“ನೀವು ಪ್ರೀತಿಸುವ ವ್ಯಕ್ತಿಯನ್ನ ನೀವು ಮಿಸ್ ಮಾಡಿಕೊಳ್ಳುವುದು ನೀವು ಡಿಸ್ಟರ್ಬ್ ಆದಾಗ ಮಾತ್ರ, ಸಂಕಟ ಅನುಭವಿಸುವಾಗ ಮಾತ್ರ. ಆ ವ್ಯಕ್ತಿ ನಿಮ್ಮ ಒಡೆತನದ ಭಾಗವಾಗಿರುವವರೆಗೆ ನೀವು ಆ ವ್ಯಕ್ತಿಯ ಬಗ್ಗೆ ಯೋಚಿಸುವುದಿಲ್ಲ, ಏಕೆಂದರೆ ಒಡೆತನದಲ್ಲಿ ಡಿಸ್ಟರ್ಬನ್ಸ್ ಇಲ್ಲ” ಅನ್ನುತ್ತಾರೆ ಜಿಡ್ಡು ಕೃಷ್ಣಮೂರ್ತಿ | ಕನ್ನಡಕ್ಕೆ : ಚಿದಂಬರ ನರೇಂದ್ರ
ನಮಗೆ ಪ್ರೀತಿ ಒಂದು ಭಾವನೆಯಾಗಿ, ಒಂದು ಸಂವೇದನೆಯಾಗಿ ಗೊತ್ತು. ನಾವು ಪ್ರೀತಿ ಮಾಡುತ್ತಿದ್ದೇವೆ ಎಂದು ಹೇಳುವಾಗ, ನಮಗೆ ಪ್ರೀತಿ ಕಾರಣ ಎಂದು ನಾವು ತಿಳಿದುಕೊಂಡಿರುವ ಅಸೂಯೆಯ ಬಗ್ಗೆ ಗೊತ್ತು, ಭಯ ಗೊತ್ತು, ಆತಂಕ ಗೊತ್ತು. ನಾವು ಒಬ್ಬರನ್ನ ಪ್ರೀತಿಸುತ್ತಿದ್ದೇವೆ ಎಂದು ಯಾವಾಗ ಹೇಳುತ್ತೇವೆಯೆಂದರೆ, ನಮಗೆ ಹೊಟ್ಟೆೆಕಿಚ್ಚು, ಹೊಂದುವ ಬಯಕೆ, ಸ್ವಂತ ಮಾಡಿಕೊಳ್ಳುವ ಆಸೆ, ಕಳೆದುಕೊಳ್ಳುವ ಭಯ ಇತ್ಯಾದಿ ಈ ಎಲ್ಲ ಭಾವಗಳು ಆ ವ್ಯಕ್ತಿಯ ಬಗ್ಗೆ ನಮ್ಮಲ್ಲಿ ಉಂಟಾದಾಗ. ಈ ಎಲ್ಲವನ್ನೂ ನಮ್ಮಲ್ಲಿ ಉಂಟುಮಾಡುವ ಸ್ಥಿತಿಯನ್ನ ನಾವು ಪ್ರೀತಿ ಎನ್ನುತ್ತೇವೆ. ಭಯ, ಅಸೂಯೆ, ಹೊಂದುವ ಬಯಕೆ ಇವುಗಳ ಹೊರತಾದ ಪ್ರೀತಿಯ ಪರಿಚಯ ನಮಗಿಲ್ಲ. ಭಯ, ಆತಂಕರಹಿತವಾದ ಸ್ಥಿತಿಯನ್ನ, ದೈವಿಕ, ಪರಿಶುದ್ಧ, ನಿರಾಕಾರ ಎಂದೆಲ್ಲ ಬಣ್ಣಿಸಿ ಸುಮ್ಮನಾಗುತ್ತೇವೆಯೇ ಹೊರತು, ಇಂಥದೊಂದು ಸ್ಥಿತಿ ನಮಗೆ ಸಾಧ್ಯವಾಗಬಹುದಾದ ಪ್ರೀತಿಯಾಗಿರಬಹುದಾ ಎಂದು ಯೋಚಿಸುವುದಿಲ್ಲ ಕೂಡ. ಆದರೆ ನಮಗೆ ಪ್ರೀತಿಯ ಸ್ಥಿತಿಯ ಪರಿಚಯವಾಗುವುದು, ನಾವು ಭಯ, ಅಸೂಯೆ, ಒಡೆತನದ ಬಯಕೆ, ಪ್ರಾಬಲ್ಯ ಸಾಧಿಸುವ ಹುಕಿ ಎಲ್ಲದರಿಂದ ಬಿಡುಗಡೆ ಪಡೆದಾಗ ಮಾತ್ರ.
ನೀವು ಪ್ರೀತಿಸುತ್ತಿರುವ ವ್ಯಕ್ತಿಯ ಬಗ್ಗೆ ನೀವು ಯಾವಾಗ ಯೋಚಿಸುತ್ತೀರಿ ? ನಿಮಗೆ ಅವಳ / ಅವನ ನೆನಪಾಗುವುದು ಅವರು ನಮ್ಮನ್ನ ಬಿಟ್ಟುಹೋದಾಗ ಮಾತ್ರ. ನೀವು ಪ್ರೀತಿಸುವ ವ್ಯಕ್ತಿಯನ್ನ ನೀವು ಮಿಸ್ ಮಾಡಿಕೊಳ್ಳುವುದು ನೀವು ಡಿಸ್ಟರ್ಬ್ ಆದಾಗ ಮಾತ್ರ, ಸಂಕಟ ಅನುಭವಿಸುವಾಗ ಮಾತ್ರ. ಆ ವ್ಯಕ್ತಿ ನಿಮ್ಮ ಒಡೆತನದ ಭಾಗವಾಗಿರುವವರೆಗೆ ನೀವು ಆ ವ್ಯಕ್ತಿಯ ಬಗ್ಗೆ ಯೋಚಿಸುವುದಿಲ್ಲ, ಏಕೆಂದರೆ ಒಡೆತನದಲ್ಲಿ ಡಿಸ್ಟರ್ಬನ್ಸ್ ಇಲ್ಲ.
ನೀವು ಡಿಸ್ಟರ್ಬ್ ಆಗಿರುವಾಗ ಯೋಚನೆಗಳು ನಿಮ್ಮನ್ನ ಸುತ್ತುವರೆದಿರುತ್ತವೆ ಮತ್ತು ನೀವು ಪ್ರೀತಿ ಎಂದುಕೊಂಡಿರುವ ಸಂಗತಿಯ ಬಗ್ಗೆ ಯೋಚಿಸುತ್ತಿರುವ ತನಕ ನೀವು ಡಿಸ್ಟರ್ಬ್ ಆಗಿರುತ್ತೀರಿ. ಖಂಡಿತ ಪ್ರೀತಿ ಮೈಂಡ್ ಗೆ ಸಂಬಂಧಿಸಿದ್ದಲ್ಲ ಹಾಗಾಗಿ ಮೈಂಡ್ ಸೃಷ್ಟಿಸುವ ಸಂಗತಿಗಳು ನಿಮ್ಮ ಹೃದಯವನ್ನ ತುಂಬಿಕೊಂಡಿರುವ ತನಕ ಅಲ್ಲಿ ಪ್ರೀತಿಗೆ ಜಾಗವಿಲ್ಲ. ಭಯ, ಆತಂಕ, ಅಸೂಯೆ, ಮಹತ್ವಾಕಾಂಕ್ಷೆ, ಇನ್ನೊಬ್ಬರಂತಾಗುವ ಬಯಕೆ, ಯಶಸ್ಸಿನ ಕುರಿತಾದ ಚಡಪಡಿಕೆ ಎಲ್ಲ ಮೈಂಡ್ ಹುಟ್ಟುಹಾಕುವ ಸಂಗತಿಗಳು. ಈ ಎಲ್ಲವೂ ನಿಮ್ಮನ್ನು ತುಂಬಿಕೊಂಡಿರುವಾಗ ಅಲ್ಲಿ ಪ್ರೀತಿಗೆ ಜಾಗ ಎಲ್ಲಿ? ಒಂದಕ್ಕೊಂದು ವಿರೋಧಾಭಾಸದ, ಗೊಂದಲ ಸೃಷ್ಟಿಸುವ ಸಂಗತಿಗಳು ಪ್ರೀತಿಗೆ ಕಾರಣವಾಗುವುದು ಹೇಗೆ ಸಾಧ್ಯ? ಸುತ್ತ ಹೊಗೆ ತುಂಬಿಕೊಂಡಿರುವಾಗ ಪರಿಶುದ್ಧವಾದ ಜ್ವಾಲೆಗೆ ಅವಕಾಶ ಎಲ್ಲಿ?
~ ಜಿಡ್ಡು ಕೃಷ್ಣಮೂರ್ತಿ
April 12