ಅಜ್ಞಾನದಿಂದ ಹುಟ್ಟಿತ್ತು ಅಹಂ ಮಮತೆ… : ಬಸವಣ್ಣನವರ ವಚನ

ನಾನೆಂಬ ಭ್ರಮೆಯ ಅಜ್ಞಾನವನ್ನು ತೊಡೆದು ಹಾಕದೆ ಹೋದರೆ ಭಗವಂತನನ್ನು ಪಡೆಯಲು ಸಾಧ್ಯವಿಲ್ಲ ಎಂದು ಈ ವಚನದ ಮೂಲಕ ಬಸವಣ್ಣನವರು ಹೇಳುತ್ತಿದ್ದಾರೆ.

ಅಜ್ಞಾನದಿಂದ ಹುಟ್ಟಿತ್ತು ಅಹಂ ಮಮತೆ,
ಅಜ್ಞಾನದಿಂದ ಹುಟ್ಟಿತ್ತು ಮನಸ್ಸಂಚಲ,
ಅಜ್ಞಾನದಿಂದ ಹುಟ್ಟಿತ್ತು ಇಂದ್ರಿಯೋದ್ರೇಕ,
ಅಜ್ಞಾನದಿಂದ ಹುಟ್ಟಿತ್ತು ದೇಹಮೋಹ,
ಅಜ್ಞಾನದಿಂದ ಹುಟ್ಟಿತ್ತು ಅತಿಕಾಂಕ್ಷೆ,
ಅಜ್ಞಾನದಿಂದ ಹುಟ್ಟಿತ್ತು ತ್ರಿವಿಧಮಲ,
ಅಜ್ಞಾನದಿಂದ ಹುಟ್ಟಿತ್ತು ಸಂಸಾರ,
ಅಜ್ಞಾನದಿಂದ ಹುಟ್ಟಿತ್ತು ರಾಗದ್ವೇಷ,
ಅಜ್ಞಾನದಿಂದ ಹುಟ್ಟಿತ್ತು ಸರ್ವಪ್ರಪಂಚ,
ಅಜ್ಞಾನದಿಂದ ಹುಟ್ಟಿತ್ತು ಸರ್ವದುಃಖ,
ಕೂಡಲಸಂಗಮದೇವಾ,
ಈ ಅಜ್ಞಾನಭ್ರಮೆಯ ಕೆಡಿಸಿದಲ್ಲದೆ
ನಿಮ್ಮನೊಡಗೂಡಬಾರದಯ್ಯಾ.

ನಮ್ಮೆಲ್ಲ ಅಹಂಕಾರಕ್ಕೆ ಅಜ್ಞಾನವೇ ಕಾರಣ. ದೇಹ ನಿಮಿತ್ತ ಮಾತ್ರ, ದೇಹವೊಂದು ಸಲಕರಣೆ ಮಾತ್ರ ಅನ್ನುವ ಜ್ಞಾನ ಇಲ್ಲದ ಅಜ್ಞಾನಿಗಳು ದೇಹವೇ ನಾನೆಂದು ಭಾವಿಸುತ್ತಾರೆ. ಈ ದೇಹಭಾವನೆಯೇ ಅಹಂಕಾರಕ್ಕೆ ಮೂಲ.

ನನಗೆ ನಾನೇ ಒಡೆಯ ಎಂಬ ಜ್ಞಾನವಿಲ್ಲದೆ ನಾವು ನಮ್ಮ ಮನಸ್ಸನ್ನು ನಿಯಂತ್ರಿಸಿಕೊಳ್ಳಲಾಗದೆ ಹೋಗುತ್ತೇವೆ. ಅಜ್ಞಾನದಿಂದ ಮನಸ್ಸು ಚಂಚಲಗೊಳ್ಳುತ್ತದೆ. ಏಕಾಗ್ರತೆ ಸಾಧಿಸಲು ಸಾಧ್ಯವಾಗುವುದಿಲ್ಲ. ಅಜ್ಞಾನವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ನಮ್ಮನ್ನು ಕಲುಷಿತಗೊಳಿಸುತ್ತದೆ. ನಮ್ಮೆಲ್ಲ ಮಹತ್ವಾಕಾಂಕ್ಷೆಗೂ, ರಾಗ – ದ್ವೇಷಗಳಿಗೂ, ದುಃಖಗಳಿಗೂ ಅಜ್ಞಾನವೇ ಮೂಲ. ನಾನೆಂಬ ಅಹಮಿಕೆಯ ಅಜ್ಞಾನದಿಂದ ಈ ಎಲ್ಲ ದುಃಖ ಪರಂಪರೆ ಆರಂಭವಾಗುತ್ತದೆ.

ಇಂಥಾ ನಾನೆಂಬ ಭ್ರಮೆಯ ಅಜ್ಞಾನವನ್ನು ತೊಡೆದು ಹಾಕದೆ ಹೋದರೆ ಭಗವಂತನನ್ನು ಪಡೆಯಲು ಸಾಧ್ಯವಿಲ್ಲ ಎಂದು ಈ ವಚನದ ಮೂಲಕ ಬಸವಣ್ಣನವರು ಹೇಳುತ್ತಿದ್ದಾರೆ.

Leave a Reply