾಲ ಮಾಡಿಯಾದರೂ ತುಪ್ಪ ತಿನ್ನು’ ಅಂದಿದ್ದಾರಲ್ಲವೇ ಅನ್ನಬಹುದು ನೀವು! ಆದರೆ ಸಾಲ ಮಾಡುವುದು ಕೂಡಾ ಒಂದು ‘ಮಾಡುವಿಕೆ’. ಸಾಲ ಪಡೆದಾದ ಮೇಲೆ ಅದನ್ನು ತೀರಿಸಲಾದರೂ ದುಡಿಯಬೇಕು. ತೀರಿಸದೆ ಹೋದರೆ ಆಮೇಲೆ ಶಿಕ್ಷೆಯ ದಂಡ ಕಟ್ಟಲಾದರೂ ದುಡಿಯಲೇಬೇಕು! ಇರಲಿ, ಅಧ್ಯಾತ್ಮ ನಮ್ಮನ್ನು ವ್ಯವಹಾರ ವಿಮುಖವಾಗಿಸುವುದು ಅನ್ನುವ ಭಯ ಬೇಡ. ಅಧ್ಯಾತ್ಮ ನಮ್ಮ ವ್ಯವಹಾರವನ್ನು ಶುದ್ಧ, ಪಾರದರ್ಶಕ ಮತ್ತು ಕೆಲಸಕ್ಕಾಗಿ ಕೆಲಸವೇ ಹೊರತು ಲೋಭಕ್ಕಲ್ಲ – ಅನ್ನುವ ಅರಿವು ನೀಡುವುದು. ಅಧ್ಯಾತ್ಮ ನಮ್ಮ ಪ್ರೇಮವನ್ನು ಸಂಕುಚಿತ ಬಂಧನದಿಂದ ಬಿಡುಗಡೆಗೊಳಿಸಿ ಮುಕ್ತವಾಗಿಸುವುದು. ಅಧ್ಯಾತ್ಮ ನಮ್ಮ ಕಾಮವನ್ನು ಶೃಂಗಾರಕ್ಕೆ ಸೀಮಿತವಾಗಿರಿಸಿ, ವಿಕೃತಿಯಿಂದ ಹೊರಗೆತೆಗೆಯುವುದು. ಅಧ್ಯಾತ್ಮ ನಮ್ಮ ವ್ಯವಹಾರವನ್ನು ‘ವೃತ್ತಿಧರ್ಮ’ ಮತ್ತು ‘ಕರ್ಮ’ವಾಗಿಸಿ ಸ್ವಾರ್ಥ-ಲೋಭಾದಿಗಳಿಂದ ಮುಕ್ತವಾಗಿಸುವುದು.
ಆದ್ದರಿಂದ, ಅಧ್ಯಾತ್ಮಕ್ಕೆ, ಹಗುರಾಗಲಿಕ್ಕೆ ಭಯ ಪಡಬೇಡಿ. ಇಷ್ಟಕ್ಕೂ ದಿನಕ್ಕೆ ಇಬ್ಬರು ಸಂತರ ಕಥೆ ಅಥವಾ ಹೇಳಿಕೆ ಓದಿಬಿಟ್ಟರೆ ನಾವು ಸಹಸ್ರಾರ ಒಡೆದು ಮೋಕ್ಷಕ್ಕೆ ಸಂದುಬಿಡುವುದೂ ಇಲ್ಲ! ಅದು ಬಹಳ ಸಾಧನೆ ಬೇಡುವ ಸಂಗತಿ. ಅಧ್ಯಾತ್ಮ ನಮ್ಮ ದೈನಂದಿನ ಬದುಕಿನಲ್ಲಿ ಎದುರಾಗುವ, ಆವರಿಸಿಕೊಳ್ಳುವ ನಕಾರಾತ್ಮಕ ಚಿಂತನೆಗಳನ್ನು ಸರಿಸುವುದು. ನಾವು ಅವೆಲ್ಲದರಿಂದ ಪ್ರಭಾವಿತರಾಗದಂತೆ ನಮ್ಮನ್ನು ಕಾಯುವುದು. ನಾವು ಸಕಾರಾತ್ಮಕ ಚಿಂತನೆಗೆ ನಮ್ಮನ್ನು ಒಡ್ಡಿಕೊಳ್ಳುತ್ತಾ ಹೋದರೆ ಎಲ್ಲ ತರತಮವಳಿದು ಸಚ್ಚಿದಾನಂದದ ರುಚಿ ನಮಗೂ ಕ್ರಮೇಣ ಹತ್ತತೊಡಗುವುದು.
ಈ ರುಚಿಯ ಚಿಕ್ಕದೊಂದು ಹನಿಯ ಕಣ ನಿಮ್ಮ ಮುಂದಿಡುವ ಪ್ರಯತ್ನವಷ್ಟೇ ನಮ್ಮದು. ಈ ಕೆಲಸವನ್ನು ವೇದೋಪನಿಷತ್ತು, ಬುದ್ಧ ಚಿಂತನೆ, ಕುರಾನ್, ಬೈಬಲ್, ನಾನಕ್, ಸೂಫಿ, ಝೆನ್, ಕೊನೆಗೆ ಹಾಸ್ಯಚಟಾಕಿಯ ನಸ್ರುದ್ದೀನ್ – ಈ ಎಲ್ಲರ ಮೂಲಕ ನುಮಗೆ ತಲುಪಿಸುವುದೇ ನಮಗೊಂದು ಸಂಭ್ರಮ. ನೀವಿದನ್ನು ಮೆಚ್ಚಿಕೊಂಡಿರುವುದು ನಮಗೆ ಮತ್ತಷ್ಟು ಕಾಲ ನಡೆಸಲು ಕಸುವು ತುಂಬಿದೆ. ಈ ನಿಟ್ಟಿನಲ್ಲಿ ಅರಳಿ ಬಳಗದ ಬರಹಗಾರರು ಪ್ರತಿದಿನ ಕೆಲಸ ಮಾಡುತ್ತಿದ್ದಾರೆ. ಈ 5ನೇ ವರ್ಷಕ್ಕೆ ಮತ್ತಷ್ಟು ಹೊಸ ಸಂಗತಿಗಳನ್ನು ಅರಳಿಮರ ಜಾಲತಾಣಕ್ಕೆ ಸೇರಿಸುವ ಇರಾದೆ ಇದೆ. ಎಂದಿನಂತೆ ನಿಮ್ಮೆಲ್ಲರ ಬೆಂಬಲ ಮತ್ತು ಪ್ರೋತ್ಸಾಹ ನಮ್ಮ ಜೊತೆಗಿರಲೆಂದು ಆಶಿಸುತ್ತೇವೆ.
‘ಅರಳಿಮರ’ ಜಾಲತಾಣಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗೆ ನೀಡಿರುವ QR Code ಅನ್ನು scan ಮಾಡಿ. ನಮ್ಮ ಈ ಲಾಭರಹಿತ – ನಷ್ಟಸಹಿತ ಪ್ರಯತ್ನಕ್ಕೆ ನಿಮ್ಮ ಸಹಕಾರವಿರಲಿ. ಧನ್ಯವಾದ.

ಪ್ರೀತಿಯಿಂದ, ಅರಳಿ ಬಳಗ