‘ಸನಾತನ’ದ ಗುಣಲಕ್ಷಣಗಳನ್ನು ಹೇಳುತ್ತದೆ, ಮಹಾ ಸುಭಾಷಿತ ಸಂಗ್ರಹದ ಈ ಸುಭಾಷಿತ…
ಅದ್ರೋಹಃ ಸರ್ವಭೂತೇಷು ಕರ್ಮಣಾ ಮನಸಾ ಗಿರಾ।
ಅನುಗ್ರಹಶ್ಚ ದಾನಂ ಚ ಸತಾಂ ಧರ್ಮಃ ಸನಾತನಃ॥
ಮಹಾ ಸುಭಾಷಿತ ಸಂಗ್ರಹ । 1013
ಅರ್ಥ: ಯಾರಿಗೂ ದ್ರೋಹ ಬಗೆಯದೆ ಇರುವುದು, ಪ್ರತಿಯೊಂದು ಜೀವದೊಡನೆಯೂ ಸಹಕರಿಸುತ್ತಾ ಅವುಗಳಿಗಾಗಿ ಕಾಯಾ ವಾಚಾ ಕೆಲಸ ಮಾಡುವುದು, ಅನುಗ್ರಹಿಸುವುದು, ದಾನ ನೀಡುವುದು – ಇವು ಸನಾತನ ಧರ್ಮದ ಲಕ್ಷಣಗಳು.
ತಾತ್ಪರ್ಯ: ಈ ಮೇಲಿನ ಶ್ಲೋಕದ ಅರ್ಥ, ರೂಢಿಗತವಾಗಿ ಒಂದು ನಿರ್ದಿಷ್ಟ ಧರ್ಮದಲ್ಲಿ ಹುಟ್ಟಿದವರೆಲ್ಲ ದ್ರೋಹ ಬಗೆಯದೆ ಇರುವವರು, ಸೌಹಾರ್ದ ಜೀವಿಗಳು, ದಾನ ಧರ್ಮಿಷ್ಟರು ಎಂದಲ್ಲ. ಈ ಶ್ಲೋಕದ ಅರ್ಥ, ಹಾಗೆ ದ್ರೋಹ ಬಗೆಯದೆ, ಸಕಲ ಜೀವಿಗಳೊಡನೆ ಸೌಹಾರ್ದದಿಂದ, ದಾನ ಧರ್ಮಾದಿ ಆಚರಣೆ ನಡೆಸುತ್ತಾ ಜೀವಿಸುವುದು ಸನಾತನ ಧರ್ಮ ಲಕ್ಷಣ; ಹಾಗೆ ಜೀವಿಸುವವರು ಸನಾತನ ಧರ್ಮ ಪಾಲಕರು ಎಂದು. ಮತ್ತು ಸನಾತನ ಧರ್ಮ ಅಂದರೆ ನಾಗರಿಕತೆಯ ಆರಂಭ ಕಾಲದಲ್ಲಿ ಯಾವುದನ್ನು ಮನುಷ್ಯತ್ವದ ನಿಯಮಗಳು, ಮನುಷ್ಯರ ಮೂಲಭೂತ ಲಕ್ಷಣಗಳು ಎಂದು ಪರಿಗಣಿಸಲಾಗಿತ್ತೋ ಅದು. ಧರ್ಮ ಅಂದರೆ ಧರಿಸುವಂಥದ್ದು. ಅಂದರೆ, ಆಚರಿಸಬೇಕಾದಂಥದ್ದು. ಅಥವಾ ಮನುಷ್ಯನ ಅಸ್ಮಿತೆ ಮತ್ತು ಅಸ್ತಿತ್ವ ಗುರುತಿಸುವಂಥದ್ದು. ನೀರಿಗೆ ಹರಿಯುವುದೇ ಧರ್ಮ ಇದ್ದ ಹಾಗೆ, ಮನುಷ್ಯನಿಗೆ ಈ ಮೇಲೆ ಹೇಳಿದಂತೆ ಬಾಳುವುದೇ ಧರ್ಮ. ಅದರ ಹೊರತಾಗಿ ಬದುಕುವವರು ಅಧರ್ಮಿಗಳು. ಯಾರು ದ್ರೋಹ ಮಾಡುತ್ತಾರೋ, ಕರ್ಮ ಮಾಡುವುದಿಲ್ಲವೋ, ಹಗೆ ಸಾಧಿಸುತ್ತಾರೋ, ದಾನಾದಿಗಳನ್ನು ಮಾಡುವುದಿಲ್ಲವೋ ಅವರು ಅಧರ್ಮಿಗಳು. ಅವರು ನಿರ್ದಿಷ್ಟ ಮತಧರ್ಮದ ಗುರುತಿನಿಂದ ಹೊರತಾಗುತ್ತಾರೆ ಎಂದಲ್ಲ, ಒಟ್ಟು ಮನುಷ್ಯತ್ವದ ಗುರುತಿನಿಂದಲೇ ಹೊರತಾಗುತ್ತಾರೆ ಎಂದು. ಈ ಅರ್ಥದಲ್ಲಿ ಯಾರು ಧರ್ಮಭ್ರಷ್ಟರಾಗುತ್ತಾರೋ ಅವರು ಮನುಷ್ಯತ್ವವನ್ನೆ ಮರೆತಿರುತ್ತಾರೆ ಎಂದು!