ಶಿಷ್ಯರು ಮಿಲರೇಪನಿಗೆ, ನಿನ್ನ ನಂಬಿಕೆಶಕ್ತಿ ಬಲವಾಗಿದೆ ನೀನು ನದಿಯೊಳಗೆ ನಡೆದುಕೊಂಡು ಬಾ, ಗುರುಭಕ್ತಿ ಮತ್ತು ನಂಬಿಕೆ ನಿನ್ನ ಕಾಪಾಡುತ್ತದೆ ಎಂದು ಉತ್ಸಾಹ ತುಂಬಿದರು. ಶಿಷ್ಯರ ಆಶಯದಂತೆ ಮಿಲರೇಪ ನೀರಿಗಿಳಿದ. ಆಮೇಲೆ… ~ Osho, The Beloved, Vol 1, Q 2 (excerpt) । ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಅನುಭಾವಿ ಮಿಲರೇಪ ತನ್ನ ಮಾಸ್ಟರ್ ನ ಭೇಟಿಗಾಗಿ ಟಿಬೇಟ್ ಗೆ ಬಂದ, ಮಿಲರೇಪನ ವಿನಯ, ಶುದ್ಧತೆ, ಸಹಜತೆ ಗಮನಿಸಿದ ಮಾಸ್ಟರ್ ನ ಇತರೆ ಶಿಷ್ಯರು ಅಸೂಯೆಗೊಳಗಾದರು. ಬಹುಶಃ ಮಿಲರೇಪನೇ ಮಾಸ್ಟರ್ ನ ಉತ್ತರಾಧಿಕಾರಿಯಾಗಬಹುದೆಂದು ಗ್ರಹಿಸಿ ಅವನನ್ನು ಕೊಲೆ ಮಾಡಲು ಯೋಜನೆಗಳನ್ನು ಹಾಕಿಕೊಂಡರು.
“ ನೀನು ಬೆಟ್ಟದ ಮೇಲಿಂದ ಧುಮುಕು, ಗುರುವಿನ ಬಗ್ಗೆ ಆಳವಾದ ಶೃದ್ಧೆ, ನಂಬಿಕೆ ನಿನ್ನಲ್ಲಿರುವುದಾದರೆ, ನಿನಗೆ ಯಾವ ಹಾನಿಯೂ ಆಗುವುದಿಲ್ಲ “ ಶಿಷ್ಯರು ಮಿಲರೇಪನಿಗೆ ಸವಾಲು ಹಾಕಿದರು. ಮಿಲರೇಪ ಒಂದು ಕ್ಷಣವೂ ಯೋಚನೆ ಮಾಡದೆ, ಹಿಂದೆ ಮುಂದೆ ನೋಡದೆ ಬೆಟ್ಟದ ಮೇಲಿಂದ ಕೆಳೆಗೆ ಜಿಗಿದ. ಶಿಷ್ಯರು ಮೂರು ಸಾವಿರ ಅಡಿ ಬೆಟ್ಟದಿಂದ ಕೆಳಗಿಳಿದು ನೋಡಿದಾಗ, ಅಲ್ಲಿ ಮಿಲರೇಪ ಖುಶಿಯಿಂದ ಪದ್ಮಾಸನದಲ್ಲಿ ಕುಳಿತಿದ್ದ. ಶಿಷ್ಯರನ್ನು ನೋಡಿದೊಡನೆ ಆನಂದಿಂದ ಉದ್ಗರಿಸಿದ, “ ನೀವು ಹೇಳಿದ್ದು ನಿಜ, ನಂಬಿಕೆ ನನ್ನನ್ನು ಕಾಪಾಡಿತು. “
ಇನ್ನೊಮ್ಮೆ ಹೊತ್ತಿ ಉರಿಯುತ್ತಿದ್ದ ಮನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ತಾಯಿ ಮಗುವನ್ನು ರಕ್ಷಿಸಲು ಶಿಷ್ಯರು ಮಿಲರೇಪನನ್ನು ಹುರಿದುಂಬಿಸಿದರು, “ ನಿನ್ನ ಗುರು ನಿನ್ನ ರಕ್ಷಿಸುತ್ತಾನೆ, ಅವನಲ್ಲಿ ನಿನ್ನ ನಂಬಿಕೆ ಅಚಲವಾಗಿದ್ದರೆ ಬೆಂಕಿ ನಿನ್ನನ್ನು ಏನು ಮಾಡುವುದಿಲ್ಲ. “ ತಕ್ಷಣವೇ ಮಿಲರೇಪ ಹೊತ್ತಿ ಉರಿಯುತ್ತಿದ್ದ ಮನೆಯೊಳಗೆ ಧುಮುಕಿ, ತಾಯಿ ಮತ್ತು ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ. ಬೆಂಕಿಯಿಂದ ಅವನಿಗೆ ಕೊಂಚ ಕೂಡ ಗಾಯಗಳಾಗಿರಲಿಲ್ಲ. ಬೆಂಕಿಯಿಂದ ಹೊರಬಂದ ಮೇಲೆ ಮಿಲರೇಪ ಮುಂಚೆಗಿಂತಲೂ ತೇಜಸ್ವಿಯಾಗಿ ಕಾಣಿಸುತ್ತಿದ್ದ. ಹೀಗೆ ಮಿಲರೇಪನನ್ನು ಕೊಲ್ಲುವ ಶಿಷ್ಯರ ಎರಡನೇ ಪ್ರಯತ್ನವೂ ವಿಫಲವಾಯಿತು.
ಮತ್ತೊಮ್ಮೆ ಮಾಸ್ಟರ್, ಶಿಷ್ಯರ ಜೊತೆ ಪ್ರವಾಸ ಮಾಡುತ್ತಿದ್ದಾಗ ಒಂದು ನದಿಯನ್ನು ದಾಟಬೇಕಾಗಿ ಬಂತು. ನದಿಯ ಪ್ರವಾಹ ತೀವ್ರವಾಗಿತ್ತು. ಶಿಷ್ಯರೆಲ್ಲ ದೋಣಿ ಏರಿದರು. ಶಿಷ್ಯರು ಮಿಲರೇಪನಿಗೆ, ನಿನ್ನ ನಂಬಿಕೆಶಕ್ತಿ ಬಲವಾಗಿದೆ ನೀನು ನದಿಯೊಳಗೆ ನಡೆದುಕೊಂಡು ಬಾ, ಗುರುಭಕ್ತಿ ಮತ್ತು ನಂಬಿಕೆ ನಿನ್ನ ಕಾಪಾಡುತ್ತದೆ ಎಂದು ಉತ್ಸಾಹ ತುಂಬಿದರು. ಶಿಷ್ಯರ ಆಶಯದಂತೆ ಮಿಲರೇಪ ನೀರಿಗಿಳಿದ. ಅವನು ನದಿಯಲ್ಲಿ ನಡೆದುಕೊಂಡು ಬರುತ್ತಿರುವುದನ್ನ ನೋಡಿದ ಮಾಸ್ಟರ್ ಕೂಗಿಕೊಂಡ,
“ ಎಂಥ ಹುಚ್ಚುತನ ಇದು, ಇಂಥ ಪ್ರವಾಹದಲ್ಲಿ ನದಿ ದಾಟುವುದು ಸಾಧ್ಯವಿಲ್ಲ. “
“ ಇಲ್ಲ ಮಾಸ್ಟರ್, ನನಗೆ ನಿಮ್ಮಲ್ಲಿ ನಂಬಿಕೆ, ನಾನು ನಿಮ್ಮ ಶಕ್ತಿಯನ್ನು ಬಳಸಿಕೊಂಡು ನದಿ ದಾಟುತ್ತಿದ್ದೇನೆ ನನಗೇನೂ ಆಗುವುದಿಲ್ಲ “ ಎನ್ನುತ್ತಲೇ ಮಿಲರೇಪ ನದಿ ದಾಟಿಯೇ ಬಿಟ್ಟ.
ಇದನ್ನು ಕಂಡು ಆಶ್ಚರ್ಯಭರಿತನಾದ ಮಾಸ್ಟರ್, ನನ್ನ ಶಕ್ತಿಯಿಂದ ಮಿಲರೇಪ ನದಿ ದಾಟುವುದು ಸಾಧ್ಯವಾಗಬಹುದಾದರೆ, ನನಗೇಕೆ ಸಾಧ್ಯವಾಗಲಾರದು ಎಂದು ಯೋಚಿಸಿ ತಾನೂ ನದಿಗಿಳಿದ, ಆದರೆ ನದಿ ದಾಟಲಾಗದೇ ನದಿಯಲ್ಲಿ ಕೊಚ್ಚಿಕೊಂಡು ಹೋದ.
ನಿಮ್ಮಲ್ಲಿ ಆಳ ಶೃದ್ಧೆ ನಂಬಿಕೆಯಿರುವುದಾದರೆ ಒಬ್ಬ ಸಾಮಾನ್ಯ ಮಾಸ್ಟರ್ ಕೂಡ ನಿಮ್ಮ ಬದುಕನ್ನು ಪರಿವರ್ತನೆ ಮಾಡಬಲ್ಲ ಹಾಗೆಯೇ ನಿಮ್ಮಲ್ಲಿ ನಂಬಿಕೆ ಇಲ್ಲದೇ ಹೋದರೆ ಜ್ಞಾನೋದಯ ಅನುಭವಿಸಿದ ಮಾಸ್ಟರ್ ಕೂಡ ನಿಮಗೆ ಸಹಾಯ ಮಾಡುವುದು ಅಸಾಧ್ಯ.