ಕಾಯಕವೇ ಕೈಲಾಸವಾದ ಕಾರಣ… : ಬೆಳಗಿನ ಹೊಳಹು

“ಕಾಯಕಕ್ಕಿಂತ ಮಿಗಿಲಾದ ಪೂಜೆಯಿಲ್ಲ. ಅದಕ್ಕಿಂತ ಮಹತ್ವದ ನೇಮವಿಲ್ಲ. ಕಾಯಕ ಮನುಷ್ಯನ ಘನತೆ. ಕಾಯಕ ಮನುಷ್ಯನ ಧರ್ಮ” ಅನ್ನುತ್ತಾನೆ ಆಯ್ದಕ್ಕಿ ಮಾರಯ್ಯ

ಕಾಯಕದಲ್ಲಿ ನಿರತನಾದರೆ ಗುರು
ದರುಶನವಾದರೂ ಮರೆಯಬೇಕು;
ಲಿಂಗಪೂಜೆಯಾದರೂ ಮರೆಯಬೇಕು;
ಜಂಗಮ ಮುಂದಿದ್ದಡೂ ಹಂಗು ಹರಿಯಬೇಕು ;
ಕಾಯಕವೇ ಕೈಲಾಸವಾದ ಕಾರಣ,
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು  | ~ ಆಯ್ದಕ್ಕಿ ಮಾರಯ್ಯ

ಕಾಯಕಕ್ಕಿಂತ ಮಿಗಿಲಾದ ಪೂಜೆಯಿಲ್ಲ. ಅದಕ್ಕಿಂತ ಮಹತ್ವದ ನೇಮವಿಲ್ಲ. ಕಾಯಕ ಮನುಷ್ಯನ ಘನತೆ. ಕಾಯಕ ಮನುಷ್ಯನ ಧರ್ಮ. ಆದ್ದರಿಂದಲೇ ಎಂಥಾ ಸನ್ನಿವೇಶದಲ್ಲೂ ಬಿಡದೆ ಕಾಯಕ ಮಾಡಬೇಕು. ಮೊದಲ ಆದ್ಯತೆ ಅದಕ್ಕೇ ಮೀಸಲಿರಬೇಕು ಅನ್ನುತ್ತಾನೆ ಶರಣ ಆಯ್ದಕ್ಕಿ ಮಾರಯ್ಯ.

ನಾವು ದಿನದ ಪ್ರತಿ ತುತ್ತನ್ನೂ ನಮ್ಮ ದುಡಿಮೆಯ ಫಲವಾಗಿ ಉಣ್ಣುತ್ತೇವೆ. ನಾವು ಮಾಡುತ್ತಿರುವ ಉದ್ಯೋಗ ಹಲವು ಕಾರಣಗಳಿಗೆ ನಮಗೆ ಇಷ್ಟವಾಗದೆ ಇರಬಹುದು. ಕಾರಣಾಂತರಗಳಿಗೆ ಅಸಮಾಧಾನವಿರಬಹುದು. ಆದರೆ, ನಮ್ಮ ಜೀವ ನಿಂತಿರುವುದು ಮಾತ್ರವಲ್ಲ, ನಮ್ಮ ಮಾನವೂ ನಮ್ಮ ದುಡಿಮೆಯ ಮೇಲೆಯೇ ನಿಂತಿದೆ ಅನ್ನುವುದನ್ನು ನಾವು ಮನಗಾಣಬೇಕು. ಜೊತೆಗೇ, ನಮ್ಮ ದುಡಿಮೆ ಪರೋಪಕಾರಿಯೂ, ಇತರರ ಪ್ರಯೋಜನಕ್ಕೂ ಬಂದು ‘ಕಾಯಕ’ದ ಹಿರಿಮೆಯನ್ನು ಪಡೆಯುತ್ತದೆ. ನಾವು ಗೊಣಗಾಡುತ್ತಾ ಅದನ್ನು ನಡೆಸಿದರೆ, ಅದು ಕಾಯಕಕ್ಕೆ ಮಾಡುವ ಅವಮಾನ. ನಮ್ಮ ಅನ್ನ ಹಾಗೂ ಪರರ ಸೇವೆಗೆ ಮಾಡುವ ಅವಮಾನ.

ಆದ್ದರಿಂದ, ನಗುನಗುತ್ತ ಕೆಲಸ ಮಾಡಿ…. ಕೈಲಾಸದ ನೆಮ್ಮದಿ ಪಡೆಯಿರಿ!

Leave a Reply