ಜಪ ಎಂದರೇನು? ಜಪದಲ್ಲಿ ಎಷ್ಟು ವಿಧ? : ಬೆಳಗಿನ ಹೊಳಹು

ಜಪ, ಭಗವಂತನನ್ನು ನೆನೆಯುವ ಸುಂದರವಾದ ಸಾಧನ. ಜಪ ನಮ್ಮ ಮನಸ್ಸನ್ನು ತೈಲಧಾರೆಯಂತೆ ಜಗನ್ನಿಯಾಮಕ ಶಕ್ತಿಯಲ್ಲಿ ನೆಲೆಯಾಗಿರಿಸುತ್ತದೆ. ಇಂಥಾ ಜಪದ ಬಗ್ಗೆ ಮತ್ತು ಜಪವಿಧಾನಗಳ ಬಗ್ಗೆ ಸನಾತನ ಶಾಸ್ತ್ರಗಳು ಏನು ಹೇಳುತ್ತವೆ? ಇಲ್ಲಿ ನೋಡಿ…

ಜಕಾರೋ ಜನ್ಮ ವಿಚ್ಛೇದಃ ಪಕಾರಃ ಪಾಪ ನಾಶನಂ | ತಸ್ಮಾತ್ ಜಪ ಇತಿಪ್ರೀಕ್ತೋ ಜನ್ಮಪಾಪ ವಿನಾಶಕಃ ||

ಭಾವಾರ್ಥ: ಜ ಎಂಬ ಅಕ್ಷರದಿಂದ ಜನ್ಮದ ನಂಟು ಕಳೆಯತ್ತೆ. ಪ ಕಾರ: ಪಾಪನಾಶನಂ ಪ ಕಾರ ಪಾಪ ನಾಶ ಮಾಡುತ್ತದೆ. ಹಾಗಾಗಿ ಇದು ಜನ್ಮಪಾಪ ವಿನಾಶಕವಾದ ಪದವಾಗಿದೆ.

ಜಪವು ನಮ್ಮನ್ನು ನಿರಂತರವಾದ ಜನನ – ಮರಣ ಚಕ್ರದಿಂದ ಮುಕ್ತಗೊಳಿಸುತ್ತದೆ ಎಂಬ ನಂಬಿಕೆ ಇದೆ. ದೇಶ – ಕಾಲ ಹಾಗೂ ಅನುಕೂಲಕ್ಕೆ ತಕ್ಕಂತೆ ಹಲವು ವಿಧದ ಜಪಗಳನ್ನು ಹೇಳಲಾಗಿದ್ದು, ಅವುಗಳಲ್ಲಿ 9 ಬಗೆಯ ಜಪ ವಿಧಾನಗಳನ್ನು ಇಲ್ಲಿ ನೀಡಲಾಗಿದೆ.

ನಿತ್ಯ ಜಪ: ನಿತ್ಯವೂ ತಪ್ಪದೇ ಒಂದು ನಿಗದಿತ ಸಮಯದಲ್ಲಿ ಮಾಡುವ ಜಪ. ಇದನ್ನು ಆತ್ಮೋನ್ನತಿಯ ಮಾರ್ಗವೆಂದು ಹೇಳಲಾಗಿದೆ.

ನೈಮಿತ್ತಿಕ ಜಪ: ಇದು ವಿಶೇಷ ದಿನಗಳಲ್ಲಿ ಮಾಡುವ ಜಪ. ಸಂಕ್ರಮಣ, ನವರಾತ್ರಿ, ಶಿವರಾತ್ರಿ ಇಂಥ ಪರ್ವ ಕಾಲದಲ್ಲಿ ಮಾಡುವ ಜಪ. ಇದು ಸಾಂದರ್ಭೀಕ ಫಲವಿಶೇಷಗಳನ್ನು ನೀಡುತ್ತವೆ ಎಂದು ಹೇಳಲಾಗಿದೆ.

ಕಾಮ್ಯ ಜಪ : ಇದು ಒಂದು ನಿರ್ದಿಷ್ಟ ಅಪೇಕ್ಷೆಯಿಂದ ಮಾಡುವ ಜಪ. ಯಾವ ಬಯಕೆ ಇಟ್ಟುಕೊಂಡು ಜಪ ಮಾಡುತ್ತೇವೋ ಅದು ಫಲಿಸುವುದೆಂದು ಹೇಳಲಾಗಿದೆ.

ಪ್ರದಕ್ಷಿಣಾ ಜಪ: ದೇವಾಲಯದಲ್ಲಿ, ಅಶ್ವತ್ಥದ ಬಳಿಯಲ್ಲಿ ಮಾಡುವ ಪ್ರದಕ್ಷಿಣಾ ಜಪ.

ಅಖಂಡ ಜಪ: ಇದು ಖಂಡ ಮಾಡದೇ ಮಾಡುವ (ನಿಲ್ಲಿಸದೆ, ನಿರಂತರವಾಗಿ) ಜಪ. ಒಂದು ನಿರ್ದಿಷ್ಟ ಕಾಲದಲ್ಲಿ ಪ್ರಾರಂಭಿಸಿ ಎಡಬಿಡದೆ ನಿರ್ದಿಷ್ಟ ಕಾಲದವರೆಗೆ ಹಗಲೂ ರಾತ್ರಿ ಎನ್ನದೆ ನಿರಂತರವಾಗಿ ಮಾಡುವ ಜಪ.

ಅಜಪಾಜಪ: ಇದನ್ನು ಹಂಸ ಜಪ ಎನ್ನಲಾಗುತ್ತದೆ. ಸೋSಹಂ ಮಂತ್ರವು ಅಜಾಪಜಪವಾಗಿದೆ.

ಲಿಖಿತ ಜಪ: ಇದು ದೇವರ ನಾಮಗಳನ್ನು ಬರೆಯುತ್ತಾ ಜಪಿಸುವ ವಿಧಾನ.

ಅಚಲ ಜಪ: ಒಂದು ಕಡೆ ಸ್ಥಿರವಾಗಿ ಕುಳಿತು ಮಾಡುವ ಜಪ.

ಚಲ ಜಪ: ಓಡಾಡುತ್ತಾ ಹೇಳಿಕೊಳ್ಳಬಹುದಾದ ಜಪ. ಇದನ್ನು ಸಂಕೀರ್ತನ ಜಪ ಎಂದೂ ಕರೆಯಲಾಗುತ್ತದೆ.

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಈ ಜಪವನ್ನ ಯಜ್ಞ ಎಂದು ಕರೆದಿದ್ದಾನೆ. ಕಲಿಯುಗದಲ್ಲಂತೂ ಜಪವೇ ಯಜ್ಞ. ನಮಗೆ ಯಾವ ಜಪವಿಧಾನ ಸೂಕ್ತ ಎನ್ನಿಸುತ್ತದೆಯೋ ಅದನ್ನು ಗುರುಮುಖೇನ ದೀಕ್ಷೆ ಪಡೆದು ಅನುಷ್ಠಾನ ಮಾಡಬಹುದಾಗಿದೆ.

ಏಕಾಕ್ಷರದಿಂದ 24 ಅಕ್ಷರಗಳವರೆಗೆ…

ಏಕಾಕ್ಷರಿ ಮಂತ್ರ : ಓಂ

ದ್ವ್ಯಕ್ಷರಿ ಮಂತ್ರ : ರಾಮ

ತ್ರ್ಯಕ್ಷರೀ ಮಂತ್ರ – ಶ್ರೀ ರಾಮ, ಓಂ ಶೀವ, ಶಿವೋSಹಂ

ಪಂಚಾಕ್ಷರೀ ಮಂತ್ರ : ನಮಃ ಶಿವಾಯ

ಷಡಕ್ಷರೀ ಮಂತ್ರ :  ಓಂ ನಮ: ಶಿವಾಯ, ಹ್ರೀಂ ನಮಃ ಶಿವಾಯ, ಓಂ ಶಿವಾಯೈ ನಮಃ

ಅಷ್ಟಾಕ್ಷರೀ ಮಂತ್ರ :  ಓಂ ನಮೋ ನಾರಾಯಣಾಯ

ದಶಾಕ್ಷರೀ ಮಂತ್ರ :  ಓಂ ನಮೋ ಭಗವತೇ ರುದ್ರಾಯ

ದ್ವಾದಶಾಕ್ಷರೀ ಮಂತ್ರ : ಓಂ ನಮೋ ಭಗವತೇ ವಾಸುದೇವಾಯ / ಶ್ರೀ ಲಲಿತಾತ್ರಿಪುರ ಸೌಂದರ್ಯೈ ನಮಃ

ತ್ರಯೋದಶಾಕ್ಷರೀ ಮಂತ್ರ : ಓಂ ಶ್ರೀ ಲಲಿತಾತ್ರಿಪುರ ಸೌದರ್ಯೈ ನಮಃ

ಪಂಚದಶಾಕ್ಷರೀ ಮಂತ್ರ : ಕ ಏ ಈ ಲ ಹ್ರೀಂ ಹ ಸ ಕ ಹ ಲ ಹ್ರೀಂ ಸಕಲ ಹ್ರೀಂ

ಚತುರ್ವಿಂಶತ್ಯಕ್ಷರ : ಗಾಯತ್ರೀ ಮಂತ್ರ

Leave a Reply