ಹೊಸ ಮನುಷ್ಯ… । ಓಶೋ ವ್ಯಾಖ್ಯಾನ

ನೀವು ಹುಟ್ಟಿದ್ದು ಧ್ಯಾನಿಯಾಗಿಯೇ, ಮಾಸ್ಟರ್ ಆಗಿಯೇ, ನಿಮ್ಮ ಮೈಂಡ್ ನ ನಿಮ್ಮ ಕೆಲಸಗಾರನನ್ನಾಗಿಸಿಕೊಂಡೇ. ಆದರೆ ನಿಮ್ಮ ಈ ಸ್ಥಿತಿ ಈ ಮೂರ್ಖ ಸಮಾಜಕ್ಕೆ ಅಷ್ಟು ಅನುಕೂಲಕರವಲ್ಲ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಧ್ಯಾನಿಯಾಗುವುದೆಂದರೆ ಬುದ್ಧಿ-ಮನಸ್ಸು (mind) ಗಳ ಗುಲಾಮಗಿರಿಯನ್ನು ತೊರೆದು ಮೈಂಡ್ ನ ಮಾಸ್ಟರ್ ಆಗುವುದರೆಡೆಗೆ ಮಾಡುವ ಪ್ರಯತ್ನ.
ಸ್ವಾಭಾವಿಕವಾಗಿ ಹುಟ್ಟಿನಿಂದ ನೀವು ಮೈಂಡ್ ನ ಮಾಸ್ಟರ್, ಸಮಾಜ, ಸಂಸ್ಕೃತಿ ಎಲ್ಲವನ್ನೂ ಮೇಲೆ ಕೆಳಗೆ ಮಾಡದೇ ಹೋಗಿದ್ದರೆ ನೀವು ಹಾಗೇ ಉಳಿದುಕೊಳ್ಳುತ್ತಿದ್ದಿರಿ.

ನೀವು ಹುಟ್ಟಿದ್ದು ಧ್ಯಾನಿಯಾಗಿಯೇ, ಮಾಸ್ಟರ್ ಆಗಿಯೇ, ನಿಮ್ಮ ಮೈಂಡ್ ನ ನಿಮ್ಮ ಕೆಲಸಗಾರನನ್ನಾಗಿಸಿಕೊಂಡೇ. ಆದರೆ ನಿಮ್ಮ ಈ ಸ್ಥಿತಿ ಈ ಮೂರ್ಖ ಸಮಾಜಕ್ಕೆ ಅಷ್ಟು ಅನುಕೂಲಕರವಲ್ಲ. ತನ್ನ ವ್ಯವಹಾರಕ್ಕೆ ನಿಮ್ಮನ್ನು ಒಳಪಡಿಸಿಕೊಳ್ಳಲು ಸಮಾಜಕ್ಕಿರುವ ದಾರಿ ಒಂದೇ, ನಿಮ್ಮನ್ನ ನಿಮ್ಮ ಮೈಂಡ್ ನ ಗುಲಾಮರಾಗಿಸುವುದು ಮತ್ತು ನಿಮ್ಮ ಮೈಂಡ್ ನ್ನು ತನ್ನ ನೀತಿ ನಿಯಮಗಳಲ್ಲಿ, ನೈತಿಕತೆಯಲ್ಲಿ ಕಟ್ಟಿಹಾಕುವುದು. ಆಗ ನೀವು ನಿಮ್ಮ ಸಹಜತೆಗೆ ಹೊರಗಾಗುತ್ತೀರಿ ಮತ್ತು ನಿಮ್ಮೊಳಗಿನ ಎಲ್ಲವೂ ಗೊಂದಲದಿಂದ ತುಂಬಿಕೊಳ್ಳುತ್ತದೆ.

ಈ ಹೊಸ ಮನುಷ್ಯ, ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆಯೋ ಅವನು, ತನ್ನ ಸೆಲ್ಫ್ ನ ಗುರುತಿಸಿಕೊಂಡವನು, ಆ ಸೆಲ್ಫ್ ನ ಜವಾಬ್ದಾರಿಯನ್ನ ಹೊತ್ತುಕೊಂಡವನು. ಆಶ್ಚರ್ಯಕರ ಸಂಗತಿಯೆಂದರೆ ನೀವು ಮಾಸ್ಟರ್ ಆಗಿರುವಾಗಲೇ ನಿಮ್ಮ ಮೈಂಡ್ ತಾನು ಮಾಸ್ಟರ್ ಆಗಿದ್ದ ಸಮಯಕ್ಕಿಂತ ಹೆಚ್ಚು ಎಫೀಶಿಯೆಂಟ್ ಆಗಿ ಕೆಲಸ ಮಾಡುತ್ತದೆ, ಏಕೆಂದರೆ ಮೈಂಡ್ ನ ಸಹಜ ಸ್ವಭಾವ ಕೆಲಸಗಾರನದ್ದೇ ಹೊರತು ಮಾಸ್ಟರ್ ದ್ದಲ್ಲ. ಕೆಲಸಗಾರ ಆಗಿರುವಾಗಲೇ ಮೈಂಡ್ ಹೆಚ್ಚು ಪರಿಪೂರ್ಣ. ಆನ್ಯಾಯವಾಗಿ ಒಬ್ಬ ಎಫಿಶಿಯೆಂಟ್ ಕೆಲಸಗಾರನಿಗೆ ನೀವು ಮಾಸ್ಟರ್ ನ ಪಟ್ಟ ಕಟ್ಟಿ ಎಲ್ಲವನ್ನೂ ಗೊಂದಲಕ್ಕೆ ದೂಡಿರುವಿರಿ. ಮೈಂಡ್ ಗೆ ಬದುಕಿನ ಜವಾಬ್ದಾರಿ ಹೊರುವುದು ಗೊತ್ತಿಲ್ಲ, ಮಾಸ್ಟರ್ ನ ಕೆಲಸ ಗೊತ್ತಿಲ್ಲ ಈ ಕೀಳರಿಮೆಯಲ್ಲಿಯೇ ಅದು ನಿಮ್ಮೊಳಗೆ ಅಡಗಿಕೊಂಡಿರುವ ಮಾಸ್ಟರ್ ಗೆ ಬದುಕಿನ ಬಗ್ಗೆ ತೀರ್ಮಾನಗಳನ್ನು ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲ. ಮಾನವ ಜನಾಂಗವನ್ನು ಕಾಡುತ್ತಿರುವ ಮಾನಸಿಕ ಕಾಯಿಲೆಗಳಿಗೆ ಇದೂ ಒಂದು ಕಾರಣ.

ನಾನು ಹೇಳುತ್ತಿರುವ ಹೊಸ ಮನುಷ್ಯ ತನ್ನ ಮೈಂಡ್ ನ ಮಾಸ್ಟರ್, ಪರಿಪೂರ್ಣ ಆರೋಗ್ಯವಂತ, ಅವನ ಆರೋಗ್ಯಕ್ಕೆ ಕಾರಣ ಅವನೊಳಗಿನ ಎಲ್ಲವೂ ತಮ್ಮ ತಮ್ಮ ಜಾಗಗಳಲ್ಲಿ ಅತ್ಯಂತ ಹೆಚ್ಚು ದಕ್ಷತೆಯಿಂದ ಕೆಲಸ ಮಾಡುತ್ತಿವೆ. ಎಲ್ಲ ತಂತಿಗಳೂ ಸರಿಯಾಗಿ ಕೆಲಸ ಮಾಡುತ್ತಿರುವಾಗಲಷ್ಟೇ ಸಂಗೀತದ ಹುಟ್ಟು, ಇಲ್ಲವಾದರೆ ಎಲ್ಲವೂ ಗದ್ದಲದ ಗೂಡು.


(ಆಕರ: Osho / The Golden Future)

Leave a Reply