ಪ್ರತ್ಯೇಕತೆಯನ್ನು ಮೀರುವುದು… (ಭಾಗ 3) : Art of love #7

“ಮನುಷ್ಯನಿಗೆ ಅತ್ಯಂತ ಅಗತ್ಯವಾದದ್ದು, ಅವನು ತನ್ನ ಒಂಟಿತನವನ್ನ, ಪ್ರತ್ಯೇಕತೆಯನ್ನು ಮೀರುವುದು” ಎಂದು ಪ್ರತಿಪಾದಿಸುವ ಎರಿಕ್ ಫ್ರೋಮ್, ಅದನ್ನು ಸಾಧಿಸುವ ವಿಧಾನಗಳ ಬಗ್ಗೆ ‘Art of love’ ಕೃತಿಯಲ್ಲಿ ಚರ್ಚಿಸುತ್ತಾರೆ. ಈ ಅಧ್ಯಾಯದ ಮೂರನೇ ಭಾಗ ಇಲ್ಲಿದೆ… । ಕನ್ನಡಕ್ಕೆ: ಚಿದಂಬರ ನರೇಂದ್ರ

ಪ್ರಾಚೀನ ಸಂಸ್ಕೃತಿಯ ಗುಂಪುಗಳು ಗಾತ್ರದಲ್ಲಿ ಸಣ್ಣವು ; ಭೂಮಿಯನ್ನ ಹಂಚಿಕೊಂಡವರು, ರಕ್ತ ಸಂಬಂಧಿಗಳು ಮಾತ್ರ ಇಲ್ಲಿನ ಸದಸ್ಯರು. ಸಂಸ್ಕೃತಿ ಹೆಚ್ಚು ಹೆಚ್ಚು ವಿಕಾಸಗೊಳ್ಳುತ್ತಿದ್ದಂತೆಯೇ, ಇಂಥ ಗುಂಪುಗಳು ವಿಸ್ತಾರಗೊಳ್ಳುತ್ತ ಹೋದವು ಮತ್ತು ಅಲ್ಲಿನವರು ನಗರವಾಸಿಗಳಾದರು, ಒಂದು ರಾಷ್ಟ್ರದ ಪ್ರಜೆಗಳಾದರು ಹಾಗು ಚರ್ಚ್`ನ (ಧಾರ್ಮಿಕ ಯಜಮಾನ್ಯದ ವ್ಯವಸ್ಥೆ) ಸದಸ್ಯರೂ ಆದರು. ಒಬ್ಬ ಬಡ ರೋಮನ್ ಕೂಡ ತಾನು ಬೃಹತ್ ರೋಮನ್ ಸಮಾಜದ ಪ್ರಜೆ ಎಂದು ಹೆಮ್ಮೆಪಡುವಂತಾಯಿತು ; ರೋಮನ್ ಸಾಮ್ರಾಜ್ಯ ಅವನ ಕುಟುಂಬ, ಅವನ ಮನೆ, ಅವನ ಜಗತ್ತು ಎನ್ನುವ ಭಾವನೆ ಅವನಲ್ಲಿ ಮೂಡತೊಡಗಿತು.

ಸಮಕಾಲೀನ ಪಾಶ್ಚಿಮಾತ್ಯ ಸಮಾಜದಲ್ಲಿ ಕೂಡ ಗುಂಪುಗಳ ಜೊತೆ ಸಂಬಂಧ ಬೆಳೆಸುವುದು ಪ್ರತ್ಯೇಕತೆ-ಒಂಟಿತನದ ಭಾವದಿಂದ ಹೊರಬರಲು ಬಳಸುವ ಪ್ರಚಲಿತ ವಿದ್ಯಮಾನವಾಗಿತ್ತು. ಇಂಥದೊಂದು ಕೂಡುವಿಕೆಯಲ್ಲಿ ಮತ್ತು ಗುಂಪಿನಲ್ಲಿ ಒಂದಾಗುವುದು ಮುಖ್ಯ ಗುರಿಯಾಗಿರುವಲ್ಲಿ ಬಹುಮಟ್ಟಿಗೆ ವೈಯಕ್ತಿಕ ಸೆಲ್ಪ್ ಮಾಯವಾಗುತ್ತದೆ. ನಾನು ಎಲ್ಲರಂತಿರುವೆನಾದರೆ, ನಾನು ವಿಭಿನ್ನ ಎಂದು ತೋರಿಸಿಕೊಳ್ಳುವ ಯಾವ ಭಾವನೆಗಳು, ಯಾವ ಆಲೋಚನೆಗಳು ನನ್ನಲ್ಲಿಲ್ಲವಾದರೆ, ನಾನು ಗುಂಪಿನ ಆಚರಣೆಗಳನ್ನ, ವೇಷ ಭೂಷಣಗಳನ್ನ, ವಿಚಾರ ಸಿದ್ಧಾಂತಗಳನ್ನ ಒಪ್ಪಿಕೊಂಡಿದ್ದೇನಾದರೆ ನಾನು ಭಯದಿಂದ ಮುಕ್ತ, ಒಂಟಿತನದ ಭಯಾನಕ ಅನುಭವಗಳಿಂದ ಸುರಕ್ಷಿತ. ಸರ್ವಾಧಿಕಾರಿ ವ್ಯವಸ್ಥೆ, ಭಯ ಮತ್ತು ಆತಂಕಗಳನ್ನು ಪ್ರಯೋಗ ಮಾಡಿ ಇಂಥ ಏಕತ್ವವನ್ನ ಒತ್ತಾಯಪೂರ್ವಕವಾಗಿ ಕಟ್ಟಲು ಪ್ರಯತ್ನ ಮಾಡಿದರೆ, ಪ್ರಜಾಪ್ರಭುತ್ವದ ವ್ಯವಸ್ಥೆ ಸಾರ್ವಜನಿಕ ಸಲಹೆ ಸೂಚನೆ ಮತ್ತು ಪ್ರಚಾರಕ್ಕೆ ಮೊರೆ ಹೋಗುತ್ತದೆ.

ಈ ಎರಡು ವ್ಯವಸ್ಥೆಗಳ ನಡುವೆ ಒಂದು ಬಹು ಮುಖ್ಯವಾದ ವ್ಯತ್ಯಾಸ ಇದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬೇರೊಂದು ದನಿಗೆ, ಆಚರಣೆಗೆ ಅವಕಾಶವಿದೆ ಆದರೆ ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ಕೆಲವೇ ಕೆಲವು ವಿಲಕ್ಷಣ ಹೀರೋಗಳು ಮತ್ತು ಹುತಾತ್ಮರು ಮಾತ್ರ ವ್ಯವಸ್ಥೆಗೆ ವಿಧೆಯತೆಯನ್ನು ನಿರಾಕರಿಸಬಹುದು. ಈ ಭಿನ್ನತೆ ಇರುವಾಗಲೂ ಪ್ರಜಾಪ್ರಭುತ್ವದ ವ್ಯವಸ್ಥೆಗಳಲ್ಲಿಯೇ ಅತೀ ಹೆಚ್ಚು ಗುಂಪಿನ ವಿಧೇಯತೆಯನ್ನ ಕಾಣಬಹುದು. ಇದಕ್ಕೆ ಮುಖ್ಯ ಕಾರಣವೆಂದರೆ ಮನುಷ್ಯನ ಒಂದಾಗುವಿಕೆಯ ಹುಡುಕಾಟಕ್ಕೆ ಒಂದು ಉತ್ತರ ಬೇಕು, ಯಾವ ಉತ್ತರವೂ ಸಿಗದಿದ್ದಾಗ ಅಥವಾ ಯಾವ ಉತ್ತಮ ಪರ್ಯಾಯ ದಾರಿಯೂ ಕಾಣಿಸದಿದ್ದಾಗ ಗುಂಪುಗಳಲ್ಲಿ ಒಂದಾಗುವಿಕೆಯ ಉತ್ತರವೇ ಬಹುಮುಖ್ಯವಾಗುತ್ತದೆ. ಮನುಷ್ಯನ ‘ಪ್ರತ್ಯೇಕವಾಗದೇ ಬದುಕುವ’ ಅವಶ್ಯಕತೆಯ ಆಳವನ್ನು ಅರ್ಥ ಮಾಡಿಕೊಂಡರೆ ಮಾತ್ರ, ಭಿನ್ನ ಅನಿಸಿಕೊಳ್ಳುವ ಭಯದ ತೀವ್ರತೆಯನ್ನೂ, ತನ್ನ ಗುಂಪಿಗಿಂತ ಕೆಲ ಹೆಜ್ಜೆ ಮಾತ್ರ ದೂರ ಇರಬೇಕಾಗಿರುವ ಆತಂಕವನ್ನೂ ಅರ್ಥ ಮಾಡಿಕೊಳ್ಳಬಹುದು. ಒಂಟಿತನ-ಪ್ರತ್ಯೇಕತೆಯ ಭಯವನ್ನ, ಭಿನ್ನವಾಗಿ ಬದುಕುವವನು ಎದುರಿಸಲೇಬೇಕಾದ ಅಪಾಯಕಾರಿ ಪರಿಸ್ಥಿತಿಯಾಗಿ ತರ್ಕಬದ್ಧಗೊಳಿಸಲಾಗಿದೆ. ಆದರೆ ಜನರು, ಅವರನ್ನು ಒತ್ತಾಯಿಸಿದ್ದಕ್ಕಿಂತ ಇನ್ನೂ ಹೆಚ್ಚಿನ ಮಟ್ಟದ ಗುಂಪಿನ ವಿಧೆಯತೆಗೆ ಬದ್ಧರಾಗುವ ಆಶಯವನ್ನು ಹೊಂದಿದ್ದಾರೆ, ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳಲ್ಲಿಯಂತೂ ಇದನ್ನ ಸ್ಪಷ್ಟವಾಗಿ ಗುರುತಿಸಬಹುದು.

ಬಹಳಷ್ಟು ಜನರಿಗೆ ತಮ್ಮ ತಮ್ಮ ಗುಂಪಿನ ಆಚರಣೆಗಳಿಗೆ , ಕಟ್ಟಳೆಗಳಿಗೆ ಬದ್ಧರಾಗಿರಬೇಕಾಗಿರುವ ತಮ್ಮ ಅವಶ್ಯಕತೆಯ ಬಗ್ಗೆಯೇ ಗೊತ್ತಿಲ್ಲ. ಅವರು, ತಾವು ತಮ್ಮ ಸ್ವಂತ ವಿಚಾರಗಳನ್ನ, ತಮ್ಮದೇ ಆದ ಬೇಕು ಬೇಡಗಳನ್ನ ಅನುಸರಿಸುತ್ತಿದ್ದೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ಅವರು ತಾವು ವ್ಯಕ್ತಿ ವಿಶಿಷ್ಟರೆಂದೂ, ತಮ್ಮ ಸ್ವಂತ ಆಲೋಚನೆಯ ಕಾರಣವಾಗಿ ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಂಡಿದ್ದೇವೆಂದೂ ಹಾಗು ತಮ್ಮ ವಿಚಾರಗಳು, ಬಹುಸಂಖ್ಯಾತರ ವಿಚಾರಗಳ ಜೊತೆ ಹೊಂದಿಕೊಂಡಿರುವುದು ಕೇವಲ ಆಕಸ್ಮಿಕ ಎಂದೂ ತಿಳಿದುಕೊಂಡಿದ್ದಾರೆ. ಎಲ್ಲರ ನಿಲುವುಗಳು ಒಂದೇ ಆಗಿರುವುದು ತಮ್ಮ ವಿಚಾರಗಳು ಸರಿಯಾಗಿರುವುದರ ಸಾಕ್ಷಿ ಎಂದುಕೊಂಡಿದ್ದಾರೆ. ಹೀಗಿರುವಾಗಲೂ ಒಂದಿಷ್ಟಾದರೂ ವೈಯಕ್ತಿಕ ವೈಶಿಷ್ಠ್ಯತೆಯನ್ನು ಉಳಿಸಿಕೊಳ್ಳಲೇಬೇಕಾದ ಅವಶ್ಯಕತೆ ಇನ್ನೂ ಇರುವುದರಿಂದ, ಅಂಥ ಅವಶ್ಯಕತೆಯನ್ನ ಸಣ್ಣಪುಟ್ಟ ಭಿನ್ನತೆಗಳ ಮೂಲಕ ತುಂಬಿಕೊಳ್ಳುತ್ತಾರೆ ; ಹ್ಯಾಂಡ್ ಬ್ಯಾಗ್ ಅಥವಾ ಸ್ವೆಟರ್ ಮೇಲೆ ಬರೆದುಕೊಂಡಿರುವ ಹೆಸರು, ಬ್ಯಾಂಕಿನ ಕ್ಯಾಶ್ ಕೌಂಟರ್ ನಲ್ಲಿಯ ನಾಮ ಫಲಕ, ಡೆಮಾಕ್ರಟಿಕ್ ಪಾರ್ಟಿಗೆ ಸೇರುವುದೋ ಅಥವಾ ರಿಪಬ್ಲಿಕನ್ ಪಾರ್ಟಿಗೆ ಸೇರುವುದೋ ಎನ್ನುವ ನಿರ್ಧಾರ, ಎಲ್ಕ ಜಿಂಕೆಯ ಮಾಂಸವನ್ನು ಇಷ್ಟಪಡುವುದು ಇಂಥವು ಮಾತ್ರ ವೈಯಕ್ತಿಕ ಭಿನ್ನತೆಯ ಅಭಿವ್ಯಕ್ತಿಯೆನಿಸಿಕೊಂಡಿವೆ. “ It’s different “ ಎನ್ನುವ ಜಾಹೀರಾತಿನ ಘೋಷವಾಕ್ಯ, ಈ ತೋರಿಕೆಯ ವ್ಯತ್ಯಾಸದ ಅವಶ್ಯಕತೆ ಎಷ್ಟು ಶೋಚನೀಯವಾಗಿದೆ ಎನ್ನುವುದನ್ನ ಸ್ಪಷ್ಟಪಡಿಸುತ್ತದೆ. ಆದರೆ ನಿಜದಲ್ಲಿ ಅಂಥ ಯಾವ ವಿಶೇಷ ಭಿನ್ನತೆಯೂ ಇಲ್ಲಿ ಕಂಡುಬರುವುದಿಲ್ಲ.

(ಮುಂದುವರಿಯುವುದು…)

ಹಿಂದಿನ ಭಾಗ ಇಲ್ಲಿ ಣೋಡಿ: https://aralimara.com/2022/03/13/love-19/

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

2 Responses

  1. ಚನ್ನಬಸವ ಆಸ್ಪರಿ

    ಪ್ರತ್ಯೇಕತೆಯನ್ನು ಮೀರುವುದು ಭಾಗ 1 ರ ಲಿಂಕ್ ನೀಡಿ 🙏

Leave a Reply