ಉಪದೇಶಕ ಅಯೋಗ್ಯನಾಗಿದ್ದಾಗ ನಾವೇನು ಮಾಡಬೇಕು? : ಬೆಳಗಿನ ಹೊಳಹು

ನೀವು ಕಡೆಗಣಿಸಬೇಕಿರುವುದು ಹಾಗೆ ಸ್ವತಃ ಪಾಲಿಸದೆ ಉಪದೇಶ ನೀಡುತ್ತಿರುವ ವ್ಯಕ್ತಿಯನ್ನೇ ಹೊರತು ಆತ ನೀಡುತ್ತಿರುವ ಉಪದೇಶವನ್ನಲ್ಲ! ~ ಸಾ. ಹಿರಣ್ಮಯಿ


ಪದೇಶ ಮಾಡುವವರು ಸ್ವತಃ ತಾವೇ ಅದನ್ನ ಪಾಲಿಸದೆ ಇದ್ದರೆ, ಅಂತಹ ಉಪದೇಶ ಮಾಡುವವರನ್ನು ಏನೆನ್ನಬೇಕು ? ಅಂಥವರ ಮಾತಿಗೆ ಮಹತ್ವ ಇರುತ್ತದೆಯೇ? – ಇದು ಮತ್ತೆ ಮತ್ತೆ ಎದುರಾಗುವ ಪ್ರಶ್ನೆ. ಇದಕ್ಕೆ ಯಾರಾದರೂ ನೀಡಬಹುದಾದ ಅತ್ಯಂತ ಸರಳ ಉತ್ತರ, ‘ಉಪೇಕ್ಷೆ ಅಥವಾ ಇಗ್ನೋರ್ ಮಾಡಿ’ ಅನ್ನುವುದು. ಯಾರಾದರೂ ತಮ್ಮ ಉಪದೇಶಗಳನ್ನು ಸ್ವತಃ ತಾವೇ ನಡೆಸುತ್ತಿಲ್ಲ ಎಂದು ನಿಮಗನ್ನಿಸಿದರೆ, ನೀವು ಮಾಡಬೇಕಾದ ಮೊದಲ ಕೆಲಸ ಅವರನ್ನು ಕಡೆಗಣಿಸುವುದು. ಗಂಭೀರವಾಗಿ ತೆಗೆದುಕೊಳ್ಳದೆ ಇರುವುದು. ಕೊನೆಯ ವಾಕ್ಯವನ್ನು ಮತ್ತೊಮ್ಮೆ ಓದಿಕೊಳ್ಳಿ. ನೀವು ಕಡೆಗಣಿಸಬೇಕಿರುವುದು ಹಾಗೆ ಸ್ವತಃ ಪಾಲಿಸದರೆ ಉಪದೇಶ ನೀಡುತ್ತಿರುವ ವ್ಯಕ್ತಿಯನ್ನೇ ಹೊರತು ಆತ ನೀಡುತ್ತಿರುವ ಉಪದೇಶವನ್ನಲ್ಲ!

ಬಹುತೇಕರು ಮಾಡುವುದೇ ಇದನ್ನು. ತಾವು ಏನು ಮಾಡುತ್ತಿದ್ದೇವೆ ಅನ್ನುವುದನ್ನು ಮರೆತವರಂತೆ ಇತರರಿಗೆ ಉಪದೇಶಗಳ ಸುರಿಮಳೆಯನ್ನೇ ಸುರಿಸುತ್ತಾರೆ. ಅತ್ಯಂತ ಚಿಕ್ಕಪುಟ್ಟ ಸಂಗತಿಗಳಿಂದ ಹಿಡಿದು ದೊಡ್ಡ ದೊಡ್ಡ ವಿಷಯಗಳ ವರೆಗೂ ಹೀಗಾಗುತ್ತದೆ. ಹಾಗೆ ಉಪದೇಶ ನೀಡುತ್ತಿರುವ ವ್ಯಕ್ತಿ ಸಜ್ಜನನೂ ಸಾಧಕನೂ ಆಗಿದ್ದರೆ, ಉಪದೇಶವನ್ನೂ ಸ್ವೀಕರಿಸಿ, ಉಪದೇಶಕನನ್ನು ಗೌರವಿಸಬೇಕು. ಆದರೆ ಆತ ಧೂರ್ತನಾಗಿದ್ದಾನೆ ಎಂದುಕೊಳ್ಳಿ. ವಂಚಕನಾಗಿದ್ದಾನೆ ಎಂದುಕೊಳ್ಳಿ. ಅಂಥ ಸಂದರ್ಭದಲ್ಲಿ ಏನು ಮಾಡಬೇಕು? ಮೊದಲೇ ಹೇಳಿದಂತೆ, ಅವರನ್ನು ಉಪೇಕ್ಷಿಸಬೇಕು. ಅವರಿಗೆ ಗೌರವ ನೀಡುವ ಅಗತ್ಯವಿಲ್ಲ. ತೋರಿಕೆಯ ಮೂಲಕ ಅವರು ಸಾಮಾಜಿಕ ಅಪಚಾರವನ್ನೂ ಮಾಡುತ್ತಿದ್ದಾರೆ; ಆದ್ದರಿಂದ ಅವರ ಬಗ್ಗೆ  ಅನುಕಂಪ ತೋರುವ ಅಗತ್ಯವೂ ಇಲ್ಲ.  ಆದರೆ ಈ ಭರದಲ್ಲಿ ನಾವು ಯಾವುದೇ ಸದ್ವಿಚಾರವನ್ನು ಅವಮಾನಿಸೋದು ಸರಿಯಲ್ಲ.  ಆ ವ್ಯಕ್ತಿ ನಿಮಗೆ “ಸುಳ್ಳು ಹೇಳಬೇಡ” ಎಂದು ಉಪದೇಶ ನೀಡಿದ್ದರೆ, “ಅದನ್ನು ಹೇಳುವ ಯೋಗ್ಯತೆ ಅವನಿಗಿಲ್ಲ; ಆದ್ದರಿಂದ ನಾನು ಸುಳ್ಳು ಹೇಳುವುದನ್ನು ಬಿಡುವುದಿಲ್ಲ” ಎನ್ನಲು ಬರುತ್ತದೆಯೇ? ಖಂಡಿತಾ ಇಲ್ಲ. “ಆನೋ ಭದ್ರಾಃ ಕ್ರತವೋ ಯನ್ತು ವಿಶ್ವತಃ” ಅನ್ನುವ ಮಾತಿನಂತೆ ಒಳ್ಳೆಯ ವಿಚಾರವನ್ನು ಕೆಡುಕರೇ ಹೇಳಿದ್ದರೂ ಅದನ್ನು ಸ್ವೀಕರಿಸಬೇಕು. ಆದರೆ ಅದರ ಕ್ರೆಡಿಟ್ಟನ್ನು ವಿಚಾರಕ್ಕೆ ಕೊಡಬೇಕೇ ಹೊರತು. ಅದನ್ನು ಮುಂದಿಟ್ಟ ವ್ಯಕ್ತಿಗಲ್ಲ!

ಇನ್ನೊಂದು ಉದಾಹರಣೆ, ಮಹೋಪನಿಷತ್ತಿನ “ವಸುಧೈವ ಕುಟುಂಬಕಮ್” ಹೇಳಿಕೆ. ಇದು ‘ಪಂಚತಂತ್ರ’ದಲ್ಲೂ ಇದೆ. ಪಂಚತಂತ್ರದಲ್ಲಿ ವಂಚಕ ನರಿ ಈ ಮಾತು ಹೇಳುವುದರಿಂದ ಆ ಶ್ಲೋಕ ತೂಕ ಕಳೆದುಕೊಳ್ಳುವುದೆ? ಆ ಮಾತು ಯಾರೇ ಹೇಳಿದ್ದರೂ ಉದಾರ ಚರಿತರು (ವಿಶಾಲ ಮನಸ್ಸಿನ ಜನರು) ಜಗತ್ತನ್ನು ಕುಟುಂಬ ಅಂದುಕೊಳ್ಳುವುದು ನಿಜವಲ್ಲವೆ?

ಆದ್ದರಿಂದ ವ್ಯಕ್ತಿ ತಪ್ಪಾಗಿದ್ದರೂ ಅವರ ಹೇಳಿಕೆ ಸರಿಯಾದುದಾಗಿದ್ದರೆ, ಉಪದೇಶ ಉತ್ತಮವಾಗಿದ್ದರೆ,  ಅದನ್ನು ಗೌರವಿಸಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಆದರೆ, ಕೇವಲ ಮಾತುಗಾರಿಕೆಯ ಕಾರಣಕ್ಕಾಗಿ ಆ ವ್ಯಕ್ತಿಗೆ ಗೌರವ ಕೊಟ್ಟು ಅವರ ದುರ್ಗುಣಗಳನ್ನು ಕಡೆಗಣಿಸುವ ತಪ್ಪು ಮಾಡಬಾರದು! ನೆನಪಿರಲಿ, ಹೆಣ್ಣನ್ನು ಹೊತ್ತೊಯ್ದ ಅಹಂಕಾರಿ ರಾವಣನ ಶಿವತಾಂಡವ ಸ್ತೋತ್ರವನ್ನು ಗೌರವಿಸಿದರೂ, ದಸರೆಯಲ್ಲಿ ಅವನ ಪ್ರತಿಕೃತಿಗೆ  ಬಾಣ ಬಿಟ್ಟು ಅವನ ದುಷ್ಕೃತ್ಯವನ್ನು ಖಂಡಿಸುವ ಪರಂಪರೆ ನಮ್ಮದು. ಯಾವುದನ್ನು ಗೌರವಿಸಬೇಕೋ ಅದಕ್ಕೆ ಗೌರವ ಸಲ್ಲಲಿ, ಯಾವುದನ್ನು ತಿರಸ್ಕರಿಸಬೇಕೋ ಅದಕ್ಕೆ ತಿರಸ್ಕಾರವೂ ಸಲ್ಲಲಿ. ಅದನ್ನು ನಿರ್ಧರಿಸುವ ಎಚ್ಚರ ನಮ್ಮಲ್ಲಿರುವುದು ಮುಖ್ಯ.

Leave a Reply