ಫ್ರಾಯ್ಡ್ ಥಿಯರಿಯ ಚರ್ಚೆ : Art of love #17

ಫ್ರಾಯ್ಡ್`ನ ಥಿಯರಿಗಳನ್ನ ಸಮರ್ಥಿಸುತ್ತಿರುವುದರಿಂದ , ತಾವು ಧೈರ್ಯಶಾಲಿಗಳು, ಪ್ರಗತಿಶೀಲರು ಎಂದು ಯಾರಾದರೂ ಇವತ್ತಿನ ಸಂಪ್ರದಾಯವಾದಿ ವಿಷ್ಲೇಶಕರು ಹೇಳುತ್ತಾರಾದರೆ ಅದು ಒಂದು ರೀತಿಯ ಹುಂಬತನವೇ ಸರಿ. ಮತ್ತು ಅವರ ರೀತಿಯ ಮನೋವಿಶ್ಲೇಷಣೆ ಒಂದು ಸ್ಥಾಪಿತ ತಿಳುವಳಿಕೆಗೆ ಬದ್ಧವಾಗಿರುವಂಥದು ಮತ್ತು ಸಮಕಾಲೀನ ಸಮಾಜವನ್ನು ವಿಮರ್ಶಿಸಲು ಸಾಧ್ಯವಾಗುವಂಥ ಮನೋವೈಜ್ಞಾನಿಕ ಪ್ರಶ್ನೆಗಳನ್ನು ಎತ್ತಲು ಪ್ರಯತ್ನಿಸದಂಥವು… । ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ:  https://aralimara.com/2022/04/24/love-30/

ಎರಡು ಸೆಕ್ಸ್ ಗಳ ನಡುವಿನ ಲೈಂಗಿಕ ಆಕರ್ಷಣೆ, ಮನುಷ್ಯನೊಳಗಿನ ಒತ್ತಡಕ್ಕೆ ಪರಿಹಾರ ಕಂಡುಕೊಳ್ಳುವ ಅವಶ್ಯಕತೆಯಿಂದ ಭಾಗಶಃ ಪ್ರೇರಿತವಾಗಿದ್ದು ; ಬಹುಮುಖ್ಯವಾಗಿ ಈ ಆಕರ್ಷಣೆ ಇನ್ನೊಂದು ಸೆಕ್ಸ್ ನ ಜೊತೆಗಿನ ಒಂದಾಗುವಿಕೆಯ ಅಗತ್ಯದಿಂದ ಹುಟ್ಟಿಕೊಂಡದ್ದು. ಹಾಗೆ ನೋಡಿದರೆ ಮನುಷ್ಯನ ಕಾಮಾಕರ್ಷಣೆ ಕೇವಲ ಲೈಂಗಿಕ ಆಕರ್ಷಣೆಯಲ್ಲಿ ಅಭಿವ್ಯಕ್ತಿಗೊಳ್ಳುವುದಿಲ್ಲ. ಹೇಗೆ ಮನುಷ್ಯನೊಳಗೆ ಗಂಡು – ಹೆಣ್ಣು ಎರಡೂ ಗುಣಲಕ್ಷಣಗಳಿವೆಯೋ ಹಾಗೆಯೇ ಲೈಂಗಿಕ ಕ್ರಿಯೆಯಲ್ಲಿ ಕೂಡ ಈ ಎರಡೂ ಗುಣ ಲಕ್ಷಣಗಳನ್ನು ಗುರುತಿಸಬಹುದು. ಲೈಂಗಿಕ ಕ್ರಿಯೆಯಲ್ಲಿ ಗುರುತಿಸಬಹುದಾದ ಗಂಡು ಲಕ್ಷಣಗಳೆಂದರೆ, ನುಗ್ಗುವಿಕೆ (penetration), ಮಾರ್ಗದರ್ಶನ (guidance ), ಶಿಸ್ತು, ಸಾಹಸ, ಕ್ರಿಯಾಶೀಲತೆ ಇತ್ಯಾದಿ. ಹಾಗೆಯೇ ಲೈಂಗಿಕ ಕ್ರಿಯೆಯಲ್ಲಿನ ಹೆಣ್ಣು ಲಕ್ಷಣಗಳೆಂದರೆ ಸೃಷ್ಟಿಕಾರ್ಯದ ಗ್ರಹಿಕೆ, ಕಾಪಾಡುವುದು, ವಾಸ್ತವಿಕತೆ, ಸಹನೆ, ತಾಯ್ತನ ಇತ್ಯಾದಿ. ( ಒಬ್ಬ ವ್ಯಕ್ತಿಯಲ್ಲಿಯೇ ಗಂಡು- ಹೆಣ್ಣು ಎರಡೂ ಲಕ್ಷಣಗಳಿರುವುದನ್ನೂ ಮತ್ತು ಅವರು ಗಂಡಸು ಅಥವಾ ಹೆಂಗಸು ಆಗಿರುವ ಕಾರಣಕ್ಕಾಗಿ ಅವರಲ್ಲಿ ಆಯಾ ಬಗೆಯ ಲಕ್ಷಣಗಳು ಪ್ರಧಾನವಾಗಿರುವುದನ್ನ ಮರೆಯಬಾರದು). ಬಹಳಷ್ಟು ಬಾರಿ ಒಬ್ಬ ಗಂಡಸಿನಲ್ಲಿ, ಅವನು ಭಾವನಾತ್ಮಕವಾಗಿ ಇನ್ನೂ ಮಗುವಾಗಿಯೇ ಉಳಿದಿರುವ ಕಾರಣವಾಗಿ ಗಂಡಸುತನದ ಗುಣಲಕ್ಷಣಗಳು ದುರ್ಬಲವಾಗಿದ್ದರೆ, ಅವನು ಈ ಕೊರತೆಯನ್ನ ಲೈಂಗಿಕ ಕ್ರಿಯೆಯಲ್ಲಿ ತನ್ನ ಗಂಡು ಪಾತ್ರಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ತುಂಬಿಕೊಳ್ಳಲು ಪ್ರಯತ್ನಿಸುತ್ತಾನೆ. ಇಂಥದರ ಪರಿಣಾಮವಾಗಿಯೇ ಇರುವುದು ಡಾನ್ ಯುವಾನ್ ನಂಥ ವ್ಯಕ್ತಿ ; ಲೈಂಗಿಕ ಕ್ರಿಯೆಯಲ್ಲಿ ತನ್ನ ಗಂಡು ಶಕ್ತಿಯನ್ನು ತೋರಿಸಿಕೊಳ್ಳುವುದು ಅವನಿಗೆ ಅತ್ಯಂತ ಅವಶ್ಯವಾಗಿರುವುದು, ಅವನೊಳಗಿನ ಗಂಡು ಲಕ್ಷಣಗಳ ಬಗ್ಗೆ ಅವನಿಗೆ ಸಂದೇಹ ಇರುವ ಕಾರಣವಾಗಿ. ಯಾವಾಗ ಗಂಡಸುತನದ ಲಕ್ಷಣಗಳಲ್ಲಿ ತೀವ್ರ ಕೊರತೆ ಕಾಣಿಸಿಕೊಳ್ಳುತ್ತದೆಯೋ ಆಗ sadism ( ಬಲ ಪ್ರಯೋಗ), ಗಂಡಸುತನಕ್ಕೆ ವಿಕೃತ ಪರ್ಯಾಯವಾಗಿ ಮುಖ್ಯವಾಗುತ್ತದೆ. ಅಕಸ್ಮಾತಾಗಿ ವ್ಯಕ್ತಿಯಲ್ಲಿ ಹೆಣ್ತನದ ಗುಣಲಕ್ಷಣಗಳ ಕೊರತೆ ಕಂಡುಬಂದಾಗ, ಅದು ಸ್ವಪೀಡನೆ (masochism) ಅಥವಾ ತೀವ್ರ ಪೊಸೆಸ್ಸಿವ್ ನೆಸ್ ಲ್ಲಿ ಕೊನೆಗೊಳ್ಳುತ್ತದೆ.

ಸೆಕ್ಸ್ ಕುರಿತಾದ ಫ್ರಾಯ್ಡ್ ನ ಮಿತಿ ಮೀರಿದ ಉತ್ಸಾಹ ಮತ್ತು ಮೌಲ್ಯೀಕರಣ ಸಾಕಷ್ಟು ಟೀಕೆಗೆ ಒಳಗಾಗಿದೆ. ಈ ಟೀಕೆ ಬಹುತೇಕ ಹುಟ್ಟಿಕೊಂಡಿದ್ದು ಫ್ರಾಯ್ಡ್ ನ ಸಿದ್ಧಾಂತದಲ್ಲಿ ಸಂಪ್ರದಾಯವಾದಿ ಜನರ ವಿರೋಧ ಮತ್ತು ದ್ವೇಷಕ್ಕೆ ಕಾರಣವಾದ ಅಂಶಗಳನ್ನು ತೆಗೆದು ಹಾಕುವ ಉದ್ದೇಶದಿಂದ. ಈ ಉದ್ದೇಶವನ್ನು ಆಸಕ್ತಿಯಿಂದ ಗಮನಿಸಿದ ಫ್ರಾಯ್ಡ್ , ಈ ಕಾರಣಕ್ಕಾಗಿಯೇ ತನ್ನ ಥಿಯರಿ ಆಫ್ ಸೆಕ್ಸ್ ನಲ್ಲಿ ಬದಲಾವಣೆ ಮಾಡಲು ಪ್ರಯತ್ನಿಸಿದ ಪ್ರತಿ ಪ್ರಯತ್ನದೊಂದಿಗೆ ಗುದ್ದಾಡಿದ. ಅವನ ಕಾಲಮಾನದಲ್ಲಿ ಫ್ರಾಯ್ಡ್ ನ ಸಿದ್ಧಾಂತ ಸಾಕಷ್ಟು ಚ್ಯಾಲೇಂಜಿಂಗ್ ಆದ ಮತ್ತು ಕ್ರಾಂತಿಕಾರಿಯಾದ ಗುಣಲಕ್ಷಣಗಳನ್ನು ಹೊಂದಿತ್ತು. ಆದರೆ ಯಾವುದನ್ನ 1900 ರಲ್ಲಿ ಒಪ್ಪಿಕೊಳ್ಳಬಹುದಾಗಿತ್ತೋ ಅದನ್ನ ಐವತ್ತು ವರ್ಷಗಳ ನಂತರ ಒಪ್ಪಿಕೊಳ್ಳುವುದು ಸಾಧ್ಯವಾಗದೇ ಹೋಗಬಹುದು. ಲೈಂಗಿಕತೆಯ ರೀತಿ ರಿವಾಜುಗಳು ಈಗ ಎಷ್ಟು ಬದಲಾಗಿವೆಯೆಂದರೆ ಪಾಶ್ಚಿಮಾತ್ಯ ಮಧ್ಯಮವರ್ಗಕ್ಕೆ ಫ್ರಾಯ್ಡ್ ನ ಥಿಯರಿಗಳು ಮೊದಲಿನಂತೆ ಶಾಕ್ ನೀಡಲಾರವು. ಫ್ರಾಯ್ಡ್ ನ ಥಿಯರಿಗಳನ್ನ ಸಮರ್ಥಿಸುತ್ತಿರುವುದರಿಂದ , ತಾವು ಧೈರ್ಯಶಾಲಿಗಳು, ಪ್ರಗತಿಶೀಲರು ಎಂದು ಯಾರಾದರೂ ಇವತ್ತಿನ ಸಂಪ್ರದಾಯವಾದಿ ವಿಷ್ಲೇಶಕರು ಹೇಳುತ್ತಾರಾದರೆ ಅದು ಒಂದು ರೀತಿಯ ಹುಂಬತನವೇ ಸರಿ. ಮತ್ತು ಅವರ ರೀತಿಯ ಮನೋವಿಶ್ಲೇಷಣೆ ಒಂದು ಸ್ಥಾಪಿತ ತಿಳುವಳಿಕೆಗೆ ಬದ್ಧವಾಗಿರುವಂಥದು ಮತ್ತು ಸಮಕಾಲೀನ ಸಮಾಜವನ್ನು ವಿಮರ್ಶಿಸಲು ಸಾಧ್ಯವಾಗುವಂಥ ಮನೋವೈಜ್ಞಾನಿಕ ಪ್ರಶ್ನೆಗಳನ್ನು ಎತ್ತಲು ಪ್ರಯತ್ನಿಸದಂಥವು.

ಫ್ರಾಯ್ಡನ್ ಥಿಯರಿ ಕುರಿತಾದ ನನ್ನ ಟೀಕೆ, ಅವನು ಲೈಂಗಿಕತೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾನೆ ಎನ್ನುವ ಕಾರಣಕ್ಕಲ್ಲ ಬದಲಾಗಿ ಅವನು ಆಳ ನೆಲೆಯಲ್ಲಿ ಲೈಂಗಿಕತೆಯನ್ನು ಗ್ರಹಿಸಲು ವಿಫಲನಾಗಿದ್ದಾನೆ ಎನ್ನುವ ಕಾರಣಕ್ಕೆ. ಅವನು ವ್ಯಕ್ತಿ ವ್ಯಕ್ತಿಗಳ ನಡುವಿನ ಉತ್ಕಟತೆಯ ಸಂಬಂಧಿತ ಹುಡುಕಾಟದಲ್ಲಿ ಮೊದಲ ಹೆಜ್ಜೆ ಇಟ್ಟವನು; ಅದನ್ನು ತನ್ನ ತಾತ್ವಿಕ ನೆಲೆಯಲ್ಲಿ ಶರೀರ ಶಾಸ್ತ್ರಕ್ಕನುಗುಣವಾಗಿ ವಿವರಿಸಿದವನು. ಮನೋವಿಶ್ಲೇಷಣೆಯ ಮುಂದಿನ ಹಂತದ ಬೆಳವಣಿಗೆಯಲ್ಲಿ ಫ್ರಾಯ್ಡ್ ನ ಶರೀರಶಾಸ್ತ್ರೀಯ ಒಳನೋಟಗಳನ್ನು, ಜೈವಿಕ ಮತ್ತು ಅಸ್ತಿತ್ವದ ನೆಲೆಗೆಳ ಆಯಮಕ್ಕೆ ವಿಸ್ತರಿಸುತ್ತ ಅವನ ಪರಿಕಲ್ಪನೆಯನ್ನು ತಿದ್ದಿ ಇನ್ನೂ ಗಹನವಾಗಿಸಬೇಕಾದ ಅವಶ್ಯಕತೆ ಇದೆ. (9)*

(9)* ಸ್ವತಃ ಫ್ರಾಯ್ಡ್ ತಾನೇ ತನ್ನ ಮುಂದಿನ ಪರಿಕಲ್ಪನೆಯಾದ Life & Death Instinct ಲ್ಲಿ ಈ ದಿಸೆಯಲ್ಲಿ ಮೊದಲ ಹೆಜ್ಜೆಯಿಟ್ಟ. Synthesis and Unification ನ ತತ್ವವಾಗಿ ಅವನ Eros ಪರಿಕಲ್ಪನೆಯು ಪೂರ್ತಿಯಾಗಿ ಅವನ ಲಿಬಿಡೋ ಪರಿಕಲ್ಪನೆಗಿಂತ ಬೇರೆ ಪಾತಳಿಯಲ್ಲಿದೆ. ಹೀಗಿರುವಾಗಲೂ ಸಂಪ್ರದಾಯವಾದಿ ವಿಶ್ಲೇಷಕರು ಅವನ Life & Death Instinct ಥಿಯರಿಯನ್ನ ಒಪ್ಪಿಕೊಂಡರು, ಆದರೆ ಈ ಸ್ವೀಕೃತಿ ಲಿಬಿಡೋ ಪರಿಕಲ್ಪನೆಯಲ್ಲಿ ಅಂಥ ಮೂಲಭೂತ ಬದಲಾವಣೆಗೇನೂ ಕಾರಣವಾಗಲಿಲ್ಲ ವಿಶೇಷವಾಗಿ ಕ್ಲಿನಿಕಲ್ ವರ್ಕ್ ಸಂಬಂಧದಲ್ಲಿ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

2 Responses

Leave a Reply