“ಮನುಷ್ಯನಿಗೆ ಅತ್ಯಂತ ಅಗತ್ಯವಾದದ್ದು, ಅವನು ತನ್ನ ಒಂಟಿತನವನ್ನ, ಪ್ರತ್ಯೇಕತೆಯನ್ನು ಮೀರುವುದು” ಎಂದು ಪ್ರತಿಪಾದಿಸುವ ಎರಿಕ್ ಫ್ರೋಮ್, ಅದನ್ನು ಸಾಧಿಸುವ ವಿಧಾನಗಳ ಬಗ್ಗೆ ಚರ್ಚಿಸುತ್ತಾರೆ. ಅದರ ಮುಂದಿನ ಭಾಗ ಇಲ್ಲಿದೆ… । ಕನ್ನಡಕ್ಕೆ: ಚಿದಂಬರ ನರೇಂದ್ರ
ಈ ಗುರಿಯನ್ನ ಸಾಧಿಸಿಕೊಳ್ಳುವ ಒಂದು ದಾರಿ ಎಲ್ಲ ರೀತಿಯ ಉನ್ಮತ್ತ ಸ್ಥಿತಿಯನ್ನ ಹೊಂದುವುದರಲ್ಲಿದೆ. ಈ ಸ್ಥಿತಿಗಳು ಕೆಲವೊಮ್ಮೆ ಸ್ವಯಂ ಪ್ರೇರಿತ ಉನ್ಮತ್ತ ಅಥವಾ ಭಾವಪರವಶತೆಯ ಸ್ಥಿತಿಯನ್ನ ಮುಟ್ಟುವುದಾಗಿರಬಹುದು, ಅಥವಾ ಮಾದಕ ದೃವ್ಯಗಳ ( ಡ್ರಗ್ಸ್) ಬಳಕೆಯಿಂದಾಗಿರಬಹುದು. ಪುರಾತನ ಬುಡಕಟ್ಟುಗಳ ಹಲವಾರು ಸಂಪ್ರದಾಯಗಳಲ್ಲಿ ಈ ರೀತಿಯ ಪರಿಹಾರದ ಸ್ಪಷ್ಟ ಚಿತ್ರಗಳನ್ನ ಕಾಣಬಹುದು. ಇಂಥ ಭಾವೋನ್ನತಿಯ ಕ್ಷಣಿಕ ಸ್ಥಿತಿಯಲ್ಲಿ ಹೊರಗಿನ ಜಗತ್ತು ಮಾಯವಾಗುತ್ತದೆ ಮತ್ತು ಅದರೊಂದಿಗೆ ಅದರೊಳಗಿನ ಪ್ರತ್ಯೇಕತೆಯ ಭಾವನೆ ಕೂಡ.
ಬಹುತೇಕ ಇಂಥ ಆಚರಣೆಗಳಲ್ಲಿ ಸಾಮಾನ್ಯವಾಗಿ ಗುಂಪುಗಳೊಂದಿಗೆ ಒಂದಾಗುವ ಅನುಭವವನ್ನೂ ಸೇರಿಸಲಾಗಿರುತ್ತದೆ ಮತ್ತು ಇದರಿಂದಾಗಿಯೇ ಈ ಪರಿಹಾರ ಹೆಚ್ಚು ಪರಿಣಾಮಕಾರಿಯಾಗಿ ಹೊರಹೊಮ್ಮುತ್ತದೆ. ಈ ಭಾವಪರವಶತೆಯ ಪರಿಹಾರದೊಂದಿಗೆ ಅತೀ ಹತ್ತಿರದಲ್ಲಿ ಸೂಚಿಸಲಾಗುವ ಇನ್ನೊಂದು ಪರಿಹಾರವೆಂದರೆ ಲೈಂಗಿಕ ಅನುಭವದ ಪರಿಹಾರ. ಲೈಂಗಿಕ ಪರಾಕಾಷ್ಠತೆ (sexual orgasm) ಕೂಡ ಭಾವೋನ್ನತಿಗೆ ಸಮಾನವಾದ ಅಥವಾ ಡ್ರಗ್ಸ್ ಗಳು ಕೊಡುವಂಥ ಉತ್ಕಟ ಅನುಭವವನ್ನ ಸಾಧ್ಯ ಮಾಡುವುದು. ಸಾಮುದಾಯಿಕ ಲೈಂಗಿಕ ಪರಾಕಾಷ್ಠೆಯ ವಿಧಿಗಳು ಪ್ರಾಚೀನ ಸಂಪ್ರದಾಯಗಳ ಭಾಗವಾಗಿದ್ದವು. ಲೈಂಗಿಕ ಭಾವೋನ್ನತಿಯ ಅನುಭವದ ನಂತರ ಮನುಷ್ಯ ಎಷ್ಟೋ ಹೊತ್ತು ತನ್ನ ಪ್ರತ್ಯೇಕತೆಯ ಭಾವನೆಯಿಂದ ಹೊರತಾಗಿರಬಲ್ಲ ಎನ್ನುವ ನಂಬಿಕೆ ಇತ್ತು. ಆದರೆ ನಿಧಾನವಾಗಿ ಈ ಸ್ಥಿತಿಯನ್ನ ಉಳಿಸಿಕೊಳ್ಳುವ ಆತಂಕದ ಒತ್ತಡ ಹೆಚ್ಚಾಗುತ್ತ ಹೋಗಿ ಕೊನೆಗೆ ಸಂಪ್ರದಾಯದ ಆಚರಣೆಯ ಪುನರಾವರ್ತನೆಯಿಂದಾಗಿ ಆತಂಕ ಕಡಿಮೆಯಾಗುತ್ತ ಹೋಗುತ್ತದೆ.
ಎಲ್ಲಿಯವರೆಗೆ ಈ ಭಾವೋನ್ನತಿಯ ಸ್ಥಿತಿಯ ಸಂಗತಿಗಳು ಬುಡಕಟ್ಟುಗಳಲ್ಲಿ ಸಾಮಾನ್ಯ ಆಚರಣೆಯಾಗಿರುತ್ತದೋ ಅಲ್ಲಿಯವರೆಗೆ ಆ ಬುಡಕಟ್ಟುಗಳಲ್ಲಿ ಆತಂಕ, ಅಪರಾಧಿ ಮನೋಭಾವದ ಸಮಸ್ಯೆ ಇರುವುದಿಲ್ಲ. ಈ ರೀತಿಯ ಬದುಕು ಸರಿಯಾದದ್ದು ಹಾಗು ಮೌಲ್ಯಗಳಿಗೂ ಹೊಂದಿಕೆಯಾಗುವಂಥದು ಏಕೆಂದರೆ, ಈ ಪದ್ಧತಿಗಳು ವೈದ್ಯಕೀಯ ಅಥವಾ ಪುರೋಹಿತ ವರ್ಗದ ಅನುಮತಿ ಪಡೆದಂಥವು, ಹಾಗಾಗಿ ಜನ ಅಪರಾಧಿ ಮನೋಭಾವ ಮತ್ತು ಅವಮಾನಕ್ಕೆ ತುತ್ತಾಗುವ ಅವಶ್ಯಕತೆಯೇ ಇಲ್ಲ. ಇಂಥ ಪದ್ಧತಿಗಳನ್ನ, ಆಚರಣೆಗಳನ್ನ ಬಿಟ್ಟುಬಿಟ್ಟಿರುವ ಸಮಾಜದಲ್ಲಿ ಒಬ್ಬ ವ್ಯಕ್ತಿ ತನ್ನ ಪ್ರತ್ಯೇಕತೆಯ ಸಮಸ್ಯೆ ಬಗೆಹರಿಸಿಕೊಳ್ಳಲು ಮದ್ಯಪಾನ, ಮಾದಕ ದೃವ್ಯ ಸೇವನೆಯಂಥ ಭಾವೋನ್ನತಿಯ ಸಾಧನಗಳ ಮೊರೆ ಹೋದರೆ ಅಲ್ಲಿ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಮತ್ತು ಅವರು ಅಪರಾಧಿ ಮನೋಭಾವ ಮತ್ತು ಪಶ್ತಾತಾಪದ ಸುಳಿಗೆ ಸಿಲುಕುತ್ತಾರೆ. ತಮ್ಮ ಪ್ರತ್ಯೇಕತಾ ಭಾವದಿಂದ ಹೊರಬರಲು ಮದ್ಯ ಮತ್ತು ಮಾದಕ ದೃವ್ಯಗಳಿಗೆ ಶರಣಾದವರು ತಮ್ಮ ನಶೆ (ಭಾವೋನ್ನತಿಯ ಸ್ಥಿತಿ) ಮುಗಿದ ನಂತರ ಇನ್ನೂ ಹೆಚ್ಚಿನ ಪ್ರತ್ಯೇಕತಾ ಭಾವವನ್ನ ಅನುಭವಿಸುತ್ತಾರೆ ಮತ್ತು ಇಂಥ ಸ್ಥಿತಿಯಿಂದ ಹೊರಬರಲು ಮತ್ತೆ ಮತ್ತೆ ಇನ್ನೂ ಹೆಚ್ಚಿನ ಮದ್ಯ ಮತ್ತು ಮಾದಕ ದೃವ್ಯಗಳ ವ್ಯಸನಕ್ಕೆ ಶರಣಾಗುತ್ತಾರೆ.
ಲೈಂಗಿಕ ಭಾವೋನ್ನತಿಯ ಪರಿಹಾರ ಇದಕ್ಕಿಂತ ಕೊಂಚ ವಿಭಿನ್ನವಾದ ಸಂಗತಿ. ಪ್ರತ್ಯೇಕತಾ ಭಾವದಿಂದ ಹೊರ ಬರಲು ಲೈಂಗಿಕ ಪರಾಕಾಷ್ಠತೆ ಸ್ವಲ್ಪ ಮಟ್ಟಿಗೆ ಸಹಜ ಮತ್ತು ಸಾಮಾನ್ಯ ಪರಿಹಾರ ಮತ್ತು ಇದು ಒಂಟಿತನದಿಂದ ಹೊರಬರಲು ಭಾಗಶಃ ಸಹಾಯಕರ. ಆದರೆ ಕೆಲವು ವ್ಯಕ್ತಿಗಳಲ್ಲಿ, ಯಾರೊಳಗೆ ಪ್ರತ್ಯೇಕತೆಯ ಸಮಸ್ಯೆ ಬೇರೆ ಯಾವ ಪರಿಹಾರಗಳಿಂದಲೂ ನಿವಾರಣೆಯಾಗಿಲ್ಲವೋ ಅವರಲ್ಲಿ ಲೈಂಗಿಕ ಪರಾಕಾಷ್ಠತೆ (sexual orgasm) ಕೂಡ ಮದ್ಯಪಾನ, ಮಾದಕ ದೃವ್ಯಗಳ ಸೇವನೆಯಂತೆ ವ್ಯಸನದಲ್ಲಿ ಕೊನೆಗೊಳ್ಳುತ್ತದೆ. ಲೈಂಗಿಕ ಸಾಹಸಗಳು, ಪ್ರತ್ಯೇಕತಾ ಭಾವ ಸೃಷ್ಟಿಸಿದ ಆತಂಕದಿಂದ ಪಾರಾಗಲು ಮಾಡಿದ ಹತಾಶ ಪ್ರಯತ್ನದಂತೆ ಕೆಲಸ ಮಾಡುತ್ತವೆ ಹಾಗು ಎಂದೂ ಕಡಿಮೆಯಾಗದ ಪ್ರತ್ಯೇಕತೆಯ ಸಮಸ್ಯೆಗೆ ಕಾರಣವಾಗುತ್ತದೆ ಏಕೆಂದರೆ, ಪ್ರೀತಿಯಿಂದ ಹೊರತಾದ ಲೈಂಗಿಕ ಕ್ರಿಯೆ ಇಬ್ಬರು ವ್ಯಕ್ತಿಗಳ ನಡುವಿನ ಅಂತರಕ್ಕೆ ಸೇತುವೆಯಾಗುವುದು ಯಾವತ್ತೂ ಸಾಧ್ಯವಿಲ್ಲ , ಕೆಲವೇ ಕೆಲವು ಮಧುರ ಕ್ಷಣಗಳನ್ನು ಮಾತ್ರ ಹೊರತುಪಡಿಸಿ.
ಎಲ್ಲ ಬಗೆಯ ಭಾವೋನ್ನತಿಯ ಒಂದಾಗುವಿಕೆಗೆ ಮೂರು ಮುಖ್ಯ ಲಕ್ಷಣಗಳು : ಅವು ಗಾಢ, ಹಿಂಸಾತ್ಮಕ ಕೂಡ ; ದೇಹ ಮತ್ತು ಮನಸ್ಸುಗಳನ್ನ ಒಳಗೊಂಡಂತೆ ಪೂರ್ಣ ವ್ಯಕ್ತಿತ್ವದಲ್ಲಿ ಸಂಭವಿಸುವಂಥದು ; ಅವು ಕ್ಷಣಿಕ ಹಾಗು ಮತ್ತೆ ಮತ್ತೆ ಮರುಕಳಿಸುವಂಥವು. ಇದಕ್ಕೆ ಥೇಟ್ ವಿರುದ್ಧವಾದಂಥದು, ಹಿಂದಿನ ಮತ್ತು ಇಂದಿನ ಮನುಷ್ಯ ಕೂಡ ಆರಿಸಿಕೊಂಡಿರುವ ಅತೀ ಹೆಚ್ಚು ಚಲಾವಣೆಯಲ್ಲಿರುವ ಪರಿಹಾರ : ಸಮುದಾಯದ ಒಪ್ಪಿಗೆಯಲ್ಲಿ ನಡೆಯುವ ಒಂದಾಗುವಿಕೆಯ ಆಚರಣೆಗಳು, ಪದ್ಧತಿಗಳು ಮತ್ತು ನಂಬಿಕೆಗಳು. ಇಲ್ಲಿ ಕೂಡ ಗಮನಾರ್ಹ ಬೆಳವಣಿಗೆಯನ್ನ ಗುರುತಿಸಬಹುದು.
1 Comment