ಪರರನ್ನು ಸಂಪೂರ್ಣ ತಿಳಿದವರು ಯಾರಿದ್ದಾರು!? : ಕಗ್ಗದ ತಿಳಿವು

ಮತ್ತೊಬ್ಬರ ಆಂತರ್ಯವನ್ನು ಸಂಪೂರ್ಣವಾಗಿ ಅರಿತವರು ಯಾರಿದ್ದಾರೆ? ಸೋತವರಿಗೆ ಅಥವಾ ಕೆಳಗೆಬಿದ್ದವರಿಗೆ ನಮ್ಮ ಅನುಕಂಪವಿರಬೇಕು, ನಿಂದೆಯಲ್ಲ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ | ವ್ಯಾಖ್ಯಾನ : ರವಿ ತಿರುಮಲೈ

ಪಾತಕಿಯೊಳಾಗ್ರಹವ ತೋರೆ ನಿರ್ಮಲನಾರು? ।
ಆತುಮದ ಪರಿಕಥೆಯನರಿತವರೆ ನಾವು? ॥
ಸೋತ ದುರ್ಬಲಿಗೆ ಸಲ್ಲುವುದು ನಮ್ಮನುಕಂಪೆ ।
ನೀತಿ ನಿಂದೆಯೊಳಿರದು – ಮಂಕುತಿಮ್ಮ ॥ ಕಗ್ಗ ೨೮೧ ॥

ವಾಚ್ಯಾರ್ಥ
ಪಾತಕಿಯೊಳಾಗ್ರಹವ=ಪಾತಕಿಯೊಳು + ಆಗ್ರಹವ// ನಿರ್ಮಲನಾರು= ನಿರ್ಮಲನು +ಯಾರು// ಪರಿಕಥೆಯನರಿತವರೆ= ಪರಿಕಥೆಯನು+ ಅರಿತವರೆ// ನಿಂದೆಯೊಳಿರದು= ನಿಂದೆಯೊಳು + ಇರದು//ಪಾತಕಿ = ಪಾಪ ಮಾಡಿದವನು// ಆತುಮದ = ಆತ್ಮದ.

ಭಾವಾರ್ಥ
ಯಾರೋ ಒಬ್ಬನನ್ನು ‘ಇವನು ಪಾಪಿ,ಪಾತಕಿ’ ಎಂದು ಬೆರಳು ತೋರಲು ಇಲ್ಲಿ ಯಾರೂ ಸಂಪೂರ್ಣ ನಿರ್ಮಲರು ಇಲ್ಲವಲ್ಲ! ಮತ್ತೊಬ್ಬರ ಆಂತರ್ಯವನ್ನು ಸಂಪೂರ್ಣವಾಗಿ ಅರಿತವರು ಯಾರಿದ್ದಾರೆ ಹೇಳಿ? ಸೋತವರಿಗೆ ಅಥವಾ ಕೆಳಗೆಬಿದ್ದವರಿಗೆ ನಮ್ಮ ಅನುಕಂಪವಿರಬೇಕು, ನಿಂದೆಯಲ್ಲ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ವ್ಯಾಖ್ಯಾನ
ಭಾರತದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಡಾ.ಮೊಹಮದ್ ಕರೀಂ ಚಾಗ್ಲರವರು ಒಂದು ಬಾರಿ ಗಲ್ಲು ಶಿಕ್ಷೆಗೆ ಗುರಿಯಾದ ಒಬ್ಬ ಅಪಾದಿತನಿಗೆ ಶಿಕ್ಷೆಯನ್ನು ಖಾಯಂ ಮಾಡುತ್ತಾ “ಮತ್ತೊಬ್ಬರನ್ನು ನಿರ್ಧರಿಸುವುದು ಬಹಳ ಕಠಿಣ ಮತ್ತು ಕ್ರೂರವಾದ ಕೆಲಸ. ಏಕೆಂದರೆ ಆ ಸಂದರ್ಭದಲ್ಲಿ ಅದೇ ಪರಿಸ್ಥಿತಿಯಲ್ಲಿ ನಾನೇ ಇದ್ದಿದ್ದರೆ ಏನು ಮಾಡುತ್ತಿದ್ದೆನೋ ನನಗೆ ಗೊತ್ತಿಲ್ಲ”, ಎಂದು ಹೇಳುತ್ತಾರೆ.

ಎಂತಹ ಉದಾತ್ತತೆ!!! ಆದ್ದರಿಂದ ಮತ್ತೊಬ್ಬರನ್ನು ಟೀಕಿಸುವುದು, ತಪ್ಪನ್ನೆತ್ತಿ ತೋರುವುದು, ಅಪಾದನೆ ಮಾಡುವುದು ಮುಂತಾದ ಕುಚೇಷ್ಟೆಗಳು ಸುಸಂಸ್ಕೃತ ಮನುಷ್ಯನ ಲಕ್ಷಣಗಳಲ್ಲ.ಪ್ರತಿಯೊಬ್ಬರೂ ಯಾವುದೋ ಕಾರಣದಿಂದ ಕೆಲ ಕೆಲಸಗಳನ್ನು ಮಾಡುತ್ತಾರೆ. ಅದರ ಸಂಪೂರ್ಣ ಹಿನ್ನೆಲೆ ಅರಿಯದೆ ನಾವು ಮತ್ತೊಬ್ಬರನ್ನು ಟೀಕೆಮಾಡಬಾರದು. ಅರಿಯಲು ಪ್ರಯತ್ನ ಪಡಬೇಕು ಅಥವಾ ಸುಮ್ಮನಿರಬೇಕು.

ಆದರೆ ನಮ್ಮಲ್ಲಿ ಬಹಳಷ್ಟು ಜನ ಕಂಡ ಕಂಡ ವಿಷಯಕ್ಕೆಲ್ಲ ತಮ್ಮ ಅಜ್ಞಾನದ ವ್ಯಾಖ್ಯಾನ ಸುನಾಯಾಸವಾಗಿ ಹರಿಬಿಡುತ್ತಾರೆ. ಅಂತಹವರನ್ನು ಕಂಡೇ ನಮ್ಮ ಪುರಂದರದಾಸರು ” ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂಥಾ, ನಾಲಿಗೆ” ಎಂದು ಎಂದೋ ಹಾಡಿದ್ದಾರೆ. ನಾವೂ ಕೇಳುತ್ತೇವೆ, ಅರ್ಥವೂ ಆಗುತ್ತದೆ, ಆದರೆ ನಮ್ಮ ‘ ನಾಯಿ ಬಾಲ’ದಂತಾ ಬುದ್ಧಿಯನ್ನು ನಾವು ಬಿಡುವುದೇ ಇಲ್ಲ. ಪರರನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ.

ಎಲ್ಲರೂ ಅವರವರ ಪೂರ್ವ ಕರ್ಮಾನುಸಾರ ಕೆಲಸಗಳನ್ನು ಮಾಡುತ್ತಾರೆ ಮತ್ತು ಅದರ ಅನುಗುಣವಾಗಿ ಫಲಗಳನ್ನು ಪಡೆಯುತ್ತಾರೆ. ಅನ್ಯರು ಮಾಡುವ ಕೆಲಸವನ್ನು ವಿಶ್ಲೇಷಣೆ ಮಾಡುವುದು ತಪ್ಪು. ಯಾರಾದರೂ ತಾವು ಮಾಡಿದ ಕೆಲಸದಿಂದ ಕಷ್ಟದಲ್ಲಿದ್ದರೆ, ಅನುಕಂಪ ತೋರಬೇಕು, ಸಾಧ್ಯವಾದರೆ ಸಹಾಯ ಮಾಡಬೇಕು, ದುರ್ಬಲರನ್ನು ಕಂಡು ಅವರನ್ನು ‘ ನಿಂದೆ’ ಮಾಡದೆ ಸಾಂತ್ವನ ತೋರಬೇಕು. ಅದೇ ನೀತಿ. ಅದೇ ನಿಯಮ. ನಾವೂ ಸಹ ಅಂತಹ ಗುಣವನ್ನು ಬೆಳೆಸಿಕೊಳ್ಳಬೇಕು. ಅಂತಹ ಪ್ರಯತ್ನವನ್ನು ನಾವೆಲ್ಲಾ ಮಾಡಬೇಕು.

Leave a Reply