ಅಜ್ಞಾನವು ಒಂದು ವಸ್ತು ಅಲ್ಲ ಎಂಬುದು ವೇದಾಂತದ ಸಿದ್ಧಾಂತ. ಅದು ಒಂದು ವಸ್ತುವೆಂದಾದರೆ ಅದರಿಂದ ಉಂಟಾಗುವ ಪ್ರಪಂಚ, ಅದರಲ್ಲಿರುವ ಬಂಧವೇ ಮುಂತಾದವು ಸತ್ಯವೆಂದಾಗುತ್ತದೆ । ರಮಣ ಮಹರ್ಷಿ
ಪ್ರಪಂಚವು ಅಜ್ಞಾನ ಎನ್ನುವುದರ ಅರ್ಥ, ಅದು ಅಜ್ಞಾನದಿಂದ ಹುಟ್ಟಿದ್ದು ಎಂದು. ಅಜ್ಞಾನ ಎನ್ನುವುದೂ ಅಹಂಕಾರವೇ. ಅದು ಒಂದು ವಸ್ತುವಲ್ಲ. ಅಜ್ಞಾನವೆಂದರೆ ಜ್ಞಾನ ಇಲ್ಲದಿರುವುದು ಎಂದು ಅರ್ಥ. ಆದ್ದರಿಂದ ಇದು ಕತ್ತಲಂತೆ, ವಸ್ತುವಾಗುವುದಿಲ್ಲ. ಬೆಳಕಿನೆದುರಿನಲ್ಲಿ ಕತ್ತಲೆಯು ನಿಲ್ಲದಂತೆ ಜ್ಞಾನಮಯವಾಗಿರುವ ಆತ್ಮ ಪ್ರಕಾಶದ ಎದುರಿನಲ್ಲಿ ಅಜ್ಞಾನವು ನಿಲ್ಲದೆ ನಾಶವಾಗುತ್ತದೆ. ಹೀಗೆ ನಾಶವಾಗುವ ಅಜ್ಞಾನವು ಸದ್ವಸ್ತುವಾಗಲು ಸಾಧ್ಯವೇ?
ಅಜ್ಞಾನವು ಒಂದು ವಸ್ತು ಅಲ್ಲ ಎಂಬುದು ವೇದಾಂತದ ಸಿದ್ಧಾಂತ. ಅದು ಒಂದು ವಸ್ತುವೆಂದಾದರೆ ಅದರಿಂದ ಉಂಟಾಗುವ ಪ್ರಪಂಚ, ಅದರಲ್ಲಿರುವ ಬಂಧವೇ ಮುಂತಾದವು ಸತ್ಯವೆಂದಾಗುತ್ತದೆ. ಅಪಕ್ವವಾಗಿರುವ ಶಿಷ್ಯನಿಗೆ ಅಜ್ಞಾನವೆಂಬುದೊಂದು ಬಂಧನಕ್ಕೆ ಕಾರಣವಾಗಿರುವಂತೆ ಹೇಳಲಾಗಿದೆಯಷ್ಟೇ. ನಿಜವಾಗಿ ಅದು ಇಲ್ಲವೆಂಬದೆ ನಿಶ್ಚಿತವಾದ ಉಪದೇಶ. ಆದ್ದರಿಂದ ‘ಈ ಅಜ್ಞಾನ ನನಗೆ ಹೇಗೆ ಬಂದಿತು ‘ಎಂಬ ಪ್ರಶ್ನೆ ಅಸಮಂಜಸವಾದದ್ದು. ಈ ಪ್ರಶ್ನೆಯನ್ನು ಕೇಳುವ ಉದ್ದೇಶ ಶುದ್ಧ ಸತ್ ಚಿತ್ ಸ್ವರೂಪ ಬ್ರಹ್ಮಕ್ಕೂ ಸಂಸಾರಕ್ಕೂ ಸಂಬಂಧವನ್ನು ಕಲ್ಪಿಸುವುದಕ್ಕಾಗಿಯೇ. ವಾಸ್ತವವಾಗಿ ಅಂತಹ ಸಂಬಂಧವು ಇಲ್ಲವೇ ಇಲ್ಲ.’ಅಸಂಗೋಹ್ಯಯಮ್ ಪುರುಷಹ ‘ಎಂದು ಹೇಳಿರುವಂತೆ ಆತ್ಮನಾಗಿರುವ ಬ್ರಹ್ಮವು ಆಸಂಗನಾಗಿ -ಅಂದರೆ ಸಂಬಂಧರಹಿತನಾಗಿ -ಇದ್ದಾನೆ ಎನ್ನುವುದೇ ವೇದಾಂತಗಳ ಕಡೆಯ ತೀರ್ಮಾನ. ಇದನ್ನೇ ಅಜಾತ ಸಿದ್ಧಾಂತ ಎಂದು ಕರೆಯುತ್ತಾರೆ.
ಪರಮಾರ್ಥದಲ್ಲಿ ಅಜ್ಞಾನಾದಿ ಪ್ರಪಂಚವಾವುದೂ ಉಂಟಾಗಿಲ್ಲ, ಜೀವನಿಲ್ಲ, ಬಂಧವಿಲ್ಲ, ಸಾಧಕನಿಲ್ಲ, ಮೋಕ್ಷವಿಲ್ಲ, ಇರುವುದು ಕೇವಲ ನಿತ್ಯಶುದ್ಧ, ನಿತ್ಯ ಬುದ್ಧ, ನಿತ್ಯಮುಕ್ತ ಆತ್ಮವೊಂದೇ. ಇದು ಆತ್ಮಜ್ಞಾನಿಗಳ ಅನುಭವಸಿದ್ಧವಾದ ಸತ್ಯವೂ ಹೌದು.