ಬದುಕೊಂದು ಹುಡುಕಾಟದ ಯಾನ : ಓಶೋ ವ್ಯಾಖ್ಯಾನ

ಇಡೀ ಬದುಕು ಒಂದು ಪ್ರಯಾಣ, ಒಂದು ಹುಡುಕಾಟ, ಒಂದು ಪವಿತ್ರ ಯಾತ್ರೆ. ಲಕ್ಷಗಟ್ಟಲೇ ವರ್ಷಗಳಿಂದ ನೀವು ಪ್ರಯಾಣದಲ್ಲಿಯೇ ಮುಳುಗಿಹೋಗಿದ್ದೀರಿ. ಥಟ್ಟನೇ ನಿಮಗೇನಾದರೂ ದೇವರು ಎದುರಾಗಿಬಿಟ್ಟರೆ, ಏನು ಮಾಡುತ್ತೀರಿ ? ಏನು ಮಾತನಾಡುತ್ತೀರಿ ? ನಿಮ್ಮ ಹುಡುಕಾಟ ಕೊನೆಯಾಯಿತಲ್ಲ ಮುಂದೆ ಏನು? ಮುಂದೆ ಬದುಕುವ ಕಾರಣವಾದರೂ ಏನು? ~ ಓಶೋ | ಕನ್ನಡಕ್ಕೆ : ಚಿದಂಬರ ನರೇಂದ್ರ

ರವೀಂದ್ರನಾಥ ಠಾಕೂರರ ಒಂದು ಸುಂದರ ಕಥೆಯಿದೆ. ಈ ಕಥೆ ಒಂದು ಪದ್ಯ ಕೂಡ. ಆ ಹಾಡಿನೊಳಗೆ ಹೇಳಲ್ಪಟ್ಟಿದೆ ಈ ಕಥೆ.

“ ಶತಮಾನಗಳಿಂದ ನಾನು ದೇವರನ್ನು ಹುಡುಕುತ್ತಿದ್ದೆನೆ. ಒಮ್ಮೆ ದೇವರು ಚಂದ್ರನ ಹತ್ತಿರ ಕಾಣಿಸಿಕೊಂಡ, ನಾನು ಪ್ರಯತ್ನಪಟ್ಟು ಚಂದ್ರನ ಹತ್ತಿರ ಹೋಗುವುದರೊಳಗಾಗಿ ಆತ ಇನ್ನೊಂದು ನಕ್ಷತ್ರಕ್ಕೆ ಹೋಗಿಬಿಟ್ಟಿದ್ದ. ಮತ್ತೆ ನಾನು ಅವನನ್ನು ಹುಡುಕಿಕೊಂಡು ಆ ನಕ್ಷತ್ರಕ್ಕೆ ಹೋದೆ, ಆದರೆ ದೇವರು ಅಲ್ಲಿಂದಲೂ ಜಾಗ ಖಾಲಿ ಮಾಡಿಬಿಟ್ಟಿದ್ದ. ನನ್ನ ಹುಡುಕಾಟ ಹೀಗೆ ಮುಂದುವರೆಯಿತು. ಆದರೆ ಒಂದು ಖುಶಿ ಮಾತ್ರ ನನ್ನೊಳಗಿತ್ತು, ದೇವರು ಇರುವುದು ಮಾತ್ರ ನನಗೆ ಖಾತ್ರಿಯಾಗಿತ್ತು. ಒಂದಲ್ಲ ಒಂದು ದಿನ ದೇವರನ್ನ ಭೇಟಿ ಮಾಡುತ್ತೇನೆ ಎನ್ನುವ ಭರವಸೆಯೂ ನನ್ನಲ್ಲಿ ಬಲವಾಗಿ ಬೇರುಬಿಟ್ಟಿತ್ತು. ಎಷ್ಟು ದಿನ ತಾನೆ ದೇವರು ನನ್ನ ಜೊತೆ ಕಣ್ಣುಮುಚ್ಚಾಲೆ ಆಡುತ್ತಾನೆ. ಒಂದಲ್ಲ ಒಂದು ದಿನ ಆಟ ಮುಗಿಯಲೇಬೇಕಲ್ಲ, ದೇವರು ನನಗೆ ಸಿಗಲೇಬೇಕಲ್ಲ.

ನನ್ನ ಹುಡುಕಾಟ ಮುಂದುವರೆದಾಗ ಒಮ್ಮೆ ರಸ್ತೆಯ ಬದಿ ಒಂದು ಸುಂದರ ಮನೆಯನ್ನ ನೋಡಿದೆ. ಆ ಮನೆಯ ಗೋಡೆಯ ಮೇಲೆ “ ಇದು ದೇವರ ಮನೆ” ಎಂದು ಬರೆಯಲಾಗಿತ್ತು. ನಾನು ಖುಶಿಯಿಂದ ಕುಣಿದು ಕುಪ್ಪಳಿಸಿದೆ. ಕೊನೆಗೂ ನನ್ನ ಹುಡುಕಾಟ ಮುಗಿಯುವ ದಿನ ಬಂತು ಎಂದು ಸಮಾಧಾನವಾಯಿತು. ಲಗುಬಗೆಯಿಂದ ನಾನು ಮನೆಯ ಗೇಟ್ ತೆರೆದು ಓಡುತ್ತ ಮೆಟ್ಟಲುಗಳನ್ನ ಹತ್ತಿ , ಇನ್ನೇನು ಮನೆಯ ಬಾಗಿಲು ತಟ್ಟಬೇಕೆನ್ನುವಷ್ಟರಲ್ಲಿ, ಒಂದು ವಿಚಾರ ಥಟ್ಟನೇ ನನ್ನನ್ನು ಕಾಡತೊಡಗಿತು ; “ ಅಕಸ್ಮಾತ್ ದೇವರು ಬಂದು ಬಾಗಿಲು ತೆರೆದರೆ, ನಾನು ಏನು ಹೇಳುವುದು ಅವನಿಗೆ? ಅವನ ಜೊತೆ ಏನು ಮಾಡುವುದು? ಮುಂದೆ ಏನು?”

ನಿಮ್ಮ ಇಡೀ ಬದುಕು ಒಂದು ಪ್ರಯಾಣ, ಒಂದು ಹುಡುಕಾಟ, ಒಂದು ಪವಿತ್ರ ಯಾತ್ರೆ. ಲಕ್ಷಗಟ್ಟಲೇ ವರ್ಷಗಳಿಂದ ನೀವು ಪ್ರಯಾಣದಲ್ಲಿಯೇ ಮುಳುಗಿಹೋಗಿದ್ದೀರಿ. ಥಟ್ಟನೇ ನಿಮಗೇನಾದರೂ ದೇವರು ಎದುರಾಗಿಬಿಟ್ಟರೆ, ಏನು ಮಾಡುತ್ತೀರಿ ? ಏನು ಮಾತನಾಡುತ್ತೀರಿ ? ನಿಮ್ಮ ಹುಡುಕಾಟ ಕೊನೆಯಾಯಿತಲ್ಲ ಮುಂದೆ ಏನು? ಮುಂದೆ ಬದುಕುವ ಕಾರಣವಾದರೂ ಏನು?

ನೀವು ಯಾವತ್ತಾದರೂ ಈ ಕುರಿತು ಯೋಚಿಸಿದ್ದೀರಾ? ಅಕಸ್ಮಾತ ದೇವರು ನಿಮ್ಮನ್ನ ಭೇಟಿಯಾದರೆ ಮುಂದೆ ಏನು ಎನ್ನುವುದರ ಬಗ್ಗೆ? ನೀವು ಅನವಶ್ಯಕವಾಗಿ ನಿಮ್ಮನ್ನ ಸುಸ್ತಾಗಿಸಿಕೊಂಡಿರಿ. ನಿಮ್ಮ ಹುಡುಕಾಟ ಕೊನೆಯಾಗುತ್ತಿದೆ. ಹುಡುಕಾಟ ಕೊನೆಯಾಗುವುದೆಂದರೆ ದೇವರಿಗೆ ಹತ್ತಿರವಾಗುವುದು, ಸಾವಿಗೆ ಹತ್ತಿರವಾಗುವುದು. ಸಾವು ಎಲ್ಲ ಹುಡುಕಾಟಗಳ ಅಂತಿಮ ತಾಣ.

Leave a Reply