ಬ್ರಾಹ್ಮಣರ ಹುಡುಗ : ಸಿದ್ಧಾರ್ಥ #1

‘ಸಿದ್ಧಾರ್ಥ’, ಖ್ಯಾತ ಕಾದಂಬರಿಕಾರ ಹರ್ಮನ್ ಹೆಸ್ ರವರ ಬಹುಚರ್ಚಿತ ಕೃತಿ. ಈ ಕಾದಂಬರಿಯನ್ನು ಚೇತನಾ ತೀರ್ಥಹಳ್ಳಿ ಕನ್ನಡಕ್ಕೆ ಅನುವಾದಿಸಿದ್ದು, ಈ ಸ್ವೈರಾನುವಾದದ ಕಂತುಗಳು ಪ್ರತಿ ಸೋಮವಾರ ಮತ್ತು ಗುರುವಾರ ‘ಅರಳಿಮರ’ದಲ್ಲಿ ಪ್ರಕಟವಾಗಲಿದೆ…

ಮನೆಯ ಮುಚ್ಚಟೆಯಲ್ಲಿ, ಹೊಳೆ ದಡದ ಬದಿಯಲ್ಲಿ, ದೋಣಿಗಳ ಬಳಿಯಲ್ಲಿ, ಸಾಲ ವೃಕ್ಷಗಳ ತಂಬೆಲರಲ್ಲಿ, ಅಂಜೂರದ ನೆರಳಲ್ಲಿ ಸಿದ್ಧಾರ್ಥನೆಂಬ ಆ ಬ್ರಾಹ್ಮಣರ ಹುಡುಗ, ತನ್ನ ಗೆಳೆಯ ವಟು ಗೋವಿಂದನೊಡನೆ ಆಡಾಡುತ್ತಲೇ ಚೆಂದವಾಗಿ ಬೆಳೆದು ನಿಂತಿದ್ದ. ಅವನ ತಿಳಿಬಣ್ಣದ ತೋಳುಗಳು ಹೊಳೆಯಲ್ಲಿ ಮೀಯುವಾಗ, ಹೋಮಕುಂಡ ಕಟ್ಟುವಾಗ, ಹೋಮಕ್ಕೆ ಹವಿಸ್ಸು ಸುರಿಯುವಾಗೆಲ್ಲ ಸೂರ್ಯನ ಬಿರು ಬಿಸಿಲಿಗೆ ಒಡ್ಡಿಕೊಂಡು ಕಂದಾಗಿಹೋಗಿದ್ದವು.

ಹುಡುಗನಾಗಿದ್ದಾಗ – ಮಾವಿನ ತೋಪಿನಲ್ಲಿ ಆಡುವಾಗ, ಅವನಮ್ಮ ಹಾಡುವಾಗ, ಹೋಮ ಹವನ ಮಾಡುವಾಗ, ಪಂಡಿತನಾದ ತನ್ನಪ್ಪ ತನಗೆ ಪಾಠ ಕಲಿಸುವಾಗ, ವಿದ್ವಜ್ಜನ ಗೋಷ್ಠಿ ನಡೆಯುವಾಗೆಲ್ಲ ಅವನ ಕಡುಗಪ್ಪು ಕಣ್ಣುಗಳು ಹೊಳೆಯುತ್ತಿದ್ದವು.

ಗಂಟೆಗಟ್ಟಲೆ ಸಿದ್ಧಾರ್ಥ ತಾನೂ ಬಲ್ಲಿದರೊಡನೆ ಜಿಜ್ಞಾಸೆ ನಡೆಸುತ್ತಿದ್ದ. ಗೋವಿಂದನ ಜೊತೆ ವಾದ ಮಂಡನೆಯ ಅಭ್ಯಾಸ ಮಾಡುತ್ತಿದ್ದ. ಮನನ ನಿಧಿಧ್ಯಾಸನ ನಡೆಸುತ್ತಿದ್ದ.

ಮೌನದಲ್ಲೇ, ತುಟಿ ಹೋಳುಮಾಡದೆ ಓಂಕಾರ ಹೊಮ್ಮಿಸುವ ಬಗೆ ಅದಾಗಲೇ ಅವನಿಗೆ ಕರಗತವಾಗಿತ್ತು.

ಅವನು ನಿರುಮ್ಮಳವಾಗಿ ಉಸಿರೆಳೆದುಕೊಳ್ಳುವಾಗಲೂ ಮತ್ತು ಹಗುರವಾಗಿ ಉಸಿರನ್ನ ಹೊರದಬ್ಬುವಾಗಲೂ ಅವನೊಳಗೆ ತಾನೇ ತಾನಾಗಿ ಓಂಕಾರ ಹೊಮ್ಮುತ್ತಿತ್ತು. ತನ್ನ ದೃಷ್ಟಿಯನ್ನು ಹಣೆಯ ನಡುಭಾಗದಲ್ಲಿ ಕೇಂದ್ರೀಕರಿಸಿ ಅಷ್ಟೂ ಗಮನ ಆತ್ಮದಲ್ಲೇ ನೆಟ್ಟು ಏಕಾಗ್ರಗೊಳ್ಳುವ ಕಲೆ ಅವನಿಗೆ ಸಿದ್ಧಿಸಿತ್ತು. ಅವನು ಅದಾಗಲೇ ತನ್ನ ಅಂತರಂಗದಾಳದಲ್ಲಿ ನೆಲೆಸಿರುವ, ಬ್ರಹ್ಮಾಂಡದಲ್ಲಿ ಲೀನವಾಗಿರುವ ಅವಿನಾಶಿ ಆತ್ಮವನ್ನು ಅನುಭವಿಸಬಲ್ಲವನಾಗಿದ್ದ.

ಚುರುಕು ಕಲಿಕೆಯ, ಕಲಿಕೆಯ ಹಸಿವಿನ ತನ್ನ ಮಗನನ್ನ ಕಂಡಾಗಲೆಲ್ಲ ಅಪ್ಪನ ಎದೆ ಹೆಮ್ಮೆಯಿಂದ ಬೀಗುತ್ತಿತ್ತು. ತನ್ನ ಮಗ ಬುದ್ಧಿವಂತ ತರುಣನಾಗಿ, ವಿಪ್ರೋತ್ತಮನಾಗುವ ಎಲ್ಲ ಲಕ್ಷಣದೊಂದಿಗೆ ಬೆಳೆದು ನಿಂತಿದ್ದು ಕಂಡು ಅವನ ಸಂತೋಷಕ್ಕೆ ಪಾರವಿಲ್ಲವಾಗಿತ್ತು.

ಅವನ ಅಮ್ಮನಿಗಂತೂ ತನ್ನ ಮಗ ನಿಂತರೂ ಸಂಭ್ರಮ, ಕುಂತರೂ ಸಂಭ್ರಮ, ನೀಳ ಕಾಲುಗಳನ್ನ ಬೀಸುತ್ತಾ ಓಡಾಡಿದರೂ ಸಂಭ್ರಮ. ಅದಕ್ಕೆ ಸರಿಯಾಗಿ ಸಿದ್ಧಾರ್ಥನೂ ವಿನಯದಿಂದ ತನ್ನಮ್ಮನಿಗೆ ಬಾಗಿ ನಮಸ್ಕರಿಸುತ್ತಿದ್ದ. ಅವನ ಈ ಬಗೆ ಆ ತಾಯಿಯ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸುತ್ತಿತ್ತು.

ವಿಶಾಲ ಹಣೆ, ರಾಜಕಳೆ ಸೂಸುವ ಕಣ್ಣುಗಳು, ಮಾದಕ ತುಟಿಯ ಸಿದ್ಧಾರ್ಥ ಪಟ್ಟಣದ ಬೀದಿಗಳಲ್ಲಿ ಓಡಾಡುತ್ತಿದ್ದರೆ ಬ್ರಾಹ್ಮಣ ಹುಡುಗಿಯರ ಹೃದಯಗಳು ಪ್ರೇಮದಿಂದ ಅರಳುತ್ತಿದ್ದವು.

ಆದರೆ ಎಲ್ಲರಿಗಿಂತ ಹೆಚ್ಚಾಗಿ, ಎಲ್ಲಕ್ಕಿಂತ ಹೆಚ್ಚಾಗಿ ಸಿದ್ಧಾರ್ಥನ್ನ ಯಾರಾದರೂ ಪ್ರೀತಿಸಿದ್ದರೆ, ಅದು ಗೆಳೆಯ ಗೋವಿಂದನೊಬ್ಬನೇ. ಅವನಿಗೆ ಸಿದ್ಧಾರ್ಥನ ಕಣ್ಣುಗಳೆಂದರೆ ಇಷ್ಟ. ಅವನ ಇಂಪು ಧ್ವನಿ ಇಷ್ಟ. ಅವನ ನಡಿಗೆ ಇಷ್ಟ. ಅವನ ನಡವಳಿಕೆ ಇಷ್ಟ. ಒಟ್ಟಾರೆ ಅವನಿಗೆ ಸಿದ್ಧಾರ್ಥನ ಪ್ರತಿಯೊಂದು ಸಂಗತಿಯೂ ಇಷ್ಟವಾಗುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅವನ ಚೈತನ್ಯ, ಯಾರ ಮೇಲ್ನೋಟಕ್ಕೂ ನಿಲುಕದ ಅವನ ಅಂತರಂಗ, ತೀಕ್ಷ್ಣ ಚಿಂತನೆಗಳು, ಉತ್ಕಟ ಅಭೀಪ್ಸೆ, ಉದ್ದೇಶ ಇವೆಲ್ಲವೂ ಗೋವಿಂದನ್ನ ಸೆಳೆದಿದ್ದವು. ಗೋವಿಂದನಿಗೆ ಗೊತ್ತಾಗಿಹೋಗಿತ್ತು, ಈತ ಯಾವ ಕಾರಣಕ್ಕೂ ಸಾಧಾರಣ ಬ್ರಾಹ್ಮಣನಾಗಿ ಉಳಿಯುವವನಲ್ಲ, ಆಹುತಿ ನೈವೇದ್ಯಗಳ ಉಸ್ತುವಾರಿ ನೋಡಿಕೊಂಡು ಕೂರುವುದೂ ಇಲ್ಲ ಎಂದು.

ಅವನಿಗೆ ಗೊತ್ತಿತ್ತು, ಅವನು ಬಣ್ಣ ಬಣ್ಣದ ಮಾತಾಡಿ ಮರಳು ಮಾಡುವ ವ್ಯಾಪಾರಿಯಾಗಲೀ, ಪೊಳ್ಳು ಹರಟೆಯ ಮಾತುಗಾರನಾಗಲೀ, ಸ್ವಾರ್ಥಿ ಪುರೋಹಿತನಾಗಲೀ ಆಗಲಾರ ಎಂದು. ಅವನಿಗೆ ಗೊತ್ತಿತ್ತು, ಸಿದ್ಧಾರ್ಥ ಯಾವತ್ತೂ ಮಂದೆಯ ಕುರಿಯಂತೆ ತಲೆ ಬಾಗಿಸಿ ಗುಂಪಲ್ಲಿ ಕಳೆದುಹೋಗಲಾರ ಎಂದು.

ಅಷ್ಟೇ ಅಲ್ಲ, ಗೋವಿಂದನಿಗೆ ತಾನೂ ಹತ್ತುಸಾವಿರ ಬ್ರಾಹ್ಮಣರಲ್ಲಿ ಒಬ್ಬನಾಗಿ ಉಳಿದುಬಿಡಲು ಇಷ್ಟವಿರಲಿಲ್ಲ. ಅವನು ತನ್ನ ಕಣ್ಮಣಿ, ಪ್ರೀತಿಯ ಗೆಳೆಯ ಸಿದ್ಧಾರ್ಥನನ್ನು ಅನುಸರಿಸಲು ಬಯಸಿದ್ದ.

ಮುಂದೇನಾದರೂ ಸಿದ್ಧಾರ್ಥ ದೇವರಾಗಿದ್ದರೆ, ಇವನು ಅವನ ಪರಿವಾರದಲ್ಲಿ ಒಂದಾಗಿಬಿಡುತ್ತಿದ್ದನೇನೋ. ಅವನ ಸಖನಾಗಿ, ಸಂಗಾತಿಯಾಗಿ, ಸೇವಕನಾಗಿ, ದಾಸನಾಗಿ, ನೆರಳಾಗಿ ಇದ್ದುಬಿಡುತ್ತಿದ್ದನೇನೋ.

ಸಿದ್ಧಾರ್ಥ ಪಡೆದು ಬಂದಿದ್ದ ಪ್ರೀತಿ ಈ ರೀತಿಯದಾಗಿತ್ತು. ಅವನು ಎಲ್ಲರ ಪಾಲಿಗೆ ಆನಂದದ ಝರಿಯಾಗಿದ್ದ. ಅವನು ಅವರೆಲ್ಲರನ್ನೂ ಸಂತೋಷಪಡಿಸುತ್ತಿದ್ದ. ಆದರೆ, ಸಿದ್ಧಾರ್ಥನಿಗೆ ತನ್ನನ್ನು ತಾನು ಸಂತೋಷವಾಗಿಟ್ಟುಕೊಳ್ಳಲಿಕ್ಕೇ  ಸಾಧ್ಯವಾಗುತ್ತಿರಲಿಲ್ಲ. ಅಂಜೂರ ತೋಪಿನ ಗುಲಾಲು ಬಣ್ಣದ ಹಾದಿಗುಂಟ ನಡೆದು, ನೀಲ ಛಾಯೆಯ ಮರದಡಿಯಲ್ಲಿ ಮೈಚೆಲ್ಲಿ ಕುಳಿತರೂ ಇಲ್ಲ. ದಿನಾಲೂ ಪವಿತ್ರ ಸ್ನಾನ, ಪ್ರಾಯಶ್ಚಿತ್ತ ವಿಧಿ, ಮಾವಿನ ಕಾಡಿನ ದಟ್ಟ ನೆರಳಲ್ಲಿ ಕೂತು ಗಂಟೆಗಟ್ಟಲೆ ಮಾಡುವ ಯಜ್ಞ, ತನ್ನದೇ ಸುಸಂಸ್ಕೃತ ನಡವಳಿಕೆಗಳು, ಎಷ್ಟೆಲ್ಲ ಜನರ ಪ್ರೀತಿ – ನಗು, ಏನೆಲ್ಲ ಇದ್ದರೂ ಅವನ ಎದೆಯಲ್ಲಿ ಸಂತಸದ ಒರತೆ ಬತ್ತಿದಂತೇ ಇತ್ತು. ಕನಸುಗಳು ಮತ್ತು ಆಲೋಚನೆಗಳ ನಿರಂತರ ದಾಳಿ ಅವನನ್ನು ಕಲಕುತ್ತಲೇ ಇದ್ದವು. ಹೊಳೆ ನೀರಿನ ಹರಿವು, ಇರುಳ ಚಿಕ್ಕೆಗಳ ಹೊಳಪು, ಸೂರ್ಯ ಕಿರಣಗಳ ಶಾಖ ಇವೆಲ್ಲವೂ ಅವನ ಆತ್ಮದೊಳಕ್ಕೆ ಯಜ್ಞಕುಂಡದ ಹೊಗೆ, ಋಗ್ವೇದ ಮಂತ್ರೋಚ್ಚಾರ, ವೃದ್ಧ ಬ್ರಾಹ್ಮಣರ ಉಪದೇಶಗಳೆಲ್ಲದರ ಮೂಲಕ ಹನಿಹನಿಯಾಗಿ ಹೊಕ್ಕುತ್ತಿದ್ದವು.

ಮುಂದೆ…? ಮುಂದಿನ ಸಂಚಿಕೆಯಲ್ಲಿ!

1 Comment

Leave a Reply