ನಾಸದೀಯ ಸೂಕ್ತದ ಆರು ಋಕ್ಕುಗಳು (ಅರ್ಥ ಸಹಿತ)

ಋಗ್ವೇದದ ಹತ್ತನೇ ಮಂಡಲದ 129ನೆಯ ಸೂಕ್ತವು `ನಾಸತ್’ ಎಂಬ ಶಬ್ದದಿಂದ ಪ್ರಾರಂಭವಾಗುವುದರಿಂದ ನಾಸದೀಯ ಸೂಕ್ತವೆಂದು ಪ್ರಸಿದ್ಧವಾಗಿದೆ. ಅದರ ಐದು ಶ್ಲೋಕಗಳು (ಋಕ್ಕುಗಳು) ಮತ್ತು ಅರ್ಥ ಇಲ್ಲಿ ನೀಡಲಾಗಿದೆ. ಅರ್ಥ ವಿವರಣೆಗಳನ್ನು ವಿ. ಎಂ. ಉಪಾಧ್ಯಾಯ ಅವರ ಬರಹಗಳಿಂದ ಆಯ್ದುಕೊಳ್ಳಲಾಗಿದೆ.

ನಾಸದಾಸೀನ್ನೋ ಸದಾಸೀತ್ ತದಾನೀಂ ನಾಸೀದ್ರಜೋ ನೋ ವ್ಯೋಮಾ ಪರೋ ಯತ್
ಕಿಮಾರೀವಃ ಕುಹ ಕಸ್ಯ ಶರ್ಮನ್ನಮ್ಭಃ ಕಿಮಾಸೀದ್ಗಹನಂ ಗಭೀರಂ.
ಅರ್ಥ : ಆಗ(ಸೃಷ್ಟಿಗೂ ಮೊದಲು) ಅದು(ಜಗತ್ಕಾರಣವಾದ ತತ್ವವು) ಸತ್(ಇರುವ) ಆಗಿಯೂ ಇರಲಿಲ್ಲ, ಮತ್ತು ಅಸತ್(ಇಲ್ಲದಿರುವ)ಆಗಿಯೂ ಇರಲಿಲ್ಲ. ಆಗ ಭೂಮಿ ಇರಲಿಲ್ಲ, ಅಂತರಿಕ್ಷವೂ ಇರಲಿಲ್ಲ. ಅದಕ್ಕೂ ಮೇಲಿನ ದ್ಯುಲೋಕವೂ ಇರಲಿಲ್ಲ. ಆಗ ಆವರಣವು ಹೇಗೆ ತಾನೆ ಇದ್ದೀತು? ಆಧಾರವಾದ ಪ್ರದೇಶವು ಯಾವುದಿದ್ದೀತು? ಆಳವೂ ಗಂಭೀರವೂ ಆದ ಜಲರಾಶಿಯಾದರೂ ಇದ್ದೀತೇ?

ನಾಸದೀಯ ಸೂಕ್ತದ ಎರಡನೆಯ ಮಂತ್ರ…
ನ ಮೃತ್ಯುರಾಸೀದಮೃತಂ ನ ತರ್ಹಿ ನ ರಾತ್ರ್ಯಾ ಅಹ್ನ ಆಸೀತ್ಪ್ರಕೇತಃ
ಆನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ||
ಅರ್ಥ : ಆಗ ಮೃತ್ಯು ಇರಲಿಲ್ಲ, ಅಮೃತತ್ವವೂ ಇರಲಿಲ್ಲ. ರಾತ್ರಿ ಹಗಲುಗಳೆಂಬ ಪ್ರಜ್ಞಾನವೂ ಇರಲಿಲ್ಲ. ಪ್ರಾಣಾಪಾನ ರೂಪವನ್ನು ಹೊಂದದೇ ಏಕಮೇವಾದ್ವಿತೀಯವಾದ ಅದು ಸ್ವಶಕ್ತಿಯಿಂದಲೇ ಇದ್ದಿತು. ಅದಕ್ಕಿಂತ ಬೇರೆಯಾದ ಮತ್ತಾವುದೂ ಇರಲು ಹೇಗೆ ಸಾಧ್ಯ?

ನಾಸದೀಯ ಸೂಕ್ತದ ಮೂರನೆಯ ಮಂತ್ರ
ತಮ ಆಸೀತ್ ತಮಸಾ ಗೂಳ್ಹಮಗ್ರೇsಪ್ರಕೇತಮ್ ಸಲಿಲಂ ಸರ್ವಮಾ ಇದಂ
ತುಚ್ಛ್ಯೇನಾಭ್ವಪಿಹಿತಂ ಯದಾಸೀತ್ತಪಸಸ್ತನ್ಮಹಿನಾಜಾಯತೈಕಂ
ಅರ್ಥ : ಸೃಷ್ಟಿಗಿಂತ ಮುಂಚೆ ಅಪ್ರಜ್ಞಾತ ತಮಸ್ಸಿನಿಂದ ಎಲ್ಲವೂ ಆವೃತ್ತವಾಗಿತ್ತು. ಸರ್ವವೂ ಜಲಮಯವಾಗಿದ್ದಿತು. ಸೂಕ್ಷ್ಮವಾದ ಅಜ್ಞಾನದ ಮುಸುಕು ಎಲ್ಲವನ್ನೂ ಕವಿದಿತ್ತು. ಏಕೈಕವಾದ ಆ ಬ್ರಹ್ಮ ತತ್ವವು ಸೃಷ್ಟಿಸಬೇಕೆಂಬ ಸಂಕಲ್ಪದಿಂದ ತಾನೇ ಅನೇಕವಾಗಿ ಪರಿಣಮಿಸಿತು.

ನಾಸದೀಯ ಸೂಕ್ತದ ನಾಲ್ಕನೆಯ ಮಂತ್ರ…
ಕಾಮಸ್ತದಗ್ರೇ ಸಮವರ್ತತಾಧಿ ಮನಸೋ ರೇತಃ ಪ್ರಥಮಂ ಯದಾಸೀತ್
ಸತೋ ಬಂಧುಮಸತಿ ನಿರವಿಂದನ್ ಹೃದಿ ಪ್ರತೀಷ್ಯಾ ಕವಯೋ ಮನೀಷಾ.
ಅರ್ಥ : ಪ್ರಪಂಚಕ್ಕೆ ಬೀಜರೂಪವಾದ ವಾಸನಾ ಶೇಷವು ಇಚ್ಛೆಯಾಗಿ ಫಲೋನ್ಮುಖವಾದಾಗ ಅವನ ಮನಸ್ಸಿನಲ್ಲಿ ಸೃಷ್ಟಿಸಬೇಕೆಂಬ ಆಶೆ ಹುಟ್ಟಿತು. ಕ್ರಾಂತ ದರ್ಶನರಾದ ಜ್ಞಾನಿಗಳು ತಮ್ಮ ಬುದ್ಧಿ ಬಲದಿಂದ ಚೆನ್ನಾಗಿ ಚಿಂತಿಸಿ ಅವ್ಯಾಕೃತವಾದ ಆ ಕಾರಣವಸ್ತುವಿನಲ್ಲಿ ಈಗ ನಮಗೆ ಅನುಭವಗೋಚರವಾಗುತ್ತಿರುವ ಸಮಸ್ತ ಪ್ರಪಂಚದ ಆವಿರ್ಭಾವಕ್ಕೆ ಕಾರಣವನ್ನು ವಿಮರ್ಶಿಸಿದರು.

ನಾಸದೀಯ ಸೂಕ್ತದ ಐದನೇ ಮಂತ್ರ…
ತಿರಶ್ಚೀನೋ ವಿತತೊ ರಶ್ಮಿರೇಷಾ ಮಧಃ ಸ್ವಿದಾಸೀದುಪರಿ ಸ್ವಿದಾಸೀತ್
ರೇತೋಧಾ ಆಸನ್ಮಹಿಮಾನ ಆಸನ್ ತ್ಸ್ವಧಾ ಅವಸ್ತಾತ್ಪ್ರಯತಿಃ ಪರಸ್ತಾತ್.
ಅರ್ಥ : (ಸೂರ್ಯನು ಉದಯಿಸಿದ ಕೂಡಲೇ ಸ್ವಲ್ಪವೂ ಕಾಲಾಪೇಕ್ಷೆಯಿಲ್ಲದೇ ಕಿರಣಗಳು ಸರ್ವತ್ರ ವ್ಯಾಪಿಸುವಂತೆ) ಸೃಷ್ಟಿಕಾರ್ಯದ ಸಂಕಲ್ಪದಿಂದ ಕಾಲ ವಿಳಂಬವಿಲ್ಲದೇ ಸೃಷ್ಟಿಯಾಯಿತು. ಹೀಗೆ ಕಾರ್ಯಪ್ರವೃತ್ತವಾದ ಆ ಬೆಳಕು ಮಧ್ಯಭಾಗದಲ್ಲಿ ನಿಂತಿತೋ? ಅಥವಾ ಕೆಳಭಾಗ ಸೇರಿತೋ? ಅಥವಾ ಮೇಲ್ಗಡೆ ಹೋಗಿ ನಿಂತಿತೋ? (ಹೇಗೆಂದು ಹೇಳಲಾಗದಂತೆ ಅದು ಸರ್ವತ್ರ ವ್ಯಾಪಿಸಿತು.) ಆಗ ಮಹಿಮಾನ್ವಿತವಾದ ಆಕಾಶಾದಿಗಳುಂಟಾದವು. ಇವುಗಳಲ್ಲಿ ಭೋಗ್ಯವಾದ ಅನ್ನವು `ಸ್ವಧಾ’ ಎಂಬ ಹೆಸರಿನಿಂದ ಎಲ್ಲಕ್ಕೂ ಕನಿಷ್ಠವಾಯಿತು ಮತ್ತು ಭೋಕ್ತೃವಾದ ಆತ್ಮನು ಎಲ್ಲಕ್ಕಿಂತ ಉತ್ಕೃಷ್ಟನಾದನು.

ನಾಸದೀಯ ಸೂಕ್ತದ ಕೊನೆಯ ಮಂತ್ರ
ಕೋ ಅದ್ದೇವಾ ಕ ಇಹ ಪ್ರ ವೋಚತ್ಕುತ ಆ ಜಾತಾ ಕುತ ಇಯಂ ವಿಸೃಷ್ಟಿಃ
ಅರ್ವಾಗ್ದೇವಾ ಅಸ್ಯ ವಿಸರ್ಜನೇನಾಥಾ ಕೋ ವೇದ ಯತ ಆ ಬಭೂವ
ಅರ್ಥ : (ಭೂತ- ಭೌತಿಕ ಮತ್ತು ಭೋಕ್ತೃ- ಭೋಗ್ಯಗಳೆಂಬ ಭೇದದಿಂದ ಬಹು ಪ್ರಕಾರವಾದ)) ಈ ವಿಚಿತ್ರವಾದ ಸೃಷ್ಟಿಯು ಯಾರಿಂದ ಮತ್ತು ಯಾವುದರಿಂದ ಆಯಿತೆನ್ನುವುದನ್ನು ಯಾರು ಯಥಾವತ್ತಾಗಿ ತಿಳಿಯಬಲ್ಲರು? ಈ ಜಗತ್ತಿನ ಸೃಷ್ಟಿಯ ನಂತರವೇ ದೇವತೆಗಳು ಜನಿಸಿರುವುದರಿಂದ ದೇವತೆಗಳೂ ಅದನ್ನರಿಯರು. ಎಲ್ಲಿಂದ ಜಗತ್ತಾಯಿತೆಂಬುದನ್ನು ಯಾರು ಹೇಳಬಲ್ಲರು?

Leave a Reply