ಶ್ರೀ ರಾಮನಿಗೆ ಅಗಸ್ತ್ಯರು ಬೋಧಿಸಿದ ಆದಿತ್ಯ ಹೃದಯ ಮಂತ್ರ : ಅರ್ಥಸಹಿತ

ಆದಿತ್ಯ ಹೃದಯಕ್ಕೆ ಮಹಾಭಾರತದ ಭಗವದ್ಗೀತೆಯಷ್ಟೇ ಪ್ರಾಮುಖ್ಯವಿದೆ. ಈ ಮಂತ್ರದ ಮೂಲಕ ಅಗಸ್ತ್ಯರು ರಾಮನಿಗೆ ಪರಬ್ರಹ್ಮ ತತ್ವವನ್ನು ಬೋಧಿಸುತ್ತಾರೆ. ಮತ್ತು ಆ ಮೂಲಕ ಅಗಸ್ತ್ಯರು ರಾಮನಿಗೆ ಧೈರ್ಯವನ್ನು ತುಂಬಿ ರಾವಣನನ್ನು ಎದುರಿಸಲು ಮಾನಸಿಕವಾಗಿ ಸಿದ್ದಗೊಳಿಸುತ್ತಾರೆ. ಆದಿತ್ಯ ಹೃದಯ, ಶತ್ರುಂಜಯ ಮಂತ್ರವೆಂದೇ ಖ್ಯಾತಿ ಪಡೆದಿದೆ.
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್
ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್
ಉಪಗಮ್ಯಾ ಬ್ರವೀದ್ರಾಮಮ್ ಅಗಸ್ತ್ಯೋ ಭಗವಾನ್ ಋಷಿಃ
ಯುದ್ಧದಲ್ಲಿ ರಾವಣನ ಪಾಳಯದ ಕೈಮೇಲಾಗುತ್ತಾ ವಾನರ ಸೇನೆ ಸಂಕಷ್ಟಕ್ಕೀಡಾಗುತ್ತದೆ. ಆಗ ಶ್ರೀ ರಾಮ, “ರಾವಣನನ್ನು ಕೊಲ್ಲುವುದು ಹೇಗೆ?” ಎಂದು ಯೋಚಿಸತೊಡಗುತ್ತಾನೆ. ಆಗ ಅಲ್ಲಿಗೆ ಬರುವ ಅಗಸ್ತ್ಯ ಮುನಿಗಳು “ರಾಮ, ಈಗ ನಾನು ನಿನಗೆ ಆದಿತ್ಯ ಹೃದಯವನ್ನು ಉಪದೇಶಿಸುತ್ತೇನೆ. ಸ್ವೀಕರಿಸು. ಇದನ್ನು ಪಡೆದ ಮೇಲೆ ನಿನಗೆ ಯಾವ ಬಗೆಯ ಗೊಂದಲವೂ ಉಂಟಾಗುವುದಿಲ್ಲ. ನಿನಗೆ ಆತಂಕವಾದಾಗ, ಗೊಂದಲವಾದಾಗ ಇದನ್ನು ಪಠಿಸು. ಇದು ನಿನಗೆ ರಕ್ಷಣೆಯನ್ನ ಕೊಡುತ್ತದೆ” ಎಂದು ಹೇಳಿ ಆದಿತ್ಯ ಹೃದಯವನ್ನು ಬೋಧಿಸಲು ಆರಂಭಿಸಿದರು.
“ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ
ರಾಮ, ಸನಾತನವಾದ ಈ ರಹಸ್ಯವನ್ನು ಕೇಳು. ಇದು ಯುದ್ಧದಲ್ಲಿ ನಿನ್ನ ಶತೃಗಳನ್ನು ನಾಶಮಾಡಲು ಸಹಾಯ ಮಾಡುತ್ತದೆ
ಆದಿತ್ಯ ಹೃದಯಂ ಪುಣ್ಯಂ ಸರ್ವಶತ್ರು ವಿನಾಶನಮ್
ಜಯಾವಹಂ ಜಪೇನ್ನಿತ್ಯಮ್ ಅಕ್ಷಯ್ಯಂ ಪರಮಂ ಶಿವಮ್
ಅದಿತಿಯ ಮಗನಾದ ಆದಿತ್ಯನಿಗೆ ಇದು ಅರ್ಪಿತವಾಗಿದೆ. ಈ ಸ್ತೋತ್ರ ನಿನ್ನ ಶತೃಗಳನ್ನು ನಾಶ ಮಾಡಿ ನಿನಗೆ ಅನಂತವಾದ ಆನಂದವನ್ನು ಕೊಡುತ್ತದೆ
ಸರ್ವಮಂಗಳ ಮಾಂಗಲ್ಯಂ ಸರ್ವ ಪಾಪ ಪ್ರಣಾಶನಮ್
ಚಿಂತಾಶೋಕ ಪ್ರಶಮನಮ್ ಆಯುರ್ವರ್ಧನ ಮುತ್ತಮಮ್
ಇದು ಮಂಗಳವಾದ ಶ್ಲೋಕ. ನಿನ್ನ ಎಲ್ಲ ಪಾಪಗಳನ್ನೂ, ಚಿಂತೆ, ಶೋಕಗಳನ್ನೂ ನಾಶ ಮಾಡಿ ನಿನ್ನ ಆಯಸ್ಸನ್ನು ವೃದ್ಧಿಸುತ್ತದೆ
ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಮ್
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್
ದೇವಾಸುರರಿಂದ ನಮಸ್ಕೃತನಾದ ಸೂರ್ಯ ಪೂರ್ಣವಾಗಿ ಉದಯಿಸಿದ ಮೇಲೆ, ಅವನ ಕಾಂತಿಯಿಂದ ಮಿಕ್ಕ ಎಲ್ಲವೂ ಉದಯಿಸುತ್ತದೆ. ಅವನಿಗೆ ನೀನು ನಮಸ್ಕರಿಸು
ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ
ಏಷ ದೇವಾಸುರ ಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ
ಸರ್ವದೈವವೂ ಅವನೇ. ಅವನು ತೇಜಸ್ವಿ, ತನ್ನ ಕಿರಣಗಳಿಂದಲೇ ತನ್ನ ಅಸ್ತಿತ್ವವನ್ನು ಪಡೆಯುತ್ತಾನೆ. ಲೋಕದಲ್ಲಿನ ದೇವಾಸುರರನ್ನು ಅವನೇ ನೋಡಿಕೊಳ್ಳುತ್ತಾನೆ
ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ
ಅವನೇ ಬ್ರಹ್ಮ, ಅವನೇ ವಿಷ್ಣು. ಶಿವ, ಸ್ಕಂದ, ಪ್ರಜಾಪತಿ, ಇಂದ್ರ, ಕುಬೇರ, ಕಾಲ, ಯಮ, ಸೋಮ, ವರುಣ ಎಲ್ಲರೂ ಅವನೇ
ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ
ವಾಯುರ್ವಹ್ನಿಃ ಪ್ರಜಾಪ್ರಾಣಃ ಋತುಕರ್ತಾ ಪ್ರಭಾಕರಃ
ಪಿತೃ, ವಸು, ಸಾಧ್ಯ, ಅಶ್ವಿನಿ ದೇವತೆಗಳು, ಮರುತ, ಮನು, ಅಗ್ನಿ, ಪ್ರಾಣ ಎಲ್ಲವೂ ಅವನೇ. ಸೂರ್ಯನೇ ಋತುಗಳಿಗೂ ಕಾರಣ
ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್
ಸುವರ್ಣಸದೃಶೋ ಭಾನುಃ ಹಿರಣ್ಯರೇತಾ ದಿವಾಕರಃ
ಅವನೇ ಸವಿತೃ, ಪೂಷ. ಅವನ ಬಂಗಾರ ಸದೃಶವಾದ ಕಿರಣಗಳೇ ಈ ಪ್ರಪಂಚದ ಧಾತು. ಅವನೇ ದಿವಾಕರ
ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿ-ರ್ಮರೀಚಿಮಾನ್
ತಿಮಿರೋನ್ಮಥನಃ ಶಂಭುಃ ತ್ವಷ್ಟಾ ಮಾರ್ತಾಂಡಕೋ‌ಸ ಅಂಶುಮಾನ್
ಅವನ ಬಳಿ ಏಳು ಹಸಿರು ಕುದುರೆಗಳಿವೆ. ಅವನದು ಅಸಂಖ್ಯ ಕಿರಣಗಳು. ಅವನು ಕತ್ತಲನ್ನು ಹೋಗಲಾಡಿಸಿ, ಆನಂದವನ್ನು ಕೊಡುತ್ತಾನೆ. ನಿರ್ಜೀವ ಪ್ರಪಂಚಕ್ಕೆ ಜೀವ ಕೊಡುವವನು ಅವನೇ
ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ
ಅಗ್ನಿಗರ್ಭೋ‌sದಿತೇಃ ಪುತ್ರಃ ಶಂಖಃ ಶಿಶಿರನಾಶನಃ
ಅವನೇ ಭ್ರೂಣ. ತಂಪು, ಶಾಖಗಳ ಕರ್ತೃ ಅವನೇ. ಅದಿತಿಯ ಪುತ್ರನಾದ ಅವನು ಅಗ್ನಿಯನ್ನು ಹೊಟ್ಟೆಯಲ್ಲಿಟ್ಟುಕೊಂಡಿದ್ದಾನೆ
ವ್ಯೋಮನಾಥಸ್ತಮೋಭೇದೀ ಋಗ್ಯಜುಃಸಾಮ-ಪಾರಗಃ
ಘನಾವೃಷ್ಟಿ ರಪಾಂ ಮಿತ್ರೋ ವಿಂಧ್ಯವೀಥೀ ಪ್ಲವಂಗಮಃ
ಅವನು ಆಕಾಶದಲ್ಲಿ ತಿರುಗುತ್ತಾನೆ. ನೀರಿನ ಮಿತ್ರ. ಸಕಲ ವೇದಾಪಾರಂಗತ. ಆಕಾಶದ ರಾಜ. ಅವನು ಕತ್ತಲನ್ನು ಹೋಗಲಾಡಿಸುತ್ತಾನೆ
ಆತಪೀ ಮಂಡಲೀ ಮೃತ್ಯುಃ ಪಿಂಗಳಃ ಸರ್ವತಾಪನಃ
ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ
ಶಾಖವನ್ನು ಪ್ರಸರಿಸುವವನೂ ಅವನೇ, ಮೃತ್ಯುವೂ ಅವನೇ. ಎಲ್ಲರಲ್ಲೂ ಪ್ರೀತಿಯಿಡುವ ಅವನೇ ಎಲ್ಲದಕ್ಕೂ ಮೂಲ
ನಕ್ಷತ್ರ ಗ್ರಹ ತಾರಾಣಾಮ್ ಅಧಿಪೋ ವಿಶ್ವಭಾವನಃ
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್-ನಮೋ‌sಸ್ತು ತೇ
ನಕ್ಷತ್ರ, ಗ್ರಹಗಳನ್ನು ಸೃಷ್ಠಿಸಿದವನಿಗೆ, ಹನ್ನೆರಡು ರೂಪದಲ್ಲಿರುವವನಿಗೆ ನಮಸ್ಕಾರ
ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ
ಪೂರ್ವ, ಪಶ್ಚಿಮ ಗಿರಿಗಳ ರೂಪದಲ್ಲಿರುವವನಿಗೆ, ಬೆಳಕಿನ, ದಿನಗಳ ಅಧಿಪತಿಗೆ ನಮಸ್ಕಾರ
ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ
ಜಯನಿಗೆ, ಜಯವನ್ನು ಕೊಡುವವನಿಗೆ, ಹಸಿರು ಕುದುರೆಗಳನ್ನು ಪಡೆದವನಿಗೆ, ಸಹಸ್ರ ಕಿರಣಗಳನ್ನು ಉಳ್ಳವನಾದ ಆದಿತ್ಯನಿಗೆ ನಮಸ್ಕಾರ
ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ
ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ
ಉಗ್ರನಾದ, ವೀರನಾದ, ಶಾಂತನಾದ, ಮಾರ್ತಾಂಡನಾದ ನಿನಗೆ ನಮಸ್ಕಾರ
ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ-ವರ್ಚಸೇ
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ
ಬ್ರಹ್ಮ, ವಿಷ್ಣು, ಶಿವ ಇವರ ರಾಜನಿಗೆ, ರುದ್ರನ ರೂಪದಲ್ಲಿರುವವನಿಗೆ, ಸುಂದರನಾದ ನಿನಗೆ ನಮಸ್ಕಾರ
ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾ ಮಿತಾತ್ಮನೇ
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ
ಕತ್ತಲನ್ನು, ಶತೃಗಳನ್ನು, ಚಳಿಯನ್ನು, ಕೃತಘ್ನರನ್ನು ಹೋಗಲಾಡಿಸುವವನಿಗೆ, ಜ್ಯೋತಿಗಳ ಒಡೆಯನಿಗೆ ನಮಸ್ಕಾರ
ತಪ್ತ ಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ
ನಮಸ್ತಮೋ‌sಭಿ ನಿಘ್ನಾಯ ರುಚಯೇ ಲೋಕಸಾಕ್ಷಿಣೇ
ಲೋಕವನ್ನು ಸೃಷ್ಠಿಸಿದವನಿಗೆ, ಹೊಳೆಯುವ ಸ್ವರ್ಣವನ್ನು ಹೊಂದಿದವನಿಗೆ, ಕತ್ತಲನ್ನು ಹೋಗಲಾಡಿಸುವವನಿಗೆ, ವಿಶ್ವವನ್ನು ನೋಡಿಕೊಳ್ಳುವವನಿಗೆ ನಮಸ್ಕಾರ
ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ
ಸೃಷ್ಠಿ, ಲಯಗಳಿಗೆ ಅವನೇ ಕಾರಣ. ತನ್ನ ಕಿರಣಗಳಿಂದ ಬೆಳಕನ್ನು ಕೊಡುವವನೂ ಅವನೇ. ಮಳೆಯನ್ನು ಕೊಡುವವನೂ ಅವನೇ
ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿಹೋತ್ರಿಣಾಮ್
ಎಲ್ಲ ಜೀವಿಗಳಲ್ಲಿಯೂ ಇರುವ ಅವನು ಎಲ್ಲ ಮಲಗಿದಮೇಲೂ ಜಾಗ್ರತನಾಗಿರುತ್ತಾನೆ. ಅಗ್ನಿಯಿಂದ ಹವಿಸ್ಸನ್ನು ಪಡೆಯುವವನೂ, ಅದರ ಫಲವನ್ನು ಕೊಡುವವನೂ ಅವನೇ
ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ
ಎಲ್ಲ ದೇವರುಗಳೂ, ಕ್ರತುಗಳೂ ಅದರ ಫಲಗಳೂ ಎಲ್ಲವೂ ಅವನೇ. ಪ್ರಪಂಚದ ಎಲ್ಲ ಕಾರ್ಯಗಳಲ್ಲಿಯೂ ಅವನಿರುತ್ತಾನೆ
ಏನ ಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ
ಕೀರ್ತಯನ್ ಪುರುಷಃ ಕಶ್ಚಿನ್-ನಾವಶೀದತಿ ರಾಘವ
ರಾಮ, ಯಾರು ಸೂರ್ಯನನ್ನು ಆರಾಧಿಸುವವರೋ ಅವರಿಗೆ ತೊಂದರೆಗಳು, ದುಃಖಗಳು ಇರುವುದಿಲ್ಲ.
ಪೂಜಯಸ್ವೈನಮೇಕಾಗ್ರೋ ದೇವದೇವಂ ಜಗತ್ಪತಿಮ್
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ
ದೇವತೆಗಳ ದೇವನಾದ ಸೂರ್ಯನನ್ನು ಆರಾಧಿಸು. ಇದನ್ನು ಮೂರು ಬಾರಿ ಜಪಿಸಿದರೆ ನೀನು ಎಲ್ಲ ಯುದ್ಧಗಳಲ್ಲಿಯೂ ವಿಜಯಿಯಾಗುತ್ತೀಯ.
ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ
ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಚ ಯಥಾಗತಮ್
ಇದನ್ನು ನೀನು ಪಠಿಸು. ನಿನಗೆ ಜಯವಾಗುತ್ತದೆ. ನಿನ್ನ ಆಸೆಗಳು ಸಿದ್ಧಿಸುತ್ತವೆ. ನೀನು ರಾವಣನನ್ನು ಜಯಿಸುವುದು ಸಾಧ್ಯವಾಗುತ್ತದೆ.

Leave a Reply