ಆತಂಕಕ್ಕೆ ಪ್ರೇಮವೇ ಮದ್ದು : ಓಶೋ ವ್ಯಾಖ್ಯಾನ

ಪ್ರತಿಯೊಬ್ಬರೂ ಪ್ರೀತಿಸಬಯಸುತ್ತಾರೆ, ಪ್ರೀತಿಸಲ್ಪಡಲು ಬಯಸುತ್ತಾರೆ, ಏಕೆಂದರೆ ಪ್ರೇಮದಲ್ಲಿ ಮಾತ್ರ ಅಸ್ತಿತ್ವದ ಶ್ರುತಿಯೊಂದಿಗೆ ಒಂದಾಗುವುದು ಸಾಧ್ಯ. ಹೀಗೆ ನೀವು ಅಸ್ತಿತ್ವದೊಡನೆ ಶ್ರುತಿ ಬೆರೆಸಿದಾಗ, ಒಂದಾದಾಗ, ಯಾವ ಆತಂಕವೂ ನಿಮ್ಮನ್ನು ಸತಾಯಿಸುವುದಿಲ್ಲ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಅಚಿಂತ ಎಂದರೆ ಆತಂಕವಿಲ್ಲದ ಸ್ಥಿತಿ. ಪ್ರೇಮ ಮಾತ್ರ ಇಂಥದೊಂದು ಸ್ಥಿತಿಯನ್ನ ಸಾಧ್ಯಮಾಡಬಲ್ಲದು, ಕೇವಲ ಪ್ರೇಮ ಮಾತ್ರ. ಬೇರೆಲ್ಲ ಸಂಗತಿಗಳು ಒಂದಿಲ್ಲೊಂದು ರೀತಿಯ ಹೊಸ ಹೊಸ ಆತಂಕಗಳನ್ನು ಸೃಷ್ಟಿಸುತ್ತಲೇ ಇರುತ್ತವೆ.

ನೀವು ಹೊಸ ಹೊಸ ಆತಂಗಳನ್ನು ಆವಾಹಿಸಿಕೊಳ್ಳುತ್ತಲೇ ಇರಬಹುದು. ಒಬ್ಬರು ಹಣಕ್ಕಾಗಿ ಹುಡುಕಾಟ ನಡೆಸಿರಬಹುದು, ಒಬ್ಬರು ಅಧಿಕಾರಕ್ಕಾಗಿ ತುಡಿಯುತ್ತಿರಬಹುದು, ಇನ್ನೊಬ್ಬರು ದೇವರ ಹುಡುಕಾಟದಲ್ಲಿ ತಲ್ಲೀನರಾಗಿರಬಹುದು. ಆದರೆ ಈ ಎಲ್ಲ ಸಂಗತಿಗಳು ಆತಂಕವನ್ನು ತಂದಿಡುವಂಥವೇ. ಪ್ರತಿ ಬಯಕೆಯೂ ತನ್ನೊಂದಿಗೆ ನೆರಳಿನಂತೆ ಆತಂಕವನ್ನು ಕರೆತರುತ್ತದೆ. ಯಾವ ಬಯಕೆಯೂ ಆತಂಕದ ಸಹಾಯವಿಲ್ಲದೇ ಅಸ್ತಿತ್ವದಲ್ಲಿರುವುದು ಸಾಧ್ಯವಿಲ್ಲ; ಆತಂಕ ನಿಮ್ಮೊಳಗೆ ಒಡಕು ಉಂಟುಮಾಡುವುದರಿಂದ, ಆತಂಕ ಎಂದರೆ ನರಕ, ಆತಂಕ ವಿನಾಶಕಾರಿ, ಆತಂಕ ಕಾರಣವಾಗಿ ನೀವು ಹರಿದು ಹಂಚಿಹೋಗುತ್ತೀರಿ. ಆಗ ನೀವು ಪೂರ್ಣರಲ್ಲ, ಒಂದು ಅಲ್ಲ, ನಿಮ್ಮ ಸಮಗ್ರತೆಯನ್ನ ನೀವು ಕಳೆದುಕೊಂಡಿರುವಿರಿ. ಪ್ರೇಮ ಮಾತ್ರ ನಿಮ್ಮನ್ನು ಒಂದುಗೂಡಿಸಬಲ್ಲದು, ಸಮಗ್ರರನ್ನಾಗಿ ಮಾಡಬಲ್ಲದು.

ಜೀಸಸ್ “ God is Love” ಎಂದು ಹೇಳುತ್ತಾನೆ, ಆದರೆ ನನ್ನ ಪ್ರಕಾರ “ Love is God”. ದೇವರೆಂದರೆ ಪ್ರೇಮ ಎಂದು ಹೇಳಿದರೆ ಸಾಕಾಗಲಿಕ್ಕಿಲ್ಲ, ದೇವರು ಇನ್ನೂ ಏನೇನೋ ಆಗಿರಬಹುದು. ಪ್ರೇಮ ಅವನ ಒಂದು ಗುಣಲಕ್ಷಣ ಮಾತ್ರ ಆಗಿರಬಹುದಾದ ಸಾಧ್ಯತೆಯಿದೆ. ಆದರೆ ನಾನು ‘ಪ್ರೇಮವೇ ದೇವರು’ ಎಂದು ಹೇಳುತ್ತೇನೆ. ಪ್ರೇಮವೇ ಎಲ್ಲವೂ, ಬೇರೆ ಯಾವುದರ ಅವಶ್ಯಕತೆಯೂ ಇಲ್ಲ.

ಆದ್ದರಿಂದಲೇ ಜಗತ್ತು ಪ್ರೇಮಕ್ಕಾಗಿ ಹಾತೊರೆಯುತ್ತಿರುವುದು. ಪ್ರತಿಯೊಬ್ಬರೂ ಪ್ರೀತಿಸಬಯಸುತ್ತಾರೆ, ಪ್ರೀತಿಸಲ್ಪಡಲು ಬಯಸುತ್ತಾರೆ, ಏಕೆಂದರೆ ಪ್ರೇಮದಲ್ಲಿ ಮಾತ್ರ ಅಸ್ತಿತ್ವದ ಶ್ರುತಿಯೊಂದಿಗೆ ಒಂದಾಗುವುದು ಸಾಧ್ಯ. ಹೀಗೆ ನೀವು ಅಸ್ತಿತ್ವದೊಡನೆ ಶ್ರುತಿ ಬೆರೆಸಿದಾಗ, ಒಂದಾದಾಗ, ಯಾವ ಆತಂಕವೂ ನಿಮ್ಮನ್ನು ಸತಾಯಿಸುವುದಿಲ್ಲ. ನಿಮ್ಮನ್ನ ಆತಂಕ ಕಾಡುತ್ತಿದೆಯೆಂದರೆ, ನೀವು ಸಮಸ್ತದೊಂದಿಗೆ ಒಂದಾಗಿ ನಡೆಯುತ್ತಿಲ್ಲ, ಒಬ್ಬರೇ ಪ್ರಯಾಣ ಮಾಡುತ್ತಿದ್ದೀರಿ. ನೀವು ಸಮಸ್ತದಿಂದ ಬೇರೆಯಾಗಿ ನಡೆಯುತ್ತಿದ್ದೀರಿ, ಬಹುಶಃ ವಿರುದ್ಧ ದಿಕ್ಕಿನಲ್ಲಿ. ಆತಂಕ ಇದೆಯೆನ್ನುವುದು ನೀವು ಸಮಸ್ತದ ಭಾಗವಾಗಿಲ್ಲ ಎನ್ನುವುದರ ಸೂಚನೆ.

ಸಮಸ್ತದಿಂದ ಪ್ರತ್ಯೇಕವಾಗಿರುವಾಗ ನೀವು ಬಿಕ್ಕಟ್ಟಿನಲ್ಲಿರುವಿರಿ, ಏಕೆಂದರೆ ಸಮಸ್ತ ನಿಮ್ಮ ಜೊತೆ ಹೆಜ್ಜೆ ಹಾಕುವುದು ಸಾಧ್ಯವಿಲ್ಲ, ಕೇವಲ ನೀವು ಮಾತ್ರ ಸಮಸ್ತದೊಂದಿಗೆ ಹೆಜ್ಜೆ ಹಾಕಬಹುದು. ಈ ಪ್ರಯಾಣದಲ್ಲಿ ಪ್ರೇಮ ನಿಮಗೆ , ನಿರಾಳದ ಬಗ್ಗೆ, ನಂಬಿಕೆಯ ಬಗ್ಗೆ, ಸ್ವೀಕರಿಸುವುದರ ಬಗ್ಗೆ, ಒಪ್ಪಿಕೊಳ್ಳುವುದರ ಬಗ್ಗೆ, ಅಪ್ಪಿಕೊಳ್ಳುವುದರ ಬಗ್ಗೆ, ಅಹಂ ನ ಕಳಚುವ ಬಗ್ಗೆ ಮೊದಲ ಪಾಠಗಳನ್ನು ಕಲಿಸುತ್ತದೆ. ಪ್ರೇಮದಲ್ಲಿರುವಾಗ ನಿಮ್ಮನ್ನು ನೀವು ಮರೆತುಬಿಡುತ್ತೀರಿ, ಈ ಮರೆತುಬಿಡುವಿಕೆಯೇ ಎಲ್ಲ ಧರ್ಮಗಳ ತಳಹದಿ.

ಒಮ್ಮೆ ನಿಮ್ಮನ್ನು ಪ್ರೇಮ ಅಪ್ಪಿಕೊಂಡಿತೆಂದರೆ, ನೀವು ಯಾರು ಎನ್ನುವುದರ ಪರಿಚಯ ನಿಮಗಾಗುತ್ತದೆ. ಒಮ್ಮೆ ನೀವು ಪ್ರೇಮದಲ್ಲಿರುವಿರಿ ಎಂದರೆ ಅಪಾರವಾದ ಸಮಾಧಾನ ನಿಮ್ಮಲ್ಲಿ ನೆಲೆಯಾಗುವುದು, ಮತ್ತು ಈ ಸಮಾಧಾನದೊಳಗಿಂದಲೇ ಅರಳುವುದು ಖುಶಿ. ಆಗ ನಿಮ್ಮ ಪ್ರೇಮಿ ನಿಮ್ಮ ಕಿಟಕಿ ಮಾತ್ರ, ಪ್ರೇಮ, ಪ್ರೇಮಿಯೊಂದಿಗೆ ಮುಗಿದುಹೋಗುವಂಥದ್ದಲ್ಲ. ನಿಮ್ಮ ಪ್ರೇಮಿ, ನಿಮ್ಮ ಪ್ರೇಮದ ಶುರುವಾತು ಮಾತ್ರ, ಆಮೇಲೆ ಪ್ರೇಮ ಹರಡಿಕೊಳ್ಳತ್ತಲೇ ಹೋಗುತ್ತದೆ. ನೀವು ನಿಜವಾದ ಪ್ರೇಮದಲ್ಲಿರುವಾಗ ಕೇವಲ ನಿಮ್ಮ ಪ್ರೇಮಿಯನ್ನ ಮಾತ್ರ ಪ್ರೀತಿಸುವುದಿಲ್ಲ, ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಸಲು ಶುರು ಮಾಡುತ್ತೀರಿ. ನಿಮಗೆ ಕೇವಲ ಒಬ್ಬರನ್ನು ಪ್ರೀತಿಸುವುದು ಸಾಧ್ಯವಾಗುವುದೇ ಇಲ್ಲ. ನೀವು ಚಂದ್ರನನ್ನು ಪ್ರೀತಿಸುತ್ತೀರಿ, ಗಿಡ ಮರಗಳನ್ನು ಪ್ರೀತಿಸುತ್ತೀರಿ, ನದಿ ಸಾಗರಗಳನ್ನು ಪ್ರೀತಿಸುತ್ತೀರಿ. ಥಟ್ಟನೇ ಪ್ರೇಮ ನಿಮ್ಮನ್ನು ಇಡಿಯಾಗಿ ತುಂಬಿಕೊಳ್ಳುತ್ತದೆ, ಉಕ್ಕಿ ಹರಿಯಲು ಶುರು ಮಾಡುತ್ತದೆ. ಯಾವಾಗ ಪ್ರೇಮ ಉಕ್ಕಿ ಹರಿಯಲು ಶುರು ಮಾಡುತ್ತದೆಯೋ ಆಗ ಅದು ಪ್ರಾರ್ಥನೆ ಎನಿಸಿಕೊಳ್ಳುತ್ತದೆ.

ಪ್ರೇಮದಲ್ಲಿ ನೀವು ಕಳೆದುಹೋಗುತ್ತೀರಿ, ಪ್ರಾರ್ಥನೆಯಲ್ಲಿ ಆ ಇನ್ನೊಂದೂ ಕಳೆದುಹೋಗುತ್ತದೆ. ಆಮೇಲೆ ಒಂದು ಅಪರೂಪದ ಕ್ಷಣದಲ್ಲಿ ಪ್ರೇಮಿಯೂ ಇರುವುದಿಲ್ಲ, ಪ್ರೇಮಿಸಲ್ಪಡುವುದೂ ಇರುವುದಿಲ್ಲ, ಕೇವಲ ಪ್ರೇಮದ ಸಾಮರ್ಥ್ಯ ಎಲ್ಲೆಲ್ಲೂ ತುಂಬಿಕೊಳ್ಳುತ್ತದೆ. ಪ್ರೇಮದ ಈ ಆತಂಕರಹಿತ ಸಾಮರ್ಥ್ಯವೇ ನಿಜವಾದ ಆನಂದ, ಇದೇ ಪ್ರೇಮದ ಗುರಿ.


Source – Osho Book “The Buddha Disease”

***************************

Leave a Reply