ಧ್ಯಾನದಿಂದ ನಿಜಕ್ಕೂ ಪ್ರಯೋಜನವಿದೆಯೇ?

ಧ್ಯಾನ ‘ಯೋಗಾಸನ’ವಲ್ಲ. ಧ್ಯಾನ ‘ಆಯುರ್ವೇದ’ವಲ್ಲ. ಧ್ಯಾನ ‘ತಂತ್ರ ಮಂತ್ರ ಸಾಧನೆ’ಯಲ್ಲ. ಧ್ಯಾನ ನಿಮ್ಮ ಲೌಕಿಕದಲ್ಲಿ ನೇರವಾಗಿ ಅಥವಾ ಕಣ್ಣಿಗೆ ಕಾಣುವಂತೆ ತೋರುವ ಯಾವ ಪ್ರಯೋಜನವನ್ನೂ ತರುವಂಥದಲ್ಲ. ಆದ್ದರಿಂದ ‘ಧ್ಯಾನದಿಂದ ಪ್ರಯೋಜನವಿದೆಯೇ?’ ಎಂದು ಕೇಳುವ ಮೊದಲು ನಿಮ್ಮ ಪ್ರಯೋಜನದ ವ್ಯಾಪ್ತಿ ಯಾವುದೆಂದು ಖಚಿತಪಡಿಸಿಕೊಳ್ಳಿ. ಆಗ ಮಾತ್ರ ನೀವು ಧ್ಯಾನದ ನಿಜವಾದ ಪ್ರಯೋಜನ ಪಡೆಯಬಲ್ಲಿರಿ… । ಚಿತ್ಕಲಾ

“ಧ್ಯಾನದಿಂದ ನಿಜಕ್ಕೂ ಪ್ರಯೋಜನವಿದೆಯೇ?” ಇದು ನಮಗೆ ಮತ್ತೆ ಮತ್ತೆ ಎದುರಾಗುವ ಪ್ರಶ್ನೆ. ಇದಕ್ಕೆ ಉತ್ತರಿಸುವ ಮೊದಲು ನಾನು, “ನೀವು ಧ್ಯಾನದಿಂದ ಯಾವ ಪ್ರಯೋಜನ ಬಯಸುತ್ತೀರಿ?” ಎಂದು ಕೇಳುತ್ತೇನೆ.

ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಧ್ಯಾನವನ್ನು ಎಲ್ಲದಕ್ಕೂ ಜೋಡಿಸಲಾಗುತ್ತದೆ. ತಲೆ ನೋವಿನಿಂದ ಹಿಡಿದು ಕ್ಯಾನ್ಸರ್ ಗುಣ ಮಾಡುವವರೆಗೂ ಧ್ಯಾನದ ಪ್ರಯೋಜನಗಳನ್ನು ಆರೋಪಿಸಲಾಗುತ್ತದೆ. ಇಂಥ ಮಾತುಗಳನ್ನು ನಂಬಿಕೊಂಡವರು ಧ್ಯಾನದಿಂದ ತಮ್ಮ ಮಂಡಿನೋವು ಹೋಗಬೇಕೆಂದು, ಆಫೀಸಲ್ಲಿ ಬಾಸ್ ತನ್ನನ್ನು ಬಯ್ಯಬಾರದೆಂದು, ನೆನಪಿನ ಶಕ್ತಿ ಹೆಚ್ಚಬೇಕೆಂದು, ರಸ್ತೆಯಲ್ಲಿ  ಹೋಗುವಾಗ ನನ್ನ ಧ್ಯಾನ ಶಕ್ತಿಯ ಕಾರಣದಿಂದ ಮಳೆ ಬರಬಾರದೆಂದು ಅಥವಾ ತಾನು ಬಯಸಿದಾಗ ಬರಬೇಕೆಂದು ಇತ್ಯಾದಿ ಇತ್ಯಾದಿ ಏನೇನೋ ಪ್ರಯೋಜನಗಳ ಪಟ್ಟಿ ಮನಸಿನಲ್ಲಿ ಇಟ್ಟುಕೊಂಡಿರುತ್ತಾರೆ.

ಅಂಥವರಿಗೆ ನಾನು ಹೇಳಬಯಸೋದು ಇಷ್ಟೇ; ಧ್ಯಾನ ‘ಯೋಗಾಸನ’ವಲ್ಲ. ಧ್ಯಾನ ‘ಆಯುರ್ವೇದ’ವಲ್ಲ. ಧ್ಯಾನ ‘ತಂತ್ರ ಮಂತ್ರ ಸಾಧನೆ’ಯಲ್ಲ. ಧ್ಯಾನ ನಿಮ್ಮ ಲೌಕಿಕದಲ್ಲಿ ನೇರವಾಗಿ ಅಥವಾ ಕಣ್ಣಿಗೆ ಕಾಣುವಂತೆ ತೋರುವ ಯಾವ ಪ್ರಯೋಜನವನ್ನೂ ತರುವಂಥದಲ್ಲ. ಆದ್ದರಿಂದ ‘ಧ್ಯಾನದಿಂದ ಪ್ರಯೋಜನವಿದೆಯೇ?’ ಎಂದು ಕೇಳುವ ಮೊದಲು ನಿಮ್ಮ ಪ್ರಯೋಜನದ ವ್ಯಾಪ್ತಿ ಯಾವುದೆಂದು ಖಚಿತಪಡಿಸಿಕೊಳ್ಳಿ. ಆಗ ಮಾತ್ರ ನೀವು ಧ್ಯಾನದ ನಿಜವಾದ ಪ್ರಯೋಜನ ಪಡೆಯಬಲ್ಲಿರಿ.

ಎರಡನೆಯದಾಗಿ, ನೀವು ಯಾವ ನೆಲೆಗಟ್ಟಿನಲ್ಲಿ ಧ್ಯಾನವನ್ನು ಅರ್ಥೈಸಿಕೊಂಡಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ಪತಂಜಲಿಯ ಯೋಗಸೂತ್ರದ ಪ್ರಕಾರ “ತತ್ರ ಪ್ರತ್ಯಯೈಕತಾನತಾ ಧ್ಯಾನಮ್” (3:2) – ಮನಸ್ಸನ್ನು ಯಾವುದಾದರೂ ಒಂದು ವಸ್ತುವಿನಲ್ಲಿ ತೈಲಧಾರೆಯಂತೆ ಅವಿಚ್ಚಿನ್ನವಾಗಿ ನೆಲೆಗೊಳಿಸುವುದೇ ‘ಧ್ಯಾನ’. ಮನಸ್ಸನ್ನು ಸತ್ ವಸ್ತುವಿನಲ್ಲಿ ನೆಲೆಗೊಳಿಸಿ, ಅದನ್ನು ಅರಿತರೆ ಸಮಾಧಿ ಸಿದ್ಧಿಸುತ್ತದೆ. ಆದ್ದರಿಂದ ಧ್ಯಾನ ಸಮಾಧಿಯ ಒಂದು ಹಾದಿ.

ಆದರೆ ಲೌಕಿಕದ ನಮಗೆ ಸಮಾಧಿಯ ಅಪೇಕ್ಷೆ ಇಲ್ಲ. ನಮಗೆ ತೀರಾ ಸತ್ ವಸ್ತುವನ್ನು (ಪರಮ ಸತ್ಯವನ್ನು) ಅರಿಯುವುದೂ ಬೇಕಿಲ್ಲ. ನಮ್ಮ ದಿನ ನಿತ್ಯದ ಜಂಜಡಗಳನ್ನು ಬೈದುಕೊಳ್ಳುತ್ತಲೇ ಎಂಜಾಯ್ ಮಾಡುವ ನಮಗೆ ಬದುಕಿನೊಡನೆ ಗುದ್ದಾಡುವುದು, ಬದುಕನ್ನು ಬಾಳುವುದು, ಲೌಕಿಕದ ಅಷ್ಟೂ ರಂಗನ್ನು ಹೀರುವುದು ಬೇಕು. ಇಂಥಾ ನಮಗೆ, ತನ್ನ ನಿಜಾರ್ಥದಲ್ಲಿ ಧ್ಯಾನ ನಿಜಕ್ಕೂ ಪ್ರಯೋಜನಕಾರಿಯೇ?

ಖಂಡಿತವಾಗಿಯೂ ಇಲ್ಲ. ಆದರೆ ನಾವು ಧ್ಯಾನವೆಂದು ತಪ್ಪು ತಿಳಿದುಕೊಂದಿರುವ, ಧ್ಯಾನ ಪ್ರಕ್ರಿಯೆಯ ಬೈ ಪ್ರಾಡಕ್ಟ್ ಆದ “ಏಕಾಗ್ರಚಿತ್ತತೆ” ಬಹಳ ಪ್ರಯೋಜನಕಾರಿ.

ಏಕಾಗ್ರಚಿತ್ತತೆ ನಮ್ಮ ಆಲೋಚನೆಗಳಿಗೊಂದು ಶಿಸ್ತು ತಂದುಕೊಡುತ್ತದೆ. ನಾವು ನಮ್ಮ ಕೆಲಸದ ಮೇಲೆ ಮನಸ್ಸನ್ನು ನೆಲೆಗೊಳಿಸಿದರೆ ನಮ್ಮ ಕೆಲಸ ಅತ್ಯುತ್ತಮವಾಗಿ ನಡೆಯುತ್ತದೆ. ನಮ್ಮ ಸೃಜನಶೀಲತೆಯ ಮೇಲೆ ನೆಲೆಗೊಳಿಸಿದರೆ ಅತ್ಯುತ್ತಮ ಕಲಾಕೃತಿ ಹೊಮ್ಮುತ್ತದೆ. ಸಂಬಂಧಗಳ ಮೇಲೆ ನೆಲೆಗೊಳಿಸಿದರೆ ಬಾಂಧವ್ಯ ಉತ್ತಮವಾಗುತ್ತದೆ. ಸಮಾಜದ ಮೇಲೆ ನೆಲೆಗೊಳಿಸಿದರೆ ಸ್ವಸ್ಥ ಸಮಾಜ ಕಟ್ಟುವಲ್ಲಿ ನಮ್ಮದೊಂದು ಅಳಿಲು ಸೇವೆ ಸಲ್ಲುತ್ತದೆ.

ಹಾಗೇ, ಈ ಏಕಾಗ್ರಚಿತ್ತದ ಮೂಲಕ ನಾವು ಧ್ಯಾನವನ್ನೂ ಸಾಧಿಸಬಹುದು. ಮನಶ್ಶಾಂತಿಗಾಗಿ ಚಿದ್ರೂಪದಲ್ಲಿ ನಮ್ಮ ಮನಸ್ಸನ್ನು ನೆಲೆಗೊಳಿಸಿದರೆ – ಧ್ಯಾನಿಸಿದರೆ, ‘ಸಚ್ಚಿದಾನಂದ’ ದೊರೆಯುತ್ತದೆ. ‘ಸಚ್ಚಿದಾನಂದ’ ಶಾಂತಿಗೆ ಮೂಲ. ಶಾಂತ ಮನಸ್ಸು, ಕ್ರೋಧ ಲೋಭ ಮೋಹಾದಿಗಳನ್ನು ದೂರವಿಡುತ್ತವೆ. ಇಂಥಾ ಹೊರಗಿನ ಯಾವುದರ ಮೇಲೂ ಅಲ್ಲದ, ಅಂತರಂಗದ ಧ್ಯಾನ ನಮ್ಮನ್ನು ಶಾಂತ, ಸುಮನಸ, ಸಜ್ಜನ ವ್ಯಕ್ತಿಗಳನ್ನಾಗಿ ಮಾಡುತ್ತದೆ. ಇಷ್ಟು ಲಾಭಗಳಂತೂ ಧ್ಯಾನದಿಂದ ಖಾತ್ರಿ.

ತೀರಾ ಬೆರಳೆಣಿಕೆಯಷ್ಟು ಜನ, ಈ ಸಚ್ಚಿದಾನಂದವನ್ನೂ ದಾಟಿ ಮುಂದೆ ಸಾಗುತ್ತಾರೆ. ನಿತ್ಯ – ಸತ್ಯ – ಶಾಶ್ವತ ಆನಂದವನ್ನು ಬಯಸಿ ಸದ್ವಸ್ತುವನ್ನು ಧ್ಯಾನಿಸುತ್ತಾರೆ. ಜನನ – ಮರಣ ಚಕ್ರದಿಂದ ಬಿಡುಗಡೆ ದೊರೆತರೆ ಮಾತ್ರ ನಿತ್ಯಾನಂದ ದೊರೆಯಲು ಸಾಧ್ಯ ಅನ್ನುವ ಅವರ ಮೇಲರಿವು ಮಾಗುತ್ತಾ ಕಾಣ್ಕೆಯಾಗಿ, ಆ ಬಿಡುಗಡೆಗಾಗಿ, ಆ ಮೋಕ್ಷಕ್ಕಾಗಿ ತುಡಿಯತೊಡಗುತ್ತಾರೆ. ನಿರಂತರ ಧ್ಯಾನ ಸಾಧನೆಯಲ್ಲಿ ತೊಡಗಿ ಕೊನೆಗೊಮ್ಮೆ ಜ್ಞಾನೋದಯ ಹೊಂದುತ್ತಾರೆ. ಜ್ಞಾನಿಗಳ ಆತ್ಮ ದೇಹದ ಗುರುತಿನಿಂದ ಮುಕ್ತವಾಗಿದ್ದು, ಜ್ಞಾನಿಯ ದೇಹ ಕಳಚಿದಕೂಡಲೇ ಮೋಕ್ಷ ಹೊಂದುತ್ತದೆ. ಇದು ಯಾವುದೇ ಜೀವಿ ಧ್ಯಾನದಿಂದ ಪಡೆಯಬಹುದಾದ ಅತ್ಯುನ್ನತ ಪ್ರಯೋಜನ.

ಇನ್ನು ಧ್ಯಾನದ ಸಾರಾಸಗಟು ಮಾರಾಟಗಾರರು ಘೋಷಿಸುವಂತೆ ಧ್ಯಾನ ದೇಹ ಭಾದೆಯನ್ನು ದೂರ ಮಾಡುವುದಿಲ್ಲ. ಹಾಗೆ ಮಾಡುವುದಾಗಿದ್ದರೆ ತೀರಾ ಆಧುನಿಕ ಉದಾಹರಣೆಯಾದ ರಾಮಕೃಷ್ಣ ಪರಮಹಂಸರು ಗಂಟಲು ಕ್ಯಾನ್ಸರ್`ನಿಂದ ತೀರಿಕೊಳ್ಳುತ್ತಿರಲಿಲ್ಲ. ಧ್ಯಾನ ನೋವಿನ ಕುರಿತು, ರೋಗದ ಕುರಿತು ನಮ್ಮ ವೇದನಾಭರಿತ ಸ್ಪಂದನೆಯನ್ನು ಕಡಿಮೆ ಮಾಡಬಲ್ಲದಷ್ಟೆ. ಅದೂ, “ಈ ನೋವು ಅನುಭವಿಸಲೇಬೇಕಾದ್ದು. ಬೇರೆ ವಿಧಿಯಿಲ್ಲ” ಅನ್ನುವ ಅರಿವಿಂದ ಆ ನೋವನ್ನು ಒಪ್ಪಿಕೊಂಡು, ಭಾದೆಯಾದರೂ ಅದಕ್ಕೆ ಮರುಗದಂತೆ ಇರುವ ಸ್ಥೈರ್ಯವನ್ನು ಧ್ಯಾನ ನೀಡಬಲ್ಲದೇ ಹೊರತು, ಕಾಯಿಲೆಯನ್ನು ವಾಸಿ ಮಾಡಲಾರದು. ಆದ್ದರಿಂದ ಈ ನಿಟ್ಟಿನಲ್ಲಿ ರೋಗಿಗಳು ತಮ್ಮ ಮರುಕ ಕಡಿಮೆ ಮಾಡಿಕೊಂಡು ಉಲ್ಲಸಿತರಾಗಿರುವ ಪ್ರಯೋಜನಕ್ಕಾಗಿ ಧ್ಯಾನ ಮಾಡಬಹುದು.

ಅದೇ ರೀತಿ ನೆನಪಿನ ಶಕ್ತಿ ಇತ್ಯಾದಿ ಕೂಡಾ. ಧ್ಯಾನ ನಮ್ಮ ಮನಸ್ಸನ್ನು ಡಿ ಕ್ಲಟರ್ ಮಾಡುವುದರಿಂದ ಮನಸ್ಸಿನ ಶಕ್ತಿ ಹತ್ತಾರು ಕಡೆ ಹಂಚಿಹೋಗದಂತೆ ತಡೆದು ಕೆಲವರಲ್ಲಿ ನೆನಪಿನ ಶಕ್ತಿ ಹೆಚ್ಚುತ್ತದೆ. ಆದರೆ ಎಲ್ಲಾ ಧ್ಯಾನಿಗಳಿಗೂ ಇದೇ ಫಲಿತಾಂಶ ಬರುತ್ತದೆಂದು ಖಾತ್ರಿಯಿಲ್ಲ. ಕೆಲವರು ತಮ್ಮ ಧ್ಯೇಯ ವಸ್ತುವಿನಲ್ಲಿ ಎಷ್ಟು ಕಳೆದುಹೋಗುತ್ತಾರೆಂದರೆ, ಉಳಿದ ಸಂಗತಿಗಳ ಬಗ್ಗೆ ಅವರಿಗಿದ್ದ ನೆನಪೂ ಇಲ್ಲವಾಗಿಬಿಡುತ್ತದೆ!

ಆದ್ದರಿಂದ, ಕಾಯಿಲೆ ಬಂದರೆ ಮೊದಲು ಮದ್ದು ತೆಗೆದುಕೊಳ್ಳಿ. ಜೊತೆಗೆ, ಮನಸ್ಸಿನ ಉಲ್ಲಾಸಕ್ಕಾಗಿ ಧ್ಯಾನ ಮಾಡಿ.

ನೆನಪಿನ ಶಕ್ತಿಗಾಗಿ ಅಲ್ಲ, ಮನಸ್ಸನ್ನು ಡಿಕ್ಲಟರ್ ಮಾಡಿಕೊಳ್ಳಲು ಧ್ಯಾನ ಮಾಡಿ.

ಮಳೆ ಬರದಿರಲೆಂದು ಅಲ್ಲ, ಅನಿರೀಕ್ಷಿತ ಮಳೆಗೆ ಗೊಣಗದಿರುವಂತಾಗಲು ಧ್ಯಾನ ಮಾಡಿ. ಮಳೆ ಬರಿಸಲೆಂದು ಅಲ್ಲ, ಮಳೆ ಬರದಿರಲು ಏನೇನು ಕಾರಣಗಳಿವೆಯೋ ಆ ಎಲ್ಲ ಕಾರಣಗಳನ್ನು ತೊಲಗಿಸುವ ಸಲುವಾಗಿ ಅಗತ್ಯ ಕ್ರಿಯೆಗಳ ಜೊತೆಗೆ ಆ ಕ್ರಿಯೆಗಳು ಹೆಚ್ಚು ಅರ್ಥಪೂರ್ಣವಾಗಿರಲೆಂದು ಧ್ಯಾನ ಮಾಡಿ.

ಕೊನೆಯದಾಗಿ, ನಿಮಗೆ ನಿಜಕ್ಕೂ ಧ್ಯಾನದಿಂದ ಪ್ರಯೋಜನ ಬೇಕೆಂದಾದರೆ, ಯಾವ ಪ್ರಯೋಜನವೂ ಬೇಡ ಅಂದುಕೊಂಡು  ಶೂನ್ಯದಲ್ಲಿ ಮನಸ್ಸು ನೆಲೆಗೊಳಿಸಿ! ನೀವು ಊಹಿಸಲೂ ಆಗದ ಪ್ರಯೋಜನ ಅದಾಗಲೇ ನಿಮ್ಮ ಅನುಭವಕ್ಕೆ ಬರತೊಡಗುತ್ತದೆ.

Leave a Reply