ಮಹಾ ಪ್ರೇಮಿ ಆರ್ಫಿಯಸನ ದುರಂತ ಕಥೆ   

ಆರ್ಫಿಯಸನಿಗೆ ಯೂರಿಡೈಸ್ ತನ್ನ ಹಿಂದೆ ಬರುತ್ತಿದ್ದಾಳೋ ಇಲ್ಲವೋ ಎಂಬ ಅನುಮಾನ ಶುರುವಾಯಿತು. ದೇವದಂಪತಿಗಳ ಎಚ್ಚರಿಕೆ ನೆನಪಾದರೂ ಇನ್ನೇನು ಹೆಬ್ಬಾಗಿಲು ತಲುಪಲು ನಾಲ್ಕೇ ಹೆಜ್ಜೆ ಎಂದು ಉಡಾಫೆ ಮಾಡಿದ. ಹಿಂತಿರುಗಿ ನೋಡಿದ. ಆಗ… । ಸಂಗ್ರಹ ಮತ್ತು ಅನುವಾದ : ಚೇತನಾ 

ರ್ಫಿಯಸ್, ಕಾವ್ಯ ಮತ್ತು ಸಂಗೀತದ ಅಧಿದೇವತೆ ಅಪಾಲೋನಿಗೆ ವಿದ್ಯಾಭಿಮಾನಿ ದೇವತೆ ಕಲಿಯೋಪಿಯಲ್ಲಿ ಹುಟ್ಟಿದವನು. ಆರ್ಫಿಯಸ್’ನ ಮೇಲೆ ವಿಶೇಷ ಪ್ರೀತಿಯನ್ನು ಹೊಂದಿದ್ದ ಅಪಾಲೋ ಅವನಿಗೊಂದು ದಿವ್ಯ ಲೈರ್ ವಾದ್ಯವನ್ನು ನೀಡಿದ್ದ. ಕಲಿಯೋಪಿಯು ಅವನಿಗೆ ಅದನ್ನು ನುಡಿಸಲು ಕಲಿಸಿಕೊಟ್ಟಳು. ಬಾಲ್ಯದಲ್ಲಿಯೇ ಆರ್ಫಿಯಸ್ ಲೈರ್ ವಾದನದಲ್ಲಿ ಮತ್ತು ಕವಿತೆ ಕಟ್ಟಿ ಹಾಡುವುದರಲ್ಲಿ ವಿಶೇಷ ಪರಿಣತಿ ಸಾಧಿಸಿದ. ಅವನು ಅದೆಷ್ಟು ತಲ್ಲೀನನಾಗಿ ಲೈರ್ ನುಡಿಸುತ್ತ ಹಾಡುತ್ತಿದ್ದನೆಂದರೆ, ಅದರ ಮೋಹಕ ನಾದಕ್ಕೆ ಸುತ್ತಮುತ್ತಲಿನ ಜನರೂ ಪ್ರಾಣಿ ಪಕ್ಷಿಗಳೂ ನಿಂತಲ್ಲೇ ಮೈಮರೆತು ಸ್ತಬ್ದವಾಗಿಬಿಡುತ್ತಿದ್ದರು.

ಆರ್ಫಿಯಸ್ ಯೌವನಕ್ಕೆ ಕಾಲಿಟ್ಟಾಗ ಯೂರಿಡೈಸಳ ಪರಿಚಯವಾಯಿತು. ಅವಳೊಬ್ಬ ಅಪ್ಸರೆ. ಪರಿಚಯ ಪ್ರೇಮಕ್ಕೆ ತಿರುಗಿ ಅವರಿಬ್ಬರೂ ಮದುವೆಯಾದರು. ಅವರಿಬ್ಬರದು ಅನ್ಯೋನ್ಯ ದಾಂಪತ್ಯ. ಆರ್ಫಿಯಸ್ ತನ್ನ ಹೆಂಡತಿಯನ್ನು ಜೀವದಂತೆ ಪ್ರೇಮಿಸುತ್ತಿದ್ದ. ಕಣ್ಣರೆಪ್ಪೆಯಲ್ಲಿಟ್ಟುಕೊಂಡು ಸಲಹುತ್ತಿದ್ದ.

ಯೂರಿಡೈಸ್ ಪರಮ ಸುಂದರಿ. ಒಮ್ಮೆ ಆರ್ಫಿಯಸ್ ಮನೆಗೆ ಭೇಟಿ ನೀಡಿದ ಅರಿಸ್ಟೀಯಸ್ ಅವಳನ್ನು ನೋಡಿ ಮೋಹಗೊಂಡ. ಈತ ಅಪಾಲೋ ದೇವತೆಗೆ ಸೈರೀನಿ ಎಂಬ ಸುಂದರಿಯಲ್ಲಿ ಹುಟ್ಟಿದ ಮಗ. ಅರಿಸ್ಟೀಯಸ್, ಏನಾದರೂ ಮಾಡಿ ಯೂರಿಡೈಸಳನ್ನು ಅಪಹರಿಸಿ ತನ್ನವಳನ್ನಾಗಿ ಮಾಡಿಕೊಳ್ಳಬೇಕು ಎಂದು ಯೋಚಿಸಿದ. ಅದಕ್ಕೆ ಮೊದಲು ಅವಳ ಬಳಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡ. ಆರ್ಫಿಯಸ್’ನನ್ನು ಪ್ರಾಣದಂತೆ ಪ್ರೀತಿಸುತ್ತಿದ್ದ ಯೂರಿಡೈಸ್ ಆತನನ್ನು ತಿರಸ್ಕರಿಸಿ ನಿಂದಿಸಿದಳು. ಕೋಪಗೊಂಡ ಅರಿಸ್ಟೀಯಸ್ ಅವಳನ್ನು ಎತ್ತಿಕೊಂಡು ಹೋಗಲು ಮುಂದಾದ. ತಪ್ಪಿಸಿಕೊಳ್ಳಲು ಯೂರಿಡೈಸ್ ಓಡಿದಳು. ಓಡುತ್ತಾ ಮನೆಯಿಂದ ಹೊರಗೆ ಬಂದಳು. ಕಾಡು ಹೊಕ್ಕಳು. ಅರಿಸ್ಟೀಯಸ್ ಬೆನ್ನಟ್ಟಿದ್ದ. ಅವಳು ಮತ್ತೂ ಓಡಿದಳು. ಓಡುವ ಭರದಲ್ಲಿ ಗಮನಿಸದೆ ವಿಷಪೂರಿತ ಹಾವೊಂದನ್ನು ಮೆಟ್ಟಿಬಿಟ್ಟಳು. ಆ ಹಾವು ಕ್ರೋಧದಿಂದ ಹೆಡೆಯೆತ್ತಿ ಅವಳನ್ನು ಕುಕ್ಕಿತು. ಯೂರಿಡೈಸ್ ಅಲ್ಲಿಯೇ ಕುಸಿದು ಬಿದ್ದು ಸತ್ತುಹೋದಳು.

ಆರ್ಫಿಯಸ್’ಗೆ ತನ್ನ ಹೆಂಡತಿಯ ಸಾವಿನ ಸುದ್ದಿ ಕೇಳಿ ಹುಚ್ಚು ಹಿಡಿಯುವುದು ಬಾಕಿ. ಅವನು ಅವಳ ಶವದ ಬಳಿ ಓಡಿ ಬಂದ. ಎದೆ ಬಡಿದುಕೊಂಡು ದುಃಖಿಸಿದ. ಮದುವೆಯಾಗಿ ಇನ್ನೂ ವರ್ಷ ತುಂಬಿರಲಿಲ್ಲ. ತನ್ನ ಪ್ರೀತಿ ಸತ್ತುಬಿದ್ದಿದೆ! ಈ ಸಾವನ್ನು ಸಹಿಸುವುದು ಸಾಧ್ಯವಿಲ್ಲ. ಏನಾದರೂ ಮಾಡಿ ಹೆಂಡತಿಯ ಜೀವ ಮರಳಿ ತರುತ್ತೇನೆ ಎಂದು ನಿಶ್ಚಯಿಸಿದ.

ಅದರಂತೆ ಆರ್ಫಿಯಸ್ ಅಧೋಲೋಕಕ್ಕೆ ಹೊರಟ. ದಾರಿಯಲ್ಲಿ ಅವನು ಸ್ಟಿಕ್ಸ್ ನದಿಯನ್ನು ದಾಟಬೇಕಿತ್ತು. ಅದನ್ನು ದಾಟಿಸಲು ಕೇರನ್ ಎಂಬ ಅಂಬಿಗ ದೋಣಿಯಲ್ಲಿ ಹುಟ್ಟು ಹಿಡಿದು ಕುಳಿತಿರುತ್ತಾನೆ. ಆದರೆ ಅವನಿಗೆ ಹಣ ಕೊಡುವುದು ಕಡ್ಡಾಯ. ಆದರೆ,  ಹೊರಡುವ ಧಾವಂತದಲ್ಲಿ ಆರ್ಫಿಯಸ್ ಬರಿಗೈಲಿ ಬಂದಿದ್ದ. ಲೈರ್ ವಾದ್ಯವೊಂದು ಅವನ ಬಗಲಲ್ಲಿ ನೇತಾಡುತ್ತಿತ್ತು. ಹಣವಿಲ್ಲವೆಂದು ಹೇಳು ವಾದ್ಯ ನುಡಿಸತೊಡಗಿದ. ಮಂತ್ರಮುಗ್ಧನಾದ ಕೇರನ್ ಮರುಮಾತಿಲ್ಲದೆ ಅವನನ್ನು ಸ್ಟಿಕ್ಸ್ ನದಿ ದಾಟಿಸಿದ.

ಆರ್ಫಿಯಸ್ ಹಾಡುತ್ತಾ, ವಾದ್ಯ ನುಡಿಸುತ್ತಾ ಮುನ್ನಡೆದ. ಅವನ ಸಂಗೀತದ ಮೋಡಿಗೆ ಸಿಲುಕಿದ ಪ್ರೇತಾತ್ಮಗಳೆಲ್ಲ ಕ್ಷಣ ಕಾಲ ತಮಗೆ ನೀಡಲಾದ ಶಿಕ್ಷೆಯನ್ನು ಮರೆತು ಆನಂದಿಸಿದವು. ಹೀಗೆ ಮುನ್ನಡೆದ ಆರ್ಫಿಯಸ್ ಅಧೋಲೋಕದ ಅಧಿಪತಿ ಹೇಡೀಸನ ಅರಮನೆ ತಲುಪಿದ. ಆ ದೇವದಂಪತಿಗಳ ಮುಂದೆ ವಾದ್ಯ ನುಡಿಸುತ್ತಾ ತನ್ನ ದಾರುಣ ಕಥೆಯನ್ನು ಹಾಡಿದ. ಹೇಡಿಸ್ – ಪರ್ಸೆಫನಿ ದೇವದಂಪತಿಗಳು ಕರಗಿಹೋದರು. ಏನಾಗಬೇಕು ನಿನಗೆ ಎಂದು ಕೇಳಿದರು. ಆರ್ಫಿಯಸ್, “ನಾನು ಬಹಳವಾಗಿ ಪ್ರೀತಿಸುವ ನನ್ನ ಹೆಂಡತಿ ಹಾವು ಕಚ್ಚಿ ಸತ್ತುಹೋದಳು. ಮದುವೆಯಾಗಿ ಕೆಲದಿನಗಳನ್ನಷ್ಟೆ ಜೊತೆಯಾಗಿ ಕಳೆದಿದ್ದೆವು. ಅವಳ ಆಯಸ್ಸು ತೀರಿದ ಮೇಲೆ ಹೇಗೂ ಇಲ್ಲಿಗೆ ಬರಲೇಬೇಕು. ದಯವಿಟ್ಟು ಅವಳನ್ನು ಈಗ ನನ್ನೊಡನೆ ಕಳುಹಿಸಿ, ನಾವು ಜೊತೆಗೂಡಿ ಒಂದಷ್ಟು ಕಾಲ ಬದುಕಲು ಅವಕಾಶ ನೀಡಿ” ಎಂದು ಬೇಡಿಕೊಂಡ.

ದೇವದಂತಿಗೆ ಈ ಬೇಡಿಕೆ ವಿಚಿತ್ರ ಅನ್ನಿಸಿದರೂ ಆರ್ಫಿಯಸನ ಪ್ರೇಮದ ತೀವ್ರತೆ ಕಂಡು ಸಂತಸವಾಯಿತು. ಅವರು ಯೂರಿಡೈಸಳ ಪ್ರೇತವನ್ನು ಕರೆಸಿ, ಅದಕ್ಕೆ ಜೀವತುಂಬಿ, ಅವನೊಡನೆ ಕಳುಹಿಸಿಕೊಟ್ಟರೆ. ಬೀಳ್ಕೊಡುವ ಮುನ್ನ, “ಯಾವಕಾರಣಕ್ಕೂ ಅಧೋಲೋಕದಿಂದ ಹೊರಗೆ ಹೋಗುವವರೆಗೆ ಹಿಂದಿರುಗಿ ನೋಡಬೇಡ. ಹಾಗೇನಾದರೂ ನೋಡಿದರೆ ಯೂರಿಡೈಸ್ ಆ ಕೂಡಲೇ ಅದೃಶ್ಯಳಾಗಿ ಅಧೋಲೋಕಕ್ಕೆ ಮರಳುತ್ತಾಳೆ” ಎಂದು ಎಚ್ಚರಿಕೆ ಹೇಳಿದರು.

ಆರ್ಫಿಯಸನ ಆನಂದಕ್ಕೆ ಪಾರವೇ ಇಲ್ಲ. ಅದೇ ಖುಷಿಯಲ್ಲಿ ಹಾಡುತ್ತಾ ವಾದ್ಯ ನುಡಿಸುತ್ತಾ ಹೊರಟ. ಯೂರಿಡೈಸ್ ಅವನ ಹಿಂದೆ ಹೊರಟಳು. ಪ್ರೇತಾತ್ಮಗಳು ಕೈಬೀಸಿ ಅವನನ್ನು ಬೀಳ್ಕೊಟ್ಟವು. ಕೇರನ್ ಅವರಿಬ್ಬರನ್ನೂ ಸ್ಟಿಕ್ಸ್ ನದಿ ದಾಟಿಸಿದ. ಇನ್ನೇನು ಹೆಬ್ಬಾಗಿಲು ಸಮೀಪಿಸಬೇಕು…. ಅಲ್ಲೇ ಬಳಿಯಲ್ಲೇ ಬೆಳಕಿನ ಕಿಂಡಿ ಕಾಣಿಸುತ್ತಿದೆ. ಅದನ್ನು ಮುಟ್ಟಿದರೆ ಅಧೋಲೋಕ ಕೊನೆಯಾಗುವುದು….

ಆರ್ಫಿಯಸನಿಗೆ ಯೂರಿಡೈಸ್ ತನ್ನ ಹಿಂದೆ ಬರುತ್ತಿದ್ದಾಳೋ ಇಲ್ಲವೋ ಎಂಬ ಅನುಮಾನ ಶುರುವಾಯಿತು. ಒಮ್ಮೆ  ಖಾತ್ರಿ ಮಾಡಿಕೊಂಡುಬಿಡೋಣ ಅನ್ನಿಸಿತು. ದೇವದಂಪತಿಗಳ ಎಚ್ಚರಿಕೆ ನೆನಪಾದರೂ ಇನ್ನೇನು ಹೆಬ್ಬಾಗಿಲು ತಲುಪಲು ನಾಲ್ಕೇ ಹೆಜ್ಜೆ ಎಂದು ಉಡಾಫೆ ಮಾಡಿದ. ಹಿಂತಿರುಗಿ ನೋಡಿದ. ಅವನು ಕುತ್ತಿಗೆ ಹೊರಳಿಸುತ್ತಿದ್ದಂತೆಯೇ ಯೂರಿಡೈಸ್ ಗಾಳಿಯಲ್ಲಿ ಕರಗಿ ಮಾಯವಾದಳು. ಅವಳನ್ನು ಹಿಡಿಯಲೆಂದು ಕೈಚಾಚಿದರೂ ಪ್ರಯೋಜನವಾಗಲಿಲ್ಲ. ಆರ್ಫಿಯಸನ ಎದೆಯೊಡೆಯಿತು. ಅಧೋಲೋಕಕ್ಕೆ ಹೋಗಿ ಮತ್ತೊಮ್ಮೆ ಬೇಡಿಕೊಳ್ಳೋಣ ಅಂದುಕೊಂಡ. ಆದರೆ ಕೇರನ್ ಅವನಿಗೆ ದೋಣಿ ಹತ್ತಲು ಬಿಡಲಿಲ್ಲ. ದುಃಖಾರ್ತ ಹೃದಯದಿಂದ ಆರ್ಫಿಯಸ್ ತನ್ನ ರಾಜ್ಯಕ್ಕೆ ಮರಳಿದ.

ಮರಳಿ ಜೀವಿತಳಾಗಿದ್ದ ಹೆಂಡತಿ ನನ್ನ ಮೂರ್ಖತನದಿಂದ ಶಾಶ್ವತವಾಗಿ ಇಲ್ಲವಾದಳು ಅನ್ನುವ ನೋವು ಅವನನ್ನು ಚುಚ್ಚತೊಡಗಿತು. ಯೂರಿಡೈಸಳ ಪ್ರೇಮವನ್ನು ಮರೆಯದಾದ. ಅವಳ ನೆನಪಲ್ಲಿ ಖಿನ್ನನಾದ. ರಾಜ್ಯ ತೊರೆದು ಕಾಡಿಗೆ ಹೋಗಿ ಲೈರ್ ವಾದ್ಯ ನುಡಿಸುತ್ತಾ ಹಾಡುತ್ತಾ ಬದುಕತೊಡಗಿದ.

ಸೌಂದರ್ಯದ ಖನಿಯೂ ಮೋಹಕ ಕವಿಯೂ ಆಗಿದ್ದ ಆರ್ಫಿಯಸ್’ನನ್ನು ಮದುವೆಯಾಗಲು ಅನೇಕ ತರುಣಿಯರು ಮುಂದೆ ಬಂದರು. ಅವನಲ್ಲಿ ಪ್ರೇಮಯಾಚನೆ ಮಾಡಿದರು. ಆರ್ಫಿಯಸ್ ಅವರೆಲ್ಲರನ್ನೂ ತಿರಸ್ಕರಿಸಿ “ಯೂರಿಡೈಸ್… ಯೂರಿಡೈಸ್…” ಎಂದು ಕನಲುತ್ತಿದ್ದ. ಕೋಪಗೊಂಡ ತರುಣಿಯರು ಆರ್ಫಿಯಸ್’ನನ್ನು ಕೊಂದು ತುಂಡುತುಂಡು ಮಾಡಿ ಬಿಸಾಡಿದರು. ಅವನ ರುಂಡ ಕತ್ತರಿಸಿ ಹೀಬ್ರಸ್ ನದಿಗೆ ಎಸೆದರು. ಕಲಾಭಿಮಾನಿ ದೇವತೆಗಳು ಆ ತುಂಡುಗಳನ್ನೆಲ್ಲ ಒಟ್ಟುಗೋಡಿಸಿ ಆರ್ಫಿಯಸನ ಗೋರಿ ಕಟ್ಟಿದರು. ಆತನ ಲೈರ್ ವಾದ್ಯವನ್ನು ‘ಲೈರಾ’ ಎಂಬ ನಕ್ಷತ್ರಪುಂಜವನ್ನಾಗಿ ಮಾಡಿದರು.

ಇವತ್ತಿಗೂ ನೈಟಿಂಗೇಲ್ ಪಕ್ಷಿಗಳು ಆ ಗೋರಿಯ ಮೇಲೆ ಕುಳಿತು ಹಾಡಿದರೆ ಬೇರೆಲ್ಲ ಕಡೆಗಳಿಗಿಂತ ಸುಮಧುರವಾಗಿ ಹಾಡುತ್ತವೆ ಎಂಬ ನಂಬಿಕೆಯಿದೆ. ಹೀಬ್ರಸ್ ನದಿಯಲ್ಲಿ ತೇಲಿಕೊಂಡು ಹೋದ ಆರ್ಫಿಯಸನ ರುಂಡ ಲೆಸ್ಬೊಸ್ ದ್ವೀಪ ತಲುಪಿತು. ಅದನ್ನು ಅಲ್ಲಿಯ ಜನರು ಮಣ್ಣು ಮಾಡಿ ಗೋರಿ ಕಟ್ಟಿದರು. ಅದಕ್ಕೆ ಕೃತಜ್ಞನಾದ ಆರ್ಫಿಯಸ್, ಲೆಸ್ಬೊಸ್ ದ್ವೀಪದ ಜನರೆಲ್ಲರಿಗೂ ಅದ್ವಿತೀಯ ಸಂಗೀತಪಟುಗಳಾಗುವಂತೆ ಅನುಗ್ರಹಿಸಿದ.

(ಗ್ರೀಕ್ ಪುರಾಣಕಥೆಗಳ ಸರಣಿಯಿಂದ… )

Leave a Reply