ಪ್ರೀತಿಯ ಲಕ್ಷಣ ‘ಕೊಡುವುದು’, ಸ್ವೀಕರಿಸುವುದಲ್ಲ! : Art of love #11

  ಪ್ರೀತಿ, ಕ್ರಿಯೆಯ ಆಚರಣೆಯೇ ಹೊರತು , ನಿಷ್ಕ್ರಿಯತೆಯ ಪರಿಣಾಮವಲ್ಲ. ಪ್ರೀತಿ ಎಂದರೆ ‘ನೇರ ನಿಲ್ಲುವುದು ಗಟ್ಟಿಯಾಗಿ ‘ ಸೋತು ‘ಶರಣಾಗುವುದಲ್ಲ’ ಅತ್ಯಂತ ಸಾಮಾನ್ಯ ರೀತಿಯಲ್ಲಿ ಹೇಳುವುದಾದರೆ, ಮೂಲಭೂತವಾಗಿ “ಕೊಡುವುದು” ಪ್ರೀತಿಯ ಕ್ರಿಯಾತ್ಮಕ ಲಕ್ಷಣ “ಸ್ವೀಕರಿಸುವುದು” ಅಲ್ಲ... । Art of love – Erich Fromm, ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… https://aralimara.com/2022/03/27/love-23/

ಸಹ ಜೀವನ ಒಂದಾಗುವಿಕೆಗೆ (symbiotic union) ವ್ಯತಿರಿಕ್ತವಾಗಿ ಪ್ರಬುದ್ಧ ಪ್ರೀತಿ, ಸಂಬಂಧದೊಳಗಿನ ಪ್ರತಿಯೊಬ್ಬರ ಸಮಗ್ರತೆಯನ್ನು, ಸ್ವಂತತೆಯನ್ನು, ವೈಯಕ್ತಿಕತೆಯನ್ನು ಉಳಿಸಿಕೊಂಡೂ ಸಾಧ್ಯವಾಗುವಂಥ ಒಂದಾಗುವಿಕೆ. ಪ್ರೀತಿ ಮನುಷ್ಯನ ಕ್ರಿಯಾತ್ಮಕ ಸಾಮರ್ಥ್ಯ ; ಅವನ ಮತ್ತು ಅವನ ಸಹ ಮನುಷ್ಯನ ನಡುವಿನ ಗೋಡೆಯನ್ನು ಒಡೆದುಹಾಕುವ ಶಕ್ತಿ, ಅವನನ್ನು ಇತರರೊಂದಿಗೆ ಒಂದುಗೂಡಿಸುವಂಥದು. ಪ್ರೀತಿ, ಮನುಷ್ಯನ ಸ್ವಂತತೆಯನ್ನ ಉಳಿಸಿಕೊಳ್ಳುತ್ತಲೇ, ಅವನ ಸಮಗ್ರತೆಯನ್ನ ಕಾಯ್ದುಕೊಳ್ಳುತ್ತಲೇ, ಅವನ ಒಂಟಿತನ-ಪ್ರತ್ಯೇಕತೆಯ ಭಾವವನ್ನ ಮೀರಲು ಸಹಾಯ ಮಾಡುವಂಥದು. ಪ್ರೀತಿಯ ವಿರೋಧಾಭಾಸವೆಂದರೆ, ಇಲ್ಲಿ ಇಬ್ಬರು ಒಂದಾಗುತ್ತಾರೇನೋ ಹೌದು ಆದರೆ ಇಬ್ಬರಾಗಿಯೇ ಉಳಿದುಕೊಳ್ಳುತ್ತಾರೆ.

ಪ್ರೀತಿಯನ್ನ ನಾವು ಒಂದು ಕ್ರಿಯೆ ಎಂದು ಹೇಳುವೆವಾದರೆ, “ಕ್ರಿಯೆ” ಎನ್ನುವ ಪದದಲ್ಲಿರುವ ಅಸ್ಪಷ್ಟ ಅರ್ಥದ ಕಾರಣವಾಗಿ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ. “ಕ್ರಿಯೆ” ಎಂದರೆ ಆ ಪದದ ಆಧುನಿಕ ಬಳಕೆಯ ಪ್ರಕಾರ, ಶಕ್ತಿ ಸಾಮರ್ಥ್ಯವನ್ನು ಖರ್ಚು ಮಾಡಿ, ಈಗ ಇರುವ ಪರಿಸ್ಥಿತಿಯಲ್ಲಿ ಬದಲಾವಣೆ ತರುವ ಚಟುವಟಿಕೆ ಆಗಿದೆ. ಹಾಗಾಗಿ ಮನುಷ್ಯ ಒಂದು ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾನೆಂದರೆ, ಅವನು ವ್ಯಾಪಾರ ಮಾಡುತ್ತಿದ್ದಾನೆ, ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದಾನೆ, ಟೇಬಲ್ ತಯಾರಿಸುತ್ತಿದ್ದಾನೆ, ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾನೆ, ಹೀಗೆ ಕೊನೆಯೇ ಇಲ್ಲದ ಬೆಲ್ಟೊಂದರ ಮೇಲೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾನೆ. ಈ ಎಲ್ಲ ಕ್ರಿಯೆಗಳ ಸಾಮಾನ್ಯ ಉದ್ದೇಶವೆಂದರೆ, ಎಲ್ಲವೂ ಕಣ್ಣಿಗೆ ಕಾಣುವ ಗುರಿಯೊಂದನ್ನು ಸಾಧಿಸುವ ದಿಕ್ಕಿನಲ್ಲಿ ನಿರ್ದೇಶಿತವಾದಂಥವು. ಇಲ್ಲಿ ಯಾವುದನ್ನ ಗಣನೆಗೆ ತೆಗೆದುಕೊಳ್ಳಲಾಗಿಲ್ಲವೆಂದರೆ ಈ ಕ್ರಿಯೆಗಳ ಹಿಂದಿನ ಪ್ರೇರಣೆಯನ್ನ. ಉದಾಹರಣೆಗೆ, ಒಬ್ಬ ಮನುಷ್ಯ ತನ್ನೊಳಗಿನ ತೀವ್ರ ಅಸುರಕ್ಷತಾ ಭಾವ ಮತ್ತು ಒಂಟಿತನದ ಕಾರಣವಾಗಿ ತನಗೆ ಅಹಿತಕರವಾದ ಕತ್ತೆ ಚಾಕರಿಯಲ್ಲಿ ತನ್ನನ್ನು ತೊಡಗಿಸಿಕೊಂಡಿರಬಹುದು; ಅಥವಾ ಮಹತ್ವಾಕಾಂಕ್ಷೆಯ ಕಾರಣವಾಗಿ, ದುರಾಸೆ, ಅಥವಾ ಹಣದ ಕಾರಣವಾಗಿ ಒಂದು ಕೆಲಸವನ್ನು ಮಾಡುತ್ತಿರಬಹುದು. ಈ ಎಲ್ಲ ಕ್ರಿಯೆಗಳಲ್ಲಿ ವ್ಯಕ್ತಿ, ಅವನ ಉತ್ಕಟತೆಯ ಗುಲಾಮ, ಹಾಗು ಅವನು ಮಾಡುತ್ತಿರುವ ಕ್ರಿಯೆ ನಿಜಾರ್ಥದಲ್ಲಿ “ನಿಷ್ಕ್ರೀಯತೆ” ಏಕೆಂದರೆ ಈ ಕೆಲಸ ಮಾಡಲು ಅವನನ್ನು ಉದ್ದೀಪಿಸಲಾಗಿದೆ ; ಇಲ್ಲಿ ಅವನು ತೊಂದರೆಗೊಳಗಾದವ, ಕ್ರಿಯೆಯಲ್ಲಿ ತೊಡಗಿಸಿಕೊಂಡವನಲ್ಲ.

Erich Fromm

ಇನ್ನೊಂದು ನೆಲೆಯಲ್ಲಿ, ತನ್ನನ್ನು ತಾನು ಅನುಭವಿಸುತ್ತ, ಸುತ್ತಲಿನ ಜಗತ್ತಿನೊಳಗೆ ಒಂದಾಗುತ್ತ, ಯಾವ ಉದ್ದೇಶ , ಯಾವ ಗುರಿಯಿಲ್ಲದೆ ಸುಮ್ಮನೇ ಕುಳಿತುಕೊಂಡು ಧ್ಯಾನಿಸುತ್ತಿರುವ ಮನುಷ್ಯನನ್ನು ಅನಾಸಕ್ತ ಅಥವಾ ನಿಷ್ಕ್ರೀಯ ಎಂದು ಸಾಮಾನ್ಯವಾಗಿ ಗುರುತಿಸಲಾಗುತ್ತದೆ, ಏಕೆಂದರೆ ಅವನು ಪ್ರೊಡಕ್ಟಿವ್ ಆಗಿ ಏನೂ ಮಾಡುತ್ತಿಲ್ಲ ಎನ್ನುವ ಕಾರಣಕ್ಕಾಗಿ. ಆದರೆ ನಿಜದಲ್ಲಿ, ಏಕಾಗ್ರ ಧ್ಯಾನದ ಈ ಮನೋಭಾವ ಒಂದು ಅತ್ಯುಚ್ಚ ಕ್ರಿಯೆ, ಇದು ಚೇತನದ ಚಟುವಟಿಕೆ, ಒಳಗಿನ ಸ್ವಾತಂತ್ರ್ಯ ಮತ್ತು ಬಿಡುಗಡೆಯ ಸ್ಥಿತಿಯ ಕಾರಣಕ್ಕಾಗಿ ಸಾಧ್ಯವಾದಂಥದು.

ಕ್ರಿಯೆಯ ಬಗೆಗಿನ ಒಂದು ಪರಿಕಲ್ಪನೆ (ಆಧುನಿಕ) , ಬಹಿರಂಗದ ಗುರಿ ಸಾಧನೆಗಾಗಿ ಶಕ್ತಿ ಸಾಮರ್ಥ್ಯದ ಬಳಕೆಯನ್ನು ಉಲ್ಲೇಖಿಸಿದರೆ, ಇನ್ನೊಂದು ಪರಿಕಲ್ಪನೆ ಮನುಷ್ಯನ ಅಂತರ್ಶಕ್ತಿಯ ಬಳಕೆಯನ್ನು ಸೂಚಿಸುತ್ತದೆ. ಮನುಷ್ಯನ ಈ ಅಂತರ್ಶಕ್ತಿಯಿಂದ ಹೊರ ಜಗತ್ತಿನ ಸ್ಥಿತಿಯಲ್ಲಿ ಬದಲಾವಣೆ ಆಗುತ್ತದೋ ಇಲ್ಲವೋ ಎನ್ನುವುದು ಇಲ್ಲಿ ಮುಖ್ಯವಲ್ಲ. ಕ್ರಿಯೆಯ ಈ ಎರಡನೆಯ ಪರಿಕಲ್ಪನೆಯನ್ನು ಸ್ಪಷ್ಟವಾಗಿ ವಿವರಿಸಿದವನು ‘Spinoza’ . ಅವನು “ಕ್ರಿಯಾತ್ಮಕ” ಮತ್ತು “ ನಿಷ್ಕ್ರಿಯಾತ್ಮಕ” ಪರಿಣಾಮಗಳನ್ನು “ಕ್ರಿಯೆ” ಮತ್ತು “ಉತ್ಕಟತೆ” ಹೆಸರಿನಡಿಯಲ್ಲಿ ಬೇರೆ ಬೇರೆ ಮಾಡಿದ. ಕ್ರಿಯಾತ್ಮಕ ಪರಿಣಾಮಗಳ ಸಂದರ್ಭದಲ್ಲಿ, ಮನುಷ್ಯ ಸ್ವತಂತ್ರ, ತನ್ನ ಪರಿಣಾಮಗಳಿಗೆ ತಾನೇ ಜವಾಬ್ದಾರ. ನಿಷ್ಕ್ರಿಯತೆಯ ಪರಿಣಾಮಗಳ ಸಂದರ್ಭದಲ್ಲಿ, ಮನುಷ್ಯ ಉದ್ದೀಪಿಸಲ್ಪಡುವವನು, ಉದ್ದೀಪನೆಯ ಪ್ರೇರಣೆಗಳ ಬಗ್ಗೆ ತಾನೇ ಅರಿವಿಲ್ಲದವನು. ಹೀಗೆ Spinoza, ಮೌಲ್ಯ ಮತ್ತು ಸಾಮರ್ಥ್ಯ ಎರಡೂ ಒಂದೇ ಎನ್ನುವ ಹೇಳಿಕೆಯೊಂದನ್ನು ರೂಪಿಸುತ್ತಾನೆ (2). ಅಸೂಯೆ, ಹೊಟ್ಟೆಕಿಚ್ಚು, ಮಹತ್ವಾಕಾಂಕ್ಷೆ ಮತ್ತು ಎಲ್ಲ ಬಗೆಯ ದುರಾಸೆಗಳನ್ನು ‘ಉತ್ಕಟತೆ’ ಗಳೆಂದೂ, ಪ್ರೀತಿಯನ್ನು ‘ಕ್ರಿಯೆ’ ಎಂದೂ, ಮಾನವ ಶಕ್ತಿಯ ಆಚರಣೆ ಎಂದೂ, ಮತ್ತು ಇದನ್ನ ಪೂರ್ಣ ಸ್ವಾತಂತ್ರ್ಯದಲ್ಲಿ ಮಾತ್ರ ಆಚರಿಸುವುದು ಸಾಧ್ಯ ಮತ್ತು ಯಾವುದೇ ಒತ್ತಡಗಳು ಕಾರಣವಾಗಿ ಆಚರಿಸುವುದು ಸಾಧ್ಯವಿಲ್ಲವೆಂದೂ ಹೇಳುತ್ತಾನೆ.

ಪ್ರೀತಿ, ಕ್ರಿಯೆಯ ಆಚರಣೆಯೇ ಹೊರತು , ನಿಷ್ಕ್ರಿಯತೆಯ ಪರಿಣಾಮವಲ್ಲ. ಪ್ರೀತಿ ಎಂದರೆ ‘ನೇರ ನಿಲ್ಲುವುದು ಗಟ್ಟಿಯಾಗಿ ‘ ಸೋತು ‘ಶರಣಾಗುವುದಲ್ಲ’ ಅತ್ಯಂತ ಸಾಮಾನ್ಯ ರೀತಿಯಲ್ಲಿ ಹೇಳುವುದಾದರೆ, ಮೂಲಭೂತವಾಗಿ “ಕೊಡುವುದು” ಪ್ರೀತಿಯ ಕ್ರಿಯಾತ್ಮಕ ಲಕ್ಷಣ “ಸ್ವೀಕರಿಸುವುದು” ಅಲ್ಲ.

“ಕೊಡುವುದು” ಎಂದರೇನು ? ಇದಕ್ಕೆ ಕೊಡಬಹುದಾದ ಉತ್ತರ ಬಹಳ ಸರಳ ಅನಿಸಿದರೂ, ಅದು ಬಹಳ ಅಸ್ಪಷ್ಟತೆಯಿಂದ ಕೂಡಿದ್ದು, ತುಂಬ ಸಂಕೀರ್ಣವಾಗಿದೆ. ಕೊಡುವುದರ ಬಗ್ಗೆ ಅತ್ಯಂತ ವ್ಯಾಪಕವಾಗಿ ಹರಡಿಕೊಂಡಿರುವ ತಪ್ಪು ತಿಳುವಳಿಕೆಯೆಂದರೆ, ಕೊಡುವುದೆಂದರೆ “ಬಿಟ್ಟು ಕೊಡುವುದು”, ಅವಕಾಶ ವಂಚಿತರಾಗುವುದು, ತ್ಯಾಗ ಮಾಡುವುದು. ಇನ್ನೂ ಶೋಷಿಸುವ, ಸ್ವೀಕರಿಸುವ ಮತ್ತು ಕೂಡಿಡುವ ಸ್ವಭಾವಗಳ ಹಂತ ಮೀರದ ಮನುಷ್ಯ, ಕೊಡುವುದನ್ನ ಮೇಲೆ ಹೇಳಿರುವ ರೀತಿಯಲ್ಲಿ ಅರ್ಥಮಾಡಿಕೊಳ್ಳುತ್ತಾನೆ. ವ್ಯಾಪಾರಿ ಮನೋಭಾವದ ಮನುಷ್ಯ ಕೊಡುವುದೆಂದರೆ, ಅದಕ್ಕೆ ಬದಲಾಗಿ ಬೇರೇನೋ ಪಡೆಯುವುದು ಎಂದು ವ್ಯಾಖ್ಯಾನ ಮಾಡುತ್ತಾನೆ. ಅವನಿಗೆ ಏನನ್ನಾದರೂ ಪಡೆಯದೇ ಕೊಡುವುದೆಂದರೆ ಮೋಸಕ್ಕೆ ಒಳಗಾದಂತೆ (3). ನಾನ್ ಪ್ರೊಡಕ್ಟಿವ್ ಮನೋಭಾವದ ಜನರಿಗೆ ಕೊಡುವುದೆಂದರೆ ಅಷ್ಟರ ಮಟ್ಟಿಗೆ ಬಡತನವನ್ನು ಅನುಭವಿಸುವುದು. ಈ ಸ್ವಭಾವದ ಬಹುತೇಕರು ಕೊಡುವುದನ್ನ ನಿರಾಕರಿಸುತ್ತಾರೆ. ಕೆಲವರು ಕೊಟ್ಟರೂ ಅದಕ್ಕೆ ತ್ಯಾಗದ ಹೆಸರಿಟ್ಟು ಮೌಲ್ಯದ ಪಟ್ಟ ಕಟ್ಟುತ್ತಾರೆ. ಅವರು ಹಾಗೆ ಮಾಡುವುದರ ಹಿಂದಿನ ಕಾರಣ, ಕೊಡುವಾಗ ನೋವಾಗುತ್ತದೆ ಮತ್ತೆ ನೋವು ಪಡುವುದು, ತ್ಯಾಗ ಮಾಡುವುದು ಒಂದು ಮೌಲ್ಯ ಎಂದು ಅವರು ತಿಳಿದಿರುವುದು. ಅವರ ತಿಳುವಳಿಕೆಯ ಪ್ರಕಾರ, ಕೊಡುವುದು, ಪಡೆಯುವುದಕ್ಕಿಂತ ಒಳ್ಳೆಯದು, ಹಾಗೆಂದರೆ ಖುಶಿ ಪಡುವುದಕ್ಕಿಂತ ನೋವು ಅನುಭವಿಸುವುದು ಮಹತ್ತರವಾದದ್ದು.

——-

(2) Spinoza, Ethics IV, Def. 8
(3) Cf. a detailed discussion of these character orientations in Erich Fromm, Man for himself, Chapter III, pp. 54-117

1 Comment

Leave a Reply