ಕವಿತೆ: ಓಶೋ ವ್ಯಾಖ್ಯಾನ

“ಕವಿತೆಯಲ್ಲಿ ಎಲ್ಲವೂ ಇದೆ ; ಪ್ರೇಮ ಇದೆ, ಪ್ರಾರ್ಥನೆ ಇದೆ, ಧ್ಯಾನವೂ ಇದೆ, ಇನ್ನೂ ಹೆಚ್ಚು ಹೆಚ್ಚಿನದೂ ಇದೆ. ಯಾವುದೆಲ್ಲ ದಿವ್ಯವೋ, ಯಾವುದೆಲ್ಲ ಸೌಂದರ್ಯವೋ, ನಿಮ್ಮ ಮೀರುವಿಕೆಗೆ ಏನೇಲ್ಲ ಬೇಕೋ ಆ ಎಲ್ಲವೂ ಕವಿತೆಯಲ್ಲಿದೆ” ಅನ್ನುತ್ತಾರೆ ಓಶೋ ರಜನೀಶ್. । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಪ್ರಶ್ನೆ : ಕೆಲವು ದಿನಗಳ ಹಿಂದೆ ನನಗೊಂದು ಕನಸು ಬಿದ್ದಿತ್ತು, ಆ ಕನಸಿನಲ್ಲಿ ನಾನು ನಿಮ್ಮ ಮಾತು ಕೇಳುತ್ತಿದ್ದೆ. ನನಗೆ ಬೇರೆ ಯಾವುದೂ ನೆನಪಿಲ್ಲ ಆದರೆ ನೀವು “ ಕವಿತೆಯೆಂದರೆ ಶರಣಾಗತಿ “ ಎಂದು ಹೇಳಿದ್ದು ಮಾತ್ರ ನೆನಪಿದೆ. ಏನು ಹಾಗೆಂದರೆ? ಕವಿತೆಗೂ, ಶರಣಾಗತಿಗೂ ಏನು ಸಂಬಂಧ? ಕವಿತೆ, ಪ್ರೇಮ, ಪ್ರಾರ್ಥನೆ, ಧ್ಯಾನದ ಹಾಗೆ ಸತ್ಯದ ದಾರಿಯಾಗಬಲ್ಲದೆ?

ಓಶೋ : ಕವಿತೆಯಲ್ಲಿ ಎಲ್ಲವೂ ಇದೆ ; ಪ್ರೇಮ ಇದೆ, ಪ್ರಾರ್ಥನೆ ಇದೆ, ಧ್ಯಾನವೂ ಇದೆ, ಇನ್ನೂ ಹೆಚ್ಚು ಹೆಚ್ಚಿನದೂ ಇದೆ. ಯಾವುದೆಲ್ಲ ದಿವ್ಯವೋ, ಯಾವುದೆಲ್ಲ ಸೌಂದರ್ಯವೋ, ನಿಮ್ಮ ಮೀರುವಿಕೆಗೆ ಏನೇಲ್ಲ ಬೇಕೋ ಆ ಎಲ್ಲವೂ ಕವಿತೆಯಲ್ಲಿದೆ.

ಕವಿತೆ ಕೇವಲ ಪದಗಳ ಜೋಡಣೆಯಲ್ಲ, ಕವಿತೆ ಒಂದು ಅವಶ್ಯಕ ಧರ್ಮ. ಕವಿತೆ ಎಂದರೆ ಅಂಥದೊಂದು ಸ್ಥಿತಿ ಎಲ್ಲಿ ಬುದ್ಧಿ-ಮನಸ್ಸು ನಿಮ್ಮ ಮತ್ತು ನಿಮ್ಮ ಅಸ್ತಿತ್ವದ ನಡುವೆ ಹಸ್ತಕ್ಷೇಪ ಮಾಡುವುದಿಲ್ಲ; ಕವಿತೆಯಲ್ಲಿ ನಿಮ್ಮ ಮತ್ತು ನಿಮ್ಮ ಅಸ್ತಿತ್ವದ ನಡುವೆ ಐಕ್ಯತೆ ಸಾಧ್ಯ. ಕವಿತೆಯಲ್ಲಿ ನಿಮ್ಮನ್ನ ಸುತ್ತಲಿನ ಅಸ್ತಿತ್ವ ಆವರಿಸಿಕೊಳ್ಳುತ್ತದೆ, ಕವಿತೆಯಲ್ಲಿ ಪ್ರತ್ಯೇಕ ಘಟಕವಾಗಿರುವ ನೀವು ಮಾಯವಾಗಿ ಸಮಸ್ತ ಅಸ್ತಿತ್ವ ನಿಮ್ಮ ಮೂಲಕ ಮಾತನಾಡಲು ಶುರು ಮಾಡುತ್ತದೆ, ನಿಮ್ಮ ಮೂಲಕ ಕುಣಿಯಲು ಶುರು ಮಾಡುತ್ತದೆ, ಕವಿತೆಯಲ್ಲಿ ನೀವು ಖಾಲಿ ಬಿದರಿನ ಕೊಳವಿಯಾಗುತ್ತೀರಿ ಮತ್ತು ಸಮಸ್ತ ಅಸ್ತಿತ್ವ ಆ ಬಿದರಿನ ಕೊಳವಿಯನ್ನು ಕೊಳಲಾಗಿಸುತ್ತದೆ.

ಕವಿತೆ, ಭಾಗದ ರೂಪ ಧರಿಸಿರುವ ಪೂರ್ಣ, ಮಂಜಿನ ಹನಿಯಯೊಂದರಲ್ಲಿ ಅಡಗಿಕೊಂಡಿರುವ ಮಹಾ ಸಾಗರ, ಕವಿತೆ ಒಂದು ಪವಾಡ.

ನಾನು ಕವಿತೆ ಎಂದು ಮಾತಾಡುವಾಗ ನನ್ನ ಮನಸ್ಸಿನಲ್ಲಿ ಕಾಳಿದಾಸ, ಶೇಕ್ಸ್`ಪಿಯರ್ ಇಲ್ಲ, ಅವರು ಭಾಗಶಃ ಕವಿಗಳು. ಅವರಿಗೆ ಕವಿತೆಯ ಕೆಲವೊಂದು ವಿಷಯಗಳು ಮಾತ್ರ ಗೊತ್ತು ಅವರು ಪೂರ್ಣ ಕವಿಗಳಲ್ಲ. ಅಜ್ಞಾತದ ಬಾಗಿಲು ಅವರಿಗಾಗಿ ತೆರೆದುಕೊಂಡಾಗ ಕೆಲವೊಂದು ಅಪರೂಪದ ಮಿಣುಕು ನೋಟಗಳು ಅವರ ಪಾಲಾಗಿವೆ ಅಷ್ಟೇ, ಬದುಕಿನ ಆಳದಲ್ಲಿರುವ ಮೂಲ ಸತ್ಯಗಳಲ್ಲಿ ಕೆಲವನ್ನ ಮಾತ್ರ ಅವರು ದಕ್ಕಿಸಿಕೊಂಡಿದ್ದಾರೆ. ಅವರಿಗೆ ಈ ಸತ್ಯಗಳನ್ನು ತಲುಪುವುದು ಹೇಗೆ ಎನ್ನುವುದು ಗೊತ್ತಿರಲಿಲ್ಲ ಹಾಗು ಈ ಸತ್ಯಗಳು ಹೇಗೆ ಅವರನ್ನು ಬಂದು ಮುಟ್ಟಿದವು ಎನ್ನುವುದು ಕೂಡ ಗೊತ್ತಿಲ್ಲ. ಅವರಿಗೆ ಇದು ಸಾಧ್ಯವಾದದ್ದು ಅಪ್ರಜ್ಞಾಪೂರ್ವಕವಾಗಿ. ನಿನಗೆ ಕನಸು ಬಿದ್ದಂತೆ ಅವರಿಗೂ ಇದೆಲ್ಲ ಸಾಧ್ಯವಾದದ್ದು ಕನಸಿನಲ್ಲಿ. ಅವರು ಅಪ್ರತಿಮ ಕನಸುಗಾರರು.

ಜಗತ್ತಿನ ಎಲ್ಲ ಮಹಾ ಕವಿಗಳು, ಮಹಾನ್ ಚಿತ್ರ ಕಲಾವಿದರು, ಮಹಾ ಮಹಾ ಶಿಲ್ಪಿಗಳು, ಸಂಗೀತಕಾರರು ಎಲ್ಲರೂ ಅದ್ಭುತ ಕನಸುಗಾರರು. ಹೌದು ಅವರಿಗೆ ಕನಸಿನಲ್ಲಿ ಬದುಕಿನ ಸತ್ಯದ ಕೆಲ ನೋಟಗಳು ಮಾತ್ರ ಲಭ್ಯವಾಗಿವೆ, ಅಲ್ಲೊಂದು ಇಲ್ಲೊಂದು ಬೆಳಕಿನ ಕಿರಣಗಳು ಅವರ ಕನಸಿನ ಪೊರೆಯನ್ನು ದಾಟಿ ಅವರನ್ನು ಬಂದು ಮುಟ್ಟಿವೆ. ಅಂಥ ಒಂದು ಬೆಳಕಿನ ಕಿರಣ ಬಂದು ಮುಟ್ಟಿದರೂ ಆ ಕನಸುಗಾರ ಶೇಕ್ಸ್`ಪಿಯರ್ ಆಗಬಹುದು, ಕಾಳಿದಾಸ ಆಗಬಹುದು, ಆದರೆ ನಾನು ಹೇಳುತ್ತಿರುವುದು ಈ ವಿಷಯದ ಬಗ್ಗೆ ಅಲ್ಲ.

ನಾನು ಕವಿತೆ ಎಂದು ಹೇಳುತ್ತಿರುವುದು ಬುದ್ಧರ ಮೂಲಕ ಹಾಯ್ದು ಬಂದಂಥದು. ಇದು ನಿಜದ ಕವಿತೆ. ಬುದ್ಧ ಕನಸುಗಾರನಲ್ಲ, ಅತೀಶ ಕನಸುಗಾರನಲ್ಲ, ಅವರು ಪೂರ್ಣ ಪ್ರಜ್ಞೆಯುಳ್ಳವರು, ಅರಿವನ್ನ ಸಾಧಿಸಿಕೊಂಡವರು. ಅವರಲ್ಲಿ ಕನಸುಗಳು ಮಾಯವಾಗಿವೆ, ಆವಿಯಾಗಿ ಹೋಗಿವೆ. ಈಗ ಅವರನ್ನ ತಲುಪುತ್ತಿರುವುದು ಕೇವಲ ಸತ್ಯದ ಮಿಣುಕು ನೋಟಗಳಲ್ಲ. ಪೂರ್ಣ ಸತ್ಯ ಅವರನ್ನ ಧರಿಸಿಕೊಂಡು, ಆವಾಹಿಸಿಕೊಂಡು, ಅವರ ಮೂಲಕ ಸುತ್ತೆಲ್ಲ ಹರಡಿಕೊಳ್ಳುತ್ತಿದೆ.

ಆದರೆ ಸಾಧಾರಣ ಕವಿ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಜಿಗಿಯುತ್ತಿದ್ದಾನೆ, ಅವನು ನೆಲವನ್ನು ಬಿಟ್ಟು ಇರುವುದು ಕೆಲವು ಕ್ಷಣ ಮಾತ್ರ, ಕೆಲವೇ ಕೆಲವು ಕಣ ಮಾತ್ರ, ಮತ್ತೆ ಅವನು ನೆಲವನ್ನು ಬಂದು ತಲುಪುತ್ತಾನೆ.

Leave a Reply