‘ತ್ಸೇ’ ದ್ವಯರ ತಿಳಿವಳಿಕೆ : ಓಶೋ ವ್ಯಾಖ್ಯಾನ

ನಿಜವಾಗಿ ಅಂತಿಮ ಎನ್ನುಬಹುದಾದ ಯಾವ ಗುರಿಯೂ ಇಲ್ಲದಿರುವುದರಿಂದ, ನೀವು ದಾರಿಯನ್ನ, ಪ್ರಯಾಣವನ್ನ ಆನಂದಿಸದೇ ಹೋದರೆ ಮುಂದೆ ಪ್ರಯಾಣ ಮಾಡಿದಂತೆಲ್ಲ ದಣಿಯುತ್ತೀರಿ, ಗಂಭೀರರಾಗುತ್ತೀರಿ, ಬದುಕಿನ ಸಂಗೀತಕ್ಕೆ ಹೊರಗಾಗುತ್ತೀರಿ. ಬದುಕಿನ ಲಯದೊಂದಿಗೆ ಯಾವಾಗಲೂ ಸಾಮರಸ್ಯದಲ್ಲಿರಲು ಬಯಸುವಿರಾದರೆ ಪ್ರತಿಕ್ಷಣವನ್ನು ಬದುಕಿ, ಸಂಭ್ರಮಿಸಿ. ಪ್ರತಿ ಗಳಿಗೆಯಲ್ಲೂ ಪ್ರತಿ ಪರಿಸ್ಥಿತಿಯಲ್ಲೂ ಹಬ್ಬಕ್ಕೆ ಕಾರಣಗಳನ್ನು ಕಂಡುಕೊಳ್ಳಿ. ಮತ್ತು ನನ್ನ ಅನುಭವದ ಪ್ರಕಾರ ಸಂಭ್ರಮ, ಖುಶಿ ಇರದಂಥ ಯಾವ ಕ್ಷಣ, ಯಾವ ಸ್ಥಿತಿಯೂ ಇಲ್ಲ ~ ಓಶೋಕನ್ನಡಕ್ಕೆ: ಚಿದಂಬರ ನರೇಂದ್ರ

ನೋಡಿದರೆ ಕಾಣಿಸದು
ಕೇಳಿದರೆ ಕೇಳಿಸದು
ಮುಟ್ಟಿದರೆ ನಿಲುಕದು
ಇನ್ನೂ ಮುಂದೆ ವರ್ಣಿಸುವುದು
ಆಗದ ಮಾತು
ಅಂತೆಯೇ ಇದು ಮೂರಲ್ಲ, ಒಂದು.

ತಲೆ ಮೇಲೆ ಬೆಳಕಿಲ್ಲ
ಕಾಲ ಕೆಳಗೆ ಕತ್ತಲೆಯಿಲ್ಲ
ಆರಂಭ, ಕೊನೆ, ಹೆಸರು ಒಂದೂ ಇಲ್ಲ.
ರೂಹಿಲ್ಲದ ರೂಹು
ಪ್ರತಿಬಂಬವಿಲ್ಲದ ಬಿಂಬ
ಕಾಣಿಸದಷ್ಟು ಸೂಕ್ಷ್ಮ, ಕಾಣದಷ್ಟು ಅಪಾರ

ಶುರುವಿನ ಗೆರೆಯಿಲ್ಲ, ಮುಟ್ಟುವ ದಾರವಿಲ್ಲ
ರುಚಿಯ ಬಲ್ಲವರಿಲ್ಲ, ರುಚಿ ಆದವರು ಸಾಕಷ್ಟು
ದಾರಿಯಲ್ಲಿ ಹೆಜ್ಜೆ ಹಾಕುತ್ತ ಹೋದಂತೆ
ಜೊತೆಯಾಗುತ್ತ ಹೋಗುತ್ತದೆ ‘ಸಧ್ಯ’

~ ಲಾವೋ ತ್ಸೇ

ಈ ಒಬ್ಬ ಮನುಷ್ಯನ ಕಾರಣದಿಂದಲೇ ನಾನು ನೆಲೆ ನಿಂತ ಎಲ್ಲ ಮನೆಗಳನ್ನೂ “ Lao Tzu house “ ಎಂದು ಹೆಸರಿಸಿದ್ದೇನೆ. ಪ್ರತಿ ಮಗುವೂ ಅಳುತ್ತಲೇ ಹುಟ್ಟುತ್ತದೆ ಆದರೆ ಲಾವೋ ತ್ಸೇ ನಗುತ್ತಲೇ ಹುಟ್ಟಿದ ಜಗತ್ತಿನ ಒಬ್ಬನೇ ಒಬ್ಬ ಮನುಷ್ಯ. ಜಗತ್ತಿನಲ್ಲಿ ಎಷ್ಟೋ ಅನನ್ಯ ವಿಸ್ಮಯಗಳಿವೆ ಆದರೆ ನಗುತ್ತಲೇ ಹುಟ್ಟಿದ ಲಾವೋ ತ್ಸೇ ಗೆ ಆ ಯಾವನ್ನೂ ಹೋಲಿಸುವ ಹಾಗೇ ಇಲ್ಲ. ಈ ಅದ್ಭುತ ಮಗು ಹುಟ್ಟಿದಾಗ ಎಲ್ಲರಿಗೂ ದಿಗ್ಭ್ರಮೆಯಾಯ್ತು, ಮಗುವಿನ ತಂದೆ ತಾಯಿಗೆ ಕೂಡ ನಂಬುವುದು ಕಷ್ಟವಾಯ್ತು, ಬಹುಶಃ ನಗುವೂ ಕೂಡ ಒಂದು ಕ್ಷಣ ಸಂಶಯ ಮಾಡಿಕೊಂಡಿರಬಹುದು, ಆದರೆ ಮಗುವಿನ ನಗು ನಿಲ್ಲಲೇ ಇಲ್ಲ, ಬದುಕಿನ ಕೊನೆಯವರೆಗೂ ಲಾವೋ ತ್ಸೇ ನಗುತ್ತಲೇ ಇದ್ದ.

ಇಂಥ ಲಾವೋ ತ್ಸೇ ಸ್ವೀಕರಿಸಿದ್ದು ಜುವಾಂಗ್ ತ್ಸೇ ಎನ್ನುವ ಶಿಷ್ಯನನ್ನ. ಈ ಜುವಾಂಗ್ ತ್ಸೇ ಯಾವಾಗಲೂ ಎಲ್ಲರನ್ನೂ ನಗಿಸುತ್ತಲೇ ಇರುವಂಥ ಮನುಷ್ಯ. ಇವನ ಕತೆಗಳು ಎಷ್ಟು ಅಸಂಗತವೆಂದರೆ ಜಗತ್ತಿನ ಯಾವ ಮಹಾನ್ ಸಾಹಿತ್ಯದಲ್ಲೂ ಇಂಥವನ್ನು ನೀವು ಕಾಣಲಾರಿರಿ. ಈ ಕತೆಗಳು ಎಷ್ಟು ಸಂಕೀರ್ಣ ಎಷ್ಟು ಅಸಂಗತವೆಂದರೆ ಈ ಕತೆಗಳ ಅರ್ಥವನ್ನು ಹುಡುಕುವುದೇ ಒಂದು ಸಾಧನೆಯ ವಿಷಯ. ಆದರೆ ಈ ಕತೆಗಳು ನಿಮಗೆ ಕಚಗುಳಿ ಇಡುತ್ತವೆ, ನೀವು ಬಿದ್ದು ನಗುತ್ತೀರಿ. ಈ ಕಾರಣಕ್ಕಾಗಿಯೇ ಲಾವೋ ತ್ಸೇ ಗೆ ಜುವಾಂಗ್ ತ್ಸೇ ಎಂದರೆ ಅಪಾರ ಅಕ್ಕರೆ.

ನನ್ನ ಪ್ರಕಾರ ಈ ಇಬ್ಬರು ಜ್ಞಾನಿಗಳನ್ನು ಬಿಟ್ಟರೆ ನಿಜವಾಗಿಯೂ ನಗುವನ್ನ ಅನುಭವಿಸಿದ ಬೇರೊಬ್ಬ ಮನುಷ್ಯನನ್ನು ನಾನು ನೋಡಿಲ್ಲ. ತಮ್ಮ ಈ ವಿಚಿತ್ರ ಸ್ವಭಾವದ ಕಾರಣವಾಗಿಯೇ ಇವರಿಬ್ಬರಿಗೂ ಒಂದು ಧರ್ಮವನ್ನು ಸ್ಥಾಪಿಸುವುದು ಸಾಧ್ಯನಾಗಲಿಲ್ಲ. ಅವರಿಬ್ಬರೂ ಸೃಷ್ಟಿ ಮಾಡಿದ್ದು ಕೊನೆಗೂ ಒಂದು ವೈಯಕ್ತಿಕ ಅನುಸಂಧಾನವಾಗಿಯೇ ಉಳಿದಿದೆ. ಇಂಥ ಇನ್ನೊಂದು ತಿಳುವಳಿಕೆ ಮುಂದೆ ಬರಲೇ ಇಲ್ಲ. ಆಗಲೋ ಈಗಲೋ ಇಂಥ ವ್ಯವಸ್ಥೆಯೊಂದರ ಮಹತ್ವವನ್ನ ಅರ್ಥಮಾಡಿಕೊಂಡವರು ಇದ್ದಾರೆ. ಇಂಥ ತಿಳುವಳಿಕೆಯೊಂದಕ್ಕೆ ತ್ಸೇ ದ್ವಯರು ಹೆಸರು ಕೂಡ ಇಟ್ಟಿಲ್ಲ, ಸುಮ್ಮನೇ ‘ತಾವೋ’ ಎಂದಿದ್ದಾರೆ. ತಾವೋ ಎಂದರೆ ದಾರಿ, ಯಾವ ಗುರಿಯೂ ಇಲ್ಲದಂಥ ದಾರಿ. ಗುರಿ ಎನ್ನುವುದು ಇಲ್ಲವೇ ಇಲ್ಲ, ಇರುವುದು ದಾರಿ ಮಾತ್ರ.

ನಿಜವಾಗಿ ಅಂತಿಮ ಎನ್ನುಬಹುದಾದ ಯಾವ ಗುರಿಯೂ ಇಲ್ಲದಿರುವುದರಿಂದ, ನೀವು ದಾರಿಯನ್ನ, ಪ್ರಯಾಣವನ್ನ ಆನಂದಿಸದೇ ಹೋದರೆ ಮುಂದೆ ಪ್ರಯಾಣ ಮಾಡಿದಂತೆಲ್ಲ ದಣಿಯುತ್ತೀರಿ, ಗಂಭೀರರಾಗುತ್ತೀರಿ, ಬದುಕಿನ ಸಂಗೀತಕ್ಕೆ ಹೊರಗಾಗುತ್ತೀರಿ. ಬದುಕಿನ ಲಯದೊಂದಿಗೆ ಯಾವಾಗಲೂ ಸಾಮರಸ್ಯದಲ್ಲಿರಲು ಬಯಸುವಿರಾದರೆ ಪ್ರತಿಕ್ಷಣವನ್ನು ಬದುಕಿ, ಸಂಭ್ರಮಿಸಿ. ಪ್ರತಿ ಗಳಿಗೆಯಲ್ಲೂ ಪ್ರತಿ ಪರಿಸ್ಥಿತಿಯಲ್ಲೂ ಹಬ್ಬಕ್ಕೆ ಕಾರಣಗಳನ್ನು ಕಂಡುಕೊಳ್ಳಿ. ಮತ್ತು ನನ್ನ ಅನುಭವದ ಪ್ರಕಾರ ಸಂಭ್ರಮ, ಖುಶಿ ಇರದಂಥ ಯಾವ ಕ್ಷಣ, ಯಾವ ಸ್ಥಿತಿಯೂ ಇಲ್ಲ.

ಒಮ್ಮೆ ಹೀಗಾಯಿತು………

ಅಮೇರಿಕದ ಒಬ್ಬ ಕವಿ ಗ್ಯಾರಿ ಸಿಂಡರ್, ಝೆನ್ ಅಭ್ಯಾಸ ಮಾಡಲು ಜಪಾನಿಗೆ ಬರುತ್ತಾನೆ. ಝೆನ್ ಅಭ್ಯಾಸ ಮಾಡುವವರು ಕವಿತೆ ಬರೆಯಬಹುದಾ ಎನ್ನುವ ಸಂದೇಹ ಅವನದು. ಅವನು ಈ ಬಗ್ಗೆ ಮಾಸ್ಟರ್ ರೋಶಿಯನ್ನು ಪ್ರಶ್ನೆ ಮಾಡುತ್ತಾನೆ.

“ ಕವಿತೆ ನಿನ್ನ ಅಂತರಾಳದಿಂದ ಒಡಮೂಡಿ ಬರುವುದಾದರೆ ಕವಿತೆ ಬರೆಯುವುದಕ್ಕೆ ಝೆನ್ ನಲ್ಲಿ ಅಂಥ ಆಕ್ಷೇಪ ಏನೂ ಇಲ್ಲ” ಮಾಸ್ಟರ್ ರೋಶಿ ಉತ್ತರಿಸುತ್ತಾರೆ.

ಝೆನ್ ಅಭ್ಯಾಸದಲ್ಲಿ ಸಿರೀಯಸ್ ಆಗಿ ತೊಡಗಿಕೊಳ್ಳುವ ಆಕಾಂಕ್ಷೆಯಿದ್ದುದರಿಂದ , ಮತ್ತು ಅದಕ್ಕೆ ಬೇಕಾದಂಥ ಸಿರೀಯಸ್ ಆದ ಏಕಾಗ್ರ ಮನಸ್ಥಿತಿಯನ್ನು ಕಟ್ಚಿಕೊಳ್ಳುವುದು ಕವಿತೆ ಬರೆಯುವುದರಿಂದ ಸಾಧ್ಯವಾಗುವುದಿಲ್ಲ ಅನ್ನಿಸಿ, ಗ್ಯಾರಿ ಸಿಂಡರ್ ಎಷ್ಟೋ ವರ್ಷ ಕವಿತೆ ಬರೆಯುವುದನ್ನೇ ಬಿಟ್ಟು ಬಿಟ್ಟ.

ಮಾಸ್ಟರ್ ಸಾವಿನ ಹಾಸಿಗೆ ಮೇಲಿದ್ದಾಗ ಗ್ಯಾರಿ ಸಿಂಡರ್, ರೋಶಿಯನ್ನು ಭೇಟಿಯಾಗಲು ಹೋದ.

“ ಮಾಸ್ಟರ್, ಝೆನ್ ತುಂಬಾ ಸಿರೀಯಸ್, ನಾನು ಕವಿತೆ ಬರೆಯುವುದನ್ನೇ ಬಿಟ್ಟೆ “ ಗ್ಯಾರಿ ಮಾತನಾಡಿದ.

“ ಗ್ಯಾರಿ, ನಿನ್ನ ಗ್ರಹಿಕೆ ತಪ್ಪಾದರೂ ಅದರಿಂದ ನಿನಗೆ ಅನುಕೂಲವೇ ಆಗಿದೆ. ಹಾಗೆ ನೋಡಿದರೆ ಕವಿತೆ ಬರೆಯುವುದೇ ಸಿರೀಯಸ್, ಝೆನ್ ಅಂಥ ಸಿರೀಯಸ್ ಏನೂ ಅಲ್ಲ. ಝೆನ್, ಬದುಕಿನ ಪ್ರತಿಕ್ಷಣವನ್ನು ಬದುಕುತ್ತ ಹೋಗುವುದು, ಹಸಿವೆಯಾದಾಗ ಊಟ ಮಾಡುವುದು ನಿದ್ದೆ ಬಂದಾಗ ನಿದ್ದೆ ಮಾಡುವುದು ಅಷ್ಟೇ “ ಮಾಸ್ಟರ್ ರೋಶಿ ಉತ್ತರಿಸಿದರು.

Leave a Reply