ನಿಮ್ಮೊಳಗೆ ಪ್ರಶ್ನೆಗಳು ಹುಟ್ಟಿಕೊಂಡಾಗ ನೀವು ಅಧೀರರಾದರೆ ನಿಮ್ಮ ಚಲನೆ ನಿಂತು ಹೋಗುತ್ತದೆ. ನೀವು ಸಹಜವಾಗಿ ಮಾಡಬಹುದಾಗಿದ್ದ ಕೆಲಸವೊಂದು ನಿಮಗೆ ಅಸಾಧ್ಯವಾಗಿಬಿಡುತ್ತದೆ…. । Osho – When the Shoe Fits; ಕನ್ನಡಕ್ಕೆ: ಚಿದಂಬರ ನರೇಂದ್ರ
ಜುವಾಂಗ್ ತ್ಸೇ, ಚುಯೀ ಎನ್ನುವ ಹೆಸರಿನ ಪ್ರಚಂಡ ರೇಖಾಚಿತ್ರಕಾರನ ಬಗ್ಗೆ ಹೇಳುತ್ತಾನೆ. ಚಿತ್ರಕಾರ ಚುಯೀ ಎಷ್ಟು ನಿಸ್ಸೀಮ ರೇಖಾಚಿತ್ರಕಾರನಾಗಿದ್ದನೆಂದರೆ, ಅವನು ಕಂಪಾಸ್ ನ ಸಹಾಯವಿಲ್ಲದೆ ಪರಿಪೂರ್ಣ ವೃತ್ತವನ್ನು ರಚಿಸಬಲ್ಲವನಾಗಿದ್ದ. ನಿಮ್ಮೊಳಗೆ ಹೆದರಿಕೆ ಮನೆ ಮಾಡಿದ್ದರೆ ನಿಮಗೆ ಕಂಪಾಸ್ ನ ಸಹಾಯವಿಲ್ಲದೇ ಪರಿಪೂರ್ಣ ವೃತ್ತ ರಚನೆ ಮಾಡಲಿಕ್ಕಾಗುವುದಿಲ್ಲ. ನಿಮ್ಮ ಬಗ್ಗೆ ನಿಮಗೆ ಭಯ ಇಲ್ಲವಾದರೆ ನಿಮಗೂ ಕಂಪಾಸ್ ನ ಸಹಾಯವಿಲ್ಲದೆ ಪರಿಪೂರ್ಣ ವೃತ್ತ ರಚಿಸುವುದು ಸಾಧ್ಯ.
ಪ್ರಕೃತಿಯಲ್ಲಿ ಎಲ್ಲಿ ನೋಡಿದಲ್ಲಿ ವೃತ್ತಗಳು, ಎಲ್ಲವೂ ವೃತ್ತದ ಪಥದಲ್ಲಿಯೇ ಚಲಿಸುತ್ತಿವೆ. ವೃತ್ತ, ಪ್ರಕೃತಿಯಲ್ಲಿನ ಅತ್ಯಂತ ಸರಳ ಸಂಗತಿ, ಮತ್ತು ಈ ವೃತ್ತದ ರಚನೆಗೆ ಯಾವ ಕಂಪಾಸ್ ನ್ನ ಕೂಡ ಉಪಯೋಗಿಸಲಾಗಿಲ್ಲ. ನಕ್ಷತ್ರಗಳು, ನಕಾಶೆಯ ಸಲಹೆ ಕೇಳುವುದಿಲ್ಲ, ಅವುಗಳ ಬಳಿ ಯಾವ ಕಂಪಾಸ್ ಕೂಡ ಇಲ್ಲ, ಆದರೂ ನಕ್ಷತ್ರಗಳು ತಮ್ಮ ನಿರ್ಧಿಷ್ಟ ಪಥದಲ್ಲಿ ಚಲಿಸುತ್ತಿವೆ. ನೀವೇನಾದರೂ ನಕ್ಷತ್ರಗಳಿಗೆ ಕಂಪಾಸ್ ಮತ್ತು ನಕಾಶೆ ಕೊಟ್ಟಿರಾದರೆ, ಖಂಡಿತವಾಗಿಯೂ ಹೇಳುತ್ತೇನೆ, ಅವು ಕಳೆದು ಹೋಗಿಬಿಡುತ್ತವೆ, ಎಲ್ಲಿಗೆ ಹೋಗಬೇಕು, ಹೇಗೆ ಹೋಗಬೇಕು ಎಂಬ ಗೊಂದಲದಲ್ಲಿ ಮುಳುಗಿಬಿಡುತ್ತವೆ.
ನೀವು ಈ ಶತಪದಿ (ಸೆಂಟಿಪೇಡ್ ) ಯ ಕಥೆ ಕೇಳಿರಬಹುದು. ಸೆಂಟಿಪೇಡ್ ತನ್ನ ನೂರು ಕಾಲುಗಳ ಸಹಾಯದಿಂದ ನಡೆಯುತ್ತದೆ. ಒಮ್ಮೆ ಒಂದು ತತ್ವಜ್ಞಾನಿ ಕಪ್ಪೆ, ಶತಪದಿ ತನ್ನ ನೂರುಕಾಲುಗಳಲ್ಲಿ ಯಾವ ಆತಂಕವಿಲ್ಲದೇ ನಿರಾಯಾಸವಾಗಿ ನಡೆಯುತ್ತಿರುವುದನ್ನ ಗಮನಿಸಿತು. ಸೆಂಟಿಪೇಡ್ ನ ನಿರಾಯಾಸ ನಡೆ ನೋಡಿ ಕಪ್ಪೆಗೆ ಗಾಬರಿಯಾಯಿತು. ನನಗೆ ನಾಲ್ಕು ಕಾಲುಗಳಿಂದ ನಡೆಯುವುದೇ ಕಷ್ಟ, ಆದರೆ ಈ ಸೆಂಟಿಪೇಡ್ ನೂರು ಕಾಲುಗಳಲ್ಲಿ ನಡೆಯುತ್ತಿದೆಯಲ್ಲ, ಇದು ಒಂದು ಅದ್ಭುತ ಪವಾಡ. ಯಾವ ಕಾಲು ಮೊದಲು ಎತ್ತಿಡಬೇಕೆಂದು ಸೆಂಟಿಪೇಡ್ ಗೆ ಹೇಗೆ ಗೊತ್ತಾಗುತ್ತದೆ? ಆಮೇಲೆ ಯಾವ ಕಾಲು ಎತ್ತಬೇಕು ? ನಂತರ ಯಾವ ಕಾಲು ಎತ್ತಬೇಕು ಎಂದು ಸೆಂಟಿಪೇಡ್ ಹೇಗೆ ನಿರ್ಧರಿಸುತ್ತದೆ? ಎಷ್ಟು ಯೋಚಿಸಿದರೂ ಈ ಸಮಸ್ಯೆಗೆ ಪರಿಹಾರ ದೊರಕದಿದ್ದಾಗ ತತ್ವಜ್ಞಾನಿ ಕಪ್ಪೆ ಒಂದು ಸೆಂಟಿಪೇಡ್ ನ ನಿಲ್ಲಿಸಿ ಪ್ರಶ್ನೆ ಮಾಡಿತು.
“ ನೀನು ಹೇಗೆ ನಡೆಯುತ್ತೀಯ? ನೂರು ಕಾಲುಗಳನ್ನೂ ಹ್ಯಾಗೆ ಮ್ಯಾನೇಜ್ ಮಾಡುತ್ತೀಯ? ನನಗೇನೋ ಇದು ಅಸಾಧ್ಯ ಅನಿಸುತ್ತಿದೆ ! “
ಸೆಂಟಿಪೇಡ್, ತತ್ವಜ್ಞಾನಿ ಕಪ್ಪೆಯ ಪ್ರಶ್ನೆಗೆ ಉತ್ತರಿಸಿತು , “ ನಾನು ಬದುಕಿನುದ್ದಕ್ಕೂ ನಡೆಯುತ್ತಲೇ ಇದ್ದೇನೆ ಆದರೆ ಈ ಬಗ್ಗೆ ನಾನು ಯಾವತ್ತೂ ಯೋಚನೆ ಮಾಡಿಲ್ಲ. ಈಗ ನೀನು ಈ ಕುರಿತು ಪ್ರಶ್ನೆ ಕೇಳಿರುವುದರಿಂದ, ನಾನು ಈ ಬಗ್ಗೆ ವಿಚಾರ ಮಾಡಿ ನಿನಗೆ ಉತ್ತರಿಸುತ್ತೇನೆ. “
ಬದುಕಿನಲ್ಲಿ ಮೊಟ್ಟ ಮೊದಲಬಾರಿಗೆ ಆಲೋಚನೆಯೊಂದು ಸೆಂಟಿಪೇಡ್ ನ ಪ್ರಜ್ಞೆಯನ್ನು ಪ್ರವೇಶ ಮಾಡಿತು. ನಿಜವಾಗಿಯೂ ತತ್ವಜ್ಞಾನಿ ಕಪ್ಪೆಯ ಪ್ರಶ್ನೆಯಲ್ಲಿ ಒಂದು ಅರ್ಥವಿತ್ತು. ಸೆಂಟಿಪೇಡ್ ಅಲ್ಲಿಯೇ ನಿಂತು ಆಳವಾದ ಯೋಚನೆಯಲ್ಲಿ ಮುಳುಗಿತು. ನಾನು ಯಾವ ಕಾಲು ಮೊದಲು ಎತ್ತಿಡುತ್ತೇನೆ ಮತ್ತು ಯಾಕೆ ? ಸೆಂಟಿಪೇಡ್ ತೀವ್ರ ಗೊಂದಲದಲ್ಲಿ ಮುಳುಗಿತು. ಸೆಂಟಿಪೇಡ್ ಗೆ ಒಂದು ಹೆಜ್ಜೆ ಮುಂದಿಡಲಾಗಲಿಲ್ಲ, ಅದು ನಡುಗುತ್ತ ಕುಸಿದು ಉರುಳಿ ಬಿತ್ತು. ಕೆಳಗೆ ಬಿದ್ದಂತೆಯೇ ಸೆಂಟಿಪೇಡ್ ಕಪ್ಪೆಯನ್ನು ಕುರಿತು ಮಾತನಾಡಿತು,
“ ತತ್ವಜ್ಞಾನಿಗಳೇ, ನೀವು ನನಗೆ ಕೇಳಿದ ಪ್ರಶ್ನೆಯನ್ನ ಇನ್ನೊಂದು ಸೆಂಟಿಪೇಡ್ ಗೆ ಕೇಳಬೇಡಿ. ನಾನು ಜೀವನದುದ್ದಕ್ಕೂ ನಡೆಯುತ್ತಲೇ ಇದ್ದೇನೆ ಆದರೆ ನಡೆಯುವುದು ನನಗೆ ಯಾವತ್ತೂ ಸಮಸ್ಯೆಯಾಗಿರಲಿಲ್ಲ. ಈಗ ಇಂಥದೊಂದು ಪ್ರಶ್ನೆ ಕೇಳಿ ನನ್ನನ್ನು ಚಲಿಸದಂತೆ ಮಾಡಿದ್ದೀರಿ. ನನಗೆ ನೂರು ಕಾಲುಗಳಿವೆ, ಈ ಕಾಲುಗಳನ್ನ ಮ್ಯಾನೇಜ್ ಮಾಡುವ ಸಮಸ್ಯೆ ನನ್ನನ್ನು ಈಗ ತೀವ್ರವಾಗಿ ಕಾಡುತ್ತಿದೆ. “
ನಿಮ್ಮೊಳಗೆ ಪ್ರಶ್ನೆಗಳು ಹುಟ್ಟಿಕೊಂಡಾಗ ನೀವು ಅಧೀರರಾದರೆ ನಿಮ್ಮ ಚಲನೆ ನಿಂತು ಹೋಗುತ್ತದೆ. ನೀವು ಸಹಜವಾಗಿ ಮಾಡಬಹುದಾಗಿದ್ದ ಕೆಲಸವೊಂದು ನಿಮಗೆ ಅಸಾಧ್ಯವಾಗಿಬಿಡುತ್ತದೆ.