ಜುನೈದನ ಪ್ರಾರ್ಥನೆ : ಓಶೋ ಹೇಳಿದ ಕಥೆ

ಜುನೈದ್ ಮತ್ತೊಬ್ಬರನ್ನು ಸುಧಾರಿಸು ಎಂದು ಭಗವಂತನಿಗೆ ಪ್ರಾರ್ಥನೆ ಮಾಡುವುದು ಬಿಟ್ಟುಬಿಟ್ಟ. ಯಾಕೆ ಗೊತ್ತಾ?… ಓಶೋ ಹೇಳಿದ ಕಥೆ ಓದಿ । ಕನ್ನಡಕ್ಕೆ: ಚಿದಂಬರ ನರೇಂದ್ರ

ಇದು ಸೂಫಿ ಅನುಭಾವಿ ಜುನೈದ್ ನ ಬದುಕಿನಲ್ಲಿ ನಡೆದ ಘಟನೆ. ಜುನೈದ್ ತಾನು ಈಗ ಇದ್ದ ಊರಿನಿಂದ ಹೊಸದೊಂದು ಹಳ್ಳಿಗೆ ಬಂದು ಸೇರಿಕೊಂಡ. ಈ ಹೊಸಹಳ್ಳಿಯಲ್ಲಿ ಜುನೈದ್ ನ ನೆರೆಮನೆಯವ ತುಂಬ ತಕರಾರಿನ ಮನುಷ್ಯ, ಸುತ್ತಲಿನ ಎಲ್ಲರೊಡನೆಯೂ ಜಗಳಾಡುತ್ತಿದ್ದ. ಮೊದಲ ಮೂರು ನಾಲ್ಕು ದಿನ ಜುನೈದ್ ಈ ಮನುಷ್ಯನನ್ನು ಸಮಾಧಾನದಿಂದ ಗಮನಿಸಿದ ಆದರೆ ನೆರೆ ಮನೆಯವನ ಕಾಟ ಜಾಸ್ತಿ ಆಗುತ್ತಲೇ ಹೋಯಿತು.

ಒಂದು ಮುಸ್ಸಂಜೆ ತನ್ನ ಚಾಪೆಯ ಮೇಲೆ ಕುಳಿತು ಪ್ರಾರ್ಥನೆ ಮುಗಿಸಿದ ನಂತರ ಜುನೈದ್ ಭಗವಂತನನ್ನು ಬೇಡಿಕೊಂಡ.

“ ಓ ಭಗವಂತ, ಈ ತಕರಾರಿನ ಮನುಷ್ಯನಿಂದ ನನಗೆ ಬಿಡುಗಡೆ ಕೊಡು. ಅವನನ್ನು ನಿನ್ನ ಬಳಿಗೆ ಕರೆದುಕೋ. ಇಂಥ ಮನುಷ್ಯನ ಅವಶ್ಯಕತೆ ಏನಿದೆ ಜಗತ್ತಿಗೆ? ಆತ ಕೇವಲ ನೆರೆಮನೆಯವನಲ್ಲ, ಬಹು ದೊಡ್ಡ ತೊಂದರೆ ಇಲ್ಲಿಯ ಎಲ್ಲರಿಗೂ. ನಿನ್ನ ಜನರಿಗೆ ಹಿಂಸೆ ಕೊಡುತ್ತಿದ್ದಾನೆ, ದಬ್ಬಾಳಿಕೆ ಮಾಡುತ್ತಿದ್ದಾನೆ ಇವ . ಇಂಥ ಮನುಷ್ಯ ಈ ಜಗತ್ತಿಗೆ ದೊಡ್ಡ ಕೇಡು. ದಯವಿಟ್ಚು ನಮ್ಮನ್ನು ಇವನಿಂದ ಪಾರು ಮಾಡು. “

ಯಾವತ್ತೂ ಭಗವಂತ ಜುನೈದ್ ನ ಪ್ರಾರ್ಥನೆಗೆ ಉತ್ತರಿಸಿರಲಿಲ್ಲ ಆದರೆ ಆ ದಿನ ಬಂದೇ ಬಿಟ್ಟಿತು. ಅಂದು ಭಗವಂತ ಜುನೈದ್ ನ ಪ್ರಾರ್ಥನೆಗೆ ಉತ್ತರಿಸಿದ.

“ ಜುನೈದ್, ನೀನು ಈ ಮನೆಗೆ ಬಂದು ಕೇವಲ ನಾಲ್ಕು ದಿನ ಆಯ್ತು ಆದರೆ ಈ ಮನುಷ್ಯ ನನಗೆ ಅರವತ್ತು ವರ್ಷದಳಿಂದಲೂ ನೆರೆಮನೆಯವ. ನಾನು ಇವನನ್ನು ಅರವತ್ತು ವರ್ಷಗಳಿಂದ ಸಹಿಸಿಕೊಂಡಿದ್ದೇನೆ, ನೀನು ಕೇವಲ ನಾಲ್ಕು ದಿನಗಳಲ್ಲಿಯೇ ಸಹನೆ ಕಳೆದುಕೊಂಡಿದ್ದೀಯಲ್ಲ. ನಾನು ಅರವತ್ತು ವರ್ಷ ಇವನನ್ನು ಸಹಿಸಿಕೊಂಡಿದ್ದೇನೆಂದರೆ ಇದರಲ್ಲೊಂದು ಅರ್ಥ ಇರಬಹುದೆಂದು ನೀನು ಯಾಕೆ ಯೋಚಿಸಲಿಲ್ಲ. ಪ್ರಾರ್ಥನೆ ಮಾಡುವುದಕ್ಕಿಂತ ಮುಂಚೆ ನೀನು ಕೊಂಚ ಯೋಚಿಸಬೇಕಾಗಿತ್ತು, ಯಾರನ್ನ ಭಗವಂತ ಇಷ್ಟು ವರ್ಷಗಳಿಂದ ಸಹಿಸಿಕೊಂಡಿದ್ದಾನೆಯೋ ಅಂಥವನ ವಿರುದ್ಧ ದೂರು ಸಲ್ಲಿಸಬಹುದೆ ಎಂದು. “

ಇದು ಅದ್ಭುತ. ಅಂದಿನಿಂದ ಜುನೈದ್ ಬೇರೆ ಯಾರನ್ನೂ ಸುಧಾರಿಸು ಎಂದು ಭಗವಂತನಿಗೆ ಪ್ರಾರ್ಥನೆ ಮಾಡಲಿಲ್ಲ. ಭಗವಂತ ಬಯಸಿದಂತೆ ಜನರಿರುತ್ತಾರೆ ಹಾಗಿರುವಾಗ ನಾವು ಯಾರು ಅವರ ವಿರುದ್ಧ ಭಗವಂತನಲ್ಲಿ ದೂರು ಸಲ್ಲಿಸುವುದಕ್ಕೆ? ನಾವು ನಮ್ಮ ಹಾಗೆ, ನಮ್ಮ ಸತ್ಯಕ್ಕೆ ಪ್ರಾಮಾಣಿಕರಾಗಿದ್ದರೆ ಸಾಕು. ಅದು ಭಗವಂತನಿಗೆ ನಾವು ಸಲ್ಲಿಸಬಹುದಾದ ಅತ್ಯಂತ ದೊಡ್ಡ ಪ್ರಾರ್ಥನೆ, ಕೃತಜ್ಞತೆ.

Leave a Reply