ನೋವಿಗೆ ಕಾರಣ ನಮ್ಮ ಸೆಲ್ಫ್ ಇಮೇಜ್: ಜಿಡ್ಡು ಚಿಂತನೆ

ನೀವು ಸುಳ್ಳುಗಾರರಾಗಿರುವುದು ನಿಮಗೆ ಗೊತ್ತಿದ್ದರೆ, ಯಾರಾದರೂ ನಿಮ್ಮನ್ನ ಸುಳ್ಳುಗಾರ ಎಂದಾಗ ಅಲ್ಲಿ ಸಿಟ್ಟಿನ ಪ್ರಶ್ನೆಯೇ ಉಗ್ಭವವಾಗುವುದಿಲ್ಲ, ಇದು ವಾಸ್ತವ. ಆದರೆ ನಿಮ್ಮನ್ನು ನೀವು ಸತ್ಯವಂತರೆಂದು ತೋರಿಸಿಕೊಳ್ಳುತ್ತಿದ್ದರೆ, ಯಾರಾದರೂ ನಿಮ್ಮನ್ನ ಸುಳ್ಳುಗಾರ ಎಂದಾಗ ನಿಮಗೆ ಸಿಟ್ಟು ಬರುತ್ತದೆ, ನೀವು ಉಗ್ರರಾಗುತ್ತೀರಿ ~ ಜಿಡ್ಡು ಕೃಷ್ಣಮೂರ್ತಿ

ನಾವು ಸಮಸ್ಯೆಗಳನ್ನ ಚಿಕ್ಕವು, ದೊಡ್ಡವು ಎಂದು ವಿಂಗಡಿಸಿಕೊಳ್ಳುವುದೇಕೆ? ಎಲ್ಲವೂ ಸಮಸ್ಯೆಯೇ ಎಂದಮೇಲೆ ಅವಶ್ಯಕ ಸಮಸ್ಯೆ, ಅನವಶ್ಯಕ ಸಮಸ್ಯೆ ಎಂದು ಬೇರೆ ಬೇರೆ ಹೆಸರಿನಿಂದ ಕರೆಯುವುದೇಕೆ ? ಅವುಗಳೊಂದಿಗೆ ಬೇರೆ ಬೇರೆ ರೀತಿಯಲ್ಲಿ ವ್ಯವಹಾರ ಮಾಡುವುದೇಕೆ? ನಾವು ಒಂದು ಸಮಸ್ಯೆಯನ್ನ ಅದು ಎಷ್ಟೇ ಚಿಕ್ಕದಾಗಿದ್ದರೂ ಅದರ ಆಳಕ್ಕಿಳಿದು ಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆವಾದರೆ, ನಾವು ನಮ್ಮ ಎಲ್ಲ ಸಮಸ್ಯೆಗಳ ಮೇಲಿನ ಮುಸುಕನ್ನ ಬಿಡಿಸಿ ಅನಾವರಣಗೊಳಿಸಿದಂತೆ. ಇದು ಒಣ ಸೈದ್ಧಾಂತಿಕ ಉತ್ತರವಲ್ಲ. ನೀವು ಯಾವುದೇ ಸಮಸ್ಯೆಯನ್ನು ತೆಗೆದುಕೊಳ್ಳಿ ; ಸಿಟ್ಟು, ಹೊಟ್ಟೆಕಿಚ್ಚು, ಅಸೂಯೆ, ದ್ವೇಷ – ಈ ಎಲ್ಲವುಗಳ ಬಗ್ಗೆ ನಮಗೆ ಬಹಳ ಚೆನ್ನಾಗಿ ಗೊತ್ತು. ನೀವು ಸಿಟ್ಟಿನ್ನು ಸುಮ್ಮನೆ ಸಹಜ ಸ್ವಭಾವ ಎಂದು ನಿರ್ಲಕ್ಷ್ಯ ಮಾಡದೇ, ಸಿಟ್ಟನ್ನು ಆಳವಾಗಿ ಪ್ರವೇಶಿಸಿ ಅದರ ಎಲ್ಲ ಬದಿಗಳನ್ನು ಪೂರ್ಣವಾಗಿ ಗ್ರಹಿಸುವಿರಾದರೆ, ಸಿಟ್ಟಿನಲ್ಲಿ ನಿಜವಾಗಿಯೂ ಇರುವುದೇನು? ಯಾಕೆ ಒಬ್ಬ ವ್ಯಕ್ತಿ ಸಿಟ್ಟಿಗೇಳುತ್ತಾನೆ? ಎನ್ನುವ ಪ್ರಶ್ನೆಯ ಉತ್ತರಗಳು ನಮಗೆ ಗೊತ್ತಾಗುತ್ತ ಹೋಗುತ್ತವೆ.

ಯಾರಾದರೂ ನೋವಿಗೊಳಗಾಗಿದ್ದಾರೆಂದರೆ, ಯಾರೋ ಒಬ್ಬರು ಅವರನ್ನ ತಮ್ಮ ನಿಷ್ಕರುಣಿ ಮಾತುಗಳಿಂದ ನಿಂದಿಸಿದ್ದಾರೆ, ಮತ್ತು ಯಾರಾದರೂ ನಿಮ್ಮನ್ನು ಬಣ್ಣದ ಮಾತುಗಳಿಂದ ಹೊಗಳಿದಾಗ ನಿಮಗೆ ಖುಶಿಯಾಗುತ್ತದೆ. ಯಾಕೆ ನಿಮಗೆ ನೋವು? ಯಾಕೆ ನಿಮಗೆ ಖುಶಿ? ಈ ಎರಡಕ್ಕೂ ಕಾರಣ ನಮಗೆ ನಾವು ಕೊಟ್ಟುಕೊಂಡಿರುವ ಪ್ರಾಧಾನ್ಯತೆ ಅಲ್ಲವೆ? ನಮ್ಮ ಸ್ವ ಪ್ರಾಧಾನ್ಯತೆಕ್ಕೆ ಧಕ್ಕೆಯಾದಾಗ ನೋವು ಮತ್ತು ಪುಷ್ಟಿ ದೊರೆತಾಗ ಖುಶಿ. ಈ ಸ್ವ-ಪ್ರಾಧಾನ್ಯತೆ ನಮ್ಮೊಳಗೆ ಇರುವುದಾದರೂ ಯಾಕೆ?

ಸ್ವ ಪ್ರಾಧಾನ್ಯತೆ ನಮ್ಮೊಳಗೆ ಇರುವ ಕಾರಣ, ನಮ್ಮ ಬಗ್ಗೆ ನಾವು ಕಟ್ಟಿಕೊಂಡಿರುವ ಕಲ್ಪನೆ, ನಮ್ಮ ಕುರಿತಾಗಿ ನಾವು ಕಟ್ಟಿಕೊಂಡಿರುವ ಮನೋಚಿತ್ರ (Image). ನಾವು ಹೇಗಿರಬೇಕು, ಹೇಗಿದ್ದೇವೆ, ಹೇಗಿರಬಾರದಿತ್ತು ಈ ಎಲ್ಲ ಐಡಿಯಾಗಳ ಸಂಕೇತವೆಂಬಂತೆ ನಮ್ಮ ಇಮೇಜ್ ನ್ನನಾವು ನಿರ್ಮಿಸಿಕೊಂಡಿದ್ದೇವೆ. ಯಾಕೆ ಮನುಷ್ಯ ತನ್ನ ಬಗ್ಗೆ ಇಮೇಜೊಂದನ್ನ ಕಟ್ಟಿಕೊಳ್ಳುತ್ತಾನೆ? ಏಕೆಂದರೆ ಅವನು ತನ್ನ ನಿಜದ ಬಗ್ಗೆ ಯಾವತ್ತೂ ಅಭ್ಯಾಸ ಮಾಡಿಲ್ಲ. ನಮ್ಮ ಮುಂದಿರುವ ಕೆಲವು ಉದಾಹರಣೆಗಳನ್ನ, ಹೀರೋಗಳನ್ನ, ಮಾದರಿಗಳನ್ನ, ಆದರ್ಶಗಳನ್ನ ಗಮನದಲ್ಲಿಟ್ಟುಕೊಂಡು, ನಾವು ಹೀಗಿರಬೇಕು, ಹೀಗಿರಬಾರದು ಎನ್ನುವ ಮನೋಚಿತ್ರವನ್ನ ಕಟ್ಟಿಕೊಂಡಿರುತ್ತವೆ. ನಮ್ಮ ಬಗೆಗಿನ ನಮ್ಮ ಚಿತ್ರ ಆಕ್ರಮಣಕ್ಕೆ ತುತ್ತಾದಾಗ ನಮಗೆ ಸಿಟ್ಟು ಬರುತ್ತದೆ. ಮತ್ತು ನಮ್ಮ ಬಗೆಗಿನ ನಮ್ಮ ಇಮೇಜ್, ಕಲ್ಪನೆ, ನಮ್ಮ ವಾಸ್ತವದಿಂದ ನಾವು ಮಾಡುತ್ತಿರುವು ಪಲಾಯನವಾಗಿರುತ್ತದೆ.

ಆದರೆ ನಿಮ್ಮ ಬಗೆಗಿನ ನಿಜವನ್ನು ನೀವು ಗಮನಿಸುತ್ತಿರುವಾಗ, ನಿಮ್ಮನ್ನ ಯಾರೂ ಹರ್ಟ್ ಮಾಡಲಿಕ್ಕಾಗುವುದಿಲ್ಲ. ನೀವು ಸುಳ್ಳುಗಾರರಾಗಿರುವುದು ನಿಮಗೆ ಗೊತ್ತಿದ್ದರೆ, ಯಾರಾದರೂ ನಿಮ್ಮನ್ನ ಸುಳ್ಳುಗಾರ ಎಂದಾಗ ಅಲ್ಲಿ ಸಿಟ್ಟಿನ ಪ್ರಶ್ನೆಯೇ ಉಗ್ಭವವಾಗುವುದಿಲ್ಲ, ಇದು ವಾಸ್ತವ. ಆದರೆ ನಿಮ್ಮನ್ನು ನೀವು ಸತ್ಯವಂತರೆಂದು ತೋರಿಸಿಕೊಳ್ಳುತ್ತಿದ್ದರೆ, ಯಾರಾದರೂ ನಿಮ್ಮನ್ನ ಸುಳ್ಳುಗಾರ ಎಂದಾಗ ನಿಮಗೆ ಸಿಟ್ಟು ಬರುತ್ತದೆ, ನೀವು ಉಗ್ರರಾಗುತ್ತೀರಿ. ಹೀಗೆ ಯಾವಾಗಲೂ ನಾವು ಕಟ್ಟಿಕೊಂಡಿರುವ ಕಲ್ಪನಾಲೋಕದಲ್ಲಿ, ಮಿಥ್ಯೆಗಳ ಜಗತ್ತಿನಲ್ಲಿ ಬದುಕುತ್ತಿರುತ್ತೇವೆ ಯಾವತ್ತೂ ನಾವು ನಮ್ಮ ವಾಸ್ತವಗಳಿಗೆ ಎದುರಾಗಿರುವುದೇ ಇಲ್ಲ. ಇರುವುದನ್ನ ಇರುವ ಹಾಗೆ ಗಮನಿಸುವುದಕ್ಕೆ, ನಮ್ಮ ವಾಸ್ತವದೊಂದಿಗೆ ಫ್ಯಾಮಿಲಿಯರ್ ಆಗುವುದಕ್ಕೆ ನಮ್ಮೊಳಗೆ, ಪೂರ್ವಾಗ್ರಹ, ಸಿದ್ಧಾಂತಗಳ ಹೊರೆ, ಅಭಿಪ್ರಾಯಗಳ ಭಾರ, ಹೆದರಿಕೆ ಎಲ್ಲದರಿಂದ ನಾವು ಹೊರತಾಗಿರಬೇಕು.

Leave a Reply