ಸಾರ್ಥಕವಾಗದ ಸಮಣರ ಸಂಗ ~ ಸಿದ್ಧಾರ್ಥ #6

ಸಮಣರ ಜೊತೆ ಸೇರಿಕೊಂಡ ಸಿದ್ಧಾರ್ಥ ವೃದ್ಧ ಸಮಣನ ಮಾರ್ಗದರ್ಶನದಲ್ಲಿ ಸಾಧನೆಗಳನ್ನು ಮಾಡತೊಡಗಿದೆ. ತನ್ನ ದೇಹ ತೊರೆದು ಹಲವು ಪ್ರಾಣಿ ಪಕ್ಷಿಗಳ ದೇಹ ಹೊಕ್ಕು ಅನುಭವ ಪಡೆದ. ಕೊನೆಗೊಂದು ಸತ್ತ ನರಿಯ ದೇಹ ಸೇರಿಕೊಂಡ. ತೋಳಗಳು ಆ ದೇಹವನ್ನು ಎಳೆದಾಡಿದವು. ಹದ್ದುಗಳು ಅದನ್ನು ಕುಕ್ಕಿ ಕುಕ್ಕಿ ತಿಂದವು. ಬರೀ ಮೂಳೆಚಕ್ಕಳ ಉಳಿಯಿತು. ಕೊನೆಗೆ ಅದೂ ಹುಡಿ ಎದ್ದು ಹೊಲದ ಉದ್ದಕ್ಕೂ ಹಾರಿ ಮಣ್ಣಲ್ಲಿ ಮಣ್ಣಾಯಿತು. ಆಮೇಲೆ… । ಮೂಲ: ಹರ್ಮನ್ ಹೆಸ್ಸ್; ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ

ಹಿಂದಿನ ಸಂಚಿಕೆ ಇಲ್ಲಿ ನೋಡಿ: https://aralimara.com/2022/05/02/sid-5/

ಸಿದ್ಧಾರ್ಥನ ಆತ್ಮ ಮರಳಿ ಬಂತು. ಮತ್ತೆ ಮತ್ತೆ ಸತ್ತಿತು, ಕೊಳೆಯಿತು, ದೂಳಾಗಿ ಹುಡಿ ಹಾರಿತು, ಜನನ ಮರಣ ವಿಷಚಕ್ರದ ರುಚಿ ನೋಡಿತು, ಹೊಸ ಹಸಿವಿಗೆ ಹೊಂಚಿತು. ಈ ಚಕ್ರದ ಸುತ್ತಿನಿಂದ ಪಾರಾಗಲು ಬೇಟೆಗಾರನಂತೆ ಕಾಯುತ್ತ ಕುಳಿತಿತು. ಮತ್ತೆ ಮತ್ತೆ ಹುಟ್ಟುವ – ಸಾಯುವ ಆಟಕ್ಕೆ ಕಾರಣವೇ ಇಲ್ಲಗೊಳಿಸಲು, ಎಲ್ಲ ಯಾತನೆಯನ್ನೂ ಕೊನೆಗೊಳಿಸಲು,   ನಿತ್ಯವಾಗಲು ಪರಿತಪಿಸಿತು.

ಸಿದ್ಧಾರ್ಥ ತನ್ನ ಇಂದ್ರಿಯ ಜ್ಞಾನವನ್ನೇ ಕೊಂದುಕೊಂಡ. ತನ್ನ ನೆನಪನ್ನು ಕೊಂದುಕೊಂಡ. ತನ್ನ ದೇಹದಿಂದ ಜಾರಿ ನೂರಾರು ದೇಹಗಳನ್ನು ಹೊಕ್ಕುಬಂದ. ನೀರಲ್ಲಿ, ಗಾಳಿಯಲ್ಲಿ, ಕಲ್ಲಿನಲ್ಲಿ, ಮಣ್ಣಿನಲ್ಲಿ, ಮರದಲ್ಲಿ ಎಷ್ಟೆಲ್ಲ ಕಡೆ ಹೊಕ್ಕರೂ, ಪ್ರತಿಸಲವೂ ಎಚ್ಚರಗೊಂಡಾಗ ತನ್ನನ್ನು ತಾನು ಹಳೆಯ ತನ್ನೊಳಗೇ ಕಾಣುತ್ತಿದ್ದ. ಅದು ಸೂರ್ಯನೇ ಇರಲಿ ಚಂದ್ರನೇ ಇರಲಿ, ಎಲ್ಲಿಗೆ ಹೋಗಿಬಂದರೂ ಅವನು ತನ್ನನ್ನೇ ಮರಳಿ ಪಡೆಯುತ್ತಿದ್ದ. ಮತ್ತದೇ ಚಕ್ರದಲ್ಲಿ ಸುತ್ತುತ್ತಾ ಹುಡುಕಾಟಕ್ಕೆ  ಹಸಿಯುತ್ತಿದ್ದ, ಅದನ್ನು ತಣಿಸಲು ಹೋಗಿ ಹೊಸ ಹುಡುಕಾಟದ ಹಸಿವಿಗೆ ದಾರಿ ಮಾಡಿಕೊಳ್ಳುತ್ತಿದ್ದ.

ಸಿದ್ಧಾರ್ಥ ಸಮಣರ ಸಹವಾಸದಲ್ಲಿ ಸಾಕಷ್ಟು ಕಲಿತ. ತನ್ನನ್ನು ತಾನು ತೊರೆದು ಹೋಗಲು ಕಲಿತ. ತಾನಾಗೇ ತನ್ನನ್ನು  ನೋವು, ಯಾತನೆ, ಹಸಿವು, ನೀರಡಿಕೆ, ದಣಿವುಗಳಿಗೆ ಒಡ್ಡಿಕೊಂಡು ಆ ಮೂಲಕ ತನ್ನನ್ನು ತಾನು ನಿರಾಕರಿಸಿಕೊಳ್ಳಲು ಕಲಿತ. ಧ್ಯಾನದಿಂದ ಮನಸಿನ ಎಲ್ಲ ಕಲ್ಪನೆಗಳನ್ನು ಹೊಡೆದಟ್ಟುವ ಮೂಲಕವೂ ಸ್ವಯಂ ನಿರಾಕರಣೆ ರೂಢಿಸಿಕೊಂಡ. ಇವೆಲ್ಲದರ ಜೊತೆಗೆ ಸಾವಿರಾರು ಸಲ ಗಂಟೆಗಟ್ಟಲೆ, ದಿನಗಟ್ಟಲೆ ತನ್ನ ದೇಹವನ್ನು ತೊರೆದು ಮುಕ್ತಾತ್ಮ ಸ್ಥಿತಿಯಲ್ಲಿ ಇರುವುದನ್ನೂ ಕಲಿತುಕೊಂಡ.

ಸಿದ್ಧಾರ್ಥ ಸಾವಿರ ಸಲ ತನ್ನ ದೇಹ ತೊರೆದು ಹೋದರೂ, ಮುಕ್ತಾತ್ಮ ಸ್ಥಿತಿಯಲ್ಲಿದ್ದರೂ, ಪ್ರಾಣಿಗಳ ದೇಹ ಹೊಕ್ಕರೂ, ಕಲ್ಲಿನಲ್ಲೇ ಇದ್ದರೂ, ಮರಳಿ ಬರುವುದು ಮಾತ್ರ ಅನಿವಾರ್ಯವೇ ಆಗಿತ್ತು. ಇದರಿಂದ ಅವನು ತಪ್ಪಿಸಿಕೊಳ್ಳುವ ಹಾಗೇ ಇರಲಿಲ್ಲ. ಎಲ್ಲಿಗೆ ಹೋದರೂ ಅವನು ಮತ್ತೆ ಸೂರ್ಯನ ಬಿಸಿಲಲ್ಲೋ, ಚಂದ್ರನ ಬೆಳಕಲ್ಲೋ, ನೆರಳಲ್ಲೋ, ಮಳೆಯಲ್ಲೋ ಇರುತ್ತಿದ್ದ ತನ್ನದೇ ಸಿದ್ಧಾರ್ಥನೆಂಬ ದೇಹಕ್ಕೆ ಮರಳಿರುತ್ತಿದ್ದ. ತನ್ನ ಮೇಲೆ ಹೇರಲಾದ ಈ ಜನ್ಮ ಚಕ್ರದ ಕುರಿತು ಅವನಿಗೆ ಸಿಟ್ಟೇ ಬರುತ್ತಿತ್ತು. ಅದು ಅವನನ್ನು ಯಾತನೆಗೆ ದೂಡುತ್ತಿತ್ತು.

ಸಿದ್ಧಾರ್ಥನ ಜೊತೆಯಲ್ಲೇ ಗೋವಿಂದ ಅವನ ನೆರಳಿನಂತೆ ಅವನು ಮಾಡಿದ್ದೆಲ್ಲವನ್ನೂ ಮಾಡಿದ. ಅದದೇ ಪ್ರಯತ್ನಗಳನ್ನು ತಾನೂ ನಡೆಸಿದ. ಅವರಿಬ್ಬರೂ ಸೇವೆ ಮತ್ತು ಅಭ್ಯಾಸದ ಹೊರತಾಗಿ ಮಾತಾಡಿಕೊಂಡಿದ್ದು ಬಹಳ ಅಪರೂಪ. ಅವರಿಬ್ಬರು ಆಗಾಗ ಜೊತೆಯಾಗಿ ಸಮೀಪದ ಹಳ್ಳಿಗಳಿಗೆ ಭಿಕ್ಷೆ ಬೇಡಲು ಹೋಗುತ್ತಿದ್ದರು. ಬೇಡಿ ತಂದ ಭಿಕ್ಷೆಯನ್ನು ತಮ್ಮ ಗುರು  ಸಮಣರಿಗೆ ಕೊಟ್ಟು ತಾವೂ ತಿನ್ನುತ್ತಿದ್ದರು.

“ನಿನಗೇನು ಅನ್ನಿಸುತ್ತೆ ಗೋವಿಂದ?” ಭಿಕ್ಷೆ ಬೇಡಲು ಹೊರಟಾಗೊಮ್ಮೆ ಸಿದ್ಧಾರ್ಥ ತನ್ನ ಗೆಳೆಯನ್ನ ಕೇಳಿದ. “ನಮ್ಮಲ್ಲಿ ಏನಾದರೂ ಪ್ರಗತಿ ಆಗಿದೆಯಾ? ನಾವು ಏನಾದರೊಂದು ಗುರಿ ಮುಟ್ಟುತೀವಾ?”

“ನಾವು ಸಾಕಷ್ಟು ಕಲಿತಿದೀವಿ, ಇನ್ನೂ ಕಲೀತಲೇ ಇರ್ತೀವಿ. ನೀನೊಬ್ಬ ಶ್ರೇಷ್ಠ ಸಮಣನಾಗ್ತೀಯ ಸಿದ್ಧಾರ್ಥ. ನೀನು ಬಹಳ ಬೇಗ ಕಲೀತೀಯ. ಅಭ್ಯಾಸಗಳನ್ನ ಕರಗತ ಮಾಡ್ಕೋತೀಯ. ಹಿರಿಯ ಸಮಣರು ನಿನ್ನನ್ನ ಮೆಚ್ಚಿಕೊಂಡಿದಾರೆ. ಮುಂದೊಮ್ಮೆ ನೀನು ಮಹಾ ಸಂತನಾಗ್ತೀಯ ಸಿದ್ಧಾರ್ಥ” ಗೋವಿಂದ ಉತ್ತರಿಸಿದ.

ಸಿದ್ಧಾರ್ಥನಿಗೆ ಕಸಿವಿಸಿ, “ಎಷ್ಟು ತಡೆದರೂ ನನಗೊಂದು ಯೋಚನೆ ಬರ್ತಿದೆ ಗೆಳೆಯಾ, ಇದು ಹೀಗೆಲ್ಲ ಆಗುವಂಥದಲ್ಲ. ನಾವು ಸಮಣರ ಜೊತೆ ಸಮಣರಾಗೇ ಇದ್ದು ಸಾಕಷ್ಟು ಕಲಿತಿದೀವಿ. ಆದರೆ ಗೆಳೆಯ, ನಾನು ಇವರ ಸಹವಾಸದಲ್ಲಿ ಏನೆಲ್ಲ ಕಲಿತೆನೋ ಅದನ್ನ ಇನ್ನೂ ಬೇಗ, ಇನ್ನೂ ಸುಲಭವಾಗಿ ಸೂಳೆಯರ ಮನೆಯಲ್ಲೋ ಜೂಜುಕೋರರ ಅಡ್ಡೆಯಲ್ಲೋ ಕಲಿತುಬಿಡುತ್ತಿದ್ದೆ!”

ಗೋವಿಂದನಿಗೆ ಆತಂಕ, “ಇದೆಂಥ ಮಾತು ಸಿದ್ಧಾರ್ಥ! ಧ್ಯಾನ ಮಾಡುವುದನ್ನ, ಉಸಿರಾಟದ ಮೇಲಿನ ಹಿಡಿತವನ್ನ, ಹಸಿವು ಯಾತನೆಗಳಿಂದ ಹೊರತಾಗುಳಿಯೋದನ್ನ ನೀನು ಆ ದುರ್ಜನರ ಸಹವಾಸದಲ್ಲಿ ಹೇಗೆ ಕಲೀತಿದ್ದೆ!?”

ಸಿದ್ಧಾರ್ಥ ತನಗೆ ತಾನೇ ಹೇಳಿಕೊಳ್ಳುವಂತೆ ಮಣಮಣಿಸತೊಡಗಿದ. “ಏನು ಈ ಧ್ಯಾನ ಅಂದರೆ? ಈ ದೇಹ ತೊರೆದು ಹೋಗೋದು ಯಾಕೆ? ಉಪವಾಸ ಅಂದರೇನು? ಉಸಿರನ್ನ ತಡೆಹಿಡಿಯೋದು ಯಾಕೆ? ಇವೆಲ್ಲವೂ ನಮ್ಮಿಂದ ನಾವು ಬಿಡುಗಡೆ ಪಡೆಯೋದಕ್ಕೆ. ನಾವು ನಾವಾಗಿರುವ ಯಾತನೆಯಿಂದ ಚಿಕ್ಕದೊಂದು ಅವಧಿಗೆ ಪಲಾಯನ ಮಾಡೋದಕ್ಕೆ. ಜೀವನದ ದುಃಖ ದುಮ್ಮಾನಗಳು ಮತ್ತು ನಿರರ್ಥಕತೆ ಕಾಡದಂತೆ ಇಂದ್ರಿಯಗಳನ್ನ ಜಡ್ಡುಗೊಳಿಸುವ ಕ್ರಿಯೆಗಳಷ್ಟೇ ಇವು. ಎತ್ತಿನಬಂಡಿ ಓಡಿಸುವಾತ ದಣಿವಾರಿಸಿಕೊಳ್ಳಲು ಕೊಂಚ ಕಾಲ ಗಡಂಗಿನಲ್ಲಿ ಕುಳಿತು ಹುಳಿತ ಅಕ್ಕಿಯ ಶೇಂದಿಯನ್ನೋ, ಹುಳಿತ ತೆಂಗಿನ ಸರಾಯಿಯನ್ನೋ ಕುಡಿದು ಮಲಗುತ್ತಾನಲ್ಲ; ಹಾಗೇ ಇವೆಲ್ಲವೂ. ಈ ಗೋವಿಂದ ಮತ್ತು ಸಿದ್ಧಾರ್ಥ ತಮ್ಮ ನಿರಂತರ ಅಭ್ಯಾಸದಿಂದ ಸ್ವಯಂ ಬಿಡುಗಡೆ ಪಡೆದು ಯಾವ ಸ್ಥಿತಿ ತಲುಪುತ್ತಾರೋ, ಅವನೂ ಅಮಲಿನ ನಿದ್ರೆಯಲ್ಲಿ ಅದೇ ಸ್ಥಿತಿ ತಲುಪಿರುತ್ತಾನೆ. ಕೊನೆಗೂ ಇವೆಲ್ಲ ಇಷ್ಟೇ ಗೋವಿಂದ.”

“ಆದರೆ ಗೆಳೆಯಾ, ನಿನಗೂ ಚೆನ್ನಾಗಿ ಗೊತ್ತು; ಸಿದ್ಧಾರ್ಥನಾದ ನೀನು ಎತ್ತಿನ ಬಂಡಿ ಓಡಿಸೋನೂ ಅಲ್ಲ, ಸಮಣರು ಹೆಂಡ  ಕುಡಿಯೋದೂ ಇಲ್ಲ. ಹೆಂಡ ಒಂದಷ್ಟು ಹೊತ್ತು ಇಂದ್ರಿಯಗಳನ್ನ ಜಡ್ಡುಗೊಳಿಸುತ್ತೆ, ನಿಜ. ಅದು ಒಂದಷ್ಟು ಹೊತ್ತು ಆ ವ್ಯಕ್ತಿಗೆ  ಎಲ್ಲ ಬಗೆಯ ಅನುಭವದಿಂದ ಬಿಡುಗಡೆ ನೀಡೋದೂ ನಿಜವೇ. ಆದರೆ ಆ ವ್ಯಕ್ತಿ ಅಮಲಿನಿಂದ ಮರಳಿ ಎಚ್ಚರಗೊಂಡಾಗ ಪ್ರತಿಯೊಂದೂ ಯಥಾಸ್ಥಿತಿಯಲ್ಲೇ ಇರೋದನ್ನ ಕಾಣುತ್ತಾನೆ. ಅವನೊಳಗೆ ಯಾವ ಬದಲಾವಣೆಯೂ ಆಗಿರೋದಿಲ್ಲ. ಅವನಲ್ಲಿ ಯಾವ ಅರಿವಾಗಲೀ ಜ್ಞಾನೋದಯವಾಗಲೀ ಮೂಡಿರೋದಿಲ್ಲ. ಅವನು ಕನಿಷ್ಠ ಎರಡು ಮೆಟ್ಟಿಲೂ ಮೇಲಕ್ಕೆ ಏರಿರೋದಿಲ್ಲ”

ಸಿದ್ಧಾರ್ಥ ಮುಗುಳ್ನಕ್ಕ. “ಅದೊಂದೂ ನನಗೆ ಗೊತ್ತಿಲ್ಲ, ನಾನು ಯಾವತ್ತೂ ಕುಡಿದವನಲ್ಲ. ಆದರೆ ಸಿದ್ಧಾರ್ಥನಾದ ನನಗೆ ಈ ಎಲ್ಲ ಅಭ್ಯಾಸಗಳು ಮತ್ತು ಧ್ಯಾನ ಸಾಧನೆಯಿಂದ ಅಲ್ಪಾವಧಿಯ ಒಂದಷ್ಟು ಹೊತ್ತು ಇಂದ್ರಿಯಾನುಭವದಿಂದ ಬಿಡುಗಡೆ ಸಿಕ್ಕಿದೆಯಷ್ಟೇ. ಇಷ್ಟೆಲ್ಲ ಮಾಡಿದರೂ ನಾನು ಜ್ಞಾನದಿಂದ, ಮೋಕ್ಷದಿಂದ ಇನ್ನೂ ತಾಯಗರ್ಭದಲ್ಲಿರುವ ಮಗು ಹೇಗೋ ಹಾಗೇ ಅಷ್ಟು ದೂರವೇ ಉಳಿದಿದೀನಿ. ಗೋವಿಂದ, ನನಗಿದು ಚೆನ್ನಾಗಿ ಅರ್ಥವಾಗಿದೆ!”

Leave a Reply