ಜ್ಞಾನೋದಯ ಅತೀ ಸಾಮಾನ್ಯ : ಓಶೋ ವ್ಯಾಖ್ಯಾನ

ಹೌದು ಯಾವುದೂ ಅಸಾಮಾನ್ಯ, ಅಲೌಕಿಕವಲ್ಲ, ಎಲ್ಲವೂ ಸಾಮಾನ್ಯ. ಆದರೆ ಅಹಂಗೆ ಇದು ಒಪ್ಪಿತವಲ್ಲ. “ ಜ್ಞಾನೋದಯ ಅತೀ ಸಾಮಾನ್ಯ, ಜ್ಞಾನೋದಯದ ನಂತರ ನಿಮಗೆ ಒಂದು ಕಪ್ ಚಹಾ ಕುಡಿಯಬೇಕು ಅನಿಸುತ್ತದೆ “ ಎಂದು ನಾನು ನಿಮಗೆ ಹೇಳಿದರೆ, ನೀವು ನಿರಾಶರಾಗುತ್ತೀರಿ, ಕೇವಲ ಇಂಥ ಒಂದು ಅನುಭವಕ್ಕಾಗಿ ಯಾಕಿಷ್ಟು ಸಾಧನೆ ಮಾಡಬೇಕು ಎಂದು ಪ್ರಶ್ನೆ ಮಾಡುತ್ತೀರಿ! ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ

ಝೆನ್ ಮಾಸ್ಟರ್ ಲಿನ್ ಚೀ ಗೆ ಜ್ಞಾನೋದಯ ಆದಾಗ, ಅವನು ನಗುತ್ತ ಕುಳಿತುಬಿಟ್ಟನಂತೆ. ಲಿನ್ ಚೀ ಯ ಈ ವರ್ತನೆ ಅವನ ಶಿಷ್ಯರಲ್ಲಿ ಆಶ್ಚರ್ಯ ಹುಟ್ಟಿಸಿತು, ಅವರು ಅವನನ್ನು ಪ್ರಶ್ನೆ ಮಾಡಿದರು, “ ನಿನ್ನ ಬದುಕಿನ ಒಂದು ಅದ್ಭುತ ಘಟನೆ ಈಗ ತಾನೇ ಸಂಭವಿಸಿದೆ, ಆದರೆ ನೀನು ನೋಡಿದರೆ ಹೀಗೆ ಮಕ್ಕಳ ಹಾಗೆ ನಗುತ್ತ ಕುಳಿತಿದ್ದೀಯ, ಏನು ವಿಷಯ ? “

“ ಎಷ್ಟೋ ವರ್ಷಗಳಿಂದ ನಾನು ಈ ಒಂದು ಘಟನೆಗಾಗಿ ಒಂದೇ ಉಸಿರನಲ್ಲಿ ಕಾಯುತ್ತಿದ್ದೆ, ನನ್ನ ಇಡೀ ಬದುಕನ್ನ ಈ ಒಂದು ಆಗುವಿಕೆಗಾಗಿ ಸಮರ್ಪಿಸಿದ್ದೆ. ಆದರೆ ಯಾವಾಗ ಈ ಘಟನೆ ನನ್ನ ಬದುಕಿನಲ್ಲಿ ಸಂಭವಿಸಿತೋ ಆಗ ನನಗೆ ಗೊತ್ತಾಯಿತು ಇದು ಒಂದು ಸಾಮಾನ್ಯ ವಿದ್ಯಮಾನ. ಇಂಥ ಒಂದು ಸಾಮಾನ್ಯ ಸಂಗತಿಗಾಗಿ ಜೀವನವಿಡೀ ಒದ್ದಾಡಿದೆನಲ್ಲ ಎಂದು ನಗು ಬರುತ್ತಿದೆ ನನಗೆ. “ ಮಾಸ್ಟರ್ ಲಿನ್ ಚೀ ತನ್ನ ಶಿಷ್ಯರಿಗೆ ಉತ್ತರಿಸಿದ.

ಇದು ಒಂದು ನಿಗೂಢ – ಯಾವುದೂ ಅಸಾಮಾನ್ಯವಲ್ಲ.

ಇನ್ನೊಬ್ಬ ಮಾಸ್ಟರ್ ಡೂ-ಝೆನ್ ಗೆ ಜ್ಞಾನೋದಯ ಆದಾಗ, ಅವನ ಶಿಷ್ಯರು ಕೇಳಿದರಂತೆ “ ಮಾಸ್ಟರ್ ನಿನಗೆ ಜ್ಞಾನೋದಯ ಆದಾಗ, ಮೊದಲ ಕೆಲಸ ಏನು ಮಾಡಬೇಕನಿಸಿತು? “

“ ಒಂದು ಕಪ್ ಚಹಾ ಕುಡಿಯಬೇಕನಿಸಿತು “ ಮಾಸ್ಟರ್ ಡೂ-ಝೆನ್ ಉತ್ತರಿಸಿದನಂತೆ.

ಹೌದು ಯಾವುದೂ ಅಸಾಮಾನ್ಯ, ಅಲೌಕಿಕವಲ್ಲ, ಎಲ್ಲವೂ ಸಾಮಾನ್ಯ. ಆದರೆ ಅಹಂಗೆ ಇದು ಒಪ್ಪಿತವಲ್ಲ. “ ಜ್ಞಾನೋದಯ ಅತೀ ಸಾಮಾನ್ಯ, ಜ್ಞಾನೋದಯದ ನಂತರ ನಿಮಗೆ ಒಂದು ಕಪ್ ಚಹಾ ಕುಡಿಯಬೇಕು ಅನಿಸುತ್ತದೆ “ ಎಂದು ನಾನು ನಿಮಗೆ ಹೇಳಿದರೆ, ನೀವು ನಿರಾಶರಾಗುತ್ತೀರಿ, ಕೇವಲ ಇಂಥ ಒಂದು ಅನುಭವಕ್ಕಾಗಿ ಯಾಕಿಷ್ಟು ಸಾಧನೆ ಮಾಡಬೇಕು ಎಂದು ಪ್ರಶ್ನೆ ಮಾಡುತ್ತೀರಿ. ಆದರೆ ಅಹಂ ಸುಮ್ಮನೇ ಕೂಡುವುದಿಲ್ಲ, ಅದು ಅಸಾಮಾನ್ಯದ, ಅಪರೂಪದ, ರಹಸ್ಯಮಯ, ನಿಮಗೆ ಮಾತ್ರ ಸಂಭವಿಸಬಹುದಾದಂಥ, ಬೇರೆ ಯಾರಿಗೂ ನಿಲುಕದ ಅನುಭವವೊಂದರ ಹುಡುಕಾಟದಲ್ಲಿದೆ. ಜ್ಞಾನೋದಯವನ್ನ ಮಿಥ್ಯೀಕರಿಸಿರುವುದೇ ಅಹಂ, ಅಹಂ ಬದಿಗೆ ಸರಿಸಿ ನೋಡಿದರೆ ಇದು ಒಂದು ಸಾಮಾನ್ಯ ವಿದ್ಯಮಾನ. ಅಹಂ ಗೆ ಯಾವಾಗಲೂ ಅಸಾಮಾನ್ಯದ, ಅಪರೂಪದ ಹುಡುಕಾಟ ಆದರೆ ಬದುಕಿನಲ್ಲಿ ಯಾವುದೂ ಅಸಾಮಾನ್ಯವಲ್ಲ, ನಮ್ಮ ಅಸಮಾಧಾನಕ್ಕೆ ಕಾರಣ ಇದೇ.

ಒಮ್ಮೆ ಶಿಷ್ಯ , ಒಂದು ಮೆಥೊಡಿಸ್ಟ್ ಚರ್ಚ ದಾಟಿ ಮನೆಗೆ ವಾಪಸ್ಸಾಗುತ್ತಿದ್ದಾಗ, ಚರ್ಚ್ ನ ಅಂಗಳದಲ್ಲಿ ಝೆನ್ ಮಾಸ್ಟರ್ ಚಿತ್ರಕ್ಕೆ ಬಣ್ಣ ತುಂಬುತ್ತಾ ಕುಳಿತದ್ದನ್ನು ಕಂಡ. ಹತ್ತಿರ ಹೋಗಿ ನೋಡಿ ಆಶ್ಚರ್ಯಚಕಿತನಾದ. ಮಾಸ್ಟರ್, ಚರ್ಚ ನ ಚಿತ್ರ ಬಿಡಿಸುತ್ತಿರಲಿಲ್ಲ, ಬದಲಾಗಿ ಚೀನಾ ದೇಶದ ಪ್ರಕೃತಿ ಚಿತ್ರ ಬಿಡಿಸುತ್ತಿದ್ದ.

ಅಲ್ಲಿ ದೊಡ್ಡ ಪರ್ವತ ಶ್ರೇಣಿ, ನದಿ, ಸುಂದರ ಜಲಪಾತ ಮತ್ತು
ತನ್ನ ಪುಟ್ಟ ಗುಡಿಸಲಿನ ಮುಂದೆ ಕಸ ಗುಡಿಸುತ್ತಿದ್ದ ಗೂನು ಬೆನ್ನಿನ ಹಸನ್ಮುಖಿ ಮುದುಕ.

ಶಿಷ್ಯ : ಏನು ಚಿತ್ರ ಇದು ಮಾಸ್ಚರ್ ?

ಮಾಸ್ಟರ್ : ಕೆಲವು ಕ್ಷಣಗಳ ಹಿಂದೆಯಷ್ಟೆ ಈ ಮುದುಕನಿಗೆ ಜ್ಞಾನೋದಯವಾಗಿದೆ.

ಶಿಷ್ಯ : ಮುಂದೆ ಏನು ಮಾಡುತ್ತಾನೆ ಮುದುಕ?

ಮಾಸ್ಟರ್ : ಅದನ್ನೆ ನೋಡುತ್ತಿದ್ದೆ, ಕಸ ಗುಡಿಸುವುದನ್ನು ಮುಂದುವರೆಸಿದ್ದಾನೆ.

ಹೌದು ಜ್ಞಾನೋದಯ ಅಷ್ಟು ಸಾಮಾನ್ಯವಾದದ್ದು. ಸತ್ಯ, ವಾಸ್ತವ ಅಸಾಮಾನ್ಯವಲ್ಲ ; ಅದು ನಮ್ಮ ಸುತ್ತಲೂ, ಎಲ್ಲೆಲ್ಲೂ ಸಂಭವಿಸುತ್ತಿದೆ. ಅದು ನಿಮಗೆ ಗೊತ್ತಾಗಿಲ್ಲ ಎಂದರೆ ಅದು ಅಪರೂಪ, ಏಕೆಂದರೆ ಸತ್ಯ ಎಲ್ಲೆಲ್ಲೂ ಇದೆ. ಸತ್ಯದ ಉಪಸ್ಥಿತಿ ಇಲ್ಲದ ಒಂದು ಕ್ಷಣವೂ ಇಲ್ಲ. ಜ್ಞಾನೋದಯ ಪ್ರತಿ ಕ್ಷಣವೂ ಸಂಭವಿಸುತ್ತಿದೆ, ಇದು ಬದುಕಿನ ಮೂಲ ತಿರುಳು. ಆದರೆ ನೀವು ಕುರುಡರಾಗಿದ್ದೀರಿ ಕಿವುಡರಾಗಿದ್ದೀರಿ, ಇದು ಸಮಸ್ಯೆ.


Leave a Reply