ಯಾವುದು ಧ್ಯಾನ? : ಓಶೋ ವ್ಯಾಖ್ಯಾನ

ನೀವು ಏನನ್ನಾದರೂ ಮಾಡುತ್ತಿದ್ದರೆ ಅದು ಧ್ಯಾನ ಅಲ್ಲ. ನೀವು ಎಲ್ಲೋ ದೂರ ಪ್ರಯಾಣ ಮಾಡುತ್ತಿದ್ದೀರಿ. ನೀವು ಪ್ರಾರ್ಥನೆ ಮಾಡುತ್ತಿರುವಿರಾದರೆ ಅದು ಧ್ಯಾನ ಅಲ್ಲ. ನೀವು ದೇವರನ್ನು ಹುಡುತ್ತಿರುವಿರಾದರೆ ಅದು ಧ್ಯಾನ ಅಲ್ಲ. ಕೊನೆಗೆ ನೀವು ಧ್ಯಾನ ಮಾಡುತ್ತಿದ್ದೀರಾದರೆ ಅದೂ ಧ್ಯಾನ ಅಲ್ಲ! ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ

ಒಂದು ಝೆನ್ ಕಥೆ ಹೇಳುತ್ತೇನೆ ಕೇಳಿ.

ಮೂವರು ಆತ್ಮೀಯ ಗೆಳೆಯರು ರಸ್ತೆಯ ಮೇಲೆ ಎಲ್ಲೋ ಹೊರಟ್ಟಿದ್ದರು. ಇನ್ನೇನು ಸಂಜೆಯಾಗುವುದಿತ್ತು, ಪಶ್ಚಿಮದಲ್ಲಿ ಸೂರ್ಯ ಕೆಂಪಾಗಿ ಕೆಳಗಿಳಿಯುತ್ತಿದ್ದ. ಆಗಲೇ ಗೆಳೆಯರು ಹತ್ತಿರದ ಬೆಟ್ಟದ ಮೇಲೆ ನಿಂತಿದ್ದ ಒಬ್ಬ ಸನ್ಯಾಸಿಯನ್ನ ಗಮನಿಸಿದರು. ಅಲ್ಲಿ ಆ ಸನ್ಯಾಸಿ ನಿಂತಿರುವುದು ಯಾಕೆ ಎಂದು ಗೆಳೆಯರ ನಡುವೆ ಚರ್ಚೆ ಶುರುವಾಯಿತು.

ಮೊದಲನೇಯ ಗೆಳೆಯ ಹೇಳಿದ, ಬಹುಶಃ ಆ ಸನ್ಯಾಸಿ ತನ್ನ ಗೆಳೆಯನಿಗಾಗಿ ಕಾಯುತ್ತಿದ್ದಾನೆ. ಇಬ್ಬರೂ ಸಂಜೆಯ ವಿಹಾರಕ್ಕೆ ಬಂದಿರಬಹುದು, ಗೆಳೆಯ ಇವನನ್ನು ಹಿಂದೆ ಬಿಟ್ಟು ಹೋಗಿಬಿಟ್ಟಿದ್ದಾನೆ. ಸನ್ಯಾಸಿ ಬಹುತೇಕ ತನ್ನ ಗೆಳೆಯ ವಾಪಸ್ಸಾಗುವುದನ್ನೇ ಕಾಯುತ್ತಿದ್ದಾನೆ.

ಇನ್ನೊಬ್ಬ ಗೆಳೆಯ ಹೇಳಿದ, ಇಲ್ಲ ಹಾಗಿರಲಿಕ್ಕಿಲ್ಲ. ಯಾರಿಗಾದರೂ ಕಾಯುತ್ತಿದ್ದಾನಾದರೆ ಒಮ್ಮೆಯಾದರೂ ಹಿಂತಿರುಗಿ ನೋಡಬೇಕಿತ್ತು. ಅವನು ಒಮ್ಮೆಯೂ ಹಿಂತಿರುಗಿ ನೋಡಲಿಲ್ಲ, ಹಾಗಾಗಿ ಅವನು ಯಾರಿಗಾಗಿಯೂ ಕಾಯುತ್ತಿಲ್ಲ. ನನ್ನ ಪ್ರಕಾರ ಆ ಸನ್ಯಾಸಿ ತನ್ನ ಆಕಳನ್ನು ಕಳೆದುಕೊಂಡಿದ್ದಾನೆ. ಸಂಜೆಯಾಗುತ್ತಿದೆ, ಸೂರ್ಯ ಮುಳುಗುತ್ತಿದ್ದಾನೆ ಅವನು ಆಕಳು ಬೆಟ್ಟ ಇಳಿದು ಬರಬಹುದೆಂಬ ನಿರೀಕ್ಷೆಯಲ್ಲಿ ಅವನು ಸುತ್ತಲಿನ ಕಾಡನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆ.

ಮೂರನೇಯ ಗೆಳೆಯ ಹೇಳಿದ, ಇಲ್ಲ ನನಗೆ ಹಾಗೆ ಅನಿಸುವುದಿಲ್ಲ, ಅವನು ಅಲುಗಾಡದೇ ಕಣ್ಣು ಮುಚ್ಚಿಕೊಂಡು ನಿಂತಿರುವುದನ್ನ ನೋಡಿದರೆ ಬಹುಶಃ ಅವನು ಪ್ರಾರ್ಥನೆ ಮಾಡುತ್ತಿದ್ದಾನೆ ಅಥವಾ ಧ್ಯಾನ ಮಾಡುತ್ತಿದ್ದಾನೆ.ಅವನು ತನ್ನ ಆಕಳನ್ನು ಹುಡುಕುತ್ತಿಲ್ಲ ತನ್ನ ಗೆಳೆಯನಿಗಾಗಿ ಕಾಯುತ್ತಲೂ ಇಲ್ಲ ಅವನು ತನ್ನ ಸಂಜೆಯ ಧ್ಯಾನದಲ್ಲಿದ್ದಾನೆ.

ಗೆಳೆಯರು ಎಷ್ಟು ಚರ್ಚೆ ಮಾಡಿದರೂ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಕೊನೆಗೆ ಅವರು ಬೆಟ್ಟ ಹತ್ತಿ ಆ ಸನ್ಯಾಸಿಯನ್ನೇ ಕೇಳುವುದೆಂದು ತೀರ್ಮಾನ ಮಾಡಿದರು. ಮೂವರೂ ಗೆಳೆಯರು ಬೆಟ್ಟ ಹತ್ತಿ ಸನ್ಯಾಸಿಯ ಹತ್ತಿರ ಹೋಗಿ ಮಾತನಾಡಿಸಿದರು.

ನೀವು ನಿಮ್ಮ ಗೆಳೆಯ ವಾಪಸ್ ಬರುವದನ್ನ ಕಾಯುತ್ತೀರಿ ಅಲ್ಲವ? ಮೂದಲ ಗೆಳೆಯ ಪ್ರಶ್ನೆ ಮಾಡಿದ. ಸನ್ಯಾಸಿ ತನ್ನ ಕಣ್ಣು ತೆರೆದು ಉತ್ತರಿಸಿದ “ ನಾನು ಯಾರಿಗೂ ಕಾಯುತ್ತಿಲ್ಲ. ಕಾಯಲು ನನಗೆ ಗೆಳೆಯರೂ ಇಲ್ಲ ವೈರಿಗಳೂ ಇಲ್ಲ. “ ಇಷ್ಟು ಹೇಳಿ ಸನ್ಯಾಸಿ ಮತ್ತೆ ಕಣ್ಣು ಮುಚ್ಚಿಕೊಂಡ.

ಹಾಗಾದರೆ ನೀವು ಕಾಡಿನಲ್ಲಿ ಕಳೆದು ಹೋಗಿರುವ ನಿಮ್ಮ ಆಕಳನ್ನು ಹುಡುಕುತ್ತಿದ್ದೀರಿ ಅಲ್ಲವೆ? ಎರಡನೇಯ ಗೆಳೆಯ ಸನ್ಯಾಸಿಯನ್ನ ಪ್ರಶ್ನೆ ಮಾಡಿದ. “ ಇಲ್ಲ ನಾನು ಯಾರಿಗಾಗಿಯೂ ಕಾಯುತ್ತಿಲ್ಲ, ಏನನ್ನೂ ಹುಡುಕುತ್ತಿಲ್ಲ “ ಇಷ್ಟು ಉತ್ತರಿಸಿ ಸನ್ಯಾಸಿ ಮತ್ತೆ ಕಣ್ಣು ಮುಚ್ಚಿಕೊಂಡ.

ಹಾಗಾದರೆ ಖಂಡಿತವಾಗಿ ಪ್ರಾರ್ಥನೆ ಮಾಡುತ್ತಿದ್ದೀರಿ ಅಥವಾ ಯಾವುದೋ ಒಂದು ರೀತಿಯ ಧ್ಯಾನ ಮಾಡುತ್ತಿದ್ದೀರಿ ಅಲ್ಲವೆ? ಮೂರನೇ ಗೆಳೆಯ ಸನ್ಯಾಸಿಯನ್ನ ಮಾತಿಗೆಳೆದ.

ಸನ್ಯಾಸಿ ಕಣ್ಣು ತೆರೆದು ಉತ್ತರಿಸಿದ, “ ಇಲ್ಲ ನಾನು ಯಾರಿಗಾಗಿಯೂ ಕಾಯುತ್ತಿಲ್ಲ, ಏನನ್ನೂ ಹುಡುಕುತ್ತಿಲ್ಲ, ಯಾವ ಧ್ಯಾನವನ್ನೂ ಮಾಡುತ್ತಿಲ್ಲ. ಸುಮ್ಮನೇ ಇಲ್ಲಿ ನಿಂತಿರುವೆ ಸುಮ್ಮನೇ. ನಾನು ಏನೂ ಮಾಡುತ್ತಿಲ್ಲ ಸುಮ್ಮನೇ ಇಲ್ಲಿರುವೆ. “

ಇದನ್ನೇ ಬೌದ್ಧರು ಧ್ಯಾನ ಎನ್ನುತ್ತಾರೆ. ನೀವು ಏನನ್ನಾದರೂ ಮಾಡುತ್ತಿದ್ದರೆ ಅದು ಧ್ಯಾನ ಅಲ್ಲ. ನೀವು ಎಲ್ಲೋ ದೂರ ಪ್ರಯಾಣ ಮಾಡುತ್ತಿದ್ದೀರಿ. ನೀವು ಪ್ರಾರ್ಥನೆ ಮಾಡುತ್ತಿರುವಿರಾದರೆ ಅದು ಧ್ಯಾನ ಅಲ್ಲ. ನೀವು ದೇವರನ್ನು ಹುಡುತ್ತಿರುವಿರಾದರೆ ಅದು ಧ್ಯಾನ ಅಲ್ಲ. ಕೊನೆಗೆ ನೀವು ಧ್ಯಾನ ಮಾಡುತ್ತಿದ್ದೀರಾದರೆ ಅದು ಧ್ಯಾನ ಅಲ್ಲ.

Leave a Reply