ಎಲ್ಲಕ್ಕಿಂತ ಮುಖ್ಯವಾಗಿ ನಾವು ರೂಢಿಸಿಕೊಳ್ಳಬೇಕಾದ ಸಂಗತಿಯೊಂದಿದೆ. ಯಾವುದೇ ವಸ್ತು ಅಥವಾ ವಿಷಯವನ್ನು ಅದು ಇರುವ ಹಾಗೇ ಗ್ರಹಿಸುವುದು. ಯಾವುದೇ ವ್ಯಾಖ್ಯಾನಗಳಿಲ್ಲದೆ ಗ್ರಹಿಸುವುದು… । ಅಲಾವಿಕಾ
ಬಹುತೇಕವಾಗಿ ನಾವೆಲ್ಲರೂ ಒಂದು ತಪ್ಪು ಮಾಡುತ್ತೇವೆ. ಯಾವುದೇ ಪದ ಅಥವಾ ವಸ್ತುವನ್ನು ಒಂದು ಪೂರ್ವಗ್ರಹದೊಂದಿಗೆ ನೋಡುತ್ತೇವೆ. ಈ ಹಿಂದಿನತನಕ ಆ ವಸ್ತು ಅಥವಾ ಪದೊಂದಿಗೆ ನಮ್ಮ ಅನುಭವ ಏನಿದೆಯೋ ಅದರಂತೆ ನಮ್ಮ ಗ್ರಹಿಕೆ ಇರುತ್ತದೆ. ಅಥವಾ ಅದು ನಮ್ಮ ನೇರ ಅನುಭವಕ್ಕೆ ಆತನಕ ದಕ್ಕಿರುವ ಸಂಗತಿಯಾಗಿರದೇ ಹೋದಲ್ಲಿ, ಇತರರ ಅನುಭವ ಅಥವಾ ಅಭಿಪ್ರಾಯದ ಮೇಲೆ ನಮ್ಮ ಗ್ರಹಿಕೆಯನ್ನು ರೂಪಿಸಿಕೊಳ್ಳುತ್ತೇವೆ.
ಬಿಡುವಿನ ದಿನದಲ್ಲಿ ಕುಳಿತು ಬದುಕಿನ ಪುಟಗಳನ್ನು ತಿರುಗಿಸಿ ನೋಡಿ. ನಿಮ್ಮ ಎಷ್ಟು ನಿರ್ಧಾರಗಳು ಪೂರ್ವಗ್ರಹದಿಂದ ಆವೃತವಾಗಿಲ್ಲ? ಅಥವಾ ಎಷ್ಟು ನಿರ್ಧಾರಗಳು ಇತರರ ದೃಷ್ಟಿಕೋನದ ಮೇಲೆಯೇ ಅವಲಂಬಿತವಾಗಿವೆ? ಬಹಳಷ್ಟು ಬಾರಿ ನಾವು ಮತ್ತೊಬ್ಬರ ದೃಷ್ಟಿಕೋನದ ಮೇಲೆಯೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಇದು ರೋಗಿಗೆ ಔಷಧ ನೀಡುವ ಬದಲು ರೋಗಕ್ಕೆ ಔಷಧ ನೀಡುವ ಬಗೆಯಂತೆಯೇ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ನಾವು ರೂಢಿಸಿಕೊಳ್ಳಬೇಕಾದ ಸಂಗತಿಯೊಂದಿದೆ. ಯಾವುದೇ ವಸ್ತು ಅಥವಾ ವಿಷಯವನ್ನು ಅದು ಇರುವ ಹಾಗೇ ಗ್ರಹಿಸುವುದು. ಯಾವುದೇ ವ್ಯಾಖ್ಯಾನಗಳಿಲ್ಲದೆ ಗ್ರಹಿಸುವುದು. ಉದಾಹರಣೆಗೆ ಬಾವಿ. ಬಾವಿ ಅಂದ ಕೂಡಲೆ ನಮಗೆ ನಮ್ಮ ಮನೆಯ ಬಾವಿ ನೆನಪಾಗಬಹುದು. ನೆನಪಾಗುತ್ತಲೇ ಪ್ರತಿ ದಿನ ಉಸ್ಸೆನ್ನುತ್ತಾ ನೀರು ಸೇದುವ ಅಮ್ಮ, ಅದರ ಸುತ್ತ ಸುತ್ತುತ್ತಿದ್ದ ನಿಮ್ಮ ಬಾಲ್ಯ, ಯಾವಾಗಲೋ ನಡೆದ ದುರಂತ – ಇವೆಲ್ಲವೂ ನೆನಪಾಗಬಹುದು. ಕೇವಲ `ಬಾವಿ’ ಎನ್ನುವ ಒಂದು ಪದ ನಿಮ್ಮ ಮನಸ್ಸಿನ ಓಟಕ್ಕೆ ಕಾರಣವಾಗುವುದು ನೀವು ಆ ಪದವನ್ನು ಪದವಾಗಿ ಕೇಳಿಸಿಕೊಳ್ಳದೆ, ಅದರ ಯಥಾರ್ಥತೆಗೆ ಅವಕಾಶ ಕೊಡದೆ, ನಿಮ್ಮ ವ್ಯಾಖ್ಯಾನದೊಂದಿಗೆ ಬೆರೆಸಿಕೊಳ್ಳುವುದು.
ಹೀಗೆ ಮಾಡುವುದರಿಂದ ಆಯಾ ವಸ್ತುವಿನ ಸಾಂದರ್ಭಿಕ ಮಹತ್ವ ಕಳೆದುಹೋಗಿ, ನಮ್ಮ ಮಮಕಾರಕ್ಕೋ ದ್ವೇಷಕ್ಕೋ ಅಥವಾ ದುಃಖಕ್ಕೋ ಕಾರಣವಾಗಿಬಿಡುತ್ತದೆ. ಬಾವಿ ಅಂದ ಕೂಡಲೆ ಎಂದೋ ಯಾರೋ ಬಾವಿಗೆ ಕಾಲು ಜಾರಿ ಬಿದ್ದಿದ್ದರು ಎಂಬ ನೆನಪು ಉಂಟಾದರೆ, ನೀವು ಬಾವಿಗೆ ಇಳಿಯಲು ಹೆದರತೊಡಗುತ್ತೀರಿ. ಅದರ ಬದಲಿಗೆ ಅದನ್ನೊಂದು ನೀರಿನ ಆಕರವನ್ನಾಗಿ ಕಂಡರೆ ನಿಮ್ಮನ್ನು ಯಾವ ಚಿಂತೆಯೂ ಬಾಧಿಸದು.
ಇನ್ನು ಕೆಲವು ಬಾರಿ ಹೀಗಾಗುತ್ತದೆ. ನಿಮಗೇ ಅರಿವಿಲ್ಲದಂತೆ ನೀವು ಒಬ್ಬ ವ್ಯಕ್ತಿಯನ್ನು ದ್ವೇಷಿಸಲು ಶುರುವಿಡುತ್ತೀರಿ. ಅವರು ನಿಮ್ಮ ಸ್ನೇಹಿತರ ಶತ್ರು ಎಂದು ಇಟ್ಟುಕೊಳ್ಳಿ. ಅವರ ಬಗ್ಗೆ ನಿಮಗೆ ಹೆಚ್ಚಿಗೆ ಏನೂ ತಿಳಿದಿರುವುದಿಲ್ಲ. ಅವರು ನಿಮ್ಮ ಎದುರು ಸುಳಿದಾಗಲೆಲ್ಲ ನಿಮ್ಮೊಳಗೆ ಒಂದು ಕಹಿಯಾದ ಭಾವ ಉಂಟಾಗುತ್ತದೆ. ಅವರನ್ನು ಕೇವಲ ಅವರೇ ಆಗಿ ನೋಡದೆ ನಿಮ್ಮ ಸ್ನೇಹಿತನ ಶತ್ರುವಾಗಿಯೇ ಕಾಣುತ್ತ ಇರುತ್ತೀರಿ. ಅವರಿಂದ ನಿಮಗೇನೂ ತೊಂದರೆ ಇರುವುದಿಲ್ಲ. ಆದರೂ ನಿಮಗೆ ಅವರೆಂದರೆ ಆಗುವುದಿಲ್ಲ! ಹೀಗೆ ಮತ್ಯಾರದೋ ದೃಷ್ಟಿಯಲ್ಲಿ ನೀವು ಆ ವ್ಯಕ್ತಿಯನ್ನು ನೋಡುವುದರಿಂದ ನೀವು ಅವರಿಗೆ ಕೊಡಬಹುದಾದ ಸಕಾರಾತ್ಮಕ ಎನರ್ಜಿಯನ್ನು ತಡೆಹಿಡಿಯುತ್ತಿದ್ದೀರಿ. ನಿಮ್ಮ ಸ್ನೇಹಿತನ ಶತ್ರುತ್ವವನ್ನು ಹೋಗಲಾಡಿಸುವ ಅವಕಾಶವನ್ನು ತಪ್ಪಿಸಿಕೊಳ್ತಿದ್ದೀರಿ. ಅದರ ಬದಲಾಗಿ ನೀವೂ ಅಕಾರಣ ಯುದ್ಧಕ್ಕೆ ತೊಡಗುತ್ತಿದ್ದೀರಿ.
ನೆನಪಿಡಿ. ಇದು ನಿಮಗೆ ಸಂಬAಧಿಸಿದ್ದಾಗಿರುವುದಿಲ್ಲ. ಮತ್ಯಾರದೋ ಯುದ್ಧವನ್ನು ನೀವು ಮಾಡುತ್ತಿದ್ದೀರಿ. ಅದರ ಜಯಾಪಜಯಗಳಿಂದ ನಿಮಗೆ ಕಿಂಚಿತ್ತೂ ಉಪಯೋಗವಿಲ್ಲ. ಅಕಸ್ಮಾತ್ ಮುಂದೆ ಎಂದಾದರೂ ಆ ವ್ಯಕ್ತಿ ಮತ್ತು ನಿಮ್ಮ ಸ್ನೇಹಿತ ಒಂದಾದರೆ, ಅದೇ ರಭಸದಲ್ಲಿ ನೀವು ನಿಮ್ಮ ದ್ವೇಷಭಾವದಿಂದ ಹೊರಗೆ ಬರಲಾರಿರಿ. ನಿಮ್ಮ ಸ್ನೇಹಿತನ ಶತ್ರುತ್ವ ಮುಗಿದರೂ ನೀವಿನ್ನೂ ಕತ್ತಿ ಬೀಸುತ್ತಲೇ ಉಳಿಯುತ್ತೀರಿ!
ಅದು ಯಾವುದೇ ಸಂಗತಿ ಇರಲಿ. ಮನುಷ್ಯನ ಮೂಲ ಗುಣವಾದ ಪ್ರಾಶ್ನಿಕ ಮನೋಭಾವವನ್ನು ಬಿಟ್ಟುಕೊಡಬಾರದು. ಮನುಷ್ಯನಲ್ಲಿ ಚಿಂತಿಸುವ ಹೆಚ್ಚುಗಾರಿಕೆಯಿದೆ. ಆತ ಪ್ರಶ್ನೆಗಳನ್ನು ಕೇಳಬಲ್ಲ, ಮಂಥನ ನಡೆಸಬಲ್ಲ ಎಂಬ ಕಾರಣಗಳಿಂದಲೇ ಆತ ಉಳಿದೆಲ್ಲ ಪ್ರಾಣಿಗಳಿಗಿಂತ ವಿಭಿನ್ನನೂ ವಿಶಿಷ್ಟನೂ ಆಗಿದ್ದಾನೆ. ಸ್ವಾಮಿ ವಿವೇಕಾನಂದರು `ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳಬೇಡಿ, ಯಾವುದರ ಪ್ರಭಾವಕ್ಕೂ ಸಿಲುಕಬೇಡಿ, ನಿಮ್ಮದೇ ಆದ ಚಿಂತನೆಯನ್ನು, ಗ್ರಹಿಕೆಯನ್ನು ಪೋಷಿಸಿಕೊಂಡು ನಿಮ್ಮದೇ ಆದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ’ ಎಂದು ಕರೆ ಕೊಡುತ್ತಾರೆ.
ಇಲ್ಲಿ ಪ್ರಭಾವ ಎಂದರೆ ಬೇರೆ ಯಾರೋ ವ್ಯಕ್ತಿಯದೇ ಆಗಬೇಕಿಲ್ಲ. ಸ್ವತಃ ನಮ್ಮ ಭೂತ, ಅನುಭವ, ಹಾಗೂ ಪರಿಸರದ ಪ್ರಭಾವವೂ ಆಗಿರಬಹುದು. ಅವುಗಳ ಸುಳಿಗೆ ಸಿಕ್ಕಿಬಿದ್ದಿದ್ದೇ ಆದಲ್ಲಿ, ನಾವು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸೋಲುತ್ತೇವೆ. ಮತ್ಯಾರದೋ ಅನುಭವದ ಆಧಾರಿತ ವ್ಯಾಖ್ಯಾನಕ್ಕೆ. ಸಲಹೆಗೆ ಜೋತು ಬಿದ್ದಿದ್ದೇ ಆದಲ್ಲಿ, ನಮ್ಮದೇ ಆದ ಯಶಸ್ಸಿನ ಹಾದಿ ರೂಪಿಸಿಕೊಳ್ಳಲು ಸೋಲುತ್ತೇವೆ.
ಈ ವರೆಗಿನ ಸಾಧಕರೆಲ್ಲರೂ ತಮ್ಮದೇ ಪ್ರತೈಏಕ ಹಾದಿ ಹಿಡಿದು ನಡೆದವರೇ ಎಂಬುದು ನೆನಪಿರಲಿ. ಅವರು ಪ್ರತಿಯೊಂದನ್ನೂ ಅದು ಇರುವಂತೆಯೇ ಗ್ರಹಿಸಿದರು. ನಂತರ ತಮ್ಮದೇ ಆದ ಹೊಸ ವ್ಯಾಖ್ಯಾನ ನೀಡಿಕೊಂಡು ತಮ್ಮ ಪ್ರಗತಿಗೆ ಅವನ್ನು ಬಳಸಿಕೊಂಡರು. ಹಾಗೆಂದೇ ಸಾಧನೆಯನ್ನೂ ಲೌಕಿಕದಲ್ಲಿ ಶಾಂತಿಯನ್ನೂ ಪಡೆಯುವುದು ಅವರಿಗೆ ಸಾಧ್ಯವಾಯಿತು. ನಾವು ಸಾಧನೆಗೆ ಅಲ್ಲವಾದರೂ ನಮ್ಮ ನಮ್ಮ ಜೀವನ ಸಹನೀಯವಾಗಿಸಿಕೊಳ್ಳಲು ‘ಇರುವುದನ್ನು ಇರುವಂತೇ ನೋಡುವ’ ಅಗತ್ಯ ಬಹಳವಿದೆ ಅನ್ನುವುದನ್ನು ಮರೆಯದಿರಿ!